ಐಎಸ್‌ಐ ಪ್ರಮಾಣಪತ್ರವಿಲ್ಲದೇ 2 ಲಕ್ಷ ಪಿಪಿಇ ಕಿಟ್‌ ಬಳಕೆ; ಆರೋಗ್ಯ ಸಿಬ್ಬಂದಿ ಅಪಾಯದಲ್ಲಿದೆಯೇ?

ಬೆಂಗಳೂರು; ಅಮರಾವತಿ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಕಳೆದ ಮಾರ್ಚ್‌ನಲ್ಲಿ ರಾಜ್ಯಕ್ಕೆ ಸರಬರಾಜು ಮಾಡಿದ್ದ 2 ಲಕ್ಷ ಪಿಪಿಇ ಕಿಟ್‌ಗಳು ಐಎಸ್‌ಐ ಪ್ರಮಾಣ ಪತ್ರವನ್ನೇ ಹೊಂದಿರಲಿಲ್ಲ!
ಕೋವಿಡ್‌-19 ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಖರೀದಿಸಿದ್ದ ಪಿಪಿಇ ಕಿಟ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ ಎಂಬ ಆರೋಪಗಳಿಗೆ ಇದೀಗ ಹೊರಬಿದ್ದಿರುವ ಮಾಹಿತಿಯು ಇನ್ನಷ್ಟು ಬಲಪಡಿಸಿದೆ.

ರಾಜ್ಯಕ್ಕೆ ಪಿಪಿಇ ಕಿಟ್‌ ಸರಬರಾಜು ಮಾಡಿದ 7 ತಿಂಗಳ ನಂತರ ಅಂದರೆ 2020ರ ಅಕ್ಟೋಬರ್‌ 29ರಂದು ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಸರಬರಾಜು ಮಾಡಿದ್ದ ಕವರ್‌ಆಲ್‌ ಪಿಪಿಇ ಕಿಟ್‌ಗಳಿಗೆ ಐಎಸ್‌ಐ ಪ್ರಮಾಣ ಪತ್ರ ಮಂಜೂರಾಗಿದೆ. ಈ ಕುರಿತು ಖುದ್ದು ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ನ ಮಾರುಕಟ್ಟೆ ವಿಭಾಗ 2020ರ ಅಕ್ಟೋಬರ್‌ 29ರಂದು ಟ್ವೀಟ್‌ ಮಾಡಿದೆ.

ಈ ಕಂಪನಿ ಸರಬರಾಜು ಮಾಡಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ದಾಖಲಾಗಿದ್ದರ ಬೆನ್ನಲ್ಲೇ ಕಂಪನಿಯು ಮಾಡಿರುವ ಟ್ವೀಟ್‌ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಐಎಸ್‌ಐ ಪ್ರಮಾಣಪತ್ರ ದೊರೆಯುವ ಮುನ್ನ ಈ ಕಂಪನಿಯು ರಾಜ್ಯಕ್ಕೆ ಯಾವ ಗುಣಮಟ್ಟ ಆಧಾರದ ಮೇಲೆ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿತ್ತು ಮತ್ತು ಕೆಡಿಎಲ್‌ಡಬ್ಲೂಎಸ್‌ ಇದನ್ನು ದಾಸ್ತಾನಿಗೆ ಪಡೆದು ಬಳಕೆಗೆ ಅನುವು ಮಾಡಿಕೊಟ್ಟಿದ್ದಾದರೂ ಹೇಗೆ, ಐಎಸ್‌ಐ ಪ್ರಮಾಣಪತ್ರ ಇಲ್ಲವೆಂದಾದ ಮೇಲೆ ಯಾವ ಕಂಪನಿಯ ಕಿಟ್‌ಗಳನ್ನು ಪೂರೈಕೆ ಮಾಡಿತ್ತು, ಆ ಕಂಪನಿಗಾದರೂ ಐಎಸ್‌ಐ ಪ್ರಮಾಣಪತ್ರವಿತ್ತೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಟ್ವೀಟ್‌ನಲ್ಲೇನಿದೆ?

‘ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ತಯಾರಿಸಿದ ಫುಲ್‌ ಕವರ್‌ಆಲ್‌ ಪಿಪಿಇ ಕಿಟ್‌ಗಳಿಗೆ ಕೇಂದ್ರ ಸರ್ಕಾರ ಐಎಸ್‌ಐ ಪ್ರಮಾಣಪತ್ರವನ್ನು ಮಂಜೂರು ಮಾಡಿದೆ ಎಂಬ ಸಂತೋಷ ಸಂಗತಿಯನ್ನು ಹಂಚಿಕೊಳ್ಳುತ್ತಿದ್ದೇವೆ,’ ಎಂದು ಕಂಪನಿಯ ಮಾರುಕಟ್ಟೆ ವಿಭಾಗವು 2020ರ ಅಕ್ಟೋಬರ್‌ 29ರ ಬೆಳಗ್ಗೆ 11;42ಕ್ಕೆ ಟ್ವೀಟ್‌ ಮಾಡಿದೆ.

ಈ ಕಂಪನಿಯು ಕಳೆದ ಮಾರ್ಚ್‌ನ 9 ಮತ್ತು 14ರಂದು 1,90,065 ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿತ್ತು. ಇಷ್ಟು ಸಂಖ್ಯೆಯ ಕಿಟ್‌ಗಳಿಗೆ 6,54,90,270 ಕೋಟಿ ರು.ಗಳನ್ನು ಕಂಪನಿಗೆ ಕೆಡಿಎಲ್‌ಡಬ್ಲ್ಯೂಎಸ್‌ ಈಗಾಗಲೇ ಪಾವತಿ ಮಾಡಿದೆ.

ಆದರೀಗ ಕಂಪನಿಯ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಮಾಹಿತಿ ಪ್ರಕಾರ ಇಷ್ಟೂ ಸಂಖ್ಯೆಯ ಪಿಪಿಇ ಕಿಟ್‌ಗಳಿಗೆ ಐಎಸ್‌ಐ ಪ್ರಮಾಣಪತ್ರವೇ ಇರಲಿಲ್ಲ. ಐಎಸ್‌ಐ ಪ್ರಮಾಣಪತ್ರವಿಲ್ಲದ ಪಿಪಿಇ ಕಿಟ್‌ಗಳನ್ನು ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಬಳಸಿದ್ದಾರೆ. ಗುಣಮಟ್ಟವಿಲ್ಲದ ಮತ್ತು ಐಎಸ್‌ಐ ಪ್ರಮಾಣಪತ್ರವಿಲ್ಲದ ಪಿಪಿಇ ಕಿಟ್‌ಗಳನ್ನು ಬಳಸಿರುವ ಕಾರಣ ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಸೊಸೈಟಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

ಆರೋಗ್ಯ ಇಲಾಖೆಯ ಪ್ರಮಾದ?

ಆರೋಗ್ಯ ತುರ್ತು ಪರಿಸ್ಥಿತಿ ಹೆಸರಲ್ಲಿ ಬೇರೆಲ್ಲೂ ಪಿಪಿಇ ಕಿಟ್‌ಗಳು ದೊರೆಯುತ್ತಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಐಎಸ್‌ಐ ಪ್ರಮಾಣಪತ್ರವಿಲ್ಲದ ಕಿಟ್‌ಗಳನ್ನು ಖರೀದಿಸುವ ಮೂಲಕ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಪ್ರಮಾದ ಎಸಗಿದೆ ಎಂಬ ಬಲವಾದ ಆರೋಪಕ್ಕೂ ಗುರಿಯಾಗಿದೆ. ವಿಕ್ಟೋರಿಯಾ ಸೇರಿದಂತೆ ಹಲವೆಡೆ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ತಕರಾರು ಎತ್ತಿದ್ದರಲ್ಲದೆ, ಖರೀದಿಸಿರುವ ಕಿಟ್‌ಗಳು ಕಳಪೆಯಾಗಿವೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದನ್ನು ಸ್ಮರಿಸಬಹುದು.

‘ಕಂಪನಿಯು ಮಾಡಿರುವ ಟ್ವೀಟ್‌ ನಿಜಕ್ಕೂ ಗಾಬರಿ ಬೀಳಿಸುತ್ತಿದೆ. ಈ ಕಂಪನಿ ಸರಬರಾಜು ಮಾಡಿದ ಪಿಪಿಇ ಕಿಟ್‌ಗಳಿಗೆ ಐಎಸ್‌ಐ ಪ್ರಮಾಣ ಪತ್ರ ದೊರೆತಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಧಿಕಾರಿಗಳು ಯಾಕೆ ಪರಿಶೀಲಿಸಲಿಲ್ಲ? ಹಾಗೆಯೇ ಐಎಸ್‌ಐ ಪ್ರಮಾಣಪತ್ರವಿಲ್ಲ ಎಂದು ಗೊತ್ತಿದ್ದರೂ ಕಿಟ್‌ಗಳನ್ನು ದಾಸ್ತಾನಿಗೆ ತೆಗೆದುಕೊಂಡಿದ್ದೇಕೆ? ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಕಾಳಜಿಯಿಲ್ಲದೇ ಐಎಸ್‌ಐ ಪ್ರಮಾಣಪತ್ರವಿಲ್ಲದ ಕಿಟ್‌ಗಳನ್ನು ಬಳಕೆಗೆ ಹೇಗೆ ಅವಕಾಶ ಮಾಡಿಕೊಟ್ಟರು ಎಂಬ ಪ್ರಶ್ನೆಗಳಿಗೆ ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು ಅವರೇ ಉತ್ತರಿಸಬೇಕು. ‘

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರಸಮಿತಿ

ಅಲ್ಲದೆ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಕಂಪನಿ ರಾಜ್ಯಕ್ಕೆ ಪೂರೈಸಿರುವ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಹಲವು ದೂರುಗಳು ಕೇಳಿ ಬಂದ ಕಾರಣ, 1,25,000 ಪಿಪಿಇ ಕಿಟ್‌ಗಳ ಆದೇಶವನ್ನು ಹಿಂಪಡೆದಿತ್ತು. ಸಂಸ್ಥೆ ಸರಬರಾಜು ಮಾಡಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಸ್ವೀಕೃತವಾಗಿದ್ದವು. ಪ್ರತಿ ಸ್ವೀಕೃತಿಯಲ್ಲೂ ತಿದ್ದುಪಡಿಗಳನ್ನು ತಿಳಿಸಿದ್ದರೂ ಗುಣಮಟ್ಟದ ಕಿಟ್‌ ಪೂರೈಸಲು ಕಂಪನಿ ಕ್ರಮ ಕೈಗೊಂಡಿರಲಿಲ್ಲ.

‘ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಲು ಈ ಸಂಸ್ಥೆಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ದೂರುಗಳು ಸ್ವೀಕೃತವಾಗಿರುವ ಕಿಟ್‌ಗಳನ್ನು ಹಿಂಪಡೆಯಬೇಕು,’ ಎಂದು ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ ಅವರು 2020ರ ಏಪ್ರಿಲ್‌ 7ರಂದು ಇ-ಮೇಲ್‌ ಮತ್ತು ಪತ್ರದ ಮೂಲಕ ಸೂಚಿಸಿದ್ದರು ಎಂಬುದು ಆಯುಕ್ತರಿಗೆ ನೀಡಿರುವ ಸ್ಪಷ್ಟೀಕರಣದಿಂದ ತಿಳಿದು ಬಂದಿದೆ.

ಪಿಪಿಇ ಕಿಟ್‌ನ ಘಟಕವೊಂದಕ್ಕೆ ಈ ಕಂಪನಿಯು ಎರಡು ದರಗಳನ್ನು ನಮೂದಿಸಿತ್ತು. 2020ರ ಮಾರ್ಚ್ 9ರಂದು ಹೊರಡಿಸಿದ್ದ ಖರೀದಿ ಅದೇಶದಲ್ಲಿ ಘಟಕವೊಂದಕ್ಕೆ (15,000 ಪ್ರಮಾಣ) 330.40 ರು ಮತ್ತು 2020ರ ಮಾರ್ಚ್‌ 14ರಂದು ಹೊರಡಿಸಿದ್ದ ಖರೀದಿ ಆದೇಶದಲ್ಲಿ(10,000 ಪ್ರಮಾಣ) ಘಟಕವೊಂದಕ್ಕೆ 725 ರು.ಗಳನ್ನು ನೀಡಿತ್ತು ಎಂಬುದು ಸಂಸ್ಥೆಯ ಸ್ಪಷ್ಟೀಕರಣದಿಂದ ಗೊತ್ತಾಗಿದೆ.

ಇನ್ನು, ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಪೂರೈಸಿದ್ದ ಕಿಟ್‌ನಲ್ಲಿ 8 ವಸ್ತುಗಳಿದ್ದವು. 2020ರ ಮಾರ್ಚ್‌ 31ರ ಅಂತ್ಯಕ್ಕೆ ಒಟ್ಟು 38,100 ಕಿಟ್‌ಗಳನ್ನು ಸಂಸ್ಥೆ ದಾಸ್ತಾನಿಗೆ ತೆಗೆದುಕೊಂಡಿತ್ತು. ಅಲ್ಲದೆ 2020ರ ಏಪ್ರಿಲ್‌ 2ರಂದು ಸ್ವೀಕರಿಸಿದ್ದ 10,800, ಏಪ್ರಿಲ್‌ 4ರಂದು 9,600 ಏಪ್ರಿಲ್‌ 7ರಂದು ಸ್ವೀಕರಿಸಿದ್ದ 21,600 ಕಿಟ್‌ಗಳು ಸೇರಿದಂತೆ ಒಟ್ಟು 42,000 ಕಿಟ್‌ಗಳು ನಿಗದಿತ ಪ್ರಮಾಣಕ್ಕಿಂತ ಚಿಕ್ಕದಾಗಿದ್ದವು ಎಂದು ಸ್ಪಷ್ಟೀಕರಣದಲ್ಲಿ ತಿಳಿಸಿದ್ದನ್ನು ಸ್ಮರಿಸಬಹುದು.

‘ನಾವು ಈ ಹಿಂದೆ ದಾಖಲೆಗಳ ಸಮೇತ ಆರೋಪ ಮಾಡಿದಂತೆ ವೈದ್ಯಕೀಯ ಪರಿಕರಗಳನ್ನು ಮಾರುಕಟ್ಟೆ ಬೆಲೆಗಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಖರೀದಿಸಿರುವುದಲ್ಲದೆ ಕಳಪೆ ಗುಣಮಟ್ಟದ ವಸ್ತುಗಳನ್ನು ಖರೀದಿಸಲಾಗಿತ್ತು ಎಂಬುದು ನಾವು ಮಾಡಿದ್ದ ಆರೋಪವನ್ನು ಇದು ಬಲಪಡಿಸುತ್ತದೆ. ರಾಜಕೀಯ ಮತ್ತು ಅಧಿಕಾರಶಾಹಿಯ ಪಾಲುದಾರಿಕೆ ಇಲ್ಲದೆ ಇಂತಹ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಎಸಿಬಿಯಲ್ಲಿ ನಾವು ದಾಖಲಿಸಿರುವ ದೂರಿನ ಆಧಾರದ ಮೇರೆಗೆ ತನಿಖೆಯನ್ನು ಶೀಘ್ರವೇ ಪೂರ್ಣಗೊಳ್ಳಬೇಕು ಮತ್ತು ಕೆಡಿಎಲ್‌ಡಬ್ಲ್ಯೂಎಸ್‌ನ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

ಕಿಟ್‌ಗಳ ಗುಣಮಟ್ಟದ ಬಗ್ಗೆ ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಸಮರ್ಥಿಸಿಕೊಂಡಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts