ಬಡ್ಡಿ ರಿಯಾಯಿತಿಗೆ ದೇವಿಶೆಟ್ಟಿ ಶಿಫಾರಸ್ಸು; ಖಾಸಗಿ ಆಸ್ಪತ್ರೆಗಳ ಲಾಭಕೋರತನಕ್ಕೆ ಉತ್ತೇಜನ?

ಬೆಂಗಳೂರು; ಕೋವಿಡ್‌ನಂತಹ ಆರೊಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಾಭಕೋರತನಕ್ಕಿಳಿದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಖಾಸಗಿ ಆಸ್ಪತ್ರೆಗಳು ಕೋವಿಡ್‌ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಬಡ್ಡಿ ರಿಯಾಯಿತಿ ನೀಡಬೇಕು ಎಂದು ಡಾ ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಹಾಸಿಗೆ, ಐಸಿಯು, ವೆಂಟಿಲೇಟರ್‌ಗಳ ಮಾಹಿತಿಯನ್ನು ಗೌಪ್ಯವಾಗಿಟ್ಟು ಕೋವಿಡ್‌ ಸೋಂಕಿತರ ನರಳಾಟಕ್ಕೆ ಕಾರಣವಾಗಿದ್ದ ಖಾಸಗಿ ಆಸ್ಪತ್ರೆಗಳ ಪರವಾಗಿ ದೇವಿಶೆಟ್ಟಿ ಅವರು ಮಾಡಿರುವ ಈ ಶಿಫಾರಸ್ಸು ಖಾಸಗಿ ಆಸ್ಪತ್ರೆಗಳ ಲಾಭಕೋರತನಕ್ಕೆ ಉತ್ತೇಜನ ನೀಡಿದಂತಾಗಿದೆ.

ಆಕ್ಸಿಜನ್‌ ಸೌಲಭ್ಯಯುಕ್ತ ಹಾಸಿಗೆಗಳನ್ನು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿರುವ ಸಮಿತಿಯು ಈ ಖಾಸಗಿ ಆಸ್ಪತ್ರೆಗಳು ರಿಸರ್ವ್‌ ಬ್ಯಾಂಕ್‌ನಿಂದ ಶೇ.4 ರ ಬಡ್ಡಿ ದರದಲ್ಲಿ 3 ವರ್ಷದವರೆಗೆ ಕೋವಿಡ್‌ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಸಾಲ ಪಡೆಯಲಿದ್ದು, ಈ ಖಾಸಗಿ ಆಸ್ಪತ್ರೆಗಳಿಗೆ ಬಡ್ಡಿ ರಿಯಾಯಿತಿಯನ್ನು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.

ದೇವಿಶೆಟ್ಟಿ ಅವರ ಶಿಫಾರಸ್ಸಿನಲ್ಲಿ ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನು ಹೆಚ್ಚಿಸುವ ವಿಚಾರವಾಗಿಯೇ ಹೆಚ್ಚು ವಿವರಗಳಿವೆ. ಇದರಿಂದ ದೂರಗಾಮಿ ಬದಲಾವಣೆಗಳೇನೂ ಆಗುವುದಿಲ್ಲ. ನಿಜಕ್ಕೂ ಆಗಬೇಕಿರುವುದು ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯ ಸುಧಾರಣೆ. ಈಗಾಗಲೇ ನೂರಾರು ಕೋಟಿ ರು.ಗಳ ರು. ವೆಚ್ಚದಲ್ಲಿ ಖರೀದಿಸಿರುವ ಆಧುನಿಕ ಉಪಕರಣಗಳು ಯೋಗ್ಯ ಮತ್ತು ಪರಿಣಿತ ತಂತ್ರಜ್ಞರಿಲ್ಲದೆ ಬಳಸದೇ ಮೂಲೆಯಲ್ಲಿ ತುಕ್ಕು ಹಿಡಿಯುತ್ತಿವೆ. ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿಸುವ ಮತ್ತು ಸರ್ಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಶಿಫಾರಸ್ಸು ಮಾಡುವಲ್ಲಿ ಆಸಕ್ತಿ ತೋರದಿರುವುದು ವಿಷಾದನೀಯ.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರಸಮಿತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಸಿಗೆ, ಐಸಿಯು, ವೆಂಟಿಲೇಟರ್‌ಗಳ ಮಾಹಿತಿಯನ್ನೂ ಮುಚ್ಚಿಟ್ಟು ಕಳ್ಳಾಟ ಆಡುತ್ತಿರುವ ಕೆಲವು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ತಳೆಯುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಹೆಚ್ಚುತ್ತಿದೆ.

ಸಬ್ಸಿಡಿ ಬಡ್ಡಿ ಆಧಾರದ ಸಾಲದ ಅವಧಿ ಮೂರು ವರ್ಷಗಳ ಕಾಲ ನೀಡಿರುವುದರಿಂದ ಕೋವಿಡ್ ಸೋಂಕಿನ ಕಾಟ ಕಡಿಮೆ ಇರುವ ಕಾಲದಲ್ಲಿ ಮತ್ತು ಕೋವಿಡ್ ನಂತರದ ದಿನಗಳಲ್ಲಿ ಸರ್ಕಾರದ ಕಡೆಯಿಂದ ಕಳುಹಿಸಲ್ಪಡುವ ಭಾದಿತರ ಚಿಕಿತ್ಸೆಗೂ ಮುಂದಾಗಬೇಕು. ಈಗಾಗಲೇ ಪಿಎಂ ಕೇರ್ ವೆಂಟಿಲೇಟರ್ ಪಡೆದ ಯಾವ ಖಾಸಗಿ ಆಸ್ಪತ್ರೆಯೂ ಎಷ್ಟು ಮಂದಿಗೆ ಉಚಿತವಾಗಿ ವೆಂಟಿಲೇಟರ್ ಸೌಲಭ್ಯ ಒದಗಿಸಿದೆ ಎಂಬ ಮಾಹಿತಿಯನ್ನು ಹೊರ ಹಾಕಿಲ್ಲ. ಅಂತಹ ಸೌಲಭ್ಯ ಪಡೆದವರ ಬಂಧುಗಳನ್ನು ಸಂಪರ್ಕಿಸಿ ಖಾಸಗಿ ಆಸ್ಪತ್ರೆಯವರು ಉಚಿತ ಸೌಲಭ್ಯ ನೀಡಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಮಾಡುವ ಜವಾಬ್ದಾರಿ ಆರೋಗ್ಯ ಇಲಾಖೆಯ ಮೇಲಿದೆ.

ಕೆಬಿಕೆ ಸ್ವಾಮಿ, ವಕೀಲರು

ಕೋವಿಡ್‌ ಮೊದಲ ಅಲೆಯಲ್ಲಿಯೂ ಸರ್ಕಾರದಿಂದ ಶಿಫಾರಸ್ಸಾಗಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಕಾರ್ಪೋರೇಟ್‌ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಎಬಿಎಆರ್‌ಕೆ ಯೋಜನೆಯಡಿ ಕನಿಷ್ಠ 4 ಲಕ್ಷ ರು.ಗಳಿಂದ ಗರಿಷ್ಠ 80 ಲಕ್ಷ ರು.ಗಳನ್ನು ಸರ್ಕಾರವೇ ಪಾವತಿಸಿತ್ತು. ಬೆಂಗಳೂರು ನಗರದಲ್ಲಿರುವ 109 ಖಾಸಗಿ ಆಸ್ಪತ್ರೆಗಳಿಗೆ 2020ರ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು 1,264.06 ಲಕ್ಷ ರು.ಗಳನ್ನು ಸರ್ಕಾರ ಪಾವತಿಸಿತ್ತು.

ಆದರೆ ಇವೇ ಖಾಸಗಿ ಆಸ್ಪತ್ರೆಗಳು ಕೋವಿಡ್‌ 2ನೇ ಅಲೆಯಲ್ಲಿಯೂ ಲಾಭಕೋರತನ ಮುಂದುವರೆಸಿದ್ದವು. ಅಲ್ಲದೆ ಆಕ್ಸಿಜನ್‌ ಮತ್ತು ಐಸಿಯು ಘಟಕದಲ್ಲಿದ್ದ ಹಾಸಿಗೆಗಳ ವಿವರಗಳನ್ನು ಗೌಪ್ಯವಾಗಿರಿಸಿದ್ದವು. ಆದರೂ ಇಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರವು ಮೃದು ಧೋರಣೆ ತಳೆದಿದ್ದನ್ನು ಸ್ಮರಿಸಬಹುದು.

ಅಲ್ಲದೆ ಖಾಸಗಿ ವಲಯದಲ್ಲಿರುವ ಪ್ರತಿ ಆಸ್ಪತ್ರೆಯಲ್ಲಿ ಶೇಕಡ 50ರಂತೆ ಎಷ್ಟು ಹಾಸಿಗೆಗಳನ್ನು ಒದಗಿಸಬೇಕಿತ್ತು ಮತ್ತು ಈ ಪೈಕಿ ಎಷ್ಟು ಪ್ರಮಾಣದಲ್ಲಿ ಹಾಸಿಗೆಗಳನ್ನು ನೀಡಿವೆ ಎಂಬ ವಿವರಗಳೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡಿರಲಿಲ್ಲ. ಹಾಗೆಯೇ ಪ್ರಮುಖ ಆಸ್ಪತ್ರೆಗಳು ಹಾಸಿಗೆಗಳ ಸಂಖ್ಯೆಯನ್ನೇ ಮುಚ್ಚಿಟ್ಟು ಕಳ್ಳಾಟ ನಡೆಸಿದ್ದವು.

ಖಾಸಗಿ ಆಸ್ಪತ್ರೆಗಳು ಕೋವಿಡ್‌ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ಬಡ್ಡಿ ರಿಯಾಯಿತಿ ನೀಡಬೇಕು ಎಂದು ಸಮಿತಿ ಮಾಡಿರುವ ಶಿಫಾರಸ್ಸು ಸರಿಯಲ್ಲ. ಸಮಿತಿಯ ಅಧ್ಯಕ್ಷ ಡಾ ದೇವಿಶೆಟ್ಟಿ ಅವರು ಕಾರ್ಪೋರೇಟ್‌ ಆಸ್ಪತ್ರೆಯ ಮಾಲೀಕರೂ ಹೌದು. ಬಡ್ಡಿ ರಿಯಾಯಿತಿ ನೀಡಬೇಕು ಎಂದು ತಾವೇ ಅಧ್ಯಕ್ಷರಾಗಿರುವ ಸಮಿತಿ ಮೂಲಕ ಇಂತಹ ಶಿಫಾರಸ್ಸು ಮಾಡಿರುವುದು ಸ್ವ-ಹಿತಾಸಕ್ತಿ ಸಂಘರ್ಷ ಪ್ರಶ್ನೆ ಉದ್ಭವಕ್ಕೆ ಕಾರಣರಾಗಿದ್ದಾರೆ. ಒಂದು ವೇಳೆ ಇಂತಹ ಶಿಫಾರಸ್ಸು ಮಾಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ದೇವಿಶೆಟ್ಟಿ ಅವರು ಸಮಿತಿಯಿಂದ ದೂರ ಉಳಿಯಬೇಕಿತ್ತು. ಆದರೆ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡೇ ಮತ್ತು ಅವರು ಆಸ್ಪತ್ರೆಯೊಂದನ್ನು ನಡೆಸುತ್ತಿದ್ದರೂ ಇಂತಹ ಶಿಫಾರಸ್ಸು ಮಾಡುವ ಔಚಿತ್ಯವೇನಿತ್ತು ಅಲ್ಲದೆ ಇದು ನೈತಿಕವೂ ಅಲ್ಲ.

ಆದರ್ಶ ಐಯ್ಯರ್‌, ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್‌

ಜನರಿಗಾಗಿ ಸರ್ಕಾರದ ಜತೆ ಕೈಜೋಡಿಸಬೇಕಿದ್ದ ಖಾಸಗಿ ಆಸ್ಪತ್ರೆಗಳೇ ನೇರವಾಗಿ ಹಾಸಿಗೆಗಳನ್ನು ನೀಡಬೇಕಿತ್ತು. ಆದರೆ ಅಂತಹ ಸಂದರ್ಭದಲ್ಲೂ ಸೋಂಕಿತರೊಂದಿಗೆ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಚೆಲ್ಲಾಟ ಆಡಿದ್ದವು. ಸರ್ಕಾರದ ಜತೆ ಕೈಜೋಡಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಗಳಂತಹ ಬಲವಾದ ಅಸ್ತ್ರಗಳಿದ್ದರೂ ಸರ್ಕಾರ ಬಳಕೆ ಮಾಡಿರಲಿಲ್ಲ.

ಡಾ.ದೇವಿಪ್ರಸಾದ್ ಶೆಟ್ಟಿಯವರನ್ನು ಸರ್ಕಾರ ಕೋವಿಡ್ ಮೂರನೇ ಅಲೆ ಎದುರಿಸುವ ಕುರಿತಾದ ಕಾರ್ಯಪಡೆಗೆ ಅಧ್ಯಕ್ಷರನ್ನಾಗಿ ಮಾಡಿದೆ. ಈ ಕಾರ್ಯಪಡೆ ಕೊಟ್ಟಿರುವ ವರದಿ ಗಮನಿಸಿದರೆ ಅವರು  ಕಾರ್ಯಪಡೆಯನ್ನು ಖಾಸಗಿ ಆಸ್ಪತ್ರೆಗಳ ಏಜೆಂಟ್ ಪಡೆಯನ್ನಾಗಿ ಮಾಡಿದ ಹಾಗೆ ಕಾಣುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಹೇಗೆ ಅನುಕೂಲ ಮಾಡಿಕೊಡುವುದು ಎಂಬುದೇ ಅವರ ಅಧ್ಯಯನದ ಉದ್ದೇಶ ಇರುವಂತೆ ತೋರುತ್ತದೆ. ಮೂರನೇ ಅಲೆ ಬರುವುದೇ ನಿಜವಾದರೆ ಸರ್ಕಾರ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಸುಪರ್ದಿಗೆ ತೆಗೆದುಕೊಂಡು ಎಲ್ಲ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡಬೇಕು. ದೇವಿ ಪ್ರಸಾದ್ ಶೆಟ್ಟಿಯಂಥವರ ಖಾಸಗಿ ಲಾಬಿಗೆ ಮಣಿಯಕೂಡದು. ಈ ಖಾಸಗಿ ಆಸ್ಪತ್ರೆ ಹಿತಾಸಕ್ತಿ ರಕ್ಷಣೆಯ ಉದ್ದೇಶದ ಕಾರ್ಯಪಡೆ ವಿಸರ್ಜಿಸಿ ವೈರಾಣು ತಜ್ಞರನ್ನು ಒಳಗೊಂಡ ಹೊಸ ಸಮಿತಿ ರಚಿಸಬೇಕು‌.

ದಿನೇಶ್‌ಕುಮಾರ್‌ ಎಸ್‌ ಸಿ, ಮುಖ್ಯಸ್ಥರು

ಕರವೇ ಸಾಮಾಜಿಕ ಜಾಲತಾಣ

ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಮಾಡಿಕೊಂಡು ರೋಗಿಗಳ ಕುಟುಂಬಗಳಿಂದ ಹಣ ಪೀಕಿದ್ದವು. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ದರ ಪಟ್ಟಿಯನ್ನು ಸರ್ಕಾರವೇ ಪರಿಷ್ಕರಿಸಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್ ಗೆ 5,200 ರು., ಹೆಚ್ ಡಿಯುಗಳಲ್ಲಿ 8 ಸಾವಿರ ರು., ವೆಂಟಿಲೇಟರ್ ಇಲ್ಲದೆ ಐಸೊಲೇಷನ್ ಐಸಿಯು ವಾರ್ಡ್ ಗೆ 9,750 ರೂಪಾಯಿ, ವೆಂಟಿಲೇಟರ್ ಸಹಿತ ಐಸೊಲೇಷನ್ ಐಸಿಯು ವಾರ್ಡ್ ನಲ್ಲಿ 11,500 ರೂಪಾಯಿ ದರವನ್ನು ಸರ್ಕಾರ ನಿಗದಿಪಡಿಸಿತ್ತು.

ಸರ್ಕಾರದ ಆದೇಶವನ್ನು ಪಾಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ, ರೋಗಿಗಳಿಂದ ಹೆಚ್ಚಿನ ದರ ಕೇಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದ ಸರ್ಕಾರ ಆದೇಶ ಹೊರಡಿಸಿ ಕೈತೊಳೆದುಕೊಂಡಿತ್ತು.

SUPPORT THE FILE

Latest News

Related Posts