ಬೆಂಗಳೂರು; ಸರ್ಕಾರದ ಯಾವುದೇ ಆದೇಶವಿಲ್ಲದೆ ‘ಸಿ’ ಗ್ರೂಪ್‌ಗೆ ಸೇರಿದ ನೌಕರ ಶಿವಕುಮಾರ್ ಎಂಬುವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಳೆದ 2 ವರ್ಷದಿಂದಲೂ ಅನಧಿಕೃತವಾಗಿ ಪತ್ರಾಂಕಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದಾರೆ.
ಕಳೆದ 15 ವರ್ಷಗಳಿಂದಲೂ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ನಿಯೋಜನೆ ಮೇರೆಗೆ ‘ಎ’ ದರ್ಜೆಯ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿರುವ ಇವರನ್ನೀಗ ಸೇವಾ ಅಭಿಯಂತರ ಹುದ್ದೆಗೆ ಬಡ್ತಿ ನೀಡುವ ಅರ್ಹತಾ ಪಟ್ಟಿಯಲ್ಲಿಯೂ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮುಖ್ಯ ಖರೀದಿ ಅಧಿಕಾರಿ ಹುದ್ದೆಯು ‘ಎ’ ಗುಂಪಿಗೆ ಶ್ರೇಣಿಗೆ ಸೇರಿದೆ. ಸ್ಕಿಲ್ ಟ್ರೇಡ್‌ಮನ್ ಹುದ್ದೆಯಲ್ಲಿರುವ ಶಿವಕುಮಾರ್ ಅವರು ಮುಖ್ಯ ಖರೀದಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು, ಮುಖ್ಯ ಜಾಗೃತ ಅಧಿಕಾರಿ, ಮುಖ್ಯ ಆಡಳಿತಾಧಿಕಾರಿ, ಸರ್ಕಾರದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈವರೆವಿಗೂ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಇದಷ್ಟೇ ಅಲ್ಲ, ಮಾನ್ಯತೆ ಇಲ್ಲದ ಸಂಸ್ಥೆಯಿಂದ ಬಿ ಟೆಕ್ ಪದವಿ ಪ್ರಮಾಣ ಪತ್ರ ನೀಡಿ ಬಡ್ತಿಯನ್ನು ಪಡೆದಿದ್ದರು ಎಂದು ಒಪ್ಪಿಕೊಂಡಿದ್ದರು. ಮಾನ್ಯತೆ ಇಲ್ಲದೆ ಸಂಸ್ಥೆಯಿಂದ ಬಿ ಟೆಕ್ ಪದವಿ ಪ್ರಮಾಣ ಪತ್ರವನ್ನು ಪಡೆದಿರುವುದನ್ನು ಸ್ವತಃ ಶಿವಕುಮಾರ್ ಅವರು ಒಪ್ಪಿಕೊಂಡಿದ್ದರೂ ಮುಂಬಡ್ತಿಯನ್ನೂ ಹಿಂಪಡೆದಿದ್ದರು. ಆದರೆ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸಿರಲಿಲ್ಲ.
ಇಲಾಖೆ ವಿಚಾರಣೆಯಲ್ಲೂ ಸಾಬೀತಾಗಿತ್ತು ಆರೋಪ
ಈ ಪ್ರಕರಣದ ಮತ್ತೊಂದು ವಿಶೇಷವೆಂದರೆ ಸ್ಕಿಲ್ಡ್ ಟ್ರೇಡ್ಸ್‌ಮನ್ ವೃಂದದಿಂದ ಸೇವಾ ಅಭಿಯಂತರ ಹುದ್ದೆಗೆ ಪದನ್ನೋತಿ ಕೋರಿ ಸಲ್ಲಿಸಿದ್ದ 11 ಸಿಬ್ಬಂದಿಗಳ ಪೈಕಿ ಶಿವಕುಮಾರ್ ಅವರ ವಿರುದ್ಧದ ದೂರು ಕೂಡ ಸಾಬೀತಾಗಿತ್ತು. ಮುಖ್ಯ ಜಾಗೃತಾಧಿಕಾರಿಗಳು ನೀಡಿದ್ದ ವರದಿ ಆಧರಿಸಿ ಶಿಸ್ತು ಕ್ರಮ ಜರುಗಿಲು ಕಡತವೂ ಚಾಲನೆಯಲ್ಲಿದೆ ಎಂಬುದು ಪದನ್ನೋತಿ ಸಭೆಯ ರಹಸ್ಯ ವರದಿಯಿಂದ ತಿಳಿದು ಬಂದಿದೆ.
ಇನ್ನು, ಪದನ್ನೋತಿಯನ್ನು ಹಿಂಪಡೆದಿದ್ದ ಇಲಾಖೆಯ ನಿರ್ದೇಶಕರು ಶಿವಕುಮಾರ್ ವಿರುದ್ಧ ದೋಷಾರೋಪಣೆಯನ್ನು ಕೈಬಿಟ್ಟಿದ್ದರಲ್ಲದೆ ಇಡೀ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಸ್ಕಿಲ್ ಟ್ರೇಡ್‌ಮನ್ ಹುದ್ದೆಯಿಂದ ಸೇವಾ ಅಭಿಯಂತರ ಹುದ್ದೆಗೆ ಪದನ್ನೋತಿ ನೀಡುವ ಸಂಬಂಧ ನೌಕರರ ರಹಸ್ಯ ವರದಿ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದ್ದ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆ ಅವರ ಅಧ್ಯಕ್ಷತೆಯ ಸಮಿತಿಯು 2020ರ ಜೂನ್ 8ರಂದು ನಡೆಸಿದ್ದ ಸಭೆಯಲ್ಲಿ 10 ಮಂದಿಯ ಅರ್ಹತಾ ಪಟ್ಟಿಯಲ್ಲಿ ಶಿವಕುಮಾರ್ ಅವರು ಅರ್ಹರಿರುತ್ತಾರೆ ಎಂದು ಉಲ್ಲೇಖಿಸಿ ಅವರ ಹೆಸರನ್ನೂ ಸೇರ್ಪಡೆಗೊಳಿಸಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
‘ಎ’ ದರ್ಜೆಯ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅನರ್ಹರಾಗಿದ್ದರೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿಯೂ ಕರ್ತವ್ಯ ನಿಭಾಯಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಇಂತಹ ಹಲವು ಪ್ರಕರಣಗಳಿದ್ದರೂ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಈವರೆವಿಗೂ ಗಮನಹರಿಸದಿರುವುದು ಇಲಾಖೆ ಸಚಿವ ಶ್ರೀರಾಮುಲು ಅವರಿಗೆ ಇಲಾಖೆ ಮೇಲೆ ಯಾವುದೇ ಹಿಡಿತವಿಲ್ಲ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.