ಬೆಂಗಳೂರು; ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾರ್ಥಿ ಸಹಾಯ ಹಸ್ತ ಹೆಸರಿನ ಯೋಜನೆಗೆ ಸಂಬಂಧಿಸಿದಂತೆ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಲೋಪಗಳು ಕಂಡು ಬಂದಿವೆ. ಈ ಟೆಂಡರ್ನ ಮೊತ್ತ 9 ಕೋಟಿ ಇದ್ದರೂ ಸಹ ಬಿಡ್ಗಳನ್ನು ಸಲ್ಲಿಸಲು ಅತ್ಯಲ್ಪ ಅವಧಿ ಎಂದರೇ ಕೇವಲ 9 ದಿನದ ಕಾಲಾವಕಾಶ ನೀಡಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯು ಅಕ್ರಮ ಎಸಗಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ ಟೆಂಡರ್ನಲ್ಲಿ ಹಲವು ಲೋಪಗಳು ನಡೆದಿವೆ ಎಂದು ಆಪಾದಿಸಿರುವ ಶ್ರೇಯಸ್ ಮಾರಳ್ಳಿಗೌಡ ಎಂಬುವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದಾರೆ. ಟೆಂಡರ್ ಆಹ್ವಾನಿಸುವುದರಿಂದ ಹಿಡಿದು ಇಡೀ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಲೋಪಗಳ ಕುರಿತು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಕೆಯಾಗಿರುವ ಈ ದೂರಿನ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಏನಿದು ಯೋಜನೆ?
ಈ ಯೋಜನೆಯು ಕ್ವಾಲಿಟಿ ಕಾಸ್ಟ್ ಬೇಸ್ಡ್ ಸಿಸ್ಟಂ (ಕ್ಯೂಸಿಬಿಎಸ್) ಆಧಾರದಲ್ಲಿ ಮೌಲ್ಯಮಾಪನ ಮಾಡುವ ಉದ್ದೇಶ ಹೊಂದಿದೆ. ಈ ಯೋಜನೆಯಿಂದ 90,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮತ್ತು ಈ ಯೋಜನೆಗೆ 9 ಕೋಟಿ ರು ವೆಚ್ಚವಾಗಲಿದೆ. ಈ ಯೋಜನೆಯು ಸಾರ್ವಜನಿಕವಾಗಿ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಟೆಂಡರ್ಗೆ ಸಂಬಂಧಿಸಿದ ಮೂಲ ಕಡತ ಮತ್ತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಪರಿಶೀಲಿಸಬೇಕು. ಮತ್ತು ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ದೂರುದಾರ ಶ್ರೇಯಸ್ ಮಾರಳ್ಳಿಗೌಡ ಎಂಬುವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.
9 ಕೋಟಿ ಮೌಲ್ಯದ ಟೆಂಡರ್- 9 ದಿನ ಕಾಲಾವಕಾಶ
ಈ ಟೆಂಡರ್ನ್ನು 2026ರ ಆಗಸ್ಟ್ 24ರಂದು ಪ್ರಕಟಿಸಲಾಗಿತ್ತು.

ಮೂಲ ಬಿಡ್ ಸಲ್ಲಿಕೆಗೆ 2026ರ ಸೆ.2ರಂದು ಕೊನೆಯ ದಿನಾಂಕವಾಗಿತ್ತು. ಟೆಂಡರ್ನ ಅಂದಾಜು ಮೌಲ್ಯ 9 ಕೋಟಿ ರು ಇದ್ದರೂ ಸಹ ಟೆಂಡರ್ ಸಲ್ಲಿಕೆಗೆ ಕೇವಲ 9 ದಿನಗಳಗಷ್ಟೇ ಸಮಯ ನೀಡಲಾಗಿತ್ತು. 2 ಕೋಟಿಗಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಕೆಟಿಪಿಪಿ ನಿಯಮಗಳು ನಿಯಮ 17ರ ಅಡಿಯಲ್ಲಿ ಟೆಂಡರ್ ಸಲ್ಲಿಕೆಗೆ ಸಂಬಂಧಿಸಿದ ಕನಿಷ್ಟ ಅವಧಿ ಹಾಗೂ ಆ ಅವಧಿಯನ್ನು ಕಡಿಮೆ ಮಾಡುವ ಸಂದರ್ಭಗಳ ಕುರಿತು ನಿರ್ದಿಷ್ಟ ನಿಯಮಗಳಿವೆ. ಅವಧಿಯನ್ನು ಕಡಿಮೆಗೊಳಿಸಿದ್ದಲ್ಲಿ ಸಮರ್ಥ ಮೇಲಾಧಿಕಾರಿಯ ಅನುಮೋದನೆ ಹಾಗೂ ಅದಕ್ಕೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು. ಇದು ಟೆಂಡರ್ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನಿಯಮಬದ್ಧತೆಗೆ ಪ್ರಮುಖವಾದ ಮಾನದಂಡ ಎಂದು ದೂರುದಾರ ಶ್ರೇಯಸ್ ಮಾರಳ್ಳಿಗೌಡ ಅವರು ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.
ಬಿಡ್ಗೆ ಅತೀ ಕಡಿಮೆ ಅವಧಿ ಏಕೆ?
ಟೆಂಡರ್ ದಾಖಲೆಗಳ ಪ್ರಕಾರ ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ಮೊದಲ ಬಾರಿಗೆ ಕೈಗೆತ್ತಿಕೊಳ್ಳುತ್ತಿದೆ. ಯೋಜನೆ ವ್ಯಾಪ್ತಿಯಲ್ಲಿ ಕಸ್ಟಮೈಸ್ ಮಾಡಿದ ದ್ವಿಭಾಷಾ ಲರ್ನಿಂಗ್ ಪೋರ್ಟಲ್, ಮೊಬೈಲ್ ಅಪ್ಲಿಕೇಷನ್, ಆನ್ಲೈನ್ ಸಂವಾದಾತ್ಮಕ ತರಗತಿಗಳು, ಅಧ್ಯಯನ ಸಾಮಗ್ರಿಗಳು, ಮೌಲ್ಯಮಾಪನಗಳು, ಪ್ರಶ್ನೆ ಬ್ಯಾಂಕ್ಗಳು, ಡ್ಯಾಶ್ ಬೋರ್ಡ್ಗಳು, ವಿಶ್ಲೇಷಣಾ ವ್ಯವಸ್ಥೆ ಹಾಗೂ 90,000 ವಿದ್ಯಾರ್ಥಿಗಳಿಗೆ ಒದಗಿಸುವ ಸೇವೆಯೂ ಸೇರಿದೆ. ಇಂತಹ ಹೊಸ ಹಾಗೂ ತಾಂತ್ರಿಕ, ಕಾರ್ಯಾಚರಣೆಯನ್ನು ಒಳಗೊಂಡಿರುವ ಈ ಸಾರ್ವಜನಿಕ ಯೋಜನೆಗೆ ಆರಂಭಿಕ ಹಂತದಲ್ಲೇ ಬಿಡ್ ಗೆ ಅತೀ ಕಡಿಮೆ ಅವಧಿ ನಿಗದಿಪಡಿಸಲಾಗಿದೆ.

‘ಎಲ್ಲಾ ಸಾಮರ್ಥ್ಯವಿರುವ ಸಂಸ್ಥೆಗಳಿಗೆ ಟೆಂಡರ್ ಷರತ್ತುಗಳನ್ನು ಅಧ್ಯಯನ ಮಾಡಲು ತಾಂತ್ರಿಕ ಪ್ರಸ್ತಾವನೆ ಸಿದ್ಧಪಡಿಸಲು ಮತ್ತು ಪರಿಣಾಮಕಾರಿಯಾಗಿ ಭಾಗವಹಿಸಲು ಸಮರ್ಪಕವಾದ ಅವಕಾಶ ನೀಡಿಲ್ಲವೇಕೆ,’ ಎಂದು ದೂರಿನಲ್ಲಿ ಪ್ರಶ್ನಿಸಿರುವುದು ತಿಳಿದು ಬಂದಿದೆ.
ಟೆಂಡರ್ ಸಲ್ಲಿಕೆಗೆ ನಿಗದಿಪಡಿಸಿದ್ದ ಕೊನೆಯ ದಿನಾಂಕದದೇ ಇಲಾಖೆಯು ತಿದ್ದುಪಡಿಗಳನ್ನು ಮಾಡಿ ಅಪ್ ಲೋಡ್ ಮಾಡಿತ್ತು. ಟೆಂಡರ್ನ್ನು ಪರಿಷ್ಕೃತಗೊಳಿಸಿದ್ದ ಇಲಾಖೆಯು ಇದಕ್ಕೂ ಒಂದು ದಿನವಷ್ಟೆ ಅವಧಿ ನೀಡಲಾಗಿತ್ತು. ಟೆಂಡರ್ನ ಐಟಿಬಿ ಕಾಯ್ದೆ 5.3ರ ಪ್ರಕಾರ ತಿದ್ದುಪಡಿಗಳನ್ನು ಪರಿಗಣಿಸಿ ಬಿಡ್ ಸಿದ್ಧಪಡಿಸಲು ನಿರೀಕ್ಷಿತ ಬಿಡ್ದಾರರಿಗೆ ಸಮಂಜಸವಾದ ಸಮಯ ನೀಡಬೇಕು. ತಿದ್ದುಪಡಿಗಳ ಮೂಲಕ ಅರ್ಹತೆ, ಹಣಕಾಸು ಮಾನದಂಡಗಳು, ತಾಂತ್ರಿಕ ಅಂಕಗಳ ವ್ಯವಸ್ಥೆ ಅಥವಾ ದಾಖಲೆಗಳ ಅವಶ್ಯಕತೆಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದರೇ ಅತ್ಯಲ್ಪ ಸಮಯದಲ್ಲಿ ಅದಕ್ಕೆ ಅನುಗುಣವಾಗಿ ಬಿಡ್ ಸಿದ್ದಪಡಿಸಲು ಅವಕಾಶ ನೀಡಿರುವುದನ್ನೂ ಪರಿಶೀಲನೆಗೆ ಒಳಪಡಿಸಬೇಕು ಎಂದು ಶ್ರೇಯಸ್ ಮಾರಳ್ಳಿಗೌಡ ಅವರು ದೂರಿನಲ್ಲಿ ಸರ್ಕಾರದ ಗಮನ ಸೆಳೆದಿರುವುದು ಗೊತ್ತಾಗಿದೆ.
ತಾಂತ್ರಿಕ ಪ್ರಸ್ತಾವನೆಗೆ ಅವಕಾಶ ನೀಡಲಾಗಿದೆಯೇ?
40 ಅಂಕಗಳನ್ನು ಒಳಗೊಂಡಿರುವ ತಾಂತ್ರಿಕ ಪ್ರಸ್ತಾವನೆಗೆ ಮತ್ತು ಅರ್ಹ ಬಿಡ್ ದಾರರಿಗೆ ಅವಕಾಶವನ್ನೂ ನೀಡಿರಲಿಲ್ಲ. ಟೆಂಡರ್ನಲ್ಲಿ ಅರ್ಹ ಬಿಡ್ದಾರರಿಗೆ ತಾಂತ್ರಿಕ ಪ್ರಸ್ತಾವಯನ್ನು ನೀಡುವ ವ್ಯವಸ್ಥೆ ಇದೆ. ಕ್ಲಾಸ್ 23.4 (ಬಿ) ಪ್ರಕಾರ ಅರ್ಹ ಬಿಡ್ದಾರರನ್ನು ತಾಂತ್ರಿಕ ಮೌಲ್ಯಮಾಪನ ಸಮಿತಿ ಮುಂದೆ ತಾಂತ್ರಿಕ ಪ್ರಸ್ತಾವನೆಯನ್ನು ಮಂಡಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ತಾಂತ್ರಿಕ ಮೌಲ್ಯಮಾಪನಕ್ಕೆ 100 ಅಂಕಗಳ ಗರಿಷ್ಠ ಮೌಲ್ಯವಿದೆ. ಆಯ್ಕೆಗೆ ಸಂಬಂಧಿಸಿದಂತೆ 40 ಅಂಕಗಳನ್ನು ಮೀಸಲಿಟ್ಟಿದೆ.

‘ಇದರಿಂದ ತಾಂತ್ರಿಕ ಪ್ರಸ್ತಾವನೆಯು ತಾಂತ್ರಿಕ ಮೌಲ್ಯಮಾಪನದ ಪ್ರಮುಖ ಭಾಗವಾಗಿದೆ. ಟೆಂಡರ್ ಹಂತಕ್ಕೆ ಅರ್ಹತೆ ಪಡೆದ ಪ್ರತಿಯೊಬ್ಬ ಬಿಡ್ದಾರರನ್ನೂ ವಾಸ್ತವವಾಗಿ ಆಹ್ವಾನಿಸಿ ಸಮಾನ ಅವಕಾಶ ನೀಡಲಾಗಿತ್ತೇ ಎಂಬುದನ್ನೂ ಸಹ ಸ್ವತಂತ್ರವಾಗಿ ಪರಿಶೀಲಿಸಬೇಕು,’ ಎಂದು ಶ್ರೇಯಸ್ ವಿವರಿಸಿರುವುದು ತಿಳಿದು ಬಂದಿದೆ.
ಬಿಡ್ದಾರರವಾರು ಅರ್ಹತಾ ಪರಿಶೀಲನಾ ಪಟ್ಟಿ, ತಾಂತ್ರಿಕ ಪ್ರಸ್ತಾವನೆಗೆ ಆಹ್ವಾನಿಸಲಾದ ಬಿಡ್ದಾರರ ಪಟ್ಟಿ, ತಾಂತ್ರಿಕ ಪ್ರಸ್ತಾವನೆಗೆ ನೀಡಿದ್ದ ನೋಟೀಸ್, , ದಿನಾಂಕ, ಸಮಯ, ಹಾಜರಾತಿ ದಾಖಲೆಗಳು, ಸಮಿತಿ ಸದಸ್ಯರ ವೈಯಕ್ತಿಕ ಅಂಕಪಟ್ಟಿ ಮತ್ತು ಒಟ್ಟಾರೆ ತಾಂತ್ರಿಕ ಪಟ್ಟಿ, ಹಣಕಾಸು ಬಿಡ್ಗೆ ಆಯ್ಕೆಯಾದ ಬಿಡ್ದಾರರ ಮೊಬೈಲ್ ಅಪ್ಲಿಕೇಷನ್ ಮತ್ತು ಲರ್ನಿಂಗ್ ಪೋರ್ಟಲ್ ಟೆಂಡರ್ ಅವಶ್ಯಕತೆಗಳಿಗೆ ಅನುಗುಣವಾಗಿದೆಯೇ ಎಂಬುದರ ಪರಿಶೀಲನೆ ನಡೆಯಬೇಕು ಎಂದು ಸರ್ಕಾರದ ಗಮನಸೆಳೆದಿರುವುದು ಗೊತ್ತಾಗಿದೆ.
‘ಹಣಕಾಸು ಮೌಲ್ಯಮಾಪನ ಹಂತಕ್ಕೆ ಆಯ್ಕೆಯಾದ ಕೆಲವು ಬಿಡ್ದಾರರ ಮೊಬೈಲ್ ಅಪ್ಲಿಕೇಷನ್/ಫ್ಲಾಟ್ಫಾರ್ಮ್ಗಳು ಟೆಂಡರ್ನ ತಾಂತ್ರಿಕ ಅವಶ್ಯಕತೆಗಳನ್ನು ನಿಜವಾಗಿ ಪೂರೈಸುತ್ತವೆಯೇ ಎಂಬ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಹೀಗಾಗಿ ಟೆಂಡರ್ನ ಪ್ರತಿಯೊಂದು ಕಡ್ಡಾಯ ತಾಂತ್ರಿಕ ಅವಶ್ಯಕತೆಯ ಬಗ್ಗೆ ಸ್ವತಂತ್ರವಾಗಿ ತಾಂತ್ರಿಕ ಪರಿಶೀಲನೆ ನಡೆಸಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಈಗಾಗಲೇ ಇರುವ ಮೊಬೈಲ್ ಅಪ್ಲಿಕೇಷನ್ನ್ನು ಆಧಾರವಾಗಿ ತೋರಿಸಿದ್ದರೇ ಅದರ ನೈಜ ಕಾರ್ಯಕ್ಷಮತೆ ಮತ್ತು ಲಭ್ಯತೆಯನ್ನು ಪರಿಶೀಲಿಸಬಹುದು. ಇದರಲ್ಲಿ ಆಪಲ್ ಆಪ್ ಸ್ಟೋರ್/ ಗೂಗಲ್ ಪ್ಲೇ ಲಿಸ್ಟಿಂಗ್, ಅದರ ಮಾದರಿ, ಗುಣ ಲಕ್ಷಣಗಳು, ಅದರ ಮಾಲೀಕತ್ವ, ಪರಿವಾನಿಗೆ ಹಾಗೂ ತಾಂತ್ರಿಕ ಬಿಡ್ನಲ್ಇ ಸಲ್ಲಿಸಿರುವ ಮಾದರಿಯ ಸಾಕ್ಷ್ಯವನ್ನು ಪರಿಶೀಲಿಸಬಹುದು. ಮತ್ತು ಎಲ್ಲಾ ಬಿಡ್ದಾರರಿಗೂ ಒಂದೇ ರೀತಿಯ ಪರಿಶೀಲನಾ ಮಾನದಂಡ ಅನ್ವಯವಾಗಿದೆಯೇ ಇಲ್ಲವೇ ಎಂಬ ಬಗ್ಗೆಯೂ ಮಾಹಿತಿಯೂ ಸಹ ಇಲ್ಲವಾಗಿದೆ ಎಂದು ದೂರುದಾರರು ವಿವರಿಸಿರುವುದು ಗೊತ್ತಾಗಿದೆ.
ವಿದ್ಯಾರ್ಥಿಗಳ ದಾಖಲಾತಿ 90,000 ಮೀರಿದ್ದಲ್ಲಿ ಆಯ್ಕೆಯಾದ ತರಬೇತಿ ಸಂಸ್ಥೆಯು ಹೆಚ್ಚುವರಿ ಅರ್ಹ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಸರ್ಕಾರಿ ಹಣಕಾಸಿನ ಬಾಧ್ಯತೆ ಇಲ್ಲದೇ ಅದೇ ತರಬೇತಿ ಸೇವೆಗಳನ್ನು ಪ್ರೋ-ಬೊನೋ ಆಧಾರದ ಮೇಲೆ ಒದಗಿಸಬೇಕು ಎಂದು ಟೆಂಡರ್ನಲ್ಲಿ ತಿಳಿಸಿದೆ. ಆದರೆ ಹೆಚ್ಚುವರಿ ವಿದ್ಯಾರ್ಥಿಗಳ ಸಂಖ್ಯೆಗೆ ಸ್ಪಷ್ಟವಾದ ಗರಿಷ್ಟ ಮಿತಿಯೇ ಇಲ್ಲ. ಹೀಗಾಗಿ ಇದೊಂದು ಮಹತ್ವವಾದ ವಾಣಿಜ್ಯ ಷರತ್ತಾಗಿದೆ. ಈ ಮಿತಿಯಿಲ್ಲದ ಹೆಚ್ಚುವರಿ ಬಾಧ್ಯತೆಯನ್ನು ಬಿಡ್ದಾರರು ತಮ್ಮ ಹಣಕಾಸು ದರಗಳಲ್ಲಿ ಹೇಗೆ ಪರಿಗಣಿಸಬೇಕು ಎಂದು ನಿರೀಕ್ಷಿಸಲಾಗಿತ್ತು. ಮತ್ತು ಎಲ್ಲಾ ಬಿಡ್ದಾರರಿಗೂ ಈ ಷರತ್ತನ್ನು ಸಮಾನವಾಗಿ ಅನ್ವಯಿಸಲಾಗಿತ್ತೇ ಎಂಬುದನ್ನೂ ಸಹ ಪರಿಶೀಲಿಸಬೇಕು ಎಂದು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.

‘ಹೀಗಾಗಿ ಟೆಂಡರ್ ಗೆ ಸಂಬಂಧಿಸಿದ ಸಂಪೂರ್ಣ ಕಡತ, ಕೆಪಿಪಿಪಿ ಎಲೆಕ್ಟ್ರಾನಿಕ್ ಆಡಿಟ್ ಟ್ರಯಲ್ ಮೂಲಕ ಸಂರಕ್ಷಿಸಬೇಕು. ಕನಿಷ್ಟ ಟೆಂಡರ್ ಅವಧಿ ಹಾಗೂ ಅದನ್ನು ಕಡಿಮೆ ಮಾಡಲು ಪಡೆದ ಅನುಮೋದನೆಯ ಪ್ರತಿಯನ್ನು ಪರಿಶೀಲಿಸಬೇಕು. 2026ರ ಸೆ.4 ಮತ್ತು ಸೆ.5ರ ಮಧ್ಯೆ ನಡೆದಿರುವ ತಿದ್ದುಪಡಿ ಪ್ರಕ್ರಿಯೆಗಳ ನಡುವೆ ಸಮಂಜಸ ಹಾಗೂ ಸಮಾನ ಸಮಯ ನೀಡಲಾಗಿತ್ತೇ ಎಂಬುದರ ಪರಿಶೀಲನೆ, ಟೆಂಡರ್ನಲ್ಲಿ ನಿಗದಿಪಡಿಸಿದ್ದ 40 ಅಂಕಗಳ ತಾಂತ್ರಿಕ ಪ್ರಸ್ತಾವಕ್ಕೆ ಅರ್ಹ ಪ್ರತಿಯೊಬ್ಬ ಬಿಡ್ದಾರನಿಗೂ ಅವಕಾಶ ನೀಡಲಾಗಿತ್ತೇ ಎಂಬುದರ ಪರಿಶೀಲನೆ ನಡೆಯಬೇಕು. ಹಣಕಾಸು ಮೌಲ್ಯಮಾಪನಕ್ಕೆ ಆಯ್ಕೆಯಾದ ಬಿಡ್ದಾರರು ಮತ್ತು ಎಲ್ಲಾ ಕಡ್ಡಾಯ ತಾಂತ್ರಿಕ ಅವಶ್ಯಕತೆಗಳ ಕುರಿತು ಸ್ವತಂತ್ರ ತನಿಖೆ, 90,000 ವಿದ್ಯಾರ್ಥಿಗಳ ಮಿತಿಯನ್ನು ಮೀರಿದ ಹಣಕಾಸಿನ ಲಾಭ ಇಲ್ಲದೆಯೇ ಅದರ ಬಾಧ್ಯತೆ ಮತ್ತು ಒಪ್ಪಂದಾತ್ಮಕ ಪರಿಣಾಮಗಳ ಪರಿಶೀಲನೆ,’ ನಡೆಸಬೇಕು,’ ಎಂದು ಶ್ರೇಯಸ್ ಮಾರಳ್ಳಿಗೌಡ ಅವರು ಕೋರಿರುವುದು ಗೊತ್ತಾಗಿದೆ.




