ಐಎಫ್‌ಎಸ್‌ ಎಸ್‌ ಜಿ ಹೆಗಡೆ ವಿರುದ್ಧ ಆಸ್ತಿ ವಿವರ ಮುಚ್ಚಿಟ್ಟ ಆರೋಪ; ಮುಖ್ಯಮಂತ್ರಿಯ ಶ್ರೀರಕ್ಷೆ!

ಬೆಂಗಳೂರು; ಆಸ್ತಿ ವಿವರಗಳನ್ನು ಮುಚ್ಚಿಟ್ಟ ಆರೋಪಕ್ಕೆ ಗುರಿಯಾಗಿರುವ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌ ಜಿ ಹೆಗಡೆ ಎಂಬುವರನ್ನು ಶಿರಸಿ ವಿಭಾಗದಲ್ಲೇ ಮುಂದುವರೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಆ ವರ್ಷದಲ್ಲಿ ಆಸ್ತಿ ವಿವರಗಳ ಸಮಗ್ರ ವಿವರಗಳನ್ನು ಒದಗಿಸಬೇಕು. ಆದರೆ ಎಸ್‌ ಜಿ ಹೆಗಡೆ ಅವರು ಶಿವಮೊಗ್ಗದಲ್ಲಿ ಖರೀದಿಸಿದ್ದ ನಿವೇಶನದ ಕುರಿತಾದ ಮಾಹಿತಿಯೂ ಸೇರಿದಂತೆ ಇನ್ನಿತರೆ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಈ ಕುರಿತು ಎಸ್‌ ಜಿ ಹೆಗಡೆ ಅವರು ಸರ್ಕಾರಕ್ಕೆ ಸಮಜಾಯಿಷಿ ನೀಡಿದ ನಂತರವೂ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಹೆಗಡೆ ಅವರಿಗೆ ಪತ್ರ ಬರೆದಿರುವುದು ಗೊತ್ತಾಗಿದೆ.

ಈ ನಡುವೆ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌ ಅವರ ಮನವಿ ಮೇರೆಗೆ ಎಸ್‌ ಜಿ ಹೆಗಡೆ ಅವರನ್ನು ಶಿರಸಿ ವಿಭಾಗದಲ್ಲೇ ಮುಂದುವರೆಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2020ರ ಜುಲೈ 1ರಂದು ಪತ್ರ ಬರೆದಿದ್ದಾರೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೆ ವಿ ವಸಂತರೆಡ್ಡಿ, ಕೆ ಗಣಪತಿ, ಡಾ ಅಜ್ಜಯ್ಯ, ಗೋಪಾಲಕೃಷ್ಣ ಅವರನ್ನೂ ಜಿಲ್ಲೆಯ ಅರಣ್ಯ ವಿಭಾಗಗಳಲ್ಲೇ ಮುಂದುವರೆಸಲು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಎಸ್‌ ಜಿ ಹೆಗಡೆ ಆಸ್ತಿ ವಿವರಗಳನ್ನು ಮುಚ್ಚಿಟ್ಟರೇ?

ಕೃಷಿ ಕ್ಷೇತ್ರದಲ್ಲಿರುವ ಕೃಷಿ ಭೂಮಿ, ಮನೆ, ಲೇಬರ್‌ ಶೆಡ್‌ ಇತ್ಯಾದಿಗಳ ಮೌಲ್ಯದಲ್ಲಿ ವರ್ಷದಿಂದ ವರ್ಷಕ್ಕೆ ಏರಿಳಿತಗಳು ಉಂಟಾಗುವುದು ಸ್ವಾಭಾವಿಕ. ಆದರೆ ಎಸ್‌ ಜಿ ಹೆಗಡೆ ಅವರು ಮೌಲ್ಯವು ಬದಲಾಗುವುದಿಲ್ಲ ಎಂದು ಹೇಳಿಕೆ ನೀಡಿರುವುದು ತಿಳಿದು ಬಂದಿದೆ. ಈ ಕುರಿತು ಎಸ್‌ ಜಿ ಹೆಗಡೆ ಅವರಿಗೆ ಪತ್ರ ಬರೆದಿರುವ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ‘ವರ್ಷದಿಂದ ವರ್ಷಕ್ಕೆ ಮೌಲ್ಯ ಬದಲಾಗುತ್ತಿರುತ್ತದೆ. ಮೌಲ್ಯ ಸ್ಥಿರವಾಗಿರುವುದಿಲ್ಲ. ವಸ್ತುಸ್ಥಿತಿಯೂ ಬದಲಾವಣೆಯಾಗುತ್ತಿರುತ್ತದೆ. ಹೀಗಾಗಿ ಈ ಕುರಿತು ಸ್ಪಷ್ಟೀಕರಣ ನೀಡಬೇಕು,’ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

ಅದೇ ರೀತಿ 2016-17ನೇ ಸಾಲಿನಲ್ಲಿ ಕಾರವಾರದ ಶಿರಸಿ ತಾಲೂಕಿನ ಫ್ಲಾಟ್‌ ನಂ 30ರ ಬಗ್ಗೆ 2006-07ರಲ್ಲಿ ವರದಿ ಮಾಡಿದ್ದ ಎಸ್‌ ಜಿ ಹೆಗಡೆ ಅವರು ಶಿವಮೊಗ್ಗದ ವಿದ್ಯಾನಗರದಲ್ಲಿ ಎಸ್‌ ಆರ್‌ ನಂ 6038, ಎಸ್‌ ಅರ್‌ ನಂ 6040 ನಿವೇಶನ ಇದೆ ಎಂದು ಘೋಷಿಸಿದ್ದರು. ಆದರೆ 2009-10ರಿಂದ 2015-16ನ ಸಾಲಿನವರೆಗೆ ವಿದ್ಯಾನಗರದ ನಿವೇಶನಗಳ ಕುರಿತಾದ ಯಾವ ಮಾಹಿತಿಯೂ ಇರಲಿಲ್ಲ. ಹಾಗೆಯೇ ಶಿರಸಿ ತಾಲೂಕಿನ ಫ್ಲಾಟ್‌ ನಂ 30ರ ಬಗ್ಗೆಯೂ ಯಾವುದೇ ಮಾಹಿತಿಯೂ ಇರಲಿಲ್ಲ ಎಂಬುದು ಅಧೀನ ಕಾರ್ಯದರ್ಶಿ ಅವರು ಬರೆದಿರುವ ಪತ್ರದಿಂದ ಗೊತ್ತಾಗಿದೆ.

ಇನ್ನು 2015-16ನೇ ಸಾಲಿನಲ್ಲಿ ಕ್ರಮ ಸಂಖ್ಯೆ (9)ರಲ್ಲಿ ಮ್ಯಾಕ್ಸ್‌ ಲೈಫ್‌ ಇನ್ಸೂರೆಡನ್ಸ್‌ ಕಂಪನಿಯಲ್ಲಿ 1,08,288 ರು. ಪ್ರೀಮಿಯಂ ಮೊತ್ತ ಪಾವತಿಸಿದ್ದು, 2016-17ನೇ ಸಾಲಿನಲ್ಲಿ 2017ರ ಜನವರಿ 2ರಂದು 1,06,462 ರು.ಗಳನ್ನು ಆಕ್ಸಿಸ್‌ ಬ್ಯಾಂಕ್‌ಗೆ ನೆಫ್ಟ್‌ ಮೂಲಕ ಸಂದಾಯ ಮಾಡಲಾಗಿದೆ ಎಂದು ತಿಳಿಸಿದ್ದರು. ಆದರೆ ಈ ಕುರಿತು ಸರ್ಕಾರಕ್ಕೆ ಯಾವುದೇ ದಾಖಲಾತಿಯನ್ನು ಸಲ್ಲಿಸಿಲ್ಲ ಎಂಬುದು ಅಧೀನ ಕಾರ್ಯದರ್ಶಿ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ಹಾಗೆಯೇ ಕದಂ ಮಾರ್ಕೇಟಿಂಗ್‌ನ ಷೇರುಗಳನ್ನು ಖರೀದಿಸಿರುವ ಕುರಿತು ದಾಖಲಾತಿ ಸಲ್ಲಿಸಿಲ್ಲ. 2018-19 ಮತ್ತು 2019-20ನೇ ಸಾಲಿನ ಆಸ್ತಿ ದಾಯಿತ್ವ ಪಟ್ಟಿಯ ಸ್ಥಿರಾಸ್ತಿನಲ್ಲಿನ ಕ್ರಮ ಸಂಖ್ಯೆ (2) ಮತ್ತು (3)ರಲ್ಲಿ ವಾರ್ಷಿಕ ಆದಾಯ 26,63,994 ರು. ಎಂದು ಘೋಷಿಸಿರುವ ಬಾಬ್ತು ಕೃಷಿ ಉತ್ಪನ್ನದ ವಿವರ ಬೆಳೆದಿರುವ ಫಸಲಿನ ಪ್ರಮಾಣ, ಬೆಳೆ ವಿವರ, ಸಾಗುವಳಿ ವೆಚ್ಚ, ಮಾರಾಟ ಮಾಡಿರುವ ಕೃಷಿ ಉತ್ಪನ್ನದ ಮಾರುಕಟ್ಟೆ ರಸೀದಿಯನ್ನು ಒದಗಿಬೇಕು ಎಂದು ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

2018-19ನೇ ಸಾಲಿನ ಚರಾಸ್ತಿಯ ಕ್ರಮ ಸಂಖ್ಯೆ 5-9ರವರೆಗಿನ ಮಾಹಿತಿ ಘೋಷಿಸಿದ್ದಾರಾದರೂ ಆ ಮಾಹಿತಿಯನ್ನು 2017-18ನೇ ಸಾಲಿನಲ್ಲಿ ಘೋಷಿಸಿಲ್ಲ. 2018-19 ಮತ್ತು 2019-20ನೇ ಸಾಲಿನಲ್ಲಿ ಚಿನ್ನಾಭರಣಗಳು, ಪೀಠೋಪಕರಣಗಳ ಬೆಲೆಯನ್ನೂ ತಿಳಿಸಿಲ್ಲ. 2018-19ನೇ ಸಾಲಿನಲ್ಲಿ ಕೋಟಕ್‌ ಮಹಿಂದ್ರ ಬ್ಯಾಂಕ್‌ ಖಾತೆ ಸಂಖ್ಯೆ 161010020178ರ ಮಾಹಿತಿ ಒದಗಿಸಿದ್ದರೂ 2019-20ನೇ ಸಾಲಿನಲ್ಲಿ ಈ ಮಾಹಿತಿಯನ್ನು ತಿಳಿಸಿಲ್ಲ. ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಅಧೀನ ಕಾರ್ಯದರ್ಶಿ ಪಿ ವಿ ಶ್ರೀನಿವಾಸ್‌ ಅವರು ಪತ್ರದಲ್ಲಿ ತಿಳಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts