ಬೆಂಗಳೂರು; ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರು ಪಂಚಾಯ್ತಿ ಕ್ಷೇತ್ರವೊಂದರ ಮೀಸಲಾತಿ ಬದಲಾವಣೆ, ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು, ವ್ಯಾಜ್ಯದಲ್ಲಿರುವ ನಿವೇಶನ ಪ್ರಕರಣದಲ್ಲಿ ಬಿಎಂಟಿಎಫ್ ಅಧೀಕ್ಷಕರಿಗೆ ಬರೆದಿದ್ದ ಪತ್ರವನ್ನು ಹೊರಗೆಡವಿದ್ದ ‘ದಿ ಫೈಲ್’ ವಿದ್ಯುತ್ ನಿಗಮಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿದ್ದ ಪತ್ರವನ್ನು ಮುನ್ನೆಲೆಗೆ ತಂದಿದೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತ ಡಿ ಎಂ ಸತೀಶ್ ಎಂಬುವರನ್ನು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್‌ಗೆ (ಕೆಪಿಸಿಎಲ್) ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಿಫಾರಸ್ಸು ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲೇನಿದೆ?
‘ತುಮಕೂರು ತಾಲೂಕು ದೇವರಾಯಪಟ್ಟಣದ ಡಿ ಎಂ ಸತೀಶ್ ಅವರು ನನಗೆ ಚಿರಪರಿಚಿತರಾಗಿರುತ್ತಾರೆ. ಇವರು ಸುಮಾರು 27 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸಮಾಜ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಪವರ್ ಕಾರ್ಪೋರೇಷನ್ ನಿಯಮಿತಕ್ಕೆ ನಾಮನಿರ್ದೇಶಿತ ಸದಸ್ಯ/ನಿರ್ದೇಶಕರಾಗಿ ನೇಮಕ ಮಾಡಬೇಕು,’ ಎಂದು ಪತ್ರ ಮುಖೇನ 2019ರ ಡಿಸೆಂಬರ್ 20ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಿಫಾರಸ್ಸು ಮಾಡಿದ್ದರು.
ಕೆಪಿಸಿಎಲ್‌ಗೆ ಮುಖ್ಯಮಂತ್ರಿ ಅಧ್ಯಕ್ಷರು. ಉಳಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ನಿರ್ದೇಶಕರಾಗಿದ್ದಾರೆ. ನಾಮನಿರ್ದೇಶನ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಿದೆ. ನಿಗಮಕ್ಕೆ 5 ಮಂದಿಯನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ ಎಂದು ತಿಳಿದು ಬಂದಿದೆ.
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಪರಿಗಣಿಸಿದ್ದಾರೆಂದು ತಿಳಿದು ಬಂದಿದೆ. ಆದರೆ ನಾನು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಆಗಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲ ಎಂಬುದು ನನ್ನ ಭಾವನೆ ಎಂದು ನೈತಿಕ ವಿಚಾರವನ್ನು ಮುಂದಿಟ್ಟು ಪಟ್ಟಿ ಅಂತಿಮಗೊಳ್ಳುವ ಮುನ್ನವೇ ಪ್ರಶಸ್ತಿಯನ್ನು ಮಹಾದೇವ ಪ್ರಕಾಶ್ ಅವರು ತಿರಸ್ಕರಿಸಿದ್ದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೂರು ಹೊಸಹಳ್ಳಿ ಗ್ರಾಮ ಪಂಚಾಯ್ತಿಯ ಕಾರಮಂಗಲ ಕ್ಷೇತ್ರದ ಮೀಸಲಾತಿ ಬದಲಾಯಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ನೈತಿಕತೆ ಮತ್ತು ಹಿತಾಸಕ್ತಿ ಸಂಘರ್ಷದ ಬಗ್ಗೆ ಬರೆದುಕೊಂಡಿದ್ದ ಅವರು 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ತಮ್ಮ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಮಾಸಿಕವೊಂದರ ಅಂಕಣಕಾರೊಬ್ಬರನ್ನು ಸೇರಿದಂತೆ 50 ಮಂದಿಗೆ ಶಿಫಾರಸ್ಸು ಮಾಡಿದ್ದರು. ವ್ಯಾಜ್ಯದಲ್ಲಿರುವ ನಿವೇಶನ ಪ್ರಕರಣದಲ್ಲಿ ಬಿಎಂಟಿಎಫ್ ಅಧೀಕ್ಷಕರಿಗೆ ಪತ್ರ ಬರೆದು ಕೈಗೊಂಡ ಕ್ರಮದ ವರದಿಯನ್ನು ಕಚೇರಿಗೆ ರವಾನಿಸಬೇಕು ಎಂದು ಹೇಳಿದ್ದನ್ನು ಸ್ಮರಿಸಬಹುದು.