ಬೆಂಗಳೂರು; ಪ್ರತಿಷ್ಠಿತ ಚಿನ್ನ, ಬೆಳ್ಳಿ, ವಜ್ರ ವ್ಯಾಪಾರಿ ಸಂಸ್ಥೆ ಲಲಿತಾ ಜ್ಯುವೆಲ್ಲರಿ ಮಾರ್ಟ್ ಪ್ರೈವೈಟ್ ಲಿಮಿಟೆಡ್ ತೆರಿಗೆ ಪಾವತಿ ಮಾಡುವವರೆಗೂ ಬಡ್ಡಿ ವಿಧಿಸದ ವಾಣಿಜ್ಯ ತೆರಿಗೆ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದನ್ನು ಸಿಎಜಿ ವರದಿ ಬಹಿರಂಗಗೊಳಿಸಿದೆ.
ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯಲ್ಲಿ ಲಲಿತಾ ಜ್ಯುವೆಲ್ಲರಿ ಮಾರ್ಟ್ ಸೇರಿದಂತೆ ನೋಂದಾಯಿತ ಮತ್ತು ನೋಂದಾಯಿತವಲ್ಲದ ವರ್ತಕರಿಂದ ಖರೀದಿಸಲಾದಂತಹ ಚಿನ್ನ, ಬೆಳ್ಳಿ, ವಜ್ರಗಳ ಖರೀದಿಗಳ ಮೇಲಿನ ತೆರಿಗೆ ಜಮೆಯಲ್ಲಿ ಆಗಿರುವ ಬಡ್ಡಿ ನಷ್ಟದ ಕುರಿತು ವಿವರಿಸಿದೆ.
ಲಲಿತಾ ಜ್ಯುವೆಲ್ಲರಿ ಮಾರ್ಟ್ ಪ್ರೈ ಲಿ.,ಗೆ ಸಂಬಂಧಿಸಿದಂತೆ 2014-15 ಸಾಲಿಗೆ 20164 ಜೂನ್ 27ರಂದು ಜಾರಿಗೊಳಿಸಿದ್ದ ಪುನರ್ ಕರ ನಿರ್ಧಾರಣ ಆದೇಶದಂತೆ ನೋಂದಾಯಿತ ವರ್ತಕರು ಮತ್ತು ನೋಂದಾಯಿತರಲ್ಲದ ವರ್ತಕರಿಂದ ಖರೀದಿಸಿದ್ದ ಚಿನ್ನ, ಬೆಳ್ಳಿ, ವಜ್ರಗಳ ಮೇಲೆ ಒಟ್ಟು 8.37 ಕೋಟಿ ಮೊತ್ತದಷ್ಟು ಖರೀದಿಗಳ ಮೇಲಿನ ತೆರಿಗೆ ಜಮೆ ಅನುಮತಿ ನೀಡಲಾಗಿತ್ತು.
ಕರದಾತರು ಸಲ್ಲಿಸಿದ್ದಂತಹ ಖರೀದಿಗಳನ್ನು ಪರಿಶೀಲಿಸಿದ್ದ ಸಿಎಜಿ ಅಧಿಕಾರಿಗಳು ಖರೀದಿಗಳ ಮೇಲಿನ ಒಟ್ಟಾರೆ ಖರೀದಿಗಳ ಮೇಲಿನ ತೆರಿಗೆ ಜಮೆಯು ಕೇವಲ 6.27 ಕೋಟಿ ಆಗಿತ್ತು ಎಂದು ಪರೀಕ್ಷಾ-ತನಿಖೆಯಿಂದ ಪತ್ತೆ ಹಚ್ಚಿದ್ದರು. ಇದರಲ್ಲಿ ನೋಂದಾಯಿತರಿಂದ 4.40 ಕೋಟಿ, ನೋಂದಾಯಿತರಲ್ಲದವರಿಂದ 1.87 ಕೋಟಿಯೂ ಸೇರಿತ್ತು.
ಅದೇ ರೀತಿ ವರ್ತಕರ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯ ಆಧಾರದ ಮೇಲೆ ನಮೂನೆ ಮೌವತೆ 240ರಲ್ಲಿಯೂ ಕೂಡ ಖರೀದಿಗಳ ಮೇಲಿನ ಜಮೆಯು 6.27 ಕೋಟಿ ಎಂದು ಘೋಷಿಸಲಾಗಿತ್ತು. ಈ ರೀತಿಯಾಗಿ ಅಧಿಕ ಪ್ರಮಾಣದಲ್ಲಿ ಅನುಮತಿ ನೀಡಿದ್ದಂತಹ ಖರೀದಿಗಳ ಮೇಲಿನ ತೆರಿಗೆ ಜಮೆಯು 2.10 ಕೋಟಿ ಆಗಿತ್ತು. ಅಲ್ಲದೆಯೇ 021 ಕೋಟಿ ಮೊತ್ತದಷ್ಟು ದಂಡ ಮತ್ತು ಹಾಗೂ 0.44 ಕೋಟಿ ಮೊತ್ತದಷ್ಟು ಬಡ್ಡಿಯನ್ನು ಸಹ ವಿಧಿಸಬೇಕಿತ್ತು. ಒಟ್ಟಾರೆ ತೆರಿಗೆ ಜವಾಬ್ದಾರಿಯು 2.75 ಕೋಟಿ ಆಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
2015ರ ಮೇನಿಂದ ಜೂನ್ 2016ರವರೆಗೆ ಅಂದರೆ ಕರ ನಿರ್ಧಾರಣ ಆದೇಶದ ದಿನಾಂಕದವರೆಗೆ 14 ತಿಂಗಳಗಳಿಗೆ ಬಡ್ಡಿ ಲೆಕ್ಕ ಹಾಕಲಾಗಿದೆ. ಆದರೂ ಬಡ್ಡಿಯನ್ನು ವರ್ತಕರು ತೆರಿಗೆ ಪಾವತಿ ಮಾಡುವ ದಿನಾಂಕದವರೆಗೂ ವಿಧಿಸಬೇಕಿದ್ದ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಸಿಎಜಿ ವರದಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.