ಬೆಂಗಳೂರು; ದುಬಾರಿ ದರದಲ್ಲಿ ಮಾಸ್ಕ್ ಖರೀದಿಸಿ ಸರ್ಕಾರಕ್ಕೆ ಸಂಭವಿಸಿರುವ ನಷ್ಟದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್ ಪಾಂಡೆ ಸೇರಿದಂತೆ ಆರೋಪಿತ ಅಧಿಕಾರಿಗಳು ನುಣುಚಿಕೊಳ್ಳಲಾರಂಭಿಸಿದ್ದಾರೆ.
ಅಥಣಿ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಭೀಮನಗೌಡ ಪರಗೊಂಡ ಎಂಬುವರು ದಾಖಲೆ ಸಮೇತ ಸೆ. 4 ರಂದು ಸಲ್ಲಿಸಿದ್ದ ದೂರಿಗೆ ಪಂಕಜಕುಮಾರ್ ಪಾಂಡೆ ಮತ್ತು ಡಾ ಲತಾ ಪ್ರಮೀಳಾ ಅವರು ಲೋಕಾಯುಕ್ತ ವಿಚಾರಣಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಮತ್ತು ಮೆಡಿ ಅರ್ಥ್ ಲೈಫ್‌ಕೇರ್ ಲಿಮಿಟೆಡ್‌ನಿಂದ ದುಬಾರಿ ದರದಲ್ಲಿ ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. 4(ಜಿ) ವಿನಾಯಿತಿ ಅಡಿ ಹೊರಡಿಸಿದ್ದ ಅಧಿಸೂಚನೆಯನ್ನು ಉಲ್ಲಂಘಿಸಿ ದುಬಾರಿ ದರದಲ್ಲಿ ಖರೀದಿಸಲಾಗಿದೆ ಎಂದು ದೂರುದಾರ ಭೀಮನಗೌಡ ಅವರು ಸಲ್ಲಿಸಿರುವ ದೂರಿನಲ್ಲಿ ಇಲಾಖೆಯ ಆಯುಕ್ತ ಪಂಕಜಕುಮಾರ್ ಪಾಂಡೆ ಅವರನ್ನು 5ನೇ ಪ್ರತಿವಾದಿಯನ್ನಾಗಿಸಲಾಗಿದೆ.
ದೂರಿನ ಕುರಿತು ಪಾಂಡೆ ಅವರು ಲೋಕಾಯುಕ್ತ ವಿಚಾರಣಾಧಿಕಾರಿಗೆ ಸಮಜಾಯಿಷಿ ಹೇಳಿಕೆ ನೀಡಿದ್ದಾರೆ. ‘ತಾವು ಇಲಾಖೆಯ ದೈನಂದಿನ ಆಡಳಿತ ನಿಭಾಯಿಸುವ ಹೊಣೆಗಾರಿಕೆಯಷ್ಟೇ ತಮ್ಮ ಮೇಲಿದೆ. ಆಡಳಿತಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ನೀಡುವ ಸೂಚನೆಯನ್ನು ಪಾಲಿಸಲಾಗುತ್ತಿದೆ. ತಮ್ಮ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಖರೀದಿ ಪ್ರಕ್ರಿಯೆಯಲ್ಲಿ ತಾವು ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಭಾಗಿಯಾಗಿಲ್ಲ. ಯಾವುದೇ ದುರ್ವರ್ತನೆ ತೋರಿಲ್ಲ, ಕರ್ತವ್ಯಲೋಪವನ್ನೂ ಎಸಗಿಲ್ಲ. ಹೀಗಾಗಿ ತಮ್ಮನ್ನು ಈ ಆರೋಪದಿಂದ ಕೈಬಿಡಬೇಕು,’ ಎಂದು ಲೋಕಾಯುಕ್ತ ವಿಚಾರಣಾಧಿಕಾರಿಗೆ 2020ರ ನವೆಂಬರ್ 12ರಂದು ನೀಡಿರುವ ಸಮಜಾಯಿಷಿಯಲ್ಲಿ ವಿವರಿಸಿದ್ದಾರೆ.
ಪ್ರಕರಣ ಹಿನ್ನೆಲೆ
ಒಟ್ಟು 35.18 ಕೋಟಿ ಮೊತ್ತಕ್ಕೆ 4(ಜಿ) ವಿನಾಯಿತಿ ಪಡೆದಿದ್ದ ಕೆಎಸ್‌ಡಿಎಲ್‌ಡಬ್ಲ್ಯೂಎಸ್, ಪಿಪಿಇ ಕಿಟ್, ಎನ್-95 ಮಾಸ್ಕ್‌ಗಳ ಖರೀದಿಸಲು ಮಾರ್ಚ್ 9, 14, 20ರಂದು ಒಟ್ಟು 11.66 ಕೋಟಿ ರು.ಗೆ ಮೂರು ಕಂಪನಿಗಳಿಗೆ ಸರಬರಾಜು ಆದೇಶ ನೀಡಿತ್ತು.
ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕೆಎಸ್‌ಡಿಎಲ್‌ಡಬ್ಲ್ಯೂಎಸ್, ಕಡಿಮೆ ದರ ನೀಡುವ ಸರಬರಾಜುದಾರರಿಂದ ಔಷಧ, ಉಪಕರಣಗಳನ್ನು ಖರೀದಿಸದೇ ದುಬಾರಿ ದರ ನೀಡಿರುವ ಸರಬರಾಜುದಾರರಿಂದ ಖರೀದಿಸಿದೆ. ಹೀಗಾಗಿ ಸರ್ಕಾರಕ್ಕೆ ಅಂದಾಜು 9.04 ಕೋಟಿ ರು. ನಷ್ಟವಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣದ ಕುರಿತು ‘ದಿ ಫೈಲ್’ ಆಗಸ್ಟ್ 27ರಂದು ದಾಖಲೆ ಸಮೇತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್‌ನಿಂದ ಎನ್-95 ಮಾಸ್ಕ್‌ವೊಂದಕ್ಕೆ 147 (ಜಿಎಸ್‌ಟಿ ಸೇರಿದಂತೆ) ದರದಲ್ಲಿ 1,50,000 ಪ್ರಮಾಣದ ಎನ್-95 ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌ವೊಂದಕ್ಕೆ 330.40 (ಜಿಎಸ್‌ಟಿ ಸೇರಿ) 1,50,000 ಪ್ರಮಾಣದಲ್ಲಿ ಪಿಪಿಇ ಕಿಟ್‌ಗಳನ್ನು ಒಟ್ಟು 7.16 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಮಾರ್ಚ್ 9ರಂದು ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ಆರ್ಥಿಕ ಇಲಾಖೆ ಹೊರಡಿಸಿದ್ದ 4(ಜಿ) ವಿನಾಯಿತಿ ಆದೇಶವನ್ನು (ಸಂಖ್ಯೆ;ಆಇ;183/ವೆಚ್ಚ/12/2020) ಉಲ್ಲೇಖಿಸಿತ್ತು.
ಅದೇ ರೀತಿ 1.56 ಕೋಟಿ ಮೊತ್ತದಲ್ಲಿ 1,00,000.00 ಪ್ರಮಾಣದ ಎನ್-95 ಮಾಸ್ಕ್‌ಗಳ ಖರೀದಿಗೆ ಸಾಫ್ಟ್‌ವೇರ್ ಕಂಪನಿ ಎಟೆಕ್ ಟ್ರಾನ್‌ಗೆ 2020ರ ಮಾರ್ಚ್ 20ರಂದು ಆದೇಶ ನೀಡಿತ್ತು. ಇದರಲ್ಲಿ ಆರ್ಥಿಕ ಇಲಾಖೆ ವಿನಾಯಿತಿ ನೀಡಿ 2020ರ ಮಾರ್ಚ್ 12ರಂದು ಹೊರಡಿಸಿದ್ದ ಅಧಿಸೂಚನೆಯನ್ನೂ (ಸಂಖ್ಯೆ; ಆಇ 127 ವೆಚ್ಚ-12/2020) ಉಲ್ಲೇಖಿಸಲಾಗಿತ್ತು.
ಹಾಗೆಯೇ ಇದೇ ಅಧಿಸೂಚನೆಯನ್ನು ಉಲ್ಲೇಖಿಸಿ 2.94 ಕೋಟಿ ರು. ಮೊತ್ತದಲ್ಲಿ 2,00,000.00 ಪ್ರಮಾಣದ ಎನ್-95 ಮಾಸ್ಕ್‌ಗಳನ್ನು ಖರೀದಿಗೆ 2020ರ ಮಾರ್ಚ್ 14ರಂದು ಮೆಡಿ ಅರ್ಥ್ ಲೈಫ್‌ಕೇರ್ ಪ್ರೈವೈಟ್ ಲಿಮಿಟೆಡ್‌ಗೆ ಆದೇಶ ಹೊರಡಿಸಿತ್ತು.
ಅಲ್ಲದೆ 3 ಕಂಪನಿಗಳಿಗೂ ಒಂದೊಂದು ದರದಲ್ಲಿ ಸರಬರಾಜು ಆದೇಶ ನೀಡಿತ್ತು. ಎನ್-95 ಮಾಸ್ಕ್ ಗೆ 147 ದರದಲ್ಲಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ಗೆ ಆದೇಶ ನೀಡಿರುವ ಅಧಿಕಾರಿಗಳು, ಎಟೆಕ್ ಟ್ರಾನ್‌ಗೆ 156.80 ರು.ದರ ಮತ್ತು ಮೆಡಿಅರ್ಥ್ ಲೈಫ್‌ಕೇರ್ ಪ್ರೈ ಲಿ.,ಗೆ 147 ರು. ದರವನ್ನು ನಮೂದಿಸಿತ್ತು.
ಮಾರ್ಚ್ 9, 14, 20ರಂದು ಹೊರಡಿಸಿದ್ದ ಸರಬರಾಜು ಆದೇಶದಲ್ಲಿ ನಮೂದಿಸಿರುವ ದರಗಳು ನೈಜ ದರಕ್ಕಿಂತಲೂ ಹೆಚ್ಚಿಗೆ ಇತ್ತು. ಮಾರ್ಚ್ ತಿಂಗಳಲ್ಲಿ ಎನ್-95 ಮಾಸ್ಕ್‌ಗೆ 70 ರು., ಪಿಪಿಇ ಕಿಟ್‌ಗೆ 200 ರು. ದರವಿತ್ತು. 4(ಜಿ) ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕಡಿಮೆ ದರ ನೀಡುವ ಸರಬರಾಜುದಾರರಿಂದ ಖರೀದಿಸಿದ್ದರೆ ಅಂದಾಜು 9.04 ಕೋಟಿ ರು.ಗಳನ್ನು ಉಳಿಸಬಹುದಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಕಡಿಮೆ ದರ ನೀಡುವ ಸರಬರಾಜುದಾರರಿಂದ ಕೆಎಸ್‌ಡಿಎಲ್‌ಡಬ್ಲ್ಯೂಎಸ್ ಮೂಲಕ ಅವಶ್ಯಕ ಔಷಧ ಮತ್ತು ಉಪಕರಣಗಳನ್ನು 13,35,29,180 ಮತ್ತು 21,83,20,440 ರು. ಸೇರಿದಂತೆ 35.18 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ಅಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ (ಸಂಖ್ಯೆ;ಆಇ;183/ವೆಚ್ಚ/12/2020-ಸಂಖ್ಯೆ; ಆಇ 127 ವೆಚ್ಚ-12/2020) ವಿನಾಯಿತಿ ನೀಡಿದ್ದನ್ನು ಸ್ಮರಿಸಬಹುದು.
ಉಪಕರಣ ಮತ್ತು ಔಷಧ ಸಾಮಗ್ರಿಗಳನ್ನು ಕಡಿಮೆ ದರ ಮತ್ತು ಸಮಂಜಸ ದರದಲ್ಲಿ ಖರೀದಿಸುವ ಸಲುವಾಗಿ ಆರ್ಥಿಕ ಇಲಾಖೆ 4(ಜಿ) ವಿನಾಯಿತಿ ನೀಡಿ 2020ರ ಮಾರ್ಚ್ 9 ಮತ್ತು 12ರಂದು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿತ್ತು.