ಎಲ್‌ ಇ ಡಿ ಲೈಟಿಂಗ್; ವಿದ್ಯುತ್‌ ಉಳಿತಾಯದ ಪುರಾವೆಗಳಿಲ್ಲದೇ ಟೆಂಡರ್‌ ಅನುಮೋದನೆ

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ ಎಲ್‌ ಇ ಡಿ ಲೈಟಿಂಗ್‌ ಅಳವಡಿಸುವ ಸಂಬಂಧ ಟೆಂಡರ್‌ ಒಕ್ಕೂಟ ಸಂಸ್ಥೆಗಳೊಂದಿಗೆ ಸಂಬಂಧವೇ ಇಲ್ಲದ ಖಾಸಗಿ ಕಂಪನಿ ಸೀಮನ್ಸ್‌ಗೆ ಪಾಲಿಕೆಯ ಪೂರ್ವಾನುಮತಿ ಇಲ್ಲದೆಯೇ ಜಂಟಿ ಸಮೀಕ್ಷೆಗೆ ಅವಕಾಶ ನೀಡಿರುವ ಪ್ರಕರಣ ಇದೀಗ ಬಹಿರಂಗವಾಗಿದೆ.

ಅಲ್ಲದೆ ಖಾತರಿ ವಿದ್ಯುತ್‌ ಉಳಿತಾಯದ ಅನುಭವ ಪತ್ರವನ್ನು ಪಡೆಯದೇ ಸಂಸ್ಥೆಗಳಿಗೆ ಗುತ್ತಿಗೆಯನ್ನು ಅನುಮೋದಿಸಿರುವುದು ಮತ್ತು ಟೆಂಡರ್‌ ಅನುಮೋದನೆಗೆ ಪ್ರಮುಖ ಅಂಶವಾಗಿರುವ ಶೇ.85.50ರಷ್ಟು ಖಾತರಿ ವಿದ್ಯುತ್‌ ಉಳಿತಾಯವಾಗುವ ಬಗ್ಗೆ ಯಾವುದೇ ಪುರಾವೆಗಳಿಲ್ಲದೆಯೇ ಟೆಂಡರ್‌ ಅನುಮೋದಿಸಿರುವುದನ್ನು ಖುದ್ದು ಮೇಯರ್‌ ಗೌತಮ್‌ ಕುಮಾರ್‌ ಹೊರಗೆಡವಿದ್ದಾರೆ.

ಈ ಕುರಿತು ಬಿಬಿಎಂಪಿ ಮಹಾಪೌರ ಎಂ ಗೌತಮ್‌ ಕುಮಾರ್‌ ಅವರು 2020ರ ಸೆ.2ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಎಲ್‌ ಇ ಡಿ ಲೈಟಿಂಗ್‌ ಅಳವಡಿಸುವ ಸಂಬಂಧ ಶಾಪೂರ್ಜಿ ಪಲ್ಲೋಂಜಿ, ಎಸ್‌ ಎಂ ಎಸ್‌ ಇನ್ಫ್ರಾಸ್ಟಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈ ಲಿ ಒಕ್ಕೂಟ ಸಂಸ್ಥೆಗೆ ಟೆಂಡರ್‌ ಅನುಮೋದಿಸಿದೆ. ಆದರೆ ಶಾಪೂರ್ಜಿ ಪಲ್ಲೋಂಜಿ ಸಂಸ್ಥೆ ಸೀಮನ್ಸ್‌ ಸಂಸ್ಥೆಯೊಂದಿಗೆ ಜಂಟಿ ಸಮೀಕ್ಷೆ ನಡೆಸುತ್ತಿದೆ ಎಂದು ಖುದ್ದು ಮೇಯರ್‌ ಎಂ ಗೌತಮ್‌ ಕುಮಾರ್‌ ಅವರು ಹೊರಗೆಡವಿರುವುದು ಗೊತ್ತಾಗಿದೆ.

ಟೆಂಡರ್‌ ಒಕ್ಕೂಟ ಸಂಸ್ಥೆಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಸಾಮರ್ಥ್ಯದ ಮೇಲೆ ಗುತ್ತಿಗೆ ನೀಡಿದೆಯಾದರೂ ಈ ಗುತ್ತಿಗೆಗೆ ಸಂಬಂಧವೇ ಇಲ್ಲದ ಮತ್ತೊಂದು ಖಾಸಗಿ ಸಂಸ್ಥೆಯನ್ನು ಅವಲಂಬಿಸಿರುವುದು ಟೆಂಡರ್‌ ನಿಬಂಧನೆಗಳಿಗೆ ತದ್ವಿರುದ್ಧವಾಗಿದೆ ಎಂಬುದು ಮೇಯರ್‌ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ಶೇ.85.50ರ ಖಾತರಿ ವಿದ್ಯುತ್ ಉಳಿತಾಯ ಮಾಡಲಾಗುವುದು ಎಂಬುದರ ಮೇಲೆ ಶಾರ್ಪೂರ್ಜಿ ಪಲ್ಲೋಂಜಿ ಕಂಪನಿಗೆ ಟೆಂಡರ್‌ ದೊರೆತಿತ್ತು. ಆದರೆ ಈ ಕಂಪನಿಯು ಶೇ.85.50ರ ಖಾತರಿ ವಿದ್ಯುತ್ ಉಳಿತಾಯ ಮಾಡಿರುವ ಯಶಸ್ವಿ ಯೋಜನೆಗಳ ವಿವರಗಳನ್ನು ನೀಡಲು ಬಿಬಿಎಂಪಿ ಸೂಚಿಸಿತ್ತು. ಎಸ್ಕೋ ಸಂಸ್ಥೆಗೆ ಕಾರ್ಯಾದೇಶ ನೀಡಿ ಸುಮಾರು 12 ತಿಂಗಳುಗಳ ನಂತರ ಶೇ. 80.76 ಖಾತರಿ ವಿದ್ಯುತ್‌ ಉಳಿತಾಯ ಪತ್ರವನ್ನು ಬಿಬಿಎಂಪಿ ಪಡೆದಿದೆ.

ಆದರೆ ಅದು ಕೂಡ ಸರ್ಕಾರ ಅಥವಾ ಸರ್ಕಾರಿ ಸ್ವಾಮ್ಯದ ಪತ್ರವಲ್ಲ . ಕನಿಷ್ಠ ಶೇ. 85ರಷ್ಟು ಖಾತರಿ ವಿದ್ಯುತ್‌ ಉಳಿತಾಯದ ಅನುಭವ ಪತ್ರವನ್ನು ಪಡೆಯದೇ ಗುತ್ತಿಗೆಯನ್ನು ಅನುಮೋದಿಸಲಾಗಿದೆ ಎಂದು ಮೇಯರ್‌ ಪತ್ರ ಮುಖೇನ ಸರ್ಕಾರದ ಗಮನಕ್ಕೆ ತಂದಿದ್ದಾರೆ.

‘ಸಮುದ್ರ ಎಲಕ್ಟ್ರಾನಿಕ್‌ ಸಿಸ್ಟಂ ಪ್ರೈ ಲಿ. ಕಾಮಗಾರಿ ಅನುಷ್ಠಾನ ಸಂಸ್ಥೆಯಾಗಿದ್ದು, ಎಲ್‌ ಇ ಡಿ ಉತ್ಪಾದನಾ ಘಟಕ, ಅದರ ಸಾಮರ್ಥ್ಯ, ಕಾರ್ಖಾನೆ ಸ್ಥಳ ಇತರೆ ವಿವರಗಳನ್ನು ನೀಡಲು ಸೂಚಿಸಲಾಗಿತ್ತು. ಇಂತಹ ದೊಡ್ಡ ಮಟ್ಟದ ಟೆಂಡರ್‌ನಲ್ಲಿ ಇಂತಹ ಘಟಕವನ್ನು ಪಾಲಿಕೆ ಅಧಿಕಾರಿಗಳು ಪರಿವೀಕ್ಷಿಸಿ ಅವರ ಉತ್ಪಾದನಾ ಸಾಮರ್ಥ್ಯದ ಬಗ್ಗೆ ದೃಢೀಕರಿಸಬೇಕು. ಆದರೆ ಕಾರ್ಯಾದೇಶ ನೀಡಿ ಸುಮಾರು 15 ತಿಂಗಳು ಕಳೆದಿದ್ದರೂ ಸಹ ಘಟಕಗಳ ಪರಿಶೀಲನೆ ಮಾಡಿಲ್ಲ,’ ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಪತ್ರದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪವನ್ನು ಹೊರಗೆಡವಿದ್ದಾರೆ.

ಕಾರ್ಖಾನೆ ಸ್ಥಳ, ಉತ್ಪಾದನಾ ಘಟಕಗಳ ಪ್ರಸ್ತುತ ವಾಸ್ತವತೆಯನ್ನು ಪರಿಶೀಲಿಸದೇ ಟೆಂಡರ್ ಅನುಮೋದಿಸಲಾಗಿದೆಯಲ್ಲದೆ, ಇದೇ ಕಾರಣಕ್ಕೆ ಕಾನೂನುಬಾಹಿರವಾಗಿ ಸೀಮನ್ಸ್‌ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದೂ ಮೇಯರ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಯೋಜನೆ ಕುರಿತು ಬೇಸ್‌ ಲೈನ್‌ ಸಮೀಕ್ಷೆ ನಡೆಸಲು ಸ್ವತಂತ್ರ ಇಂಜಿನಿಯರ್ ಸಂಸ್ಥೆಯಾಧ ಪ್ರೈಸ್‌ ವಾಟರ್‌ ಹೌಸ್‌ ಕೂಪರ್ಸ್‌ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿತ್ತು. ಅಲ್ಲದೆ ಇದನ್ನು ಪಾಲಿಕೆ ಹಂತದಲ್ಲಿಯೇ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿತ್ತು. ಹೀಗಾಗಿ ಟೆಂಡಸರ್‌ ಅನುಮೋದನೆಗೆ ಕೌನ್ಸಿಲ್‌ ಸಭೆಗೆ ಮಂಡಿಸಬೇಕಿತ್ತು. ಆದರೆ ಇದನ್ನು ಕೌನ್ಸಿಲ್‌ ಸಭೆಗೆ ಮಂಡಿಸದೆಯೇ ಟೆಂಡರ್‌ ಅಂತಿಮಗೊಳಿಸಿರುವ ಅಧಿಕಾರಿಗಳು ಈ ಸಂಬಂಧ ಉಚ್ಛ ನ್ಯಾಯಾಲಯದ ನೀಡಿದ್ದ ಆದೇಶವನ್ನೂ ಮರೆಮಾಚಿದ್ದಾರೆ ಎಂಬುದು ಪತ್ರದಿಂದ ಗೊತ್ತಾಗಿದೆ.

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ಅಂಶಗಳನ್ನು ಮರೆಮಾಚಿರುವ ಕಾರಣ ಎಲ್‌ಇಡಿ ಲೈಟಿಂಗ್‌ ಅಳವಡಿಸಲು ಪಿಪಿಪಿ ಆಧಾರದ ಮೇಲೆ 10 ವರ್ಷಗಳ ಅವಧಿಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಪತ್ರದಲ್ಲಿ ಮೇಯರ್‌ ಕೋರಿದ್ದಾರೆ.

ಪಾಲಿಕೆ ವ್ಯಾಪ್ತಿಯ 4,85,000 ಸಾಂಪ್ರದಾಯಕ ಬೀದಿ ದೀಪಗಳ ಬದಲಿಗೆ ಪಿಪಿಪಿ ಆಧಾರದ ಮೇಲೆ ಎಲ್‌ ಇ ಡಿ ದೀಪಗಳನ್ನು ಅಳವಡಿಸಿ ಮತ್ತು ಅದರ ನಿರ್ವಹಣೆಯನ್ನು ಮಾಡುವ ಜವಾಬ್ದಾರಿಯನ್ನು ಎಸ್ಕೋ ಒಕ್ಕೂಟಕ್ಕೆ ನಿಗದಿಪಡಿಸಲಾಗಿತ್ತು. ಈ ಯೋಜನೆಯನ್ನು 5 ಹಂತದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದ ಬಿಬಿಎಂಪಿ, ಒಟ್ಟು 30 ತಿಂಗಳಲ್ಲಿ ಎಲ್ಲಾ ಬೀದಿದೀಪಗಳಿಗೆ ಎಲ್‌ ಇ ಡಿ ಅಳವಡಿಸಲು ಮುಂದಾಗಿತ್ತು.

Your generous support will help us remain independent and work without fear.

Latest News

Related Posts