ಗಾಂಜಾ ಸರಬರಾಜು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮದ ವರದಿ ಸಲ್ಲಿಕೆ

ಬೆಂಗಳೂರು; ರಾಜ್ಯದ ಕಾರಾಗೃಹಗಳಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳು ಸೇರಿದಂತೆ ನಿಷೇಧಿತ ವಸ್ತುಗಳು ಪ್ರವೇಶಿಸಲು ಕಾರಣರಾಗಿದ್ದ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಶಿಫಾರಸ್ಸುಗಳ ಅನುಷ್ಠಾನದ ಅನುಸರಣಾ ವರದಿಯನ್ನು ಗೃಹ ಇಲಾಖೆ ಕಡೆಗೂ ಸಲ್ಲಿಸಿದೆ.

ಕಾರಾಗೃಹ ಇಲಾಖೆಯಲ್ಲಿನ ಆಂತರಿಕ ನಿಯಂತ್ರಣ ವ್ಯವಸ್ಥೆಯ ಕುರಿತಾದ ಅನುಪಾಲನಾ ಲೆಕ್ಕಪರಿಶೋಧನೆ ಕುರಿತು ಅನುಸರಣಾ ವರದಿ ಸಲ್ಲಿಸದ ಒಳಾಡಳಿತ ಇಲಾಖೆಯ ವಿಳಂಬದ ಬಗ್ಗೆ ‘ದಿ ಫೈಲ್‌’ ವರದಿ ಪ್ರಕಟಿಸಿದ ಒಂದು ತಿಂಗಳ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಒಳಾಡಳಿತ ಇಲಾಖೆಯ ಕಾರ್ಯದರ್ಶಿಗೆ 2020ರ ಅಕ್ಟೋಬರ್ 14ರಂದು ಪತ್ರ ಬರೆದಿತ್ತು.

ಒಳಾಡಳಿತ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಿ ರೂಪ ಮೌದ್ಗಿಲ್‌ ಅವರು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅನುಸರಣಾ ವರದಿಯನ್ನು ಸಲ್ಲಿಸಿದ್ದಾರೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು 2020ರ ಮಾರ್ಚ್‌ 10ರಂದು ಉಭಯ ಸದನಗಳಿಗೆ ವರದಿ ಮಂಡಿಸಿದ್ದರು. ಸದನಕ್ಕೆ ವರದಿ ಮಂಡನೆಯಾದ 6 ತಿಂಗಳೊಳಗೆ ಸಂಬಂಧಿಸಿದ ಇಲಾಖೆಯು ಅನುಸರಣಾ ವರದಿಯನ್ನು ಸಮಿತಿಗೆ ಸಲ್ಲಿಸಬೇಕು. ಆದರೆ ಒಳಾಡಳಿತ ಇಲಾಖೆಯು ಕಾಲಮಿತಿಯೊಳಗೆ ಅನುಸರಣಾ ವರದಿ ಸಲ್ಲಿಸಿರಲಿಲ್ಲ. ಡಿ ರೂಪಾ ಅವರು ಗೃಹ ಇಲಾಖೆಗೆ ಕಾರ್ಯದರ್ಶಿಯಾದ ನಂತರವೂ ವರದಿ ಸಲ್ಲಿಕೆಯಾಗಿರಲಿಲ್ಲ. ಈ ಕುರಿತು ‘ದಿ ಫೈಲ್‌’ ಸೆ.14ರಂದು ವರದಿ ಪ್ರಕಟಿಸಿತ್ತು.

ಜೈಲುಗಳಿಗೆ ಗಾಂಜಾ, ಮಾದಕ ವಸ್ತುಗಳ ಪ್ರವೇಶ; ಸಲ್ಲಿಕೆಯಾಗದ ಅನುಸರಣಾ ವರದಿ

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 15ನೇ ವಿಧಾನಸಭೆಯ 2ನೇ ವರದಿಯನ್ನು 2020ರ ಮಾರ್ಚ್‌ 10ರಂದು ವಿಧಾನಮಂಡಲದಲ್ಲಿ ಮಂಡಿಸಲಾಗಿದ್ದು, ವರದಿಯಲ್ಲಿನ ಸಮಿತಿಯ ಶಿಫಾರಸ್ಸುಗಳಿಗೆ ಇಲಾಖೆಯು ಕೈಗೊಂಡ ಕ್ರಮಗಳ ಬಗ್ಗೆ ಇದುವರೆವಿಗೂ ಅನುಸರಣಾ ವರದಿಯು ಈ ಸಚಿವಾಲಯದಲ್ಲಿ ಸ್ವೀಕೃತವಾಗಿಲ್ಲ. ಹೀಗಾಗಿ ಅನುಸರಣಾ ವರದಿಯನ್ನು ಸಮಿತಿಗೆ ತಲುಪಿಸಬೇಕು,’ ಎಂದು ವಿಧಾನಸಭೆ ಕಾರ್ಯದರ್ಶಿ ಪತ್ರದಲ್ಲಿ ನಿರ್ದೇಶಿಸಿದ್ದರು.

ಜೈಲುಗಳಿಗೆ ಗಾಂಜಾ ಸರಬರಾಜು; ಅಧಿಕಾರಿಗಳ ವಿರುದ್ಧ ಕ್ರಮದ ವರದಿ ಸಲ್ಲಿಸಲು ನಿರ್ದೇಶನ

ಲೆಕ್ಕಪತ್ರ ಸಮಿತಿಯ ವರದಿಯಲ್ಲೇನಿದೆ?

ರಾಜ್ಯದ ಕಾರಾಗೃಹಗಳಲ್ಲಿ ನಿಷೇಧಾತ್ಮಕ ವಸ್ತುಗಳ ಪ್ರವೇಶವನ್ನು ಪತ್ತೆ ಹಚ್ಚುವುದು, ತಡೆಗಟ್ಟುವುದು, ಕಣ್ಗಾವಲಿಗೆ, ಕೈಯಲ್ಲಿ ಹಿಡಿಯುವ ಲೋಹ ಪತ್ತೆಕಾರಿಗಳು, ಲೋಹ ಪತ್ತೆಕಾರಿಗಳು ಸೇರಿದಂತೆ ಇನ್ನಿತರೆ ಸಾಧನಗಳನ್ನು ಅಧಿಕಾರಿಗಳು ಬಳಸಿರಲಿಲ್ಲ. ಹೀಗಾಗಿ ಕಾರಾಗೃಹಗಳಲ್ಲಿ ಗಾಂಜಾ, ಅಫೀಮು, ತಂಬಾಕು, ಮಾದಕ ವಸ್ತುಗಳು ಸುಲಭವಾಗಿ ಪ್ರವೇಶಿಸಿದ್ದವು ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (2014-15) ವರದಿ ಪತ್ತೆ ಹಚ್ಚಿತ್ತು.

‘ಮಾದಕ ವಸ್ತುಗಳು, ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌ಗಳು ಕಾರಾಗೃಹಗಳಲ್ಲಿ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿರುವುದಕ್ಕೆ ಸಮಿತಿಯು ತೀವ್ರ ಅತೃಪ್ತಿ ವ್ಯಕ್ತಪಡಿಸುತ್ತದೆ. ನಿಷೇಧಿತ ವಸ್ತುಗಳು ಕಾರಾಗೃಹಗಳನ್ನು ಪ್ರವೇಶಿಸದಂತೆ ತಡೆಯಲು ನಿಗದಿಪಡಿಸಿರುವ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಅಂತಹ ವಸ್ತುಗಳ ಪ್ರವೇಶಕ್ಕೆ ಜವಾಬ್ದಾರರಾದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು,’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಶಿಫಾರಸ್ಸು ಮಾಡಿತ್ತು.

ರಾಜ್ಯದ ಎಲ್ಲಾ ಕಾರಾಗೃಹಗಳ ಮುಖ್ಯಸ್ಥರು ಪ್ರತಿನಿತ್ಯ ತಪಾಸಣೆ ನಡೆಸಿ ಅಕ್ರಮವಾಗಿ ನಿಷೇಧಿತ ವಸ್ತುಗಳ ಬಳಕೆ/ಬಳಕೆಯಾಗದಿರುವ ಬಗ್ಗೆ ಕೇಂಧ್ರ ಕಚೇರಿಗೆ ದೃಢೀಕೃತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಇಲಾಖಾ ಮುಖ್ಯಸ್ಥರಿಗೆ ಸಮಿತಿಯು ಸೂಚಿಸಿತ್ತು.

ಕಾರಾಗೃಹಗಳಲ್ಲಿನ ಮಾದಕ ವಸ್ತುಗಳನ್ನು ಮತ್ತು ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೇಂದ್ರ ಸರ್ಕಾರವು 2010ರಲ್ಲೇ ಸೂಚಿಸಿತ್ತು. ಆದರೆ ಕರ್ನಾಟಕ ಕಾರಾಗೃಹಗಳ ಇಲಾಖೆಯು ಆ ಸೂಚನೆಗಳನ್ನು ಪಾಲಿಸಿರಲಿಲ್ಲ. ಬೆಳಗಾವಿ, ಚಿಕ್ಕಮಗಳೂರು, ಹಾವೇರಿ, ಬೀದರ್‌, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ ಕಾರಾಗೃಹಗಳಲ್ಲಿನ ಅನಿರೀಕ್ಷಿತ ತಪಾಸಣೆಗಳನ್ನೂ ನಡೆಸಿರಲಿಲ್ಲ.

‘ಕಾರಾಗೃಹಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮಾದಕ ವಸ್ತುಗಳು, ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು, ಪೆನ್‌ಡ್ರೈವ್‌ಗಳು, ಸ್ಕ್ರೂ ಡ್ರೈವರ್‌ಗಳ ಕುರಿತು ಇಲಾಖೆ ನಡೆಸುತ್ತಿರುವ ವಿಚಾರಣೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಅಲ್ಲದೆ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆ ಬಗ್ಗೆ ವರದಿಯನ್ನು ಜರೂರಾಗಿ ನೀಡಬೇಕು,’ ಎಂದು ಸಮಿತಿ ನಿರ್ದೇಶಿಸಿತ್ತು.

ಮೈಸೂರು, ಧಾರವಾಡ, ಬಳ್ಳಾರಿ ಮತ್ತು ಬೆಂಗಳೂರು ಕಾರಾಗೃಹಗಳಲ್ಲಿ ಮೊಬೈಲ್‌ ಜಾಮರ್‌ ಅಳವಡಿಸಲು 28.28 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ 86.05 ಲಕ್ಷ ವೆಚ್ಚ ಮಾಡಿದ್ದರೂ 2012ರ ಮೇ ತಿಂಗಳಿನಿಂದಲೇ ಮೊಬೈಲ್‌ ಜಾಮರ್‌ಗಳು ಉಪಯೋಗಿಸುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಎಜಿ ವರದಿ ಮಾಡಿತ್ತು.

ಇದಲ್ಲದೆ ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದು, ಅಭಿರಕ್ಷಣೆಯಿಂದ ತಪ್ಪಿಸಿಕೊಂಡ ಕೈದಿಗಳು, ವೈದ್ಯಕೀಯ ಸೌಲಭ್ಯಗಳು, ಸಂದರ್ಶಕರ ಮಂಡಳಿ ರಚನೆ ಸೇರಿದಂತೆ ಕಾರಾಗೃಹಗಳಲ್ಲಿ ಹಲವು ಸುಧಾರಣೆಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಮಿತಿಯು ಶಿಫಾರಸ್ಸುಗಳನ್ನು ಮಾಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts