ಟರ್ಫ್‌ ಕ್ಲಬ್‌; ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೋಕೇಟ್‌ ಜನರಲ್‌ ಸಲ್ಲಿಸಿದ್ದ ಮನವಿ ಏಕಪಕ್ಷೀಯವಾಗಿತ್ತೇ?

ಬೆಂಗಳೂರು; ಗುತ್ತಿಗೆ ಅವಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಟರ್ಫ್‌ ಕ್ಲಬ್‌ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಸಂಬಂಧ ಯಥಾ ಸ್ಥಿತಿ ಕಾಯ್ದುಕೊಳ್ಳಲು ರಾಜ್ಯ ಅಡ್ವೋಕೇಟ್‌ ಜನರಲ್‌ ಅವರು ಲೋಕೋಪಯೋಗಿ ಇಲಾಖೆಯ ಸೂಚನೆ ಇಲ್ಲದೆಯೇ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು ಎಂಬ ಮಾಹಿತಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಹೊರಗೆಡವಿದೆ.

ಬೆಂಗಳೂರು ಟರ್ಫ್‌ ಕ್ಲಬ್‌ನಿಂದ 37.46 ಕೋಟಿ ಬಾಡಿಗೆ ಬಾಕಿ ಇರುವ ಬಗ್ಗೆಯೂ ಪಿಡಬ್ಲ್ಯೂಡಿ ಮತ್ತು ಕಾನೂನು ಇಲಾಖೆಯು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತರದ ಕಾರಣ, ಪ್ರಕರಣವು ಇನ್ನೂ ಇತ್ಯರ್ಥಗೊಂಡಿಲ್ಲ ಎಂಬ ಅಂಶವನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಬಹಿರಂಗಗೊಳಿಸಿದೆ.

ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು 15ನೇ ವಿಧಾನಸಭೆಗೆ ಸಲ್ಲಿಸಿರುವ 4ನೇ ವರದಿಯು ಬೆಂಗಳೂರು ಟರ್ಫ್‌ ಕ್ಲಬ್‌ ಗುತ್ತಿಗೆ ಪ್ರಕರಣದ ಹಲವು ಆಯಾಮಗಳನ್ನು ಸಮಿತಿಯು ತೆರೆದಿಟ್ಟಿದೆ.

30 ವರ್ಷಗಳ ಗುತ್ತಿಗೆ ಅವಧಿಯು 2009ರಲ್ಲಿ ಪೂರ್ಣಗೊಂಡ ನಂತರ ಟರ್ಫ್‌ ಕ್ಲಬ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಕ್ಲಬ್‌ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಗುತ್ತಿಗೆ ಪ್ರಕರಣದಲ್ಲಿ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು 2010ರಲ್ಲಿದ್ದ ಅಡ್ವೋಕೇಟ್‌ ಜನರಲ್‌ ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಆದರೆ ಈ ಮನವಿಯನ್ನು ಸಲ್ಲಿಸುವ ಮುನ್ನ ಅಡ್ವೋಕೇಟ್‌ ಜನರಲ್‌ ಅವರು ಲೋಕೋಪಯೋಗಿ ಇಲಾಖೆಯಿಂದ ಲಿಖಿತ ರೂಪದಲ್ಲಾಗಲಿ ಅಥವಾ ಮೌಖಿಕವಾಗಲಿ ಸೂಚನೆ ನೀಡಿರಲಿಲ್ಲ ಎಂದು ಸಮಿತಿಗೆ ಇಲಾಖೆಯ ಅಧಿಕಾರಿಗಳು ಉತ್ತರಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಅಡ್ವೋಕೇಟ್‌ ಜನರಲ್‌ ಅವರು ಸಲ್ಲಿಸಿದ್ದ ಮನವಿ ಹಿಂದೆ ಯಾವ ಒತ್ತಡ, ಪ್ರೇರಣೆ ಮತ್ತು ಪ್ರೋತ್ಸಾಹಕ್ಕಾಗಿ ಒಳಗಾಗಿ ವಕೀಲಿ ವೃತ್ತಿಯ ನೀತಿ ನಿಯಮಗಳನ್ನು ಮೀರಿ ಇಂತಹ ನಿರ್ಧಾರ ತೆಗೆದುಕೊಂಡಿದ್ದರು ಎಂಬ ಬಗ್ಗೆಯೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆ ನಡೆಸಿತ್ತು.

‘ಲೋಕೋಪಯೋಗಿ ಇಲಾಖೆಯಿಂದಾಗಲಿ ಅಥವಾ ಕಾನೂನು ಇಲಾಖೆಯಿಂದಾಗಲಿ ಯಥಾಸ್ಥಿತಿ ಕಾಪಾಡುವಂತೆ ಅಡ್ವೋಕೇಟ್‌ ಜನರಲ್‌ ಅವರಿಗೆ ಮನವಿ ಸಲ್ಲಿಸಲು ತಿಳಿಸದಿದ್ದರೂ ಸರ್ವೋಚ್ಛ ನ್ಯಾಯಾಲಯದ ಮುಂದೆ ಆ ರೀತಿ ಮನವಿ ಸಲ್ಲಿಸಿದ್ದರಿಂದ ಸರ್ಕಾರ ಮತ್ತು ಅಡ್ವೋಕೇಟ್‌ ಜನರಲ್‌ರ ನಡುವೆ ಸಮನ್ವಯದ ಕೊರತೆಯೇ ಪ್ರಕರಣ ಇಲ್ಲಿಯವರೆಗೂ ಇತ್ಯರ್ಥವಾಗದಿರಲು ಕಾರಣ,’ ಎಂದು ಸಮಿತಿ ವರದಿಯಲ್ಲಿ ಅಭಿಪ್ರಾಯಿಸಿದೆ.

ಈ ಪ್ರಕರಣದಲ್ಲಿ ಇನ್ನಾದರೂ ಸರ್ಕಾರವು ಅಡ್ವೋಕೇಟ್‌ ಜನರಲ್‌ ಅವರಿಗೆ ಪ್ರಕರಣದ ಶೀಘ್ರ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

ಇನ್ನು, ಬೆಂಗಳೂರು ಟರ್ಫ್‌ ಕ್ಲಬ್‌ ಸಂಸ್ಥೆಯು ಸ್ಥಳಾಂತರಗೊಂಡರೆ ಅಲ್ಲಿನ ಕೆಲಸಗಾರರಿಗೆ, ಕುದುರೆಗಳನ್ನು ನೋಡಿಕೊಳ್ಳುವವರಿಗೆ ತೊಂದರೆಯಾಗಲಿದೆ ಎಂದು ಸಂಸ್ಥೆಯು 2015ರಲ್ಲಿ ಸಿವಿಲ್‌ ಪ್ರಕರಣದ ದಾಖಲಿಸಿತ್ತು. ಹೀಗಾಗಿ ಪ್ರಕರಣವು ಇತ್ಯರ್ಥವಾಗಿಲ್ಲ ಎಂಬುದು ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಮಿತಿಗೆ ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

‘ಕಾನೂನು ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಿದ್ದಲ್ಲಿ ಪ್ರಕರಣವು ಇಲ್ಲಿಯವರೆಗೂ ಮುಂದುವರೆಯುತ್ತಿರಲಿಲ್ಲ. ಬೆಂಗಳೂರು ಟರ್ಫ್‌ ಕ್ಲಬ್‌ನಿಂದ 37.46 ಕೋಟಿ ಬಾಡಿಗೆ ಬಾಕಿ ಇರುವ ಬಗ್ಗೆ 2010ರಲ್ಲೇ ಇಲಾಖೆಯು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದಿದ್ದರೆ ಪ್ರಕರಣವು ಇಷ್ಟರೊಳಗಾಗಿ ಮುಗಿಯುತ್ತಿತ್ತು,’ ಎಂದು ಸಮಿತಿಯು ಅಭಿಪ್ರಾಯಿಸಿದೆ.

ಹಾಗೆಯೇ ಟರ್ಫ್‌ ಕ್ಲಬ್‌ನಿಂದ ಬಾಕಿ ಇರುವ ಮೊತ್ತದ ಬಗ್ಗೆ ಅರಿವಿದ್ದರೂ ರೇಸ್‌ ಚಟುವಟಿಕೆಗಳನ್ನು ನಡೆಸಲು ಪರವಾನಗಿಯನ್ನು ಪ್ರತಿ ವರ್ಷವೂ ಆರ್ಥಿಕ ಇಲಾಖೆಯು ನವೀಕರಣಗೊಳಿಸುತ್ತಿರುವುದಕ್ಕೆ ಸಮಿತಿಯು ವಿಷಾದಿಸಿದೆ. ಅಲ್ಲದೆ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದ್ದಾಗ ಗುತ್ತಿಗೆ ಅವಧಿಯು ಪೂರ್ಣಗೊಂಡಿದ್ದರೂ ಯಥಾಸ್ಥಿತಿ ಕಾಪಾಡಿಕೊಳ್ಳುವ ಅದೇಶ ಮುಂದಿಟ್ಟುಕೊಂಡು ಕ್ಲಬ್‌ ಪರವಾನಗಿಯನ್ನು ನವೀಕರಣಗೊಳಿಸುತ್ತಿರುವುದು ಸಮಂಜಸವಲ್ಲ ಎಂದೂ ಅಭಿಪ್ರಾಯಿಸಿದೆ.

ಮೈಸೂರು ರೇಸ್‌ ಕೋರ್ಸ್‌ ಲೈಸೆನ್ಸಿಂಗ್‌ ಆಕ್ಟ್‌ 1952 ಮತ್ತು ಮೈಸೂರು ರೇಸ್‌ ಕೋರ್ಸ್‌ ಲೈಸೆನ್ಸಿಂಗ್‌ ರೂಲ್ಸ್‌ 1952ರ ನಿಯಮಗಳನ್ನು ಬೆಂಗಳೂರು ಟರ್ಫ್‌ ಕ್ಲಬ್‌ ಸಂಸ್ಥೆಯು ಸತತವಾಗಿ ಉಲ್ಲಂಘಿಸಿರುತ್ತಿದೆ. ಹೀಗಾಗಿ ಕ್ಲಬ್‌ನ ಪರವಾನಗಿಯನ್ನು ರದ್ದುಗೊಳಿಸಲು ಆರ್ಥಿಕ ಇಲಾಖೆಗೆ ಸಂಪೂರ್ಣ ಅಧಿಕಾರವಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts