ಬೆಂಗಳೂರು; ರಾಜ್ಯ ವನ್ಯಜೀವಿ ಮಂಡಳಿಗೆ ಅಧಿಕಾರೇತರ ಸದಸ್ಯರನ್ನು ಪ್ರಸಕ್ತ ಅವಧಿಗೆ ನಾಮನಿರ್ದೇಶನ ಮಾಡಿರುವ ಬಿಜೆಪಿ ಸರ್ಕಾರ, ಪರಿಶಿಷ್ಟ ಬುಡಕಟ್ಟು ವರ್ಗಕ್ಕೆ ಪ್ರಾತಿನಿಧ್ಯವನ್ನೇ ನೀಡದೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದೆ.
ಬಿಜೆಪಿಯೊಂದಿಗೆ ನೇರವಾಗಿ ಗುರುತಿಸಿಕೊಂಡರವರಿಗೆ ಮತ್ತು ಸಚಿವರ ಶಿಫಾರಸ್ಸಿಗೆ ಮನ್ನಣೆ ನೀಡಿರುವ ಬೆನ್ನಲ್ಲೇ ಪರಿಶಿಷ್ಟ ಬುಡಕಟ್ಟು ವರ್ಗಕ್ಕೆ ಪ್ರಾತಿನಿಧ್ಯವನ್ನೇ ನೀಡದಿರುವ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಹಾಗೆಯೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 6(1)ರ ಪ್ರಕಾರ ವನ್ಯಜೀವಿ ಮಂಡಳಿಯಲ್ಲಿ ಪರಿಶಿಷ್ಟ ಬುಡಕಟ್ಟು ವರ್ಗಕ್ಕೆ ಸೇರಿದವರಿರಬೇಕು. ಅದರಂತೆ ಈ ಹಿಂದಿನ ಕಾಂಗ್ರೆಸ್ ಸರ್ಕಾರವು ಅವಧಿಯಲ್ಲಿ 10 ಮಂದಿಯಲ್ಲಿ ಪರಿಶಿಷ್ಟ ಬುಡಕಟ್ಟು ವರ್ಗಕ್ಕೆ ಸೇರಿದ್ದ ವಿರಾಜಪೇಟೆ ತಾಲೂಕಿನ ಜಂಗಲ್ ಹಾಡಿಯ ಪಿ ಎಂ ಸುಬ್ರು ಎಂಬುವರನ್ನು ಮಂಡಳಿಗೆ ನಾಮನಿರ್ದೇಶನ ಮಾಡಿ ಪ್ರಾತಿನಿಧ್ಯ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರವು ಬುಡಕಟ್ಟು ವರ್ಗಕ್ಕೆ ಪ್ರಾತಿನಿಧ್ಯ ನೀಡದೇ ವಂಚಿಸಿದೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ.
ಮಂಡಳಿಗೆ ವಿಧಾನಸಭೆ ಸದಸ್ಯರಾದ ರವಿಸುಬ್ರಹ್ಮಣ್ಯ ಮತ್ತು ಪೂರ್ಣಿಮಾ ಶ್ರೀನಿವಾಸ್ ಅವರನ್ನು ಹಾಗೂ ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರನ್ನು ನಾಮನಿರ್ದೆಶನ ಮಾಡಲಾಗಿದೆ. ಈ ಪೈಕಿ ಶಾಂತರಾಮ ಸಿದ್ದಿ ಅವರನ್ನು ವಿಧಾನಮಂಡಲದ ಕೋಟಾದಡಿಯಲ್ಲಿ ನಾಮನಿರ್ದೇಶನ ಮಾಡಲಾಗಿದೆಯೇ ಹೊರತು ಪರಿಶಿಷ್ಟ ಬುಡಕಟ್ಟು ವರ್ಗದಡಿಯಲ್ಲಿ ನಾಮನಿರ್ದೇಶನ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದಾರೆ.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಹೊರತುಪಡಿಸಿದಂತೆ ಮಂಡಳಿಗೆ ನಾಮನಿರ್ದೇಶನಗೊಂಡಿರುವವರ ಪೈಕಿ ಚೇತನ್ ಬಿ ದೊಡ್ಡಬಳ್ಳಾಪುರ, ಅಲೋಕ್ ವಿಶ್ವನಾಥ್, ದಿನೇಶ್ ಸಿಂಗಿ ಅವರನ್ನು ಬಿಜೆಪಿ ಸಚಿವರು ಶಿಫಾರಸ್ಸು ಮಾಡಿದ್ದಾರೆ. ಉಳಿದಂತೆ ರವಿಸುಬ್ರಹ್ಮಣ್ಯ, ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಶಾಸಕರು.
ಬೇಲೇಕೇರಿ ಅದಿರು ರಫ್ತು ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಭಾರತ್ ಮೈನ್ಸ್ ಅಂಡ್ ಮಿನರಲ್ಸ್ ಮತ್ತು ಬಿಎಂಎಂ ಇಸ್ಪಾತ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಸಿಂಗಿ ಅವರನ್ನು ವನ್ಯಜೀವಿ ಮಂಡಳಿಗೆ ನಾಮನಿರ್ದೇಶನ ಮಾಡಲು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಮಾಡಿದ್ದ ಶಿಫಾರಸ್ಸು ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು.