ಬೆಂಗಳೂರು; 1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು ಹೈಕೋರ್ಟ್ ನಿರ್ದೇಶನದಂತೆ ಪ್ರಕಟಿಸಿರುವ ಅಂತಿಮ ಪರಿಷ್ಕೃತ ಆಯ್ಕೆಪಟ್ಟಿಯೂ ಲೋಪದೋಷಗಳಿಂದ ಮುಕ್ತವಾಗಿಲ್ಲ. ಅಲ್ಲದೆ ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿಇಒ ಶಿವಶಂಕರ್ ಸೇರಿದಂತೆ ಒಟ್ಟು 8 ಮಂದಿ ಅಧಿಕಾರಿಗಳು ಅಂತಿಮ ಪರಿಷ್ಕೃತ ಪಟ್ಟಿಯ ಪ್ರಕಾರ ಉಪ ವಿಭಾಗಾಧಿಕಾರಿ ಹುದ್ದೆಯನ್ನು ಕಳೆದುಕೊಂಡಿದ್ದಾರೆ.
ಅಂತಿಮ ಪರಿಷ್ಕೃತ ಪಟ್ಟಿ ಪ್ರಕಾರ 8 ಮಂದಿ ಐಎಎಸ್ ಅಧಿಕಾರಿಗಳನ್ನು ಕೈ ಬಿಡಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ.
ಕರಿಗೌಡ, ಗೋಪಾಲಕೃಷ್ಣ, ವಸಂತಕುಮಾರ್, ಶಿವಶಂಕರ್, ಎಚ್ ಬಸವರಾಜೇಂದ್ರ, ಪೆದ್ದಪ್ಪಯ್ಯ ಸೇರಿ ಒಟ್ಟು 8 ಮಂದಿ ಹೊಂದಿದ್ದ ಉಪ ವಿಭಾಗಾಧಿಕಾರಿ ಹುದ್ದೆಯಿಂದ ಲೋಕಸೇವಾ ಆಯೋಗವು 2014ರ ನವೆಂಬರ್ 11ರಂದು (ವೆಬ್ ಹೋಸ್ಟ್) ಪಟ್ಟಿ) ಸ್ಥಾನ ಪಲ್ಲಟಗೊಳಿಸಿತ್ತು.
2014ರ ಪರಿಷ್ಕೃತ ಪಟ್ಟಿ ಪ್ರಕಾರ ಕರಿಗೌಡ ಅವರು ಉಪ ವಿಭಾಗಾಧಿಕಾರಿ ಹುದ್ದೆಯಿಂದ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಸ್ಥಾನ ಪಲ್ಲಟಗೊಂಡಿದ್ದರು. ಅದೇ ರೀತಿ ಗೋಪಾಲಕೃಷ್ಣ ಅವರು ತಹಶೀಲ್ದಾರ್, ವಸಂತಕುಮಾರ್ ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ, ಶಿವಶಂಕರ್ ಅವರು ವಾಣಿಜ್ಯ ತೆರಿಗೆ, ಪೆದ್ದಪ್ಪಯ್ಯ ಅವರು ತಹಶೀಲ್ದಾರ್ ಮತ್ತು ಬಸವರಾಜೇಂದ್ರ ಅವರು ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಸ್ಥಾನಪಲ್ಲಟಗೊಂಡಿದ್ದರು.
ಹೈಕೋರ್ಟ್‌ನ 2ನೇ ನಿರ್ದೇಶನದಂತೆ ಆಯೋಗವು 2019ರ ಜನವರಿ 25ರಂದು ಮತ್ತು 3ನೇ ನಿರ್ದೇಶನದಂತೆ 2019ರ ಆಗಸ್ಟ್ 22ರಂದು ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿತ್ತು. ಹೈಕೋರ್ಟ್‌ನ ನಿರ್ದೇಶನದಂತೆ ಆಯೋಗವು ಪ್ರಕಟಿಸಿದ್ದ ಈ ಎರಡೂ ಪಟ್ಟಿಗಳಲ್ಲೂ ಕರಿಗೌಡ ಸೇರಿದಂತೆ 8 ಮಂದಿ ಅಧಿಕಾರಿಗಳ ಹುದ್ದೆಗಳನ್ನು 2014ರಲ್ಲಿದ್ದಂತೆಯೇ ಮುಂದುವರೆಸಿತ್ತು. ಅದೇ ರೀತಿ 2021ರ ಜನವರಿ 30ರಂದು ಪ್ರಕಟಿಸಿರುವ ಅಂತಿಮ ಪರಿಷ್ಕೃತ ಪಟ್ಟಿಯಲ್ಲಿಯೂ ಈ ಹಿಂದಿನ 3 ಪಟ್ಟಿಗಳ ಪ್ರಕಾರ ಸ್ಥಾನಪಲ್ಲಟಗೊಂಡಿರುವ ಹುದ್ದೆಯಲ್ಲಿಯೇ ಮುಂದುವರೆಸಿದೆ.
ಅಂತಿಮ ಪರಿಷ್ಕೃತ ಪಟ್ಟಿ ಪ್ರಕಾರ 8 ಮಂದಿ ಅಧಿಕಾರಿಗಳು ಈ ಹಿಂದೆಯೇ ಸ್ಥಾನಪಲ್ಲಟಗೊಂಡ ಹುದ್ದೆಯಲ್ಲಿಯೇ ಮುಂದುವರೆದಿರುವುದರಿಂದ ಇವರು ಐಎಎಸ್ ಹುದ್ದೆಯಲ್ಲಿ ಮುಂದುವರೆಯಲು ಅರ್ಹತೆ ಹೊಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ಹೈಕೋರ್ಟ್ ನೀಡಿದ್ದ 3ನೇ ನಿರ್ದೇಶನವನ್ನು ಸರ್ಕಾರ ಮತ್ತು ಆಯೋಗವು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ಬಾಧಿತ ಚನ್ನಪ್ಪ ಮತ್ತಿತರರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಹೀಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಪರಿಷ್ಕೃತ ಪಟ್ಟಿಯನ್ನು ಸರಿಪಡಿಸಲಾಗುವುದು ಎಂದು 2020ರ ಡಿಸೆಂಬರ್ 4ರಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಅದರಂತೆ ಆಯೋಗವು ಅಂತಿಮ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ.
ಅದೇ ರೀತಿ ಅಂತಿಮ ಪರಿಷ್ಕೃತ ಪಟ್ಟಿ ಪ್ರಕಾರ ರೂಪಶ್ರೀ ಎಂಬುವರಿಗೆ ಉಪ ವಿಭಾಗಾಧಿಕಾರಿ ಹುದ್ದೆ ಲಭಿಸಿದೆ. ವಿಶೇಷವೆಂದರೆ ಈ ಹಿಂದೆ ಆಯೋಗವು ಪ್ರಕಟಿಸಿದ್ದ ಪರಿಷ್ಕೃತ ಪಟ್ಟಿಗಳ ಪ್ರಕಾಋ ರೂಪಶ್ರೀ ಅವರಿಗೆ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿರಲಿಲ್ಲ.
ಇನ್ನು, ಹೈಕೋರ್ಟ್‌ನ 3ನೇ ನಿರ್ದೇಶನದಂತೆ ಆಯೋಗವು ಪ್ರಕಟಿಸಿದ್ದ ಪರಿಷ್ಕೃತ ಪಟ್ಟಿ ಪ್ರಕಾರ ಮೀನಾ ನಾಗರಾಜ್, ಅಕ್ರಂ ಪಾಶಾ, ಚನ್ನಪ್ಪ ಇವರು ಉಪ ವಿಭಾಗಾಧಿಕಾರಿ ಹುದ್ದೆ ಕಳೆದುಕೊಂಡಿದ್ದರು. ಆದರೀಗ ಆಯೋಗವು ಪ್ರಕಟಿಸಿರುವ ಅಂತಿಮ ಪರಿಷ್ಕೃತ ಪಟ್ಟಿ ಪ್ರಕಾರ ಉಪ ವಿಭಾಗಾಧಿಕಾರಿ ಹುದ್ದೆಯನ್ನು ಮರಳಿ ಪಡೆದಿದ್ದಾರೆ.
ಆಯೋಗವು ಈ ಹಿಂದೆ ಪ್ರಕಟಿಸಿದ್ದ ಪರಿಷ್ಕೃತ ಪಟ್ಟಿ ಪ್ರಕಾರ ಹುದ್ದೆ ಕಳೆದುಕೊಂಡಿದ್ದ 36 ಅಭ್ಯರ್ಥಿಗಳ ಬದಲಿಗೆ 36 ಅಭ್ಯರ್ಥಿಗಳು ಹೊಸದಾಗಿ ಸೇರ್ಪಡೆಯಾಗಿದ್ದರು. ಆದರೆ ಅಂತಿಮ ಪರಿಷ್ಕೃತ ಪಟ್ಟಿ ಪ್ರಕಾರ 36 ಅಭ್ಯರ್ಥಿಗಳ ಹುದ್ದೆಯಲ್ಲಿಯೂ ಬದಲಾವಣೆ ಆಗಿದೆ.