ಬೆಂಗಳೂರು; ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಸುತ್ತೋಲೆಗಳನ್ನು ಪಾಲಿಸದ ಆರೋಪಕ್ಕೆ ಗುರಿಯಾಗಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಈಗಿನ ಆಡಳಿತಾಧಿಕಾರಿ ಗೌರವ್ ಗುಪ್ತಾ ಮತ್ತಿತರ 21 ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಒಟ್ಟು 90 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸ್ಸು ಮಾಡಿದೆ.
2019ರ ಡಿಸೆಂಬರ್ 21ರಿಂದ 2020ರ ಆಗಸ್ಟ್ 31ರವರೆಗೆ ಒಟ್ಟು 90 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕನ್ನಡ ಆಭಿವೃದ್ಧಿ ಪ್ರಾಧಿಕಾರ ಮಾಡಿದ್ದ ಶಿಫಾರಸ್ಸುಗಳನ್ನು ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಶಿಸ್ತು ಕ್ರಮಕ್ಕೆ ಶಿಫಾರಸ್ಸಾಗಿರುವ ಅಧಿಕಾರಿಗಳ ಪಟ್ಟಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಪಟ್ಟಿಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ನಿರ್ದೇಶಕರು, ಆಯುಕ್ತರು, ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಾಹಕ ನಿರ್ದೇಶಕರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು, ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರು, ಸರ್ಕಾರದ ಅಧೀನ ಮತ್ತು ಉಪ ಕಾರ್ಯದರ್ಶಿಗಳಿದ್ದಾರೆ.
90 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಳೆದ ಒಂದು ವರ್ಷದಿಂದಲೂ ಸಕ್ಷಮ ಪ್ರಾಧಿಕಾರಗಳಿಗೆ ಪತ್ರ ಬರೆಯುತ್ತಲೇ ಇದೆ. ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಆದಿಯಾಗಿ 71 ಸಕ್ಷಮ ಪ್ರಾಧಿಕಾರಗಳು ಯಾವುದೇ ಉತ್ತರವನ್ನೂ ನೀಡದಿರುವುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ. 10 ಪ್ರಕರಣಗಳಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರು ಯಾವುದೇ ಉತ್ತರವನ್ನೂ ನೀಡದಿರುವುದು ಗೊತ್ತಾಗಿದೆ.
ಕನ್ನಡ ಅನುಷ್ಠಾನಗೊಳಿಸದ ಅಧಿಕಾರಿಗಳ ಪಟ್ಟಿ
ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆ, ವಾಣಿಜ್ಯ ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಗೌರವ್ ಗುಪ್ತಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎ ಬಿ ಇಬ್ರಾಹಿಂ, ಐಪಿಎಸ್ ಎಸ್ ಎನ್ ಸಿದ್ರಾಮಪ್ಪ, ಬಿಬಿಎಂಪಿ ಆಯುಕ್ತರು, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಆಯುಕ್ತರು, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಕನಗವಲ್ಲಿ, ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಅಬಕಾರಿ ಇಲಾಖೆಯ ಆಯುಕ್ತರು, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಎಚ್ ಎಂ ರೇವಣ್ಣಗೌಡ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಪ್ರಧಾನ ವ್ಯವಸ್ಥಾಪಕ, ಯು ಆರ್ ರಾವ್ ಸ್ಯಾಟ್‌ಲೈಟ್‌ನ ನಿಯಂತ್ರಕರಾದ ವಿಜಯಲಕ್ಷ್ಮಿ ಬಿದರಿ, ಸಂಸದೀಯ ವ್ಯವಹಾರಗಳ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದ್ವಾರಕನಾಥ ಬಾಬು, ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ ಗಲಗಲಿ, ಕರ್ನಾಟಕ ರಾಜ್ಯ ಪಾನೀಯ ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎಂ ಎಸ್ ಶಿವರಾಮ್, ಬೀದರ್ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಚ್ ಹೇಮಂತಕುಮಾರ್, ಬಿಎಚ್‌ಇಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎ ಕೆ ಜೈನ್ ಸೇರಿದಂತೆ ವಿವಿಧ ಜಿಲ್ಲೆಗಳ ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರಿದ್ದಾರೆ.
ಕರ್ನಾಟಕ ಸರ್ಕಾರವು 1963ರಲ್ಲಿ ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆ ಎಂದು ಆದೇಶ ಹೊರಡಿಸಿತ್ತು. ಅಂದಿನಿಂದ ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡಲು ಹಲವು ಪ್ರಯತ್ನಗಳು ನಡೆದಿವೆ. 1970ರಲ್ಲಿ ತಾಲೂಕು, 1972ರಲ್ಲಿ ಜಿಲ್ಲಾ ಮಟ್ಟದವರೆಗೂ ಕನ್ನಡವನ್ನು ಬಳಸಬೇಕು ಎಂದು ಆದೇಶಗಳು ಹೊರಬಿದ್ದಿವೆ. 1983ರಲ್ಲಿ ಸಚಿವಾಲಯದವರೆಗೂ ಕನ್ನಡವನ್ನು ಕಡ್ಡಾಯವಾಗಿ ಬಳಸಲೇಬೇಕು ಎಂದು ಆದೇಶಿಸಲಾಗಿದೆ. ಕನ್ನಡ ಬಳಸದ ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಆದೇಶವೂ ಇದೆ. ಆದರೆ ಈ ಯಾವ ಆದೇಶ, ಸುತ್ತೋಲೆಗಳನ್ನು ಐಎಎಸ್, ಐಪಿಎಸ್, ಐಪಿಎಸ್ ಸೇರಿದಂತೆ ಸರ್ಕಾರದ ಹಲವು ಅಧಿಕಾರಿಗಳು, ನೌಕರರು ಪಾಲಿಸದೇ ಭಂಡ ನಿರ್ಲಕ್ಷ್ಯ ಮೆರೆದಿದ್ದಾರೆ.