ಕೇಂದ್ರದ ತಾರತಮ್ಯ; 14 ರಾಜ್ಯಗಳಿಗೆ 6,195 ಕೋಟಿ ಬಿಡುಗಡೆ, ಕರ್ನಾಟಕಕ್ಕೆ ಬಿಡಿಗಾಸೂ ಇಲ್ಲ

ಬೆಂಗಳೂರು; 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ 14 ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಿರುವ ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ಬಿಡಿಗಾಸನ್ನು ಹಂಚಿಕೆ ಮಾಡಿಲ್ಲ. ಆಂಧ್ರ ಪ್ರದೇಶ ಸೇರಿದಂತೆ 13 ರಾಜ್ಯಗಳಿಗೆ ಒಟ್ಟು 6,195 ಕೋಟಿ ರು. ಅನುದಾನವನ್ನು ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದೆ.

2020ರ ಸೆಪ್ಟಂಬರ್‌ 10ರಂದು ಅನುದಾನ ಬಿಡುಗಡೆ ಮಾಡಿ ಆದೇಶಿಸಿರುವ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೂ ಬಿಡಿಗಾಸನ್ನೂ ನೀಡಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ 2020ರ ಜುಲೈ ಅಂತ್ಯಕ್ಕೆ ಕೇಂದ್ರ ಸರ್ಕಾರವು ಉತ್ತರದ ರಾಜ್ಯಗಳಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿ ರಾಜ್ಯಕ್ಕೆ ಕೇವಲ 1,530 ಕೋಟಿ ರು. ಹಂಚಿಕೆ ಮಾಡಿತ್ತು.

ಸೆಪ್ಟಂಬರ್‌ನಲ್ಲಿ 14 ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಿಡಿಗಾಸನ್ನೂ ಬಿಡುಗಡೆ ಮಾಡದಿರುವುದು ಕೇಂದ್ರದ ತಾರತಮ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಸೆಪ್ಟಂಬರ್‌ನಲ್ಲಿ ಹಂಚಿಕೆ ವಿವರ

ಆಂಧ್ರಪ್ರದೇಶಕ್ಕೆ 4941.66 ಲಕ್ಷ ರು., ಅಸ್ಸಾಂಗೆ 63158.33 ಲಕ್ಷ , ಹಿಮಾಚಲ ಪ್ರದೇಶಕ್ಕೆ 95258.33 ಲಕ್ಷ, ಕೇರಳಕ್ಕೆ 127691.66 ಲಕ್ಷ, ಮಣಿಪುರಕ್ಕೆ 23533.33 ಲಕ್ಷ, ಮೇಘಾಲಯಕ್ಕೆ 4091.66 ಲಕ್ಷ, ಮಿಜೋರಾಂಗೆ 11850.00 ಲಕ್ಷ, ನಾಗಾಲ್ಯಾಂಡ್‌ಗೆ 32641.66 ಲಕ್ಷ, ಪಂಜಾಬ್‌ಗೆ 63825.00 ಲಕ್ಷ, ತಮಿಳುನಾಡಿಗೆ 333541.66 ಲಕ್ಷ, ತ್ರಿಪುರಾ 42300.00 ಲಕ್ಷ, ಉತ್ತರಾಖಂಡ್‌ಗೆ 41775.00 ಲಕ್ಷ, ಪಶ್ಚಿಮ ಬಂಗಾಳಕ್ಕೆ 41775.00 ಲಕ್ಷ , ಸಿಕ್ಕಿಂಗೆ 37 ಕೋಟಿ ರು. ಗಳನ್ನು ಬಿಡುಗಡೆ ಮಾಡಿರುವುದು ಕೇಂದ್ರ ಹಣಕಾಸು ಸಚಿವಾಲಯದ ಪತ್ರದಿಂದ ತಿಳಿದು ಬಂದಿದೆ.

ಸೇವಾ ತೆರಿಗೆ, ಕೇಂದ್ರ ಅಬಕಾರಿ ಶುಲ್ಕ, ಸುಂಕ, ಕೇಂದ್ರ ಸರಕು ಸೇವಾ ತೆರಿಗೆ, ಆದಾಯ ತೆರಿಗೆ, ಕಾರ್ಪೋರೇಷನ್‌ ತೆರಿಗೆ ವಿಭಾಗದಲ್ಲಿ ಏಪ್ರಿಲ್‌ನಿಂದ ಜೂನ್‌ ಅವಧಿವರೆಗೆ ಸಂಗ್ರಹವಾಗಿರುವ ಒಟ್ಟು ಮೊತ್ತದಲ್ಲಿ 1,76,007 ಲಕ್ಷ ಕೋಟಿ ರು.ಗಳನ್ನು ಕರ್ನಾಟಕ ಸೇರಿದಂತೆ ದೇಶದ 28 ರಾಜ್ಯಗಳಿಗೆ ಪಾವತಿಸಲು ಜುಲೈ 2020ರಲ್ಲಿ ಹಂಚಿಕೆ ಮಾಡಿತ್ತು.

ರಾಷ್ಟ್ರಪತಿ ಅನುಮೋದನೆ ಮೇರೆಗೆ 41,966 ಕೋಟಿ ರು.ಗಳನ್ನು ಮಂಜೂರು ಮಾಡಿರುವ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯವು ಎಂದಿನಂತೆ ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಹೆಚ್ಚಿನ ಪಾಲು ದೊರೆತಿತ್ತು.

15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಮಂಜೂರಾಗಿರುವ 6,417.28 ಕೋಟಿ ರು. ನಲ್ಲಿ 1,530.07 ಕೋಟಿ ರು.ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಚಿವಾಲಯವು ಆರ್ಥಿಕ ಸಚಿವಾಲಯದ ಮುಖ್ಯ ಲೆಕ್ಕ ನಿಯಂತ್ರಕರಿಗೆ 2020ರ ಜುಲೈ 20ರಂದು ಸೂಚಿಸಿತ್ತು. ಈ ಕುರಿತು ‘ದಿ ಫೈಲ್‌’ ಆಗಸ್ಟ್‌ 28ರಂದು ವರದಿ ಮಾಡಿತ್ತು.

ಮಂಜೂರಾಗಿದ್ದ ಒಟ್ಟು ಮೊತ್ತದಲ್ಲಿ ಉತ್ತರ ಪ್ರದೇಶಕ್ಕೆ 7,524.92 ಕೋಟಿ ನೀಡುವ ಮೂಲಕ ಸಿಂಹಪಾಲು ದೊರೆತಂತಾಗಿತ್ತು. ಉಳಿದಂತೆ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಕ್ಕೆ ಕರ್ನಾಟಕಕ್ಕೆ ನೀಡಿರುವುದಕ್ಕಿಂತಲೂ ಹೆಚ್ಚಿನ ಮೊತ್ತ ಮಂಜೂರಾಗಿತ್ತು.

ಒಟ್ಟು ಮಂಜೂರಾಗಿರುವ ಮೊತ್ತದಲ್ಲಿ ಸೇವಾ ತೆರಿಗೆ 30.00 ಕೋಟಿ ರು., ಕೇಂದ್ರ ಅಬಕಾರಿ ಶುಲ್ಕ 1,516 ಕೋಟಿ, ಸುಂಕ 2,668 ಕೋಟಿ, ಕೇಂದ್ರ ಸರಕು, ಸೇವಾ ತೆರಿಗೆ(ಸಿಜಿಎಸ್‌ಟಿ) 12,520 ಕೋಟಿ, ಆದಾಯ ತೆರಿಗೆ 12,779 ಕೋಟಿ, ಕಾರ್ಪೋರೇಷನ್‌ ತೆರಿಗೆ 12,453 ಕೋಟಿ ರು. ಹಂಚಿಕೆಯಾಗಿರುವ ಮೊತ್ತದಲ್ಲಿ ಸೇರಿದೆ.

ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಸೇರಿದಂತೆ ಇನ್ನಿತರೆ ಬಾಬ್ತಿನಲ್ಲಿ ಯಾವುದಾದರೂ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಹೊಂದಾಣಿಕೆ ಮಾಡಿ ಉಳಿದ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿ ಎಂದು ಕೇಂದ್ರ ಅರ್ಥಿಕ ವ್ಯವಹಾರಗಳ ಸಚಿವಾಲಯವು ಆರ್‌ಬಿಐಗೆ ಸೂಚಿಸಿತ್ತು.

ಸೇವಾ ತೆರಿಗೆಯಲ್ಲಿ ರಾಜ್ಯಕ್ಕೆ 1.09 ಕೋಟಿ

ದೇಶದ 28 ರಾಜ್ಯಗಳಿಗೆ ಮಂಜೂರಾಗಿರುವ 30 ಕೋಟಿ ಸೇವಾ ತೆರಿಗೆ ಪೈಕಿ ರಾಜ್ಯಕ್ಕೆ ಮಂಜೂರಾಗಿರುವ 4.36 ಕೋಟಿ ರು.ನಲ್ಲಿ 1.09 ಕೋಟಿ ಬಿಡುಗಡೆ ಮಾಡಲು ಸೂಚಿಸಿದೆ. ಉತ್ತರ ಪ್ರದೇಶಕ್ಕೆ 21.46 ಕೋಟಿ ರು.ನಲ್ಲಿ 5.37 ಕೋಟಿ ರು. ಬಿಡುಗಡೆಯಾಗಿದೆ. ಮಹಾರಾಷ್ಟ್ರಕ್ಕೆ 1.84 ಕೋಟಿ, ತಮಿಳುನಾಡಿಗೆ 1.26 ಕೋಟಿ, ಪಶ್ಚಿಮ ಬಂಗಾಳಕ್ಕೆ 2.26 ಕೋಟಿ, ಮಧ್ಯ ಪ್ರದೇಶಕ್ಕೆ 2.37 ಕೋಟಿ, ಬಿಹಾರಕ್ಕೆ 3 ಕೋಟಿ ಬಿಡುಗಡೆ ಮಾಡಿದೆ.

ಕೇಂದ್ರ ಅಬಕಾರಿ ಶುಲ್ಕದಲ್ಲಿ 55.27 ಕೋಟಿ ಮಂಜೂರು

ಸಂಗ್ರಹವಾಗಿರುವ ಕೇಂದ್ರ ಅಬಕಾರಿ ಶುಲ್ಕದ ಪೈಕಿ 1,516 ಕೋಟಿಯಲ್ಲಿ ರಾಜ್ಯಕ್ಕೆ 55.27 ಕೋಟಿ ಮಂಜೂರಾಗಿದೆ. ದೇಶದ 28 ರಾಜ್ಯಗಳ ಪೈಕಿ ಉತ್ತರ ಪ್ರದೇಶಕ್ಕೆ ಅತಿಹೆಚ್ಚು ಎಂದರೆ 271.83 ಕೋಟಿ ಮಂಜೂರಾಗಿದ್ದರೆ, ಬಿಹಾರಕ್ಕೆ 152.52 ಕೋಟಿ, ಮಧ್ಯಪ್ರದೇಶಕ್ಕೆ 119.55 ಕೋಟಿ, ಪಶ್ಚಿಮ ಬಂಗಾಳಕ್ಕೆ 113.99 ಕೋಟಿ ದೊರೆತಿದೆ.

ಆದಾಯ ತೆರಿಗೆಯಲ್ಲಿ ದೊರೆತಿದ್ದು 465.92 ಕೋಟಿ

12,779 ಕೋಟಿ ಆದಾಯ ತೆರಿಗೆ ಪೈಕಿ ರಾಜ್ಯಕ್ಕೆ 465.92 ಕೋಟಿ ದೊರೆತಿದೆ. ಉತ್ತರ ಪ್ರದೇಶಕ್ಕೆ 2,291 ಕೋಟಿ, ಬಿಹಾರಕ್ಕೆ 1,285.70 ಕೋಟಿ, ಮಧ್ಯಪ್ರದೇಶಕ್ಕೆ 1,007.75 ಕೋಟಿ, ಪಶ್ಚಿಮ ಬಂಗಾಳಕ್ಕೆ 960.85 ಕೋಟಿ ನೀಡಲಾಗಿದೆ.

ಕಾರ್ಪೋರೇಷನ್‌ ತೆರಿಗೆಯಲ್ಲಿ 454.04 ಕೋಟಿ

ಕಾರ್ಪೋರೇಷನ್‌ ತೆರಿಗೆ ವಿಭಾಗದಲ್ಲಿ ಬಿಡುಗಡೆಯಾಗಿರುವ ಒಟ್ಟು 12,,453 ಕೋಟಿ ಪೈಕಿ ರಾಜ್ಯಕ್ಕೆ 454.04 ಕೋಟಿ ಸಿಕ್ಕಿದೆ. ಉತ್ತರ ಪ್ರದೇಶಕ್ಕೆ 2,232.96 ಕೋಟಿ, ಬಿಹಾರಕ್ಕೆ 1,252.90 ಕೋಟಿ, ಮಧ್ಯಪ್ರದೇಶಕ್ಕೆ 982.04 ಕೋಟಿ, ಪಶ್ಚಿಮ ಬಂಗಾಳಕ್ಕೆ 936.34 ಕೋಟಿ ದೊರೆತಿದೆ.

ಸುಂಕ ವಿಭಾಗದಲ್ಲಿ 97.27 ಕೋಟಿ

ಈ ವಿಭಾಗದಲ್ಲಿ ಬಿಡುಗಡೆಯಾಗಿರುವ ಒಟ್ಟು 2,668 ಕೋಟಿ ಪೈಕಿ ರಾಜ್ಯಕ್ಕೆ 97.27 ಕೋಟಿ ಮಾತ್ರ ದೊರೆತಿದೆ. ಉತ್ತರ ಪ್ರದೇಶಕ್ಕೆ 478.40 ಕೋಟಿ, ಬಿಹಾರಕ್ಕೆ 268.43 ಕೋಟಿ, ಮಧ್ಯಪ್ರದೇಶಕ್ಕೆ 210.40 ಕೋಟಿ, ಪಶ್ಚಿಮ ಬಂಗಾಳಕ್ಕೆ 200.61 ಕೋಟಿ ಬಿಡುಗಡೆ ಮಾಡಲು 15ನೇ ಹಣಕಾಸಿನ ಆಯೋಗ ಶಿಫಾರಸ್ಸು ಮಾಡಿದೆ.

ಕೇಂದ್ರ ಸರಕು ಸೇವಾ ತೆರಿಗೆಯಲ್ಲಿ 456.48 ಕೋಟಿ

ಕೇಂದ್ರ ಸರಕು ಸೇವಾ ತೆರಿಗೆಯಲ್ಲಿ ರಾಜ್ಯಕ್ಕೆ 456.48 ಕೋಟಿ ರು. ದೊರೆತಿದೆ. ಉತ್ತರ ಪ್ರದೇಶಕ್ಕೆ 2,244.96 ಕೋಟಿ, ಬಿಹಾರಕ್ಕೆ 1,259.64 ಕೋಟಿ, ಮಧ್ಯಪ್ರದೇಶಕ್ಕೆ 987.33 ಕೋಟಿ, ಪಶ್ಚಿಮ ಬಂಗಾಳಕ್ಕೆ 941.38 ಕೋಟಿ ದೊರೆತಿದೆ.

SUPPORT THE FILE

Latest News

Related Posts