ಬೆಂಗಳೂರು; ಅಮಿತ್ ಶಾ, ಜೆ ಪಿ ನಡ್ಡಾ ಸಂಪರ್ಕ ತಮಗಿದೆ ಎಂದು ನಂಬಿಸಿ ನಿವೃತ್ತ ನ್ಯಾಯಮೂರ್ತಿ ಸೇರಿದಂತೆ ಹಲವರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವ ಆರೋಪದಡಿಯಲ್ಲಿ ಬಂಧಿತನಾಗಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿ ಜತೆ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಹೆಸರೂ ಥಳಕು ಹಾಕಿಕೊಂಡಿದೆ.
ಕಾರಜೋಳ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ ಇಲಾಖೆ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ಮಿಕ್ಸರ್, ಗ್ರೈಂಡರ್, ಪಾತ್ರೆಗಳು ಸೇರಿದಂತೆ ಇನ್ನಿತರ ಗೃಹಪಯೋಗಿ ಉಪಕರಣಗಳ ಖರೀದಿ ಮಾಡಿಸುವುದಾಗಿ ಪ್ರತಿಷ್ಠಿತ ಕಂಪನಿಯ ಮಾಲೀಕರೊಬ್ಬರಿಂದ ಮುಂಗಡ ರೂಪದಲ್ಲಿ ಲಕ್ಷಾಂತರ ರು. ಬೆಲೆ ಬಾಳುವ ಉಪಕರಣಗಳನ್ನು ಯುವರಾಜ್ ಅಲಿಯಾಸ್ ಸೇವಾಲಾಲ್ ಮುಂಗಡವಾಗಿ ಪಡೆದಿದ್ದ ಎಂಬುದು ತಿಳಿದು ಬಂದಿದೆ.
ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ವಿವಿಧ ಯೋಜನೆಗಳಡಿಯಲ್ಲಿ ಗೃಹಪಯೋಗಿ ಉಪಕರಣಗಳನ್ನು ಸರಬರಾಜು ಮಾಡುವ ಪ್ರತಿಷ್ಠಿತ ಕಂಪನಿಯ ಮಾಲೀಕರನ್ನು ಆರೋಪಿ ಯುವರಾಜ್ ವಿಧಾನಸೌಧದಲ್ಲಿ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿಸಿದ್ದ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್’ಗೆ ತಿಳಿಸಿವೆ.
ಈ ಕುರಿತು ‘ದಿ ಫೈಲ್’ ನೇರವಾಗಿ ಕಂಪನಿಯ ಮಾಲೀಕರನ್ನು ಸಂಪರ್ಕಿಸಿದಾಗ ಗೋವಿಂದ ಕಾರಜೋಳ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಯುವರಾಜ್ ಭೇಟಿ ಮಾಡಿಸಿದ್ದನ್ನು ಖಚಿತಪಡಿಸಿದರು. ವಿದ್ಯಾರ್ಥಿ ನಿಲಯಗಳಿಗೆ ಉಪಕರಣಗಳನ್ನು ಸರಬರಾಜು ಮಾಡುವ ಆದೇಶ ಪಡೆಯುವ ಭಾಗವಾಗಿ ಲಕ್ಷಾಂತರ ರು. ಬೆಲೆಬಾಳುವ ಎಲೆಕ್ಟ್ರಾನಿಕ್ ಸಾಧನಗಳನ್ನು ಮುಂಗಡ ರೂಪದಲ್ಲಿ ಆರೋಪಿ ಯುವರಾಜ್‌ಗೆ ನೀಡಲಾಗಿತ್ತು. ಆದರೆ ವಿದ್ಯಾರ್ಥಿ ನಿಲಯಗಳಿಗೆ ತಮ್ಮ ಕಂಪನಿ ಉತ್ಪಾದನೆಯ ಗೃಹಪಯೋಗಿ ಉಪಕರಣಗಳನ್ನು ಸರಬರಾಜು ಮಾಡಲು ಆದೇಶ ದೊರಕಿಸಿಕೊಡಲಿಲ್ಲ ಎಂದು ಮಾಹಿತಿ ಹಂಚಿಕೊಂಡರು. ಈ ಸಂಬಂಧ ದೂರು ನೀಡುವ ಬಗ್ಗೆ ಏನನ್ನೂ ಹೇಳಲಿಲ್ಲ. ಗೌಪ್ಯತೆ ಕಾರಣಕ್ಕಾಗಿ ಕಂಪನಿಯ ಮಾಲೀಕರ ಹೆಸರನ್ನು ಇಲ್ಲಿ ಬಹಿರಂಗಪಡಿಸುತ್ತಿಲ್ಲ.
ರಾಜ್ಯಸಭೆ ಸದಸ್ಯ, ಸರ್ಕಾರಿ ನೌಕರಿ ಕೊಡಿಸುವುದು, ಕೇಂದ್ರದಲ್ಲಿ ಪ್ರಭಾವಿ ಹುದ್ದೆ ನೀಡುವುದಾಗಿ ನಂಬಿಸಿ ವಂಚನೆ ಎಸಗಿದ್ದ ಆರೋಪದ ಮೇರೆಗೆ ಈಗಾಗಲೇ ಬಂಧಿತನಾಗಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಹಲವರಿಗೆ ವಂಚನೆ ಎಸಗಿರುವ ತರಹೇವಾರಿ ಪ್ರಕರಣಗಳು ಒಂದೊಂದಾಗಿ ಹೊರಬೀಳುತ್ತಿವೆ.
ಪ್ರಭಾವಿ ಹುದ್ದೆ ಕೊಡಿಸುತ್ತೇನೆಂದು ನಂಬಿಸಿ ತನ್ನಿಂದ 8.27 ಕೋಟಿ ರೂ. ಪಡೆದು ವಂಚಿಸಿದ್ದಾನೆ ಎಂದು ಕೆಲ ದಿನಗಳ ಹಿಂದೆ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಎಂಬುವರು ಬೆಂಗಳೂರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನು ಸ್ಮರಿಸಬಹುದು.
ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಯುವರಾಜ್ ಸ್ವಾಮಿಗೆ ರಾಜಕೀಯ ವಲಯದಲ್ಲಿ ದೊಡ್ಡ ಸಂಪರ್ಕ ಇದೆ ಎನ್ನುವುದು ಅವರ ಬಳಿ ಇರುವ ಫೋಟೋಗಳಿಂದ ಗೊತ್ತಾಗಿತ್ತು ಎಂದು ಸಿಸಿಬಿ ವಿಚಾರಣೆ ವೇಳೆ ಹೇಳಿದ್ದರು. ಅಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಚಿವ ವಿ ಸೋಮಣ್ಣ, ಸಿ ಪಿ ಯೋಗೇಶ್ವರ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವರೊಂದಿಗಿನ ಫೋಟೋಗಳು ಬಹಿರಂಗಗೊಂಡಿದ್ದವು.
ರಾಜಕೀಯ ಹುದ್ದೆ ಮತ್ತು ಸರಕಾರಿ ಕೆಲಸ ಕೊಡಿಸುವುದಾಗಿ ನಿವೃತ್ತ ನ್ಯಾಯಮೂರ್ತಿಗಳಿಂದ ಹಿಡಿದು ಹಲವರ ಬಳಿ ಹಣ ಪಡೆಯುತ್ತಿದ್ದ ಆರೋಪಿ, ಅದನ್ನು ಬೇನಾಮಿಯಾಗಿ ಇಟ್ಟುಕೊಳ್ಳಲು ನಟಿಯರು ಸೇರಿದಂತೆ ಹಲವರ ಖಾತೆಗಳಿಗೆ ವರ್ಗಾಯಿಸುತ್ತಿದ್ದ ಎಂಬ ಅನುಮಾನವನ್ನು ಸಿಸಿಬಿ ಅಧಿಕಾರಿಗಳು ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೆಸರಲ್ಲಿ ವಂಚನೆ ಮಾಡಿದ ಆರೋಪ ಮೇರೆಗೆ ಬಿಲ್ಡರ್ ಇನಿತ್ ಕುಮಾರ್ ಎಂಬವರು ಈಗಾಗಲೇ ದೂರು ದಾಖಲಿಸಿದ್ದಾರೆ. ತಾನು ಸಂತೋಷ್ ಜೀಯವರ ಅಣ್ಣನ ಮಗ ಎಂದು ಪರಿಚಯಿಸಿಕೊಂಡಿದ್ದ ಯುವರಾಜ್, ಇನಿತ್ ಕುಮಾರ್ ಅವರನ್ನು ರಾಷ್ಟ್ರಮಟ್ಟದಲ್ಲಿ ಯೂತ್ ಐಕಾನ್ ಮಾಡುತ್ತೇನೆ ಎಂದು ನಂಬಿಸಿ ವಂಚಿಸಿರುವ ಆರೋಪವೂ ಇದೆ.
ಅಲ್ಲದೇ ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧ್ಯಕ್ಷ ಮಾಡುವುದಾಗಿಯೂ ಹೇಳಿ ಸುಮಾರು 30 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದ. ಇನ್ನು ಸಿಲ್ಕ್ ಬೋರ್ಡ್ ಅಧ್ಯಕ್ಷ ಗಾದಿಗೆ ಮೂರು ಕೋಟಿ ರೂಪಾಯಿ ಬೇಡಿಕೆಯಿರಿಸಿ ಕೊನೆಗೆ 30 ಲಕ್ಷ ರೂಪಾಯಿ ಪಡೆದಿದ್ದ ಎಂಬ ಗುರುತರ ಆರೋಪವೂ ಯುವರಾಜ್ ಮೇಲಿದೆ.