ಪರಿಷತ್‌ನಲ್ಲಿ ಅಕ್ರಮ ನೇಮಕ, ಹೆಚ್ಚುವರಿ ವೇತನ, 48 ಲಕ್ಷ ನಷ್ಟ; ಹೊರಟ್ಟಿ ಮೌನ!

ಬೆಂಗಳೂರು; ಕನಿಷ್ಠ ವೇತನ ಕಾಯ್ದೆಯಲ್ಲಿ ನಿಗದಿಪಡಿಸಿರುವ ವೇತನಕ್ಕಿಂತಲೂ ಹೊರಗುತ್ತಿಗೆ ನೌಕರರಿಗೆ ಕಳೆದ ಎರಡೂವರೆ ವರ್ಷಗಳಿಂದಲೂ ಹೆಚ್ಚುವರಿಯಾಗಿ ವೇತನ ಪಾವತಿಸಿರುವ ಕರ್ನಾಟಕ ವಿಧಾನಪರಿಷತ್‌ ಸಚಿವಾಲಯದ ಬೊಕ್ಕಸಕ್ಕೆ 54 ಲಕ್ಷ ಲಕ್ಷ ನಷ್ಟವಾಗಿದೆ. ಕಿಯೋನಿಕ್ಸ್‌ ಮೂಲಕ ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿಕೊಂಡಿರುವ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿರುವ ಪರಿಷತ್‌ ಸಚಿವಾಲಯವು ಆರ್ಥಿಕ ಇಲಾಖೆಯ ಅನುಮತಿಯನ್ನೇ ಪಡೆಯದೇ ನಿಯಮಬಾಹಿರವಾಗಿ ನೇಮಕ ಮಾಡಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್ಸ್‌, ಡಿಟಿಪಿ ಆಪರೇಟರ್ಸ್‌ಗಳನ್ನು ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿರುವ ಪರಿಷತ್‌ ಸಚಿವಾಲಯವು ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿಯಾಗಿ ಕಳೆದ ಎರಡೂವರೆ ವರ್ಷಗಳಿಂದ 48,42,564 ರು.ಗಳನ್ನು ಪಾವತಿಸಿರುವುದು ಗೊತ್ತಾಗಿದೆ. ಈ ಸಂಬಂಧ ತಕರಾರು ತೆಗೆದಿರುವ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು 2021ರ ಏಪ್ರಿಲ್‌ 9ರಂದು ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಲ್ಲದೆ ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿಕೊಂಡಿರುವ ವಿಧಾನಪರಿಷತ್‌ ಸಚಿವಾಲಯದ ಅಧಿಕಾರಿಗಳು ಸ್ವಜನಪಕ್ಷಪಾತ ಎಸಗಿರುವ ಆರೋಪಕ್ಕೂ ಗುರಿಯಾಗಿದ್ದಾರೆ. ತಾಂತ್ರಿಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಯಾವುದೇ ಪರೀಕ್ಷೆ ಮತ್ತು ಸಂದರ್ಶನಗಳನ್ನೂ ನಡೆಸಿಲ್ಲ ಎಂದು ತಿಳಿದು ಬಂದಿದೆ.

ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಸತೀಶ್‌ ಸಿ, ಶೃತಿ ಎಸ್‌, ಪ್ರತೀಕ್‌ ಶೆಟ್ಟಿ, ಸುಶಾಂತ್‌ ನಾಯಕ್‌, ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಸುಹಾಸ್‌ ಎಂ, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಯೋಗೇಶ್ವರಿ ಬಿ, ಪುಷ್ಪಾ ಎಚ್‌ ಎಂ, ಯೋಗಿತಾ ಪಿ ಆರ್‌, ಜ್ಯೂನಿಯರ್‌ ಆಪರೇಟರ್‌ ಕನ್ಸಲ್ಟೆಂಟ್‌ ಹುದ್ದೆಗೆ ಎಂ ನಿಖಿಲ್‌ ಅವರನ್ನು ಕಿಯೋನಿಕ್ಸ್‌ ಮೂಲಕ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಅಭ್ಯರ್ಥಿಗಳು ವಿಧಾನಪರಿಷತ್‌ ಸಚಿವಾಲಯದ ಉನ್ನತ ಅಧಿಕಾರಿಗಳಿಗೆ ನಿಕಟವರ್ತಿಗಳು, ರಕ್ತ ಸಂಬಂಧಿಕರು ಮತ್ತು ಸೋದರ ಸಂಬಂಧಿಗಳಾಗಿದ್ದಾರೆ ಎಂದು ಗೊತ್ತಾಗಿದೆ.

‘ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿರುವುದು ನಿಯಮಬಾಹಿರವಾಗಿರುತ್ತದೆ. ಆದ್ದರಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ನಿಗದಿಗೊಳಿಸಬೇಕು,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪರಿಷತ್‌ನ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದು ಪತ್ರದಿಂದ ಗೊತ್ತಾಗಿದೆ.

ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದು 1 ತಿಂಗಳಾದರೂ ಪರಿಷತ್‌ ಸಚಿವಾಲಯವು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ ಈ ಕುರಿತು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಈವರೆವಿಗೂ ಮೌನ ಮುರಿದಿಲ್ಲ ಮತ್ತು ವೇತನದಲ್ಲಿ ಪಾವತಿಯಾಗಿರುವ ಹೆಚ್ಚುವರಿ ಮೊತ್ತವನ್ನು ವಸೂಲು ಮಾಡಿಲ್ಲ ಎಂದು ತಿಳಿದು ಬಂದಿದೆ.

ಹೆಚ್ಚುವರಿ ಪಾವತಿಸಿದ್ದೆಷ್ಟು?

ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಕನಿಷ್ಠ ವೇತನ ಕಾಯ್ದೆಯಡಿ ಆರ್ಥಿಕ ಇಲಾಖೆಯು 22,800 ರು. ನಿಗದಿಪಡಿಸಿದೆ. ಆದರೆ ವಿಧಾನಪರಿಷತ್ತಿನ ಸಚಿವಾಲಯವು ನೀಡುತ್ತಿರುವುದು 42,065 ರು. . ಅಂದರೆ ಹೆಚ್ಚುವರಿಯಾಗಿ 19,265 ರು. ಪ್ರತಿ ತಿಂಗಳೂ ಪಾವತಿಯಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಹೆಚ್ಚುವರಿಯಾಗಿ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 5,58,685 ರು. ಪಾವತಿಯಾಗಿದೆ. ಅದರಂತೆ ಇಬ್ಬರು ಜ್ಯೂನಿಯರ್‌ ಪ್ರೋಗ್ರಾಮರ್‌ಗಳಿಗೆ ಒಟ್ಟು 11,17,370 ರು. ಹೆಚ್ಚುವರಿಯಾಗಿ ಪಾವತಿಯಾದಂತಾಗಿದೆ.

ಅದೇ ರೀತಿ ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು. ಕನಿಷ್ಠ ವೇತನ ನಿಗದಿಪಡಿಸಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 38,266 ರು. ನೀಡುತ್ತಿದೆ. ಹೆಚ್ಚುವರಿ 18,266 ರು. ನಂತೆ ಹೆಚ್ಚುವರಿಯಾಗಿ 5,29,714 ರು. ಪಾವತಿಸಲಾಗಿದೆ. ಅದರಂತೆ ಮೂವರು ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಒಟ್ಟು 15,89,142 ರು. ಪಾವತಿಸಲಾಗಿದೆ.

ಹಾಗೆಯೇ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗೆ 13,284 ರು. ನೀಡಬೇಕಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 18,414.25 ರು.ಗಳನ್ನು ಹೆಚ್ಚುವರಿ ನೀಡಿ ಒಟ್ಟು 31,699 ರು. ನಂತೆ ಒಬ್ಬರಿಗೆ 5,34, 013 ರು ಪಾವತಿಯಾಗಿದೆ. ನೀಡುತ್ತಿದೆ. ಅದರಂತೆ ನಾಲ್ವರು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಹೆಚ್ಚುವರಿಯಾಗಿ 21,36,052 ರು. ರು. ಪಾವತಿಸಿರುವುದು ಆರ್ಥಿಕ ಇಲಾಖೆ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

‘ವಿಧಾನ ಪರಿಷತ್‌ನ ಲೆಕ್ಕ ಶೀರ್ಷಿಕೆ (2011-02-103-2-01-034)ಯಂತೆ ಕರ್ನಾಟಕ ವಿಧಾನ ಪರಿಷತ್‌ನ ಸಚಿವಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು ವೇತನವನ್ನು 30,350 ರು.ಗಳಿಗೆ ನಿಗದಿಗೊಳಸಲಾಗಿದೆ. ಇದು ಕನಿಷ್ಠ ವೇತನ ಕಾಯ್ದೆ ಮೀರಿದ್ದರಿಂದ ಪರಿಷ್ಕರಿಸಿ 22,000 ರು.ಗಳಿಗೆ ನಿಗದಿಪಡಿಸಿ 2021-22ನೇ ಸಾಲಿನ ಅಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಆದ್ದರಿಂದ ಶೀಘ್ರಲಿಪಿಗಾರರ ವೇತನವನ್ನೂ ಮರು ನಿಗದಿಪಡಿಸಬೇಕು,’ ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ನಿರ್ದೇಶಿಸಿದೆ.

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳ ಭರ್ತಿಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶೇ.50ರಷ್ಟನ್ನು ಪದನ್ನೋತಿಯಿಂದ ಶೇ.50ರಷ್ಟು ನೇರ ನೇಮಕಾತಿಯಿಂದ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಎರಡೂ ಇಲ್ಲದ ಪಕ್ಷದಲ್ಲಿ ನಿಯೋಜನೆ ಮೇಲೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನಿಯಮಬಾಹಿರವಾಗಿ ಭರ್ತಿ ಮಾಡಿರುವುದು ಪತ್ರದಿಂದ ಗೊತ್ತಾಗಿದೆ.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 22,800 ರು., ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು., ಮತ್ತು ಕನಿಷ್ಠ ವೇತನ ಕಾಯ್ದೆ ಪ್ರಕಾರ ಡಾಡಾ ಎಂಟ್ರಿ ಆಪರೇಟರ್‌, ಸ್ವಚ್ಛತಾ ಕಾರ್ಮಿಕರಾದ ಸಫಾಯಿ ಕರ್ಮಚಾರಿಗಳಿಗೆ ಆಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಕ್ರಮ ವಹಿಸಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts