ಬೆಂಗಳೂರು; ಲಸಿಕೆಯ ಡೋಸ್‌ವೊಂದಕ್ಕೆ ವಿಧಿಸಿದ್ದ ಸೇವಾ ಶುಲ್ಕ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರವು ಕಾರ್ಪೋರೇಟ್ ವಲಯದ ಮತ್ತು ಖಾಸಗಿ ಆಸ್ಪತ್ರೆಗಳ ಮುಂದೆ ಮಂಡಿಯೂರಿದೆ ಎಂದು ‘ದಿ ಫೈಲ್’ ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದನಿ ಎತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಹಿತಾಸಕ್ತಿ ಕಾಪಾಡಲು ಮುಂದಾದ ರಾಜ್ಯ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೇವಾ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡುವ ಸಂಬಂಧ ಫನಾ ಅಧ್ಯಕ್ಷ ಡಾ ಎಚ್ ಎಂ ಪ್ರಸನ್ನ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ 2021ರ ಮೇ 23ರಂದು ಪತ್ರ ಬರೆದಿದ್ದರು.
‘ಸರಬರಾಜುದಾರರಿಂದ 4-5 ಪಟ್ಟು ಹೆಚ್ಚಳ ದರದಲ್ಲಿ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಲಸಿಕೆಗಳ ಸುರಕ್ಷತೆ ಮತ್ತು ಸಾಗಾಣಿಕೆಗೆ ಹೆಚ್ಚಿನ ವೆಚ್ಚವಾಗಲಿದೆ. ಅಲ್ಲದೆ ಇತರೆ ವೆಚ್ಚಗಳನ್ನೂ ಭರಿಸಬೇಕಿರುವ ಕಾರಣ ಸೇವಾ ಶುಲ್ಕವನ್ನು ಪರಿಷ್ಕರಿಸಿ 300 ರು.ಗಳಿಗೆ ಹೆಚ್ಚಿಸಬೇಕು,’ ಎಂದು ಫನಾ ಅಧ್ಯಕ್ಷ ಡಾ ಎಚ್ ಎಂ ಪ್ರಸನ್ನ ಅವರು ಕೋರಿದ್ದರು. ಈ ಕುರಿತು ‘ದಿ ಫೈಲ್’ ಮೇ 26ರಂದು ವರದಿ ಪ್ರಕಟಿಸಿತ್ತು.
ಲಸಿಕೆ ದರ ಏರಿಕೆ!; ಸೇವಾ ಶುಲ್ಕ ಪರಿಷ್ಕರಿಸಿ 300 ರು. ಹೆಚ್ಚಳಕ್ಕೆ ಒತ್ತಡ
ಫನಾ ಕೋರಿಕೆ ಕುರಿತು ಸರ್ಕಾರ ಯಾವುದೇ ನಿರ್ಧಾರ ತಳೆಯದಿದ್ದರೂ ಬಹುತೇಕ ಕಾರ್ಪೋರೇಟ್ ಆಸ್ಪತ್ರೆಗಳು ಡೋಸ್‌ವೊಂದಕ್ಕೆ 1,250 ರು. ಶುಲ್ಕ ವಸೂಲು ಮಾಡಿದ್ದವು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಒತ್ತಡಕ್ಕೆ ಮಣಿದಿತ್ತು. ಈ ಸಂಬಂಧ ಸೇವಾ ಶುಲ್ಕವನ್ನು 100 ರು.ಗೆ ಹೆಚ್ಚಳ ಮಾಡಿ ಮೇ 27ರಂದು ಆದೇಶ ಹೊರಡಿಸಿತ್ತು. ಈ ಕುರಿತೂ ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಲಸಿಕೆ ಸೇವಾ ಶುಲ್ಕ ಹೆಚ್ಚಳ; ಕಾರ್ಪೋರೇಟ್ ಆಸ್ಪತ್ರೆಗಳ ಮುಂದೆ ಮಂಡಿಯೂರಿದ ಸರ್ಕಾರ
ವರದಿ ಪ್ರಕಟವಾದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ‘ಖಾಸಗಿ ಆಸ್ಪತ್ರೆಗಳು ನೀಡುವ ಲಸಿಕೆಗೆ ಸೇವಾ ಶುಲ್ಕವನ್ನು 100 ರು.ಗಳಿಂದ 200ಕ್ಕೆ ಹೆಚ್ಚಿಸಿರುವ ರಾಜ್ಯದ ಬಿಜೆಪಿ ಸರ್ಕಾರ ಯಾರ ಹಿತರಕ್ಷಣೆ ಮಾಡುತ್ತಿದೆ, ರಾಜ್ಯದ ಜನರದ್ದೋ ಖಾಸಗಿ ಆಸ್ಪತ್ರೆಗಳದ್ದೋ ಎಂದು ಪ್ರಶ್ನಿಸಿದ್ದಾರೆ.
ಲಸಿಕಾಕರಣ ಬೂತ್‌ಗಳನ್ನು ತೆರೆಯಬೇಕು. ಲಸಿಕಾಕರಣದ ಸ್ಥಳದಲ್ಲಿ ಸಾಕಷ್ಟು ಅಂತರ ಕಾಪಾಡಲು ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವುದು, ಲಸಿಕೆ ಖರೀದಿಸಲು ಮುಂಚಿತವಾಗಿ ಮೊತ್ತ ಪಾವತಿಸುವುದು ಮತ್ತು ಹಲವು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿರುತ್ತದೆ. ಅಲ್ಲದೆ ಇನ್ನು ಹಲವು ಕಾರ್ಯಗಳಿಗೆ ಹೆಚ್ಚಿನ ಮೊತ್ತ ವ್ಯಯವಾಗುತ್ತದೆ. ಹೀಗಾಗಿ ಸೇವಾ ಶುಲ್ಕವನ್ನು ಕನಿಷ್ಠ 300 ರು.ಗಳಿಗೆ ಹೆಚ್ಚಿಸಲು ಮನವಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘವು ಮನವಿ ಮಾಡಿತ್ತು.
ಲಸಿಕಾಕರಣಕ್ಕೆ ಚಾಲನೆ ನೀಡಿದ್ದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ ಡೋಸ್‌ಗೆ 100 ರು.ನಂತೆ ಮಾತ್ರ ಸೇವಾ ಶುಲ್ಕ ಪಡೆಯಬೇಕು ಎಂದು 2021ರ ಮೇ 3ರಂದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿತ್ತು. ಆದರೆ ಬಹುತೇಕ ಆಸ್ಪತ್ರೆಗಳು ಈ ಸುತ್ತೋಲೆಯನ್ನು ಪಾಲಿಸಿರಲಿಲ್ಲ. ಬದಲಿಗೆ ಸೇವಾ ಶುಲ್ಕ ಹೆಚ್ಚಳ ಮಾಡಬೇಕು ಎಂದು ಪಟ್ಟು ಹಿಡಿದಿದ್ದವು.