ನೇಮಕಾತಿ ಅಕ್ರಮ; ನಿವೃತ್ತ ನ್ಯಾಯಮೂರ್ತಿ ಸಮಿತಿಗೆ ಅಪೆಕ್ಸ್‌ ಬ್ಯಾಂಕ್‌ ಅಸಹಕಾರ

ಬೆಂಗಳೂರು; ಗುಮಾಸ್ತರು ಹಾಗೂ ನಗದು ಗುಮಾಸ್ತರು ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಕುರಿತು ತನಿಖೆ ನಡೆಸಲು ನೇಮಕವಾಗಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಕಳೆದ ಒಂದು ವರ್ಷದಿಂದಲೂ ಅಸಹಕಾರ ತೋರುತ್ತಿದೆ.

ನೇಮಕಾತಿಗೆ ಸಂಬಂಧಿಸಿದಂತೆ ಬ್ಯಾಂಕ್‌ನ ಅಧಿಕಾರಿಗಳು ಕಡತ ಮತ್ತು ದಾಖಲೆಗಳನ್ನು ಸಮಿತಿಗೆ ಒದಗಿಸುತ್ತಿಲ್ಲ. ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರವನ್ನು ಮುಚ್ಚಿ ಹಾಕಲು ಹುನ್ನಾರದ ಭಾಗವಾಗಿಯೇ ಅಧಿಕಾರಿಗಳು ಅಸಹಕಾರ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಈ ಬಗ್ಗೆ ಹೆಚ್ಚಿನ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.

ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ನಡೆಸಲು ನೇಮಕವಾಗಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ವಿ ಶ್ರೀನಿವಾಸ ರೆಡ್ಡಿ ಅವರು ಅಧಿಕಾರಿಗಳು ತೋರುತ್ತಿರುವ ಅಸಹಕಾರದ ಕುರಿತು 2020ರ ನವೆಂಬರ್‌ 14ರಂದು ಪತ್ರ ಬರೆದಿದ್ದಾರೆ. ‘ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ/ವರದಿಯನ್ನು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ದಾಖಲೆ/ಕಡತಗಳನ್ನು ಒದಗಿಸಿರುವುದಿಲ್ಲ,’ ಎಂದು ಪತ್ರದಲ್ಲಿ ಶ್ರೀನಿವಾಸ ರೆಡ್ಡಿ ಅವರು ಪತ್ರ ಬರೆದಿದ್ದರು.

ಈ ಪತ್ರವನ್ನಾಧರಿಸಿ ಸಹಕಾರ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು 2020ರ ನವೆಂಬರ್‌ 27ರಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದಾರೆ. ‘ ಅಪೆಕ್ಸ್‌ ಬ್ಯಾಂಕ್‌ನಿಂದ ತನಿಖೆಗೆ ಅಗತ್ಯವಿರುವ ಕಡತ/ದಾಖಲೆಗಳನ್ನು ಒದಗಿಸಬೇಕು ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯವಾದ ವೆಚ್ಚವನ್ನು ಭರಿಸಬೇಕು,’ ಬ್ಯಾಂಕ್‌ನ ಸಿಇಒಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

ಗುಮಾಸ್ತರು ಹಾಗೂ ನಗದು ಗುಮಾಸ್ತರು ದರ್ಜೆಯ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳದೆ ಕಡಿಮೆ ಅಂಕಗಳಿಸಿದವರನ್ನು ನೇಮಕ ಮಾಡಿಕೊಂಡು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ದೂರಿನ ಕುರಿತು ಪ್ರಾಥಮಿಕ ತನಿಖೆ ನಡೆಸಲು ಸರ್ಕಾರ ಮುಂದಾಗಿತ್ತು.

ಈ ಸಂಬಂಧ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ವಿ ಶ್ರೀನಿವಾಸರೆಡ್ಡಿ ಅವರನ್ನು 2019ರ ಜುಲೈ 20ರಂದು ಸರ್ಕಾರ ನೇಮಿಸಿತ್ತು. ಪ್ರಾಥಮಿಕ ತನಿಖೆ ನಡೆಸಿ ಸರ್ಕಾರಕ್ಕೆ 3 ತಿಂಗಳ ಒಳಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಮಧ್ಯೆ ಈ ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಶ್ವತ್ಥ ಗೌಡ ಮತ್ತು ಅವರ ಸಹಾಯಕ ಮಂಜುನಾಥ್ ಎಂಬುವವರ ವಿರುದ್ಧ ಲೋಕಾಯುಕ್ತಕ್ಕೆ ಖಾಸಗಿ ದೂರು ದಾಖಲಾಗಿತ್ತು.

ಒಟ್ಟು 77 ಹುದ್ದೆಗಳು ಖಾಲಿ ಇದ್ದವು. ಇದರಲ್ಲಿ ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ, ಸಂದರ್ಶನದಲ್ಲಿ ಕಡಿಮೆ ಅಂಕ ನೀಡಲಾಗಿದೆ. ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದವರಿಗೆ, ಸಂದರ್ಶನದಲ್ಲಿ ಹೆಚ್ಚು ಅಂಕ ನೀಡಲಾಗಿದೆ’ ಎಂದು ಎಂ.ಟಿ. ಗಿರೀಶ್ ಎಂಬುವರು ದೂರಿನಲ್ಲಿ ಆರೋಪಿಸಿದ್ದರು.

ಆದರೆ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುವ ಅಧಿಕಾರ ತಮಗೆ ಇಲ್ಲ ಎಂದು ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಲೋಕಾಯುಕ್ತ ಕಾಯ್ದೆಯ ಕಲಂ 8(1)(ಎ) ಹಾಗೂ ಸಹ ಕಲಂ ಶೆಡ್ಯೂಲ್ 2 (ಡಿ) ಪ್ರಕಾರ ಈ ಪ್ರಕರಣದ ತನಿಖೆ ನಡೆಸುವ ಅಧಿಕಾರ ತಮಗೆ ಇಲ್ಲ ಎಂದು ಲೋಕಾಯುಕ್ತರು ತಿಳಿಸಿದ್ದರು.

SUPPORT THE FILE

Latest News

Related Posts