ಕೆಪಿಎಸ್‌ಸಿ ಕಾರ್ಯದರ್ಶಿ ಹುದ್ದೆಗೆ ಐಎಎಸ್‌ಯೇತರ ಅಧಿಕಾರಿ ನಿಯೋಜನೆಯೇಕೆ?

ಬೆಂಗಳೂರು; 1998ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕಾತಿಯಲ್ಲಿನ ಮೂರನೇ ಮೌಲ್ಯಮಾಪನ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪರಿಷ್ಕೃತಗೊಳಿಸುವ ಸಂಬಂಧ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆಯಾದ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರನ್ನು ರಜೆ ಮೇಲೆ ಕಳಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಆಯೋಗದ ಕಾರ್ಯದರ್ಶಿ ಹುದ್ದೆಗೆ ಐಎಎಸ್‌ ವೃಂದದ ಅಧಿಕಾರಿಯನ್ನು ಹೊರಗಿಟ್ಟು ಆಯೋಗದ ಉಪ ಕಾರ್ಯದರ್ಶಿಯನ್ನು ನಿಯೋಜಿಸಿರುವುದು ಸಿದ್ಧಗೊಳ್ಳುವ ಪರಿಷ್ಕೃತ ಪಟ್ಟಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ.

ಆಯೋಗದ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ಜಿ ಸತ್ಯವತಿ ಮತ್ತು ಪರೀಕ್ಷಾ ನಿಯಂತ್ರಕರಾದ ಐಎಎಸ್‌ ಅಧಿಕಾರಿ ಜಿ ಆರ್‌ ಜಿ ದಿವ್ಯ ಪ್ರಭು ಅವರನ್ನು ವೈದ್ಯಕೀಯ ರಜೆ ಮೇಲೆ ಕಳಿಸಲಾಗಿದೆ. ಸತ್ಯವತಿ ಅವರ ಜಾಗಕ್ಕೆ ಆಯೋಗದ ಉಪ ಕಾರ್ಯದರ್ಶಿ ಬಿ ಆರ್‌ ಸ್ವಾಮಿ ಹಾಗೂ ದಿವ್ಯ ಪ್ರಭು ಅವರ ಜಾಗಕ್ಕೆ ಆಯೋಗದ ಮತ್ತೊಬ್ಬ ಉಪ ಕಾರ್ಯದರ್ಶಿ ಮಧುಮಾಲತಿ ಅವರನ್ನು ನಿಯೋಜಿಸಿ 2020ರ ಡಿಸೆಂಬರ್‌ 23ರಂದು ಅಧಿಸೂಚನೆ ಹೊರಡಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪರಿಷ್ಕೃತ ಪಟ್ಟಿ ಸಿದ್ಧಪಡಿಸುವ ಹೊತ್ತಿನಲ್ಲಿ ಆಯೋಗದ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರನ್ನು ವೈದ್ಯಕೀಯ ರಜೆ ಮೇಲೆ ಕಳಿಸಿರುವುದೇಕೆ, ಐಎಎಸ್‌ ಅಧಿಕಾರಿಗಳಿದ್ದರೂ ಆಯೋಗಕ್ಕೆ ನಿಯೋಜಿಸದಿರುವುದು ಮತ್ತು ಐಎಎಸ್‌ಯೇತರ ಆಯೋಗದ ಉಪ ಕಾರ್ಯದರ್ಶಿಗಳನ್ನು ನೇಮಿಸಿರುವುದರ ಹಿಂದೆ ಅಕ್ರಮ ಫಲಾನುಭವಿಗಳ ರಕ್ಷಣೆಯೇ ಆಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಅಲ್ಲದೆ ಐಎಎಸ್‌ ಅಧಿಕಾರಿ ಜಿ ಸತ್ಯವತಿ ಅವರ ಸ್ಥಾನಕ್ಕೆ ನಿಯೋಜನೆಗೊಂಡಿರುವ ಉಪಕಾರ್ಯದರ್ಶಿ ಬಿ ಆರ್‌ ಸ್ವಾಮಿ ಎಂಬುವರು ಕೆಪಿಎಸ್‌ಸಿಯ ಹಿಂದಿನ ಅಧ್ಯಕ್ಷ ಎಚ್‌ ಎನ್‌ ಕೃಷ್ಣ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದರು. ಕೃಷ್ಣ ಅವರ ವಿರುದ್ಧದ ಹಲವು ಮೊಕದ್ದಮೆಗಳು ಇನ್ನೂ ವಿಚಾರಣೆ ಹಂತದಲ್ಲಿವೆ. ಇಂತಹ ಹೊತ್ತಿನಲ್ಲಿ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ಅಧಿಕಾರಿಯನ್ನು ಅದೂ ಐಎಎಸ್‌ಯೇತರ ವೃಂದದ ಅಧಿಕಾರಿಯನ್ನು ಆಯೋಗದ ಕಾರ್ಯದರ್ಶಿಗೆ ಹುದ್ದೆಗೆ ನಿಯೋಜಿಸಿರುವುದು, ಕೇಳಿ ಬಂದಿರುವ ಆರೋಪಗಳನ್ನು ಬಲಗೊಳಿಸಿದಂತಾಗಿದೆ.

ಹಾಗೆಯೇ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಉಪ ಕಾರ್ಯದರ್ಶಿ ವೃಂದಕ್ಕಿಂತಲೂ ಮೇಲ್ಪಟ್ಟಿರುವ ಜಂಟಿ ಕಾರ್ಯದರ್ಶಿಗಳಿದ್ದರೂ ಅವರನ್ನು ನಿಯೋಜಿಸದೆಯೇ ಅದಕ್ಕಿಂತ ಕೆಳ ಹಂತದ ಉಪ ಕಾರ್ಯದರ್ಶಿ ವೃಂದದ ಅಧಿಕಾರಿಯನ್ನು ನಿಯೋಜಿಸಿರುವುದು ಸಂಶಯಗಳನ್ನು ಇನ್ನಷ್ಟು ಬಲಪಡಿಸಿದೆ.

1998, 1999 ಮತ್ತು 2004ನೇ ಸಾಲಿನ ಕೆಎಎಸ್‌ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದ್ದ ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್‌ ಕುಮಾರ್‌ ಅವರು ಹಲವು ನಿರ್ದೇಶನಗಳನ್ನು ನೀಡಿದ್ದರು. ಅದರಲ್ಲಿ 1998ನೇ ಸಾಲಿನ ನೇಮಕಾತಿ ಸಂಬಂಧದ 91 ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನವೂ ಒಂದು.

91 ಉತ್ತರ ಪತ್ರಿಕೆಗಳನ್ನು ಪರಿಗಣಿಸಿ ಹೊಸ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ನ್ಯಾಯಮೂರ್ತಿ ಎನ್‌ ಕುಮಾರ್‌ ಅವರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ 2020ರ ಆಗಸ್ಟ್‌ 22ರಂದು ಪರಿಷ್ಕೃತ ಪಟ್ಟಿಯನ್ನು ಆಯೋಗ ಪ್ರಕಟಿಸಿದೆ. ಆದರೆ ಈ ಪಟ್ಟಿಯನ್ನು ಪ್ರಶ್ನಿಸಿ ಬಾಧಿತ ಅಭ್ಯರ್ಥಿಗಳು ಕೆಎಟಿ ಮತ್ತು ಹೈಕೋರ್ಟ್‌ ಮೆಟ್ಟಿಲೇರಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಪಟ್ಟಿಯನ್ನು ಸರಿಪಡಿಸಿ ಹೊಸದಾಗಿ ಸಿದ್ಧಪಡಿಸುವುದಾಗಿ ಆಯೋಗವು ಹೈಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿತ್ತು. ಇದರಿಂದಾಗಿ ಹೈಕೋರ್ಟ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಲೇ ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts