ಲಸಿಕೆ; ಏಕರೂಪ ದರವಿಲ್ಲ, ದರದ ಮೇಲೆ ನಿಯಂತ್ರಣವಿಲ್ಲ, ದುಪ್ಪಟ್ಟು ಸೇವಾ ಶುಲ್ಕವೇ ಎಲ್ಲ

ಬೆಂಗಳೂರು; ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸುತ್ತಿರುವ ಕಾರ್ಪೋರೇಟ್‌ ವಲಯದ ಆಸ್ಪತ್ರೆಗಳು ಸರ್ಕಾರ ವಿಧಿಸಿರುವ ಸೇವಾ ಶುಲ್ಕವನ್ನು ಹೆಚ್ಚಿಸಬೇಕು ಎಂದು ಒತ್ತಡ ಹೇರಲಾರಂಭಿಸಿವೆ. ಸರ್ಕಾರ ಈ ಕುರಿತು ಇದುವರೆಗೂ ಯಾವುದೇ ನಿರ್ಧಾರ ಪ್ರಕಟಿಸದಿದ್ದರೂ ಕಾರ್ಪೋರೇಟ್‌ ಆಸ್ಪತ್ರೆಗಳು ದುಪ್ಪಟ್ಟು ಸೇವಾ ಶುಲ್ಕ ವಿಧಿಸಿ ಲಸಿಕೆಗೆ ಒಂದೂವರೆಯಿಂದ ಮೂರುವರೆ ಪಟ್ಟು ವಸೂಲಿ ಮಾಡುವ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿವೆ.

ಸೇವಾ ಶುಲ್ಕ ನಿಗದಿಪಡಿಸುವ ಸಂಬಂಧ 2021ರ ಏಪ್ರಿಲ್‌ 30ರಂದು ಸಭೆ ನಡೆದಿತ್ತು. ಲಸಿಕೆ ನೀಡುವ ಖಾಸಗಿ ಆಸ್ಪತ್ರೆಗಳು 100 ರು.ಗಳನ್ನಷ್ಟೇ ಸೇವಾ ಶುಲ್ಕವನ್ನಾಗಿ ವಿಧಿಸಬೇಕು ಎಂದು ಸಭೆಯಲ್ಲಿ ನಿರ್ಣಯವಾಗಿತ್ತು. ಅಲ್ಲದೆ ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿತ್ತು. ಆದರೀಗ ಈ ನಿರ್ಣಯಕ್ಕೆ ವಿರುದ್ಧವಾಗಿ ಖಾಸಗಿ ಆಸ್ಪತ್ರೆಗಳು ಸೇವಾ ಶುಲ್ಕವನ್ನು ವಿಧಿಸುತ್ತಿವೆ.

ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್‌ನ ಒಂದು ಡೋಸ್‌ಗೆ 850 ರು.,, ಕೊವಾಕ್ಸಿನ್‌ಗೆ 1,250 ರು. ಸ್ಪುಟ್ನಿಕ್‌ ವಿ ಲಸಿಕೆಗೆ 1,250 ರು. ವಿಧಿಸಿವೆ. ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಂಬಂಧಿ ಡಾ ಶರಣ್‌ ಪಾಟೀಲ್‌ ಅವರ ಒಡೆತನದ ಸ್ಪರ್ಶ ಆಸ್ಪತ್ರೆಯೂ ಸೇರಿದಂತೆ ಹಲವು ಆಸ್ಪತ್ರೆಗಳು ಲಸಿಕೆಗೆ 850 ರು.ನಿಂದ 1,250 ರು.ವರೆಗೂ ಶುಲ್ಕ ವಿಧಿಸಿವೆ.

ತಾನು ಉತ್ಪಾದಿಸುತ್ತಿರುವ ‘ಕೋವಿಶೀಲ್ಡ್‌’ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ಗೆ 600 ರೂ.ಗೆ ಪೂರೈಕೆ ಮಾಡುವುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಈಗಾಗಲೇ ಘೋಷಿಸಿದೆ. ಅದು ಲಸಿಕೆ ಬೆಲೆ ಎಂದೂ ಹೇಳಿತ್ತು. ಈ ಬೆಲೆ ಮೇಲೆ ಆಸ್ಪತ್ರೆಗಳು ರಾಜ್ಯ ಸರ್ಕಾರ ನಿಗದಿಪಡಿಸಿರುವ 100 ರು. ಸೇವಾ ಶುಲ್ಕವೂ ಸೇರಿದಂತೆ 700 ರು. ವಿಧಿಸಬೇಕಿತ್ತು. ಆದರೆ ಬಹುತೇಕ ಕಾರ್ಪೋರೇಟ್‌ ಆಸ್ಪತ್ರೆಗಳು ಕೋವಿಶೀಲ್ಡ್‌ ಒಂದು ಡೋಸ್‌ಗೆ 850 ರು. ವಸೂಲಿ ಮಾಡುತ್ತಿವೆ. ಅಲ್ಲದೆ ಬಹುತೇಕ ಆಸ್ಪತ್ರೆಗಳು ಒಂದೊಂದು ದರ ವಸೂಲು ಮಾಡುತ್ತಿವೆ.

ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲಿಚ್ಛಿಸುವವರು ಪ್ರತೀ ಡೋಸ್ ಗೆ 250 ರೂ ನೀಡಿ ಲಸಿಕೆ ಪಡೆಯಬೇಕಾಗಿದೆ. ಮೂಲಗಳ ಪ್ರಕಾರ ಲಸಿಕೆ ದರ 150 ರೂ ಇದ್ದು 100 ರೂ ಸೇವಾ ಶುಲ್ಕ ಸೇರಿ ಒಟ್ಟು 250 ರೂಗಳನ್ನು ದರವಾಗಿ ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲೇ ನಿಗದಿಪಡಿಸಿದೆ. ಅಲ್ಲದೆ ಈ ದರ ಸರ್ಕಾರದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ. ಆದರೂ ಕಾರ್ಪೋರೇಟ್‌ ಆಸ್ಪತ್ರೆಗಳು 850 ರು.ನಿಂದ 1,250 ರು.ವರೆಗೂ ವಿಧಿಸುತ್ತಿವೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಯಾವ ದರದಲ್ಲಿ ಲಸಿಕೆ ಖರೀದಿ ಮಾಡಿವೆ ಎಂಬ ಬಗ್ಗೆ ವಿವರಗಳನ್ನೂ ಬಹಿರಂಗಗೊಳಿಸಿಲ್ಲ.

ಎಲ್ಲಾ ಭಾರತೀಯರಿಗೂ ಲಸಿಕೆಗಳನ್ನು ಸಂಪೂರ್ಣ ಉಚಿತವಾಗಿ ಕೇಂದ್ರ ಸರ್ಕಾರ ನೀಡಬೇಕು, ಸರ್ಕಾರಿ ಆಸ್ಪತ್ರೆಗಳ ಮೂಲಕವಾದರೂ ಸರಿ, ಖಾಸಗಿ ಆಸ್ಪತ್ರೆಗಳ ಮೂಲಕವಾದರೂ ಸರಿ. ಲಸಿಕೆಯನ್ನು ಮಾರುಕಟ್ಟೆಯಿಂದ ಖರೀದಿ ಮಾಡುವ ಕೆಲಸ ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಾಗಿರಬೇಕು. ಕೇಂದ್ರೀಕೃತ ಖರೀದಿಯಿಂದ ಲಸಿಕೆಯು ಕಡಿಮೆ ದರದಲ್ಲಿ ದೊರಕುವ‌ ಸಾಧ್ಯತೆಗಳು ಹೆಚ್ಚಾಗುತ್ತದೆ. ಹಾಗೂ, ಲಸಿಕೆಯ ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸಲು ಭಾರತದಲ್ಲಿರುವ 28 ಲಸಿಕೆ ತಯಾರಿಕೆ ಕಾರ್ಖಾನೆಗಳನ್ನು, ಅದರಲ್ಲಿ 5 ಸಾರ್ವಜನಿಕ ವಲಯ ಉದ್ದಿಮೆಗಳು, 3 ಸರ್ಕಾರಿ ಉದ್ದಿಮೆಗಳನ್ನೊಳಗೊಂಡ ಕಾರ್ಖಾನೆಗಳಲ್ಲಿ ಲಸಿಕೆ ಉತ್ಪಾದಿಸಿ ಲಸಿಕೆಯ ಉತ್ಪಾದನಾ ಸಂಖ್ಯೆಯನ್ನು ಬಹುಮಟ್ಟಿಗೆ ಹೆಚ್ಚಿಸಿ ಆದಷ್ಟು ಬೇಗ ಜನತೆಯನ್ನು ವಾಕ್ಸಿನೇಟ್ ಮಾಡಬಹುದು.

ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ದೇಶಾದ್ಯಂತ 18 ವರ್ಷಕ್ಕೂ ಮೇಲ್ಪಟ್ಟವರಿಗೆ ಕೊರೊನಾ ನಿರೋಧಕ ಲಸಿಕೆ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಇದರ ಭಾಗವಾಗಿ ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಖರೀದಿಸಲು ಅವಕಾಶ ಮಾಡಲಾಗಿತ್ತು.

ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದ್ದ ಲಸಿಕೆಯನ್ನು ಸರಕಾರಿ ಲಸಿಕೆ ಕೇಂದ್ರಗಳಿಗೆ ಪೂರೈಕೆ ಮಾಡುವುದರಿಂದ ಸರಕಾರಿ ಲಸಿಕೆ ಕೇಂದ್ರಗಳಲ್ಲಿ ಹೆಚ್ಚು ಜನರು ಲಸಿಕೆ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದು ಸರ್ಕಾರದ ಆಶಯವಿತ್ತಾದರೂ ಏಕರೂಪದ ದರವನ್ನು ನಿಗದಿಪಡಿಸಲಿಲ್ಲ ಮತ್ತು ದರದ ಮೇಲೆ ಯಾವುದೇ ನಿಯಂತ್ರಣವನ್ನೂ ಹೇರಲಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಅದರಲ್ಲೂ ತುಂಬಾ ಮುಖ್ಯವಾಗಿ ಕಾರ್ಪೋರೇಟ್‌ ಆಸ್ಪತ್ರೆಗಳು ಲಸಿಕೆ ದರವನ್ನು ಗಣನೀಯವಾಗಿ ಏರಿಕೆ ಮಾಡಿವೆ.

ಕೇಂದ್ರ ಸರ್ಕಾರ ಸೂಚಿಸಿರುವ ಬೆಲೆಯನ್ನು ಒಪ್ಪದ ಖಾಸಗಿ ಆಸ್ಪತ್ರೆಗಳು ದರ ಏರಿಕೆಗೆ ತಮ್ಮದೇ ಆದ ಸಮರ್ಥನೆಯನ್ನು ಮುಂದೊಡ್ಡಿದ್ದಾರೆ. ಕೋವಿಶೀಲ್ಡ್‌ ಲಸಿಕೆಯನ್ನು 660ರಿಂದ 670 ರು ದರದಲ್ಲಿ (ಜಿಎಸ್‌ಟಿ ಮತ್ತು ಸಾಗಾಣಿಕೆ ಸೇರಿ) ಖರೀದಿಸಲಾಗುತ್ತಿದೆ. ಲಸಿಕೆಗಳಲ್ಲಿ ಶೇ.5ರಿಂದ 6ರಷ್ಟು ವ್ಯರ್ಥವಾಗಲಿದೆ. ಇದೆಲ್ಲವನ್ನೂ ಸೇರಿಸಿದರೆ ಲಸಿಕೆ ಡೋಸ್‌ವೊಂದಕ್ಕೆ 710 ರಿಂದ 715 ರು ತಗುಲಲಿದೆ. ಅಲ್ಲದೆ ಲಸಿಕೆ ಸ್ಯಾನಿಟೈಸರ್‌, ಸಿಬ್ಬಂದಿ ಪಿಪಿಇ ಕಿಟ್‌, ಬಯೋ ಮೆಡಿಕಲ್‌ ತ್ಯಾಜ್ಯ ವಿಲೇವಾರಿ ಇತರೆ ವೆಚ್ಚ 170ರಿಂದ 180 ರು. ಆಗಲಿದೆ. ಹೀಗಾಗಿ ಲಸಿಕೆಯ ಡೋಸ್‌ವೊಂದಕ್ಕೆ 900 ರು. ಶುಲ್ಕ ವಿಧಿಸಲಾಗಿದೆ ಎಂದು ಆಸ್ಪತ್ರೆಯೊಂದರ ಮುಖ್ಯಸ್ಥರೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

SUPPORT THE FILE

Latest News

Related Posts