ಕೋವಿಡ್‌ ಭ್ರಷ್ಟಾಚಾರ; ವಿಶೇಷ ಲೆಕ್ಕ ಪರಿಶೋಧನೆಗೆ ವರದಿ ಸಲ್ಲಿಸದ ವೈದ್ಯಕೀಯ, ಕಂದಾಯ ಇಲಾಖೆ

ಬೆಂಗಳೂರು; ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ನಿಲುವು ತಾಳಿದ್ದರೆ ವೈದ್ಯಕೀಯ ಶಿಕ್ಷಣ ಮತ್ತು ಕಂದಾಯ ಇಲಾಖೆ ಈವರೆವಿಗೂ ಯಾವುದೇ ಅಭಿಪ್ರಾಯ ಮತ್ತು ವರದಿಯನ್ನೂ ನೀಡಿಲ್ಲ.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು 2020ರ ಆಗಸ್ಟ್‌ 12ರಂದು ವೈದ್ಯಕೀಯ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಆದರೆ ಈ ಎರಡೂ ಇಲಾಖೆಗಳು ವಿಶೇಷ ಲೆಕ್ಕ ಪರಿಶೋಧನೆ ನಡೆಸುವ ಬಗ್ಗೆ 2 ತಿಂಗಳಾದರೂ ತಮ್ಮ ಅಭಿಪ್ರಾಯ ನೀಡಿಲ್ಲ. ಇಲಾಖೆಗಳು ವಹಿಸಿರುವ ಈ ಮೌನ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

‘ಕರೊನಾ ವೈರಸ್‌ ನಿಯಂತ್ರಿಸಲು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸಿರುವುದು, 2020ರ ಮಾರ್ಚ್‌ ಅಂತ್ಯಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯ ಶಿಲ್ಕು, 2020ರ ಏಪ್ರಿಲ್‌ ನಂತರದ ಸ್ವೀಕೃತಿಗಳು, ಖರ್ಚು ವೆಚ್ಚಗಳು, ಕೋವಿಡ್‌-19ರ ಪ್ರಕರಣಗಳಿಗನುಸಾರವಾಗಿ ಹಣ ಬಿಡುಗಡೆಗೊಳಿಸಲು ನಿಗದಿಪಡಿಸಿರುವ ಮಾದನಂಡಗಳು, ವಾಸ್ತವಿಕ ಬಿಡುಗಡೆ, ವೆಚ್ಚದ ಹಿನ್ನೆಲೆಯಲ್ಲಿ ವಿಶೇಷ ಲೆಕ್ಕ ಪರಿಶೋಧನೆ ನಡೆಸಿ ಸಮಗ್ರ ವರದಿಯನ್ನು ಸಮಿತಿಗೆ ಸಲ್ಲಿಸಬೇಕು,’ ಎಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಪತ್ರ ಎರಡೂ ಇಲಾಖೆಗಳಿಗೆ ಪತ್ರ ಬರೆದಿತ್ತು .

ಪತ್ರ ಬಂದಿರುವುದನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

ಪತ್ರ ಬರೆದು 2 ತಿಂಗಳಾಗುತ್ತಿದ್ದರೂ ಈ ಎರಡೂ ಇಲಾಖೆಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಯಾವ ವರದಿಯನ್ನು ಸಲ್ಲಿಸಿಲ್ಲ. ಕೋವಿಡ್‌-19ರ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯೂ 33.00 ಕೋಟಿ ರುಪಾಯಿಗೂ ಅಧಿಕ ವೆಚ್ಚದಲ್ಲಿ ವೆಂಟಿಲೇಟರ್‌ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿತ್ತು.

10 ಲಕ್ಷ ಸಂಖ್ಯೆಯ ಎನ್‌-95 ಮಾಸ್ಕ್‌ಗಳನ್ನು 29.50 ಕೋಟಿಗಳಲ್ಲಿ ಖರೀದಿಸಲು ಮುಂದಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯು ಆ ನಂತರ ಅಂದಾಜು ಮೊತ್ತವನ್ನು ಇದ್ದಕ್ಕಿದ್ದಂತೆ 44.99 ಕೋಟಿಗೆ ಏರಿಕೆ ಮಾಡಿತ್ತು. ಅಲ್ಲದೆ ಈ ಹಿಂದೆ 464.81 ಕೋಟಿ ಮೊತ್ತದಲ್ಲಿ ಸಾಮಗ್ರಿ, ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯು 815.85 ಕೋಟಿಗೇರಿಸಿತ್ತು. ಅಂದಾಜು ಮೊತ್ತದಲ್ಲಿ ಏರಿಕೆ ಮಾಡಿದ್ದ ಇಲಾಖೆಯು ಇದಕ್ಕೆ ಸೂಕ್ತ ಸಮರ್ಥನೆಯನ್ನು ನೀಡಿರಲಿಲ್ಲ. ಅದಷ್ಟೇ ಅಲ್ಲ, ಸಮಿತಿಯಲ್ಲಿದ್ದ ತಜ್ಞರ ಯಾವುದೇ ಅಭಿಪ್ರಾಯ, ತಾಂತ್ರಿಕ ಮಾಹಿತಿ ಹಾಗೂ ವಸ್ತುನಿಷ್ಠ ಶಿಫಾರಸ್ಸುಗಳನ್ನು ಒಳಗೊಂಡಿರಲಿಲ್ಲ.

ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿತ್ತು. ಹೀಗಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಈ ಎಲ್ಲಾ ಖರೀದಿ ಪ್ರಕ್ರಿಯೆಗಳ ಬಗ್ಗೆ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಇಲಾಖೆಗಳಿಗೆ ನಿರ್ದೇಶಿಸಿತ್ತು.

ಅದೇ ರೀತಿ ಕೋವಿಡ್‌-19 ನಿರ್ವಹಣೆಗಾಗಿ ಕಂದಾಯ ಇಲಾಖೆಯು ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಜಿಲ್ಲೆಗಳಿಗೆ ಕೋಟ್ಯಂತರ ರುಪಾಯಿಗಳನ್ನು ಹಂಚಿಕೆ ಮಾಡಿತ್ತು. ಆದರೆ ಬಹುತೇಕ ಜಿಲ್ಲೆಗಳು ಖರ್ಚು ಮಾಡಿರುವ ಬಗ್ಗೆ ಯಾವುದೇ ಲೆಕ್ಕವನ್ನೂ ನೀಡಿರಲಿಲ್ಲ.

ಈ ಎಲ್ಲ ಬೆಳವಣಿಗೆ ನಡುವೆ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ನಿರಾಕರಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಸಿಎಜಿಗೆ ನೇರವಾಗಿ ಪತ್ರ ಬರೆದಿದ್ದರು. ಈ ಪತ್ರವನ್ನು ಹಿಂಪಡೆಯಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಆರೋಗ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts