ಬೆಂಗಳೂರು; ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣ ಎಂಬಾತ ಭಾಗಿ ಆಗಿದ್ದಾನೆ ಎನ್ನಲಾಗಿರುವ ಲಂಚದ ಹಗರಣದ ಕುರಿತು ಬಾಯ್ಬಿಟ್ಟಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ಹಣ ವಸೂಲಿಗೆ ಸೂಚಿಸಿರುವ ಬಗ್ಗೆ ಅಧಿಕಾರಿಗಳಿಬ್ಬರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಬಹಿರಂಗವಾಗಿ ಹಲವು ದಿನಗಳು ಕಳೆದರೂ ಮುಗುಮ್ಮಾಗಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಶ್ರೀರಾಮುಲು ಪ್ರಕರಣದಲ್ಲಿ ತ್ವರಿತವಾಗಿ ಪ್ರತಿಕ್ರಿಯೆ ನೀಡಿದ್ದಾರಲ್ಲದೇ ತನಿಖೆಗೂ ಆಗ್ರಹಿಸಿದ್ದಾರೆ. ಲಂಚ ಪಡೆದ ಸಿಬ್ಬಂದಿಯನ್ನು ಬಂಧಿಸಿದರಷ್ಟೇ ಸಾಲದು, ಆತ ಯಾರ ಪರವಾಗಿ ಲಂಚ ಪಡೆದಿದ್ದಾನೆ ಮತ್ತು ಪಡೆದಿರುವ ಲಂಚವನ್ನು ಯಾರಿಗೆ ಕೊಟ್ಟಿದ್ದಾನೆ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಹಣ ವಸೂಲಿ ಮಾಡುವ ಸಂಬಂಧ ಸಚಿವ ಗೋಪಾಲಯ್ಯ ಅವರ ಮನೆಯಲ್ಲಿಯೇ ಸಭೆ ನಡೆದಿತ್ತು ಎಂದು ಖುದ್ದು ಅಧಿಕಾರಿಯೇ ಮತ್ತೊಬ್ಬ ಅಧಿಕಾರಿಯೊಂದಿಗೆ ಮಾತನಾಡಿರುವ ಆಡಿಯೋ ಬಹಿರಂಗವಾಗಿತ್ತು. ಅಲ್ಲದೆ ಸಂಭಾಷಣೆಯ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದಲ್ಲಿ ಅಧಿಕಾರಿಗಳೇ ಮಾತನಾಡಿರುವ ಆಡಿಯೋವೇ ಪ್ರಮುಖ ಸಾಕ್ಷ್ಯಾಧಾರಗಳಿದ್ದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತುಟಿ ಬಿಚ್ಚಿಲ್ಲ.
ಗೋಪಾಲಯ್ಯ ಅವರ ಪ್ರಕರಣದಲ್ಲಿ ಮೌನ ವಹಿಸಿ, ಶ್ರೀರಾಮುಲು ಪ್ರಕರಣದಲ್ಲಿ ತನಿಖೆಯ ಮಾತುಗಳನ್ನಾಡಿರುವುದು ಸಿದ್ದರಾಮಯ್ಯ ಅವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ. ಶ್ರೀರಾಮುಲು ಪ್ರಕರಣದಲ್ಲಿ ಅವರ ಆಪ್ತ ಸಹಾಯಕ ಎಂದು ಹೇಳಲಾಗಿರುವ ರಾಜಣ್ಣ ಎಂಬಾತ ಹಲವರಿಂದ ಲಕ್ಷಾಂತರ ರು. ವಸೂಲಿ ಮಾಡಿದ್ದಾನೆ ಎಂಬ ದೂರಷ್ಟೇ ಇದೆ. ಆದರೆ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲು ಮಾಡಲು ಖುದ್ದು ಸಚಿವ ಗೋಪಾಲಯ್ಯ ಅವರೇ ನಿರ್ದೇಶಿಸಿದ್ದಾರೆ ಎಂಬುದಕ್ಕೆ ಅಧಿಕಾರಿಗಳೇ ಸಂಭಾಷಿಸಿರುವ ಆಡಿಯೋ ಹರಿದಾಡಿತ್ತು. ಆದರೂ ಇದರ ಬಗ್ಗೆ ಚಕಾರ ಎತ್ತದ ಸಿದ್ದರಾಮಯ್ಯ ಅವರು ಗೋಪಾಲಯ್ಯ ಅವರ ಪಕ್ಷಪಾತಿಯಾಗಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಗೋಪಾಲಯ್ಯ ಪ್ರಕರಣ ಹಿನ್ನೆಲೆ
ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ 10 ನಿಮಿಷದ ಸಂಭಾಷಣೆಯ ತುಣುಕಿನಲ್ಲಿ ಕೊಪ್ಪಳ ಜಿಲ್ಲೆಯಿಂದ 5 ಲಕ್ಷ ಸಂಗ್ರಹಿಸಿ ಕೊಡಲು ಸೂಚಿಸಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಅಲ್ಲದೆ ಮಂಜುನಾಥ್, ನಾಗರಾಜಪ್ಪ, ರಮೇಶ್, ಶಿವಪ್ರಸಾದ್ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆಯಲ್ಲದೆ ಕೊಪ್ಪಳ ಜಿಲ್ಲೆಯ ಇಕ್ಬಾಲ್ ಅನ್ಸಾರಿ ಎಂಬುವರ ಹೆಸರು ಪ್ರಸ್ತಾಪವಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸಚಿವರ ಮನೆಯಲ್ಲೇ ನಡೆದಿತ್ತು ಸಭೆ?
ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಮನೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿಗಳು, ಜಂಟಿ ಆಯುಕ್ತರುಗಳ ಸಭೆ ನಡೆದಿತ್ತು ಎಂಬುದು ಮಹಿಳಾ ಅಧಿಕಾರಿಯೊಬ್ಬರ ಆಡಿಯೋ ತುಣುಕಿನಿಂದ ಗೊತ್ತಾಗಿದೆ. ಸಚಿವರ ಮನೆಯಲ್ಲಿ ಸಭೆ ನಡೆಯುವ ಮುನ್ನ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು, ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು.
ಈ ಸಭೆಯಲ್ಲಿ ಸಚಿವ ಗೋಪಾಲಯ್ಯ ಅವರು ಕೆಲ ಜಿಲ್ಲೆಗಳ ಅಬಕಾರಿ ನಿರೀಕ್ಷಕರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಿದ್ದರು. ಅದೇ ದಿನ ಸಂಜೆ ಸಚಿವರ ಮನೆಯಲ್ಲಿ ಆಯ್ದ ಜಂಟಿ ಆಯುಕ್ತರು ಮತ್ತು ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಜುನಾಥ್, ಕುಮಾರ್, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂಬುದು ಆಡಿಯೋ ತುಣುಕಿನಿಂದ ತಿಳಿದು ಬಂದಿತ್ತು. ಆಡಿಯೋ ಬಹಿರಂಗಪಡಿಸಿದ್ದರು ಎನ್ನಲಾದ ನಾಲ್ವರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇದಿಷ್ಟೆ ಅಲ್ಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೃಷಿ ಸಚಿವ ಬಿ ಸಿ ಪಾಟೀಲ್ ಮತ್ತು ಕಂದಾಯ ಸಚಿವ ಆರ್ ಅಶೋಕ್ ಅವರ ಪ್ರಕರಣದಲ್ಲಿಯೂ ಮುಗುಮ್ಮಾಗಿದ್ದಾರೆ. ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹಣ ವಸೂಲಿಗೆ ಮುಂದಾಗಿದ್ದಾರೆ ಎಂಬ ದೂರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಚೇರಿಗೂ ಸಲ್ಲಿಕೆಯಾಗಿತ್ತು ಎಂದು ತಿಳಿದು ಬಂದಿದೆ.
ಬಿ ಸಿ ಪಾಟೀಲ್ ಪ್ರಕರಣ ವಿವರ
ದಯಾನಂದ್, ಮಂಜುನಾಥ್ ಎ ಸಿ, ಇಲಾಖೆಯ ನಿರ್ದೇಶಕ ಬಿ ವೈ ಶ್ರೀನಿವಾಸ್ ಅವರ ಹೆಸರನ್ನು ಪತ್ರದಲ್ಲಿ ಹೆಸರಿಸಿರುವ ಕೃಷಿ ಇಲಾಖೆಯ ಅಧಿಕಾರಿಗಳು, ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಆಧಿಕಾರಿಗಳಿಂದ ಜಿಲ್ಲೆಯಲ್ಲಿನ ಜಂಟಿ ಕೃಷಿ ನಿರ್ದೇಶಕರಿಂದ ಲಕ್ಷಾಂತರ ರು.ವಸೂಲಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದದ 1.00 ಲಕ್ಷ, ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದ 1.50 ಲಕ್ಷ, ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರುಗಳಿಗೆ 5 ಲಕ್ಷದಿಂದ 10 ಲಕ್ಷ, ಉಪ ಕೃಷಿ ನಿರ್ದೇಶಕರುಗಳಿಗೆ 10 ಲಕ್ಷದಿಂದ 15 ಲಕ್ಷ, ಜಿಲ್ಲೆಗಳಲ್ಲಿನ ಜಂಟಿ ಕೃಷಿ ನಿರ್ದೇಶಕರುಗಳಿಗೆ 30 ಲಕ್ಷದಿಂದ 100.00 ಲಕ್ಷದವರಗೆ ಸೇರಿದಂತೆ ಒಂದು ಜಿಲ್ಲೆಯಿಂದ 50 ಲಕ್ಷದಿಂದ 1.5 ಕೋಟಿಯವರೆಗೆ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿ, ನೌಕರರು ಗಂಭೀರವಾಗಿ ದೂರಿನಲ್ಲಿ ಪ್ರಸ್ತಾಪಿಸಿದ್ದರು.
2020-21ನೇ ಸಾಲಿನ ಗ್ರೂಪ್ ಎ, ಗ್ರೂಪ್ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ 2020ರ ಜುಲೈ 10ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರುಗಳಿಗೆ ಅಧಿಕಾರಿ ಪ್ರತ್ಯಾಯೋಜಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಕೃಷಿ ಸಚಿವರಿಗೆ ಹಣ ಸಂದಾಯ ಮಾಡಬೇಕು ಎಂಬ ಸಬೂಬು ಹೇಳಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿ/ನೌಕರರು ವರ್ಗಾವಣೆ ಪಡೆಯಬೇಕಾದರೆ ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿಯೇ ಮುಂದುವರೆಯಬೇಕಾದರೆ ಲಕ್ಷ ರು.ಗಳನ್ನು ಕಡ್ಡಾಯವಾಗಿ ನೀಡಬೇಕು,’ ಎಂದು ಆದೇಶ ನೀಡಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದರು. ಆದರೂ ಸಿದ್ದರಾಮಯ್ಯ ಅವರು ಈ ಬಗ್ಗೆ ಚಕಾರ ಎತ್ತಲಿಲ್ಲ.
ಅದೇ ರೀತಿ ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬಾತನ ವಿರುದ್ಧ ಹಣ ವಸೂಲಿ ಆರೋಪವನ್ನು ಹೊರಿಸಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರು ಈ ಸಂಬಂಧ ಎಸಿಬಿಯಲ್ಲಿ ದೂರನ್ನೂ ದಾಖಲಿಸಿದ್ದರು. ಈ ದೂರಿನ ಮೇಲೆ ಗಂಗಾಧರ್ ಎಂಬಾತನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಆಗಲೂ ಸಿದ್ದರಾಮಯ್ಯ ಅವರು ಮೌನಕ್ಕೆ ಶರಣಾಗಿದ್ದನ್ನು ಸ್ಮರಿಸಬಹುದು.