ಬೆಂಗಳೂರು; ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ₹ 225 ಕೋಟಿ ಹಣದ ಅವ್ಯವಹಾರ ಹಾಗೂ ಮೃತರ ಮತ್ತು ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಬಯಲಿಗೆಳೆದಿದ್ದ ಮಹಾಲೆಕ್ಕಪರಿಶೋಧಕರು ಮತ್ತು ಪ್ರಧಾನ ಮಹಾಲೇಖಪಾಲರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆಎಎಸ್ ಅಧಿಕಾರಿ ಎನ್ ಮಹೇಶ್ಬಾಬು ಅವರು ‘ಬೂಟ್ಲ್ಲಿ ಹೊಡೀಬೇಕು, ಆ ಬೋ….ಮಗನಿಗೆ,….ಎ ಜಿ ಯವನಿಗೆ,’ ಎಂದು ನಾಲಗೆ ಹರಿಬಿಟ್ಟಿದ್ದಾರೆ.
ಅಲ್ಲದೇ ದಾವಣಗೆರೆ ವಿಧಾನಸಭೆ ಉಪ ಚುನಾವಣೆ ನಡೆಯದೇ ಇದ್ದಿದ್ದರೇ 2 ತಿಂಗಳ ಹಣವೂ ಫಲಾನುಭವಿಗಳಿಗೆ ಬಿಡುಗಡೆಯಾಗುತ್ತಿರಲಿಲ್ಲ ಎಂದೂ ಬಾಯಿಬಿಟ್ಟಿದ್ದಾರೆ.
225 ಕೋಟಿ ಹಣ ವ್ಯವಹಾರ ಮತ್ತು ಮೃತರ, ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಪ್ರಕರಣವು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಈ ಬೆಳವಣಿಗೆ ನಡುವೆಯೇ ಇಂದಿನಿಂದ ವಿಧಾನಮಂಡಲ ಅಧಿವೇಶನವೂ ಆರಂಭವಾಗಿದೆ. ಇದರ ಮಧ್ಯೆಯೇ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎನ್ ಮಹೇಶ್ ಬಾಬು ಅವರು ನಾಲಗೆ ಹರಿಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಎನ್ ಮಹೇಶ್ ಬಾಬು ಅವರು ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವಧಿಯಲ್ಲಿಯೇ ಅವರ ಕಚೇರಿಯಲ್ಲಿಯೇ ಸಾಮಾಜಿಕ ಕಾರ್ಯಕರ್ತರು ಅವರನ್ನು ಲೋಕಾಭಿರಾಮವಾಗಿ ಮಾತಿಗೆಳೆದಿದ್ದರು. ಆ ಸಂದರ್ಭದಲ್ಲಿ ಮಹೇಶ್ ಬಾಬು ಅವರು ನಾಲಗೆ ಹರಿಬಿಟ್ಟಿರುವುದು ಗೊತ್ತಾಗಿದೆ. ಸಾಮಾಜಿಕ ಹೋರಾಟಗಾರನ ಹೆಸರನ್ನು ಗೌಪ್ಯವಾಗಿಡಲಾಗಿದೆ.
ಈ ವಿಡಿಯೋದಲ್ಲಿರುವ ಅಧಿಕಾರಿ ಎನ್ ಮಹೇಶ್ ಬಾಬು ಎಂದು ದಿ ಫೈಲ್ ಖಚಿತಪಡಿಸಿಕೊಂಡಿದೆ. ಸಾಮಾಜಿಕ ಕಾರ್ಯಕರ್ತರೊಂದಿಗೆ ಲೋಕಾಭಿರಾಮವಾಗಿ ಮಹೇಶ್ ಬಾಬು ಅವರು ನಡೆಸಿದ ಮಾತುಕತೆ ಪೈಕಿ ದಿ ಫೈಲ್ ಗೆ ಲಭ್ಯವಾಗಿರುವುದನ್ನು ಯಥಾವತ್ತಾಗಿ ಬರಹ ರೂಪದಲ್ಲಿ ಇಲ್ಲಿ ನೀಡಲಾಗಿದೆ.
ಮಹೇಶ್ ಬಾಬು : ನೋಡಿ, ಫೈಲ್ ಬರಲಿ, ಫೈಲ್ ಬಂದಾಗ ನೋಡೋಣ.
ಸಾಮಾಜಿಕ ಹೋರಾಟಗಾರ: ಯಾವಾಗ ಸಾರ್ ಬರೋದು?
ಮಹೇಶ್ ಬಾಬು : ಫೈಲ್ ಕೇಳಿದ್ದೀರಲ್ಲ ಈಗ, ನಾನು ಕೂಡ ಒಂದು ನಿಮಿಷ ಪುರಸೊತ್ತಿಲ್ಲ ನನಗೆ. ನನಗೆ ಇಲ್ಲಿ ಗೃಹಲಕ್ಷ್ಮಿ ಇದೆ, ಅದೆಲ್ಲಾ ಪೇಪರ್…
ಸಾಮಾಜಿಕ ಹೋರಾಟಗಾರ: ಗೃಹಲಕ್ಷ್ಮಿದು ಏನು ಸಾರ್ ಅದೂ ಆ ಲೆವೆಲ್ ಗೆ ಹೋಗಿಬಿಟ್ಟಿದೆ… ಯಾವ ಅಷ್ಟೊಂದು?
ಮಹೇಶ್ ಬಾಬು : ಬೂಟ್ನಲ್ಲಿ ಹೊಡೀಬೇಕು ಆ ಬೋ…ಮಗನಿಗೆ. ಎ.ಜಿ.ಯವನಿಗೆ, ರೀ, ಟೆಕ್ನಿಕಲ್ ಕ್ರೆಡಿಟ್ ಗೊತ್ತಾಗಲ್ವೇನ್ರಿ? ಅದು ಟೆಕ್ನಿಕಲ್ ಆಗಿ ಒಂದು ಸತಿ ಹೇಳಿದಾಗ, ತಲೆಯಲ್ಲಿ ಏನು ಐತೆ ಅಂತ ಗೊತ್ತಾ? ಯಾವನೋ ಹೇಳ್ತಾನೆ, ಅವನು ಕರೆಕ್ಟಾಗಿ ವಿವರಣೆ ಮಾಡೋ ಕೆಲಸ. 25,000೦ ಜನ, 2,500 ಕೋಟಿನ, ಆಲ್ಮೋಸ್ಟ್ 1 ಕೋಟಿ 30 ಲಕ್ಷ ಜನಕ್ಕೆ ದುಡ್ಡು ಕೊಡ್ತಾ ಇದ್ದೀವಿ ನಾವು. ಅದನ್ನ 72,000 ಕೋಟಿ ಖರ್ಚು ಮಾಡಿದ್ದೀವಿ, ಸುಳ್ಳು ಹೇಳ್ತಾರೆ ಇವರೆಲ್ಲಾ! ನಾನು ಹೇಳ್ತೀನಿ ಇವೆಲ್ಲಾ ಮನೆ ಹಾಳು ಮಾಡೋ ಕೆಲಸ. ಇವನಿಗೆ ರಾಜಕೀಯ ಮಾಡೋದು ಬಿಟ್ರೆ…
ಸಾಮಾಜಿಕ ಹೋರಾಟಗಾರ; ಅಲ್ಲ ಸಾರ್, ನಿಮ್ಮ ಜವಾಬ್ದಾರಿ…
ಮಹೇಶ್ ಬಾಬು : ನಾನು ಹೇಳ್ತೀನಿ ರಾಜಕೀಯ ಮಾಡೋದು ಬಿಟ್ರೆ ಬೇರೆ ಏನು ಗೊತ್ತಿಲ್ರಿ. ಜನಗಳಿಗೆ ನಾವು ಎದೆ ತಟ್ಟಿ ಕೆಲಸ ಮಾಡ್ತಾ ಇದ್ದೀವಿ… ನಾವಿಲ್ಲಿ.
ಸಾಮಾಜಿಕ ಹೋರಾಟಗಾರ: ಅಲ್ಲ ಅಲ್ಲ, ನೆನ್ನೆ ಫ್ರಾಡ್ ಆಗಿದೆ, ಈಗ…
ಮಹೇಶ್ ಬಾಬು : ನಾನು ನಿಜ ಹೇಳ್ತೀನಿ, ನಾನು ಚಾಲೆಂಜ್ ಮಾಡ್ತೀನಿ. ಒಂದು ಫ್ರಾಡ್ ತೋರಿಸಿ ಬಿಡಿ ನೋಡೋಣ.
ಸಾಮಾಜಿಕ ಹೋರಾಟಗಾರ: ನಮಗೆ ಫ್ರಾಡ್ ಆಗಿರೋದು, 3 ತಿಂಗಳು ದುಡ್ಡು ಫ್ರಾಡ್ ಆಗಿದೆ.
ಮಹೇಶ್ ಬಾಬು: 3 ತಿಂಗಳ ದುಡ್ಡಲ್ರಿ, … ಫೈನಾನ್ಸ್ ನಿಂದಾನೇ ಬಂದಿಲ್ಲ!
ಸಾಮಾಜಿಕ ಹೋರಾಟಗಾರ: ಅಲ್ಲ, ದುಡ್ಡೇ ಬರದೇ ಇದ್ರೆ ಫ್ರಾಡ್ ಹೆಂಗಾಗುತ್ತೆ? ಸಾರ್, 2 ತಿಂಗಳು ದುಡ್ಡು ಕೊಟ್ರಾ, ಇಲ್ವಾ?
ಮಹೇಶ್ ಬಾಬು : ಫೆಬ್ರವರಿ, ಮಾರ್ಚ್… ನೋಡಿ ಫೆಬ್ರವರಿ, ಮಾರ್ಚ್ ದುಡ್ಡು ಫೈನಾನ್ಸ್…
ಸಾಮಾಜಿಕ ಹೋರಾಟಗಾರ: ನಿಮಗ್ಯಾಕೆ ಬಂತು ಸಾರ್?
ಮಹೇಶ್ ಬಾಬು: ಒಂದು ನಿಮಿಷ ಕೇಳಿ. 2025 ರಲ್ಲಿ ಫೆಬ್ರವರಿ ಮತ್ತು ಮಾರ್ಚ್ ಪೇಮೆಂಟ್ ಫೈನಾನ್ಸ್ ನಿಂದಾನೇ ಬಂದಿಲ್ಲ.
ಸಾಮಾಜಿಕ ಹೋರಾಟಗಾರ: ಬಂದಿಲ್ಲ ಅಂತ ಹೇಗೆ ಸಾರ್ ಹೇಳ್ತೀರಾ? ನನ್ನ ಹತ್ತಿರ ದಾಖಲೆ ಇದೆಯಲ್ಲ… ಬಂದಿದೆ.
ಮಹೇಶ್ ಬಾಬು : ಯಾವುದು?
ಸಾಮಾಜಿಕ ಹೋರಾಟಗಾರ: ಎಫ್ಡಿಎ ನಲ್ಲಿ ತಗೊಂಡಿದ್ದಾರೆ…
ಮಹೇಶ್ ಬಾಬು : ನಾನು ಹೇಳ್ತೀನಿ ಒಂದು ನಿಮಿಷ ಇರ್ರಿ,… ನಿಮಗೇನು ಹಳೆ ಕೇಸ್ಗಳು ಏನು ಅಂತ ಗೊತ್ತಿಲ್ಲ. ಈ ಪ್ರಸೆಂಟ್ ಕೇಸ್ ನನ್ನ ಹತ್ತಿರ ಇದು ಮಾಡಬೇಡಿ, ಬಿಕಾಸ್ ಐ ನೋ…
ಸಾಮಾಜಿಕ ಹೋರಾಟಗಾರ: ನನಗೆ ಗೊತ್ತಿಲ್ಲ ಸಾರ್. ಈಗ ಅದನ್ನು ತಗೊಂಡು ಬಂದು ತಾನೇ ನಿಗಮದಲ್ಲಿ ದುಡ್ಡು ಇಟ್ಟಿದ್ದು?
ಮಹೇಶ್ ಬಾಬು : ಅಲ್ಲ ಅಲ್ಲ, ಅದು ಈ ಮಂತ್, ಈ ಸ್ಥಿತಿ ನೋಡಿ.
ಸಾಮಾಜಿಕ ಹೋರಾಟಗಾರ: ಅಲ್ಲ, ಈ ಸ್ಥಿತಿ ಅಲ್ಲ ಸಾರ್, ಫೆಬ್ರವರಿಯಲ್ಲಿ ಬಂದಿದ್ದ ದುಡ್ಡನ್ನ ನೀವು ಏಪ್ರಿಲ್, ಮೇ ನಲ್ಲಿ ಇಟ್ಟಿರೋದು… ಅದಕ್ಕೆ ದಾಖಲೆ ಇದೆ. ಎಫ್ಡಿಎ ನಲ್ಲಿ ಸರಕಾರ ಕೊಟ್ಟೈತೆ….ಸರಕಾರ ಕೊಟ್ಟೈತೆ…
ಮಹೇಶ್ ಬಾಬು : ಎಂಡಿ ಏನು ಮಾಡಿದ್ರು?
ಸಾಮಾಜಿಕ ಹೋರಾಟಗಾರ: ನೀವು ಅವತ್ತೇ ಇಟ್ಟಿದ್ದೀರಾ ತಾನೇ? ಎಲ್ಲಿ? ಇಲ್ಲಿ ಯಾಕೆ ಇಟ್ರಿ ಅಂತ ನನ್ನ ಪ್ರಶ್ನೆ?
ಮಹೇಶ್ ಬಾಬು : ಈ ಸತಿನೂ ಕೂಡ 5,000 ಕೋಟಿ ಇಟ್ಕೊಂಡಿದ್ದೀನಿ ನಾನು. 5,000 ದಲ್ಲಿ 2,500 ಕೋಟಿ ಖರ್ಚಾಗಿದೆ.
ಸಾಮಾಜಿಕ ಹೋರಾಟಗಾರ: ಅದು ನಿಮಗೆ ಹೊಸದಾಗಿ ಅಕೌಂಟ್ ಆಗೈತೆ, ನೀವು ಇಟ್ಕೊಂಡಿದ್ದೀರಾ.
ಮಹೇಶ್ ಬಾಬು: ಇದು ಕೂಡ, ನಾನು ಲಾಸ್ಟ್ ಟೈಮ್ ಇದನ್ನೇ ಹೇಳಿದೆ. ಈ ಸತಿನುವೇ, ಎಂಡಬ್ಲ್ಯೂಡಿಸಿ ಯಲ್ಲಿ ಐತೆ… ಅಕೌಂಟ್ ಇಲ್ಲಿಗೆ ಹಾಕ್ತೀವಿ, ಬೇಡ ಬೇಡ ಬೇಡ, ಫ್ರೆಶ್ ಅಕೌಂಟ್ ಬೇಕು ಅಂದಿದ್ದಕ್ಕೆ ಫ್ರೆಶ್ ಅಕೌಂಟ್ ಮಾಡಿದೆ.
ಸಾಮಾಜಿಕ ಹೋರಾಟಗಾರ: ಸಾರ್, ನಿಮ್ಮ ಹತ್ತಿರ ದುಡ್ಡು ಇದ್ದಮೇಲೆ ಕೊಡಬಹುದಾಗಿತ್ತಲ್ಲ? ಯಾಕೆ ಇನ್ನು ಇವತ್ತಿನವರೆಗೂ 3 ತಿಂಗಳದ್ದು ಪೆಂಡಿಂಗ್?
ಮಹೇಶ್ ಬಾಬು : ಈಗ ಯಾವ ಮಂತ್ಗೆ ಕೊಡಬೇಕು ಅಂತ ಅವರು ಹೇಳಿದ್ರು ಅವರು, ಫೈನಾನ್ಸ್ನವರು, ಫೈನಾನ್ಸ್ ಏನು ಬರೆದಿತ್ತು? ಏಪ್ರಿಲ್ 2025ಕ್ಕೆ ಕೊಡಿ ಅಂತ ಬರೆದಿತ್ತು. ಅಲ್ಲಿಗೆ ಫೆಬ್ರವರಿ, ಮಾರ್ಚ್ ಬಿಟ್ಟಾಯ್ತು. ಅರ್ಥ ಆಯ್ತಾ?
ಸಾಮಾಜಿಕ ಹೋರಾಟಗಾರ: ಕರೆಕ್ಟ್ ಸಾರ್.
ಮಹೇಶ್ ಬಾಬು : ಅರ್ಥ ಆಯ್ತಾ ಇಲ್ಲಾ? ಈಗ ಅಲ್ಲಿಗೆ ನೀವು, ನೀವೇ ತಾನೇ ಕೇಳ್ತಾ ಇದ್ರಿ?
ಸಂದರ್ಶಕ: ಇಲ್ಲ ಇಲ್ಲ, ನಾವು ಕೇಳೋದು ಫೆಬ್ರವರಿ, ಮಾರ್ಚ್ ಕೇಳಿದ್ದು.
ಮಹೇಶ್ ಬಾಬು: ಪೆಂಡಿಂಗ್ ಪೇಮೆಂಟ್?
ಸಾಮಾಜಿಕ ಹೋರಾಟಗಾರ: ಪೆಂಡಿಂಗ್ ಪೇಮೆಂಟ್.
ಮಹೇಶ್ ಬಾಬು: ಅವರಿಗೂ ಫೈನಾನ್ಸ್ನವರ ಆದೇಶ 2025-26 ನೇ ಸಾಲಿನಲ್ಲಿ ಏಪ್ರಿಲ್ ಗೆ ಕೊಡಿ. ನೀವು ಕೂಡ ಮಾರ್ಚ್ ಪೇಮೆಂಟ್ ಕೊಡಿ.
ಸಾಮಾಜಿಕ ಹೋರಾಟಗಾರ: ಅದೇ, ಇವಾಗ ನೀವು ಆ ದುಡ್ಡನ್ನ ಇವಾಗ ಇಲ್ಲಿಗೆ… ನೇರವಾಗಿ ಕೊಡ್ತಾ ಇದ್ರಲ್ಲ ಸಾರ್? ಇಲ್ಲಿಂದಾನೇ ನೇರವಾಗಿ ಡಿಬಿಟಿ ಆಗ್ತಾ ಇತ್ತು. ನೀವು ಯಾಕೆ ಹಿಂಗೆ ಸುತ್ತಿದ್ದು, ಡೈರೆಕ್ಟ್ ಹೋಗೋ ರೋಡ್ನ? ಇಲ್ಲಿ 4 ಜಿಲ್ಲೆ ಮಾಡಿದ್ರಿ, ಡಿವಿಷನ್ ಮಾಡಿದ್ರಿ, 4 ಡಿವೈಡ್ ಮಾಡಿದ್ರಿ, ಆಮೇಲೆ 31 ಡಿಸ್ಟ್ರಿಕ್ಟ್ ಮಾಡಿದ್ರಿ.
ಮಹೇಶ್ ಬಾಬು : ಏನು ಅಂತ ಅಂದ್ರೆ, ನಿಮಗೆ ಎಕ್ಸ್ಪೆಂಡಿಚರ್ ತೋರಿಸಬೇಕು. ಎಸ್ಸಿ/ಎಸ್ಟಿ… ಏನು ಆರ್ಡಿಪಿಆರ್ ಎಕ್ಸ್ಪೆಂಡಿಚರ್ ತೋರಿಸಬೇಕು. ಇಲ್ಲ ಅಂದ್ರೆ ಆರ್ಡಿಪಿಆರ್ ನಿಂದ ತಾಲೂಕ್ ಪಂಚಾಯತ್ಗೆ ಶಿಫ್ಟ್ ಮಾಡಬೇಕು. ಬಿಕಾಸ್, ಫಾರ್ ಎಕ್ಸಾಂಪಲ್… ಇವರ ಕೈಗೆ ಕೊಡ್ತೀವಿ. ಇವರಿಗೊಬ್ಬರು ಒಳಕೈ ಇರ್ತಾರೆ. ಇವರು ಅವರ ಕೈಯಲ್ಲೂ ಕೂಡ ಇಂಪಾರ್ಟೆನ್ಸ್ ಕೊಡೋಕೆ ಅವರಿಗೂ ಕೊಟ್ರಿ. ಈಗ ಲೆಕ್ಕ ಏನಾಯ್ತು, ತಾಲೂಕ್ ಪಂಚಾಯತ್ ನಿಂದ ಬರೋದನ್ನ ಜಿಲ್ಲಾ ಪಂಚಾಯತ್ ಎಕ್ಸ್ಪೆಂಡಿಚರ್ ಹೆಚ್ಚಾಯ್ತು. ತೋರಿಸುವಾಗ ಜಿಲ್ಲಾ ಪಂಚಾಯತ್ ಎಸ್ಸಿ/ಎಸ್ಟಿ ಮಂದಿಗೆ ಇಷ್ಟು ಕೊಡ್ತೀವಿ ಅಂತ ತೋರಿಸಬೇಕಾಗುತ್ತದೆ.
ಸಾಮಾಜಿಕ ಹೋರಾಟಗಾರ: ಅಲ್ಲಿಗೆ ಅಧಿಕಾರಿಗಳದ್ದೇ ತಾನೇ ಲ್ಯಾಪ್ಸ್? ಫಸ್ಟ್ ಏನೇ ಮಾಡಬಹುದಾಗಿತ್ತಲ್ಲ? ಅಯ್ಯೋ! 50,000 ಕೋಟಿ ಅಲ್ವಾ ಎಷ್ಟು? 70,000 ರೂಪಾಯಿ ಕೋಟಿ…
ಮಹೇಶ್ ಬಾಬು : ನಾನೇನ್ ಹೇಳಿಲ್ಲ? ಅಧಿಕಾರಿಗಳು, ಪೊಲಿಟಿಷಿಯನ್ಸ್ ಏನು ಹೇಳ್ತಾರೋ ಹಂಗೆ ಕೇಳ್ತಾರೆ. ಫಸ್ಟ್ ನಾವು ಸೆಂಟ್ರಲೈಸ್ ಆಗಿ ಕೊಡ್ತೀವಿ, ಹಿಂದೆ ಸ್ಟಾರ್ಟಿಂಗ್ 20 ಅಂತ. ತದನಂತರ ಏನು ಮಾಡಿದ್ರು, ತಾಲೂಕ್ ಪಂಚಾಯತ್ ಗೆ ಕೊಡಿ, ಸೋ ದ್ಯಾಟ್ ಎಕ್ಸ್ಪೆಂಡಿಚರ್ ಇನ್ಕರ್ ಆಗುತ್ತೆ, ಎಸ್ಸಿ/ಎಸ್ಟಿ ಮಂದಿಗೆ ಇಷ್ಟು ಖರ್ಚು ಮಾಡಿದ್ದೀವಿ ಅಂತ ತಾಲೂಕ್ ಪಂಚಾಯತ್ ಗೆ ಆಗುತ್ತೆ ಅಂತ ಹೇಳಿದ ಮೇಲೆ ನಾವು…
ಸಾಮಾಜಿಕ ಹೋರಾಟಗಾರ: ಸರಿ ಸಾರ್, ಈಗ ನಮಗೇನು ಬೇಕಿರೋದು, ಜನಗಳಿಗೆ 3 ತಿಂಗಳದ್ದು ಬಂದಿಲ್ಲ, 3 ತಿಂಗಳದ್ದು ಬಂದಿಲ್ಲ. ಈಗ ಅದನ್ನ ನಾವು ಯಾರನ್ನ ಕೇಳಬೇಕು?
ಮಹೇಶ್ ಬಾಬು : ನಾನೊಂದೇ ನಿಮಿಷ ಹೇಳಲಾ? ಅಲ್ಲಪ್ಪ, ೩ ತಿಂಗಳದ್ದು ಬಂದಿಲ್ಲ. ನಾನು ಯಾರನ್ನ ಕೇಳಲ್ಲ?
ಸಾಮಾಜಿಕ ಹೋರಾಟಗಾರ: ನಾವು ಯಾರನ್ನು ಕೇಳೋಣ?
ಮಹೇಶ್ ಬಾಬು: ನಿಯಮ ಕೇಳಿಕೊಳ್ಳಿ.
ಸಾಮಾಜಿಕ ಹೋರಾಟಗಾರ: ಅಲ್ಲ, ಇಲಾಖೆ ಎಂ.ಡಿ.
ಮಹೇಶ್ ಬಾಬು : ಸಿಎಂ ಮೇಲೆ ಐತೆ.
ಸಾಮಾಜಿಕ ಹೋರಾಟಗಾರ; ಸಿಎಂ ಮೇಲೆ ಐತೆ?
ಮಹೇಶ್ ಬಾಬು: ನಾವು.. ಪತ್ರಿಕೆ… ಇದನ್ನ, ಇದನ್ನ ನೀವೊಬ್ಬರೇ ಅಲ್ಲ, ಇದನ್ನ ಎಂಎಲ್ಎ ಗಳು ಕೇಳಿದ್ರು, ಕಲ್ಯಾಣ ಸಮಿತಿಯಲ್ಲಿ. ಅಂದರೆ We have written letter to the government. ಅದನ್ನ ಬಿಟ್ಟು ಇನ್ನೇನು ಮಾಡೋಕೆ ಆಗಲ್ಲ. ಹ್ಯಂಗೆ ಅಂದ್ರೆ, ಹೋಗಿ ನಿಂತ್ಕೋಬೇಕು ಫೈನಾನ್ಸ್ ಮುಂದೆ, ನಾನು ನಿಂತ್ಕೊಳ್ಳೋಕೆ ಆಗಲ್ಲ. ಸೀ.. ದಿಸ್ ಈಸ್ ನೋ ಡಿಪಾರ್ಟ್ಮೆಂಟ್. ನಾವು ಬರೆದಿದ್ದೀವಿ, ಅಲ್ಲಿ ದುಡ್ಡಿಲ್ಲ. ಫೈನಾನ್ಸ್ ಮುಂದೆ ಹೋಗಿ ಬಾಯಿ ಬಡ್ಕೊಂಡ್ರೆ 1 ರೂಪಾಯಿ ಸಿಗಲ್ಲ. ಸುಮ್ಮನೆ ಕಿತಾಪತಿ ಮಾಡೋರು ಮೈಕ್ ಅಲ್ಲಿ ಹೇಳೋರಲ್ಲ, ಕೊಟ್ಟುಬಿಡ್ತೀವಿ… ಯಾರೂ ಕೊಡಲ್ಲ. ಒಂದು ಸತಿ ಫೈನಾನ್ಷಿಯಲ್ ಇಯರ್ ಕ್ಲೋಸ್ ಆದಮೇಲೆ ಅದರಲ್ಲಿ ಏನು ಖರ್ಚು ಇರಲ್ಲ. ಆ ದುಡ್ಡನ್ನ… ಸಿದ್ದರಾಮಯ್ಯ ಸಾಹೇಬ್ರು ಬುದ್ಧಿವಂತಿಕೆಗೆ 5,000 ಕೋಟಿನ ಎತ್ಕೊಂಡು ಹೋಗಿಬಿದ್ರು. ಏಪ್ರಿಲ್ ಕೊಟ್ರು, ಮೇ ಕೊಡ್ತೀವಿ… Push ಮಾಡು ಇವಾಗ.
ಸಾಮಾಜಿಕ ಹೋರಾಟಗಾರ: ಅಲ್ಲ, ಅದೇ 2 ತಿಂಗಳದ್ದು ಏನೋ ಆಯ್ತು, ಇದರದ್ದು ಗೊತ್ತಿದ್ರೆ 11,12 ತಿಂಗಳದ್ದು ಕೊಟ್ರಿ…
ಮಹೇಶ್ ಬಾಬು : ಏನು ಮಾಡೋದು ರೀ? ನಾವೇನು ಮಾಡೋಣ? ಕೊಡ್ಲೇ ಇಲ್ಲ ಸಾಹೇಬ್ರು. ಅಲ್ಲಾ ಇರಿ, ಈ ಸತಿನೂ ಬರೆದ್ವಿ, ಈ ಸತಿನೂ ಬುದ್ಧಿವಂತಿಕೆಗೆ…
(ಫೋನ್ ಕರೆ ಬರುತ್ತದೆ, ಅಧಿಕಾರಿ ಫೋನ್ ನೋಡುತ್ತಾರೆ)
ಮಹೇಶ್ ಬಾಬು : ಈ ಪೆಂಡಿಂಗ್ ತೋರಿಸ್ತಾ ಇಲ್ಲ ಅಂತ.
(ಫೋನ್ನಲ್ಲಿ ಮಾತನಾಡುವುದು) ಹಲೋ, ಹೇಳಿ. ನಮಸ್ಕಾರ ಹೇಳಿ. ಹಾ, ಹಾ… ಏಯ್ ಎಲ್ಲಾ ಹಾಕಿದೆಯಪ್ಪ, ಎಲ್ಲಾ ಪುಶ್ ಮಾಡಿದೆ, K2 ನಲ್ಲಿದೆ. ಹ್ಮ್, ಅಟ್ಲೀಸ್ಟ್ ಇನ್ ಜನರಲ್ ನಾನು ಸಾಲಗಾರ ಆಗ್ತೀನಿ ಅನಿಸುತ್ತೆ.
(ಫೋನ್ ಕಟ್ ಮಾಡಿ ಮಾತನಾಡುವುದು) ಏನು ಹಿಂಸೆ ಕೊಡ್ತಾರೆ. ತಡೆ… ತಡೆ ಒಂದು ನಿಮಿಷ. ಹೆಂಗೆ ಸಾಲ ಕೇಳ್ತಾರೆ ನೋಡು ನನ್ನನ್ನ.
(ಮತ್ತೊಬ್ಬ ಸಿಬ್ಬಂದಿಗೆ ಫೋನ್ ನೀಡುತ್ತಾ) ತಗೋಯ್ಯಾ, ಪ್ರವೀಣ್ಗೆ ಕೊಡು ಫೋನ್. ಆ ಕೆಲವೆಲ್ಲಾ ನಾನು ಆನ್ಸರ್ ಮಾಡ್ತೀನಿ ಅಂತ, ಚೆಕ್ ಮಾಡಿ ಎಲ್ಲಿದೆ ಸ್ಟೇಟಸ್ ಅಂತ. ಪ್ರವೀಣ್? ಕೆಳಗಡೆ ಹೋದ್ರಾ, ಊಟಕ್ಕೆ? ಊಟಕ್ಕೆ ಹೋಗಿದ್ದಾನಾ? ತಗೋ ಇಲ್ಲಿ. ಸೌಭಾಗ್ಯ ಇದ್ದಾರಾ?
(ಮತ್ತೆ ಫೋನ್ನಲ್ಲಿ ಮಾತನಾಡುವುದು) ಹಲೋ, ಸೌಭಾಗ್ಯ? ಆಯ್ತು ಸ್ವಲ್ಪ ಹೊತ್ತು ಬಿಟ್ಟುಕೊಂಡು ಮಾಡಪ್ಪ. ಎಲ್ಲಾ ಊಟಕ್ಕೆ ಹೋಗಿದ್ದಾರೆ.
(ಫೋನ್ ಇಟ್ಟು ಸಂಭಾಷಣೆ ಮುಂದುವರಿಸುತ್ತಾರೆ) ಹಿಂಗ್ ಕೇಳ್ತಾರೆ ನೋಡಿ. 3 ವರ್ಷದಿಂದ ಹುದ್ದೆಗೆ ಯಾರೂ ಆಪರೇಟ್ ಮಾಡಿಲ್ಲ, ನಾನು ಬಂದಮೇಲೆ ಮಾಡಿದ್ದೀನಿ.
ಸಾಮಾಜಿಕ ಹೋರಾಟಗಾರ: ಏನು ಉದ್ಯೋಗಿನಿ ಅಂದ್ರೆ ಏನು ಸಾರ್?
ಮಹೇಶ್ ಬಾಬು: ಉದ್ಯೋಗಿನಿ ಸಾಲ ಕೊಡ್ಬೇಕು.
ಸಂದರ್ಶಕ: ಇನ್ನಾವಾಗ? ಯಾರೂ ಅರ್ಜಿನೇ ಹಾಕಿಲ್ಲ ನಮಗೆ ಕೊಟ್ಟೇ ಇಲ್ಲ.
ಮಹೇಶ್ ಬಾಬು: ಅಲ್ಲ, ಅದು ಅರ್ಜಿ ಎಂಎಲ್ಎ ನೇತೃತ್ವದಲ್ಲಿ… ಎಂಎಲ್ಎ ಮತ್ತೆ ಎಸ್ಸಿ/ಎಸ್ಟಿ ಮಂದಿ ಕೆಲವು ಇದಿದ್ದರೆ…
ಸಾಮಾಜಿಕ ಹೋರಾಟಗಾರ: ಅಲ್ಲ ಅಧಿಕಾರಿಗಳದ್ದು ಏನು ಪಾತ್ರ ಇಲ್ವಾ?
ಮಹೇಶ್ ಬಾಬು: ಅಲ್ಲ, ಉದ್ಯೋಗಿನಿ ಇದರಲ್ಲಿ ಅಧಿಕಾರಿಗಳದ್ದು ವಿವೇಚನೆ ಏನು ಇರಲ್ಲ.
ಸಾಮಾಜಿಕ ಹೋರಾಟಗಾರ: ಅಲ್ಲ, ಅಧಿಕಾರಿಗಳು ಟೆಕ್ನಿಕಲ್ ಆಗಿ ಸ್ಪಾಟ್ಗೆ ಹೋಗಿ… ಎಂಎಲ್ಎ ಸ್ಪಾಟ್ಗೆ ಹೋಗಲ್ಲ.
ಮಹೇಶ್ ಬಾಬು: ಅದನ್ನೆಲ್ಲಾ ಮಾಡ್ತಾರೆ, ಅದೆಲ್ಲಾ ಮಾಡ್ತಾರೆ, ವೆರಿಫಿಕೇಶನ್ ಮಾಡ್ತಾರೆ.
ಸಾಮಾಜಿಕ ಹೋರಾಟಗಾರ: ಆ… ಮಾಡಿಲ್ಲವಲ್ಲ ಸಾರ್.
ಮಹೇಶ್ ಬಾಬು: ಯಾಕೆ ಮಾಡಿಲ್ಲ?
ಸಂದರ್ಶಕ: ಮಾಡಿಲ್ಲ, ಆಮೇಲೆ ನಮ್ಮನ್ನ ಸಂಪರ್ಕನೂ ಮಾಡಿಲ್ಲ.
ಮಹೇಶ್ ಬಾಬು : ಅಪ್ಲಿಕೇಷನ್ ಹಾಕಿರ್ತಾರೆ, ನಾರ್ಮಲ್ ಆಗಿ ಹಾಕಿದ ಅರ್ಜಿ ಸೂಟಬಲ್ ಇದ್ರೆ ಎಂಎಲ್ಎ ನೂರು ಅರ್ಜಿ ಬಂದಿರುತ್ತೆ, ಎಂಎಲ್ಎ ಹೇಳಿದ್ದನ್ನ ಮಾಡಿರ್ತಾರೆ.
ಸಾಮಾಜಿಕ ಹೋರಾಟಗಾರ: ಮಾಡೋರೆಲ್ಲಾ ಮಾಡಿಲ್ಲ. ಎಂಎಲ್ಎ ಅದಕ್ಕೆ ಮಾಡಿಲ್ಲ, ಬಟ್ ಇವಾಗ ನಿಮಗೆ ನಾನು ಕೇಳೋದು ಏನು ಅಂದ್ರೆ, 3 ತಿಂಗಳು ಪೆಂಡಿಂಗ್ ಇದೆಯಲ್ಲ, ತಾವು ಎಫ್ಡಿಎ ಗೆ ಕೇಳ್ಬೇಕಾ? ಎಫ್ಡಿ… ನಿಮ್ಮನ್ನ ಕೇಳೋ ಹಾಗಿಲ್ಲ, ನಾವು ಅವರೇನು ಹೇಳ್ತಾರೆ, ನಾನು ಹಳೇದೆಲ್ಲಾ ಕೊಟ್ಟಿದ್ದೀನಿ ಎಫ್ಡಿ…
ಮಹೇಶ್ ಬಾಬು: ರೇಟಿಂಗ್ ತಗೊಂಡು ಬರೋಕೆ ಹೇಳಿ.
ಸಾಮಾಜಿಕ ಹೋರಾಟಗಾರ: ಅಲ್ಲ, ದಾಖಲೆ ಏನು ಐತಲ್ಲ?
ಮಹೇಶ್ ಬಾಬು: ರೇಟಿಂಗ್ ಇದೆ. ಕೊಟ್ಟಿರಿ, ಸಿಂಪಲ್ ಹೇಳ್ತೀನಿ… 2025ನೇ ಸಾಲಿನಲ್ಲಿ ಫೆಬ್ರವರಿ, ಮಾರ್ಚ್ ಕೊಡ್ಲಾ… ಈ ಸತಿ ನಿರ್ಮಲ ಕಟಾವಕರ್ ಮಾಡಿರೋದು ಆದೇಶ ನನ್ನ ಹತ್ತಿರ ಇದೆ, ಬಿಡುಗಡೆ ಮಾಡಿದ್ದೀನಿ ಆದೇಶವನ್ನು. ಅದನ್ನ, ಮಹಿಳಾ ಮತ್ತು ಅಭಿವೃದ್ಧಿ ನಿಗಮದಲ್ಲಿ ಏನು ಯುಡಿಸಿ ಅಂತ ಹೇಳಿದ್ದಾರೆ, ಆದೇಶ ಇದೆ.
ಸಾಮಾಜಿಕ ಹೋರಾಟಗಾರ: ಇಲ್ಲ ಸಾರ್, ದುಡ್ಡನ್ನ ಡಿಪಾಸಿಟ್ ಮಾಡೋಕೆ ಹೇಳ್ತಾರೆ. ಅದೇ ದುಡ್ಡೇ ತಾನೇ?
ಮಹೇಶ್ ಬಾಬು: ಹೌದು. ಆ ಮಂತ್ನ ಯುಟಿಲೈಜೇಶನ್ ಮಾಡಿಕೊಳ್ಳೋದಕ್ಕೆ ಲೆಟರ್ ಬರೀತೀವಿ ನಾವು. ಈ ಸತಿನೂ ಕೂಡ ನಮಗೆ ಮಾರ್ಚ್ ಪೇಮೆಂಟ್ ಆಗಿಲ್ಲ, ನಮಗೆ ಹಣ ಕೊಡಿ ಅಂತ ಬರೆದಿದ್ದೀವಿ. ಅವರು ಏನು ಮಾಡಿದ್ರು, ಏಪ್ರಿಲ್ ಪೇಮೆಂಟ್ ಮಾಡಿದ್ರು.
ಸಾಮಾಜಿಕ ಹೋರಾಟಗಾರ: ಈಗ ನೀವು ಹಳೆ ಪೆಂಡಿಂಗ್ದು ಪೇಮೆಂಟ್ನ ನೀವು ಕೇಳ್ತಾ ಇಲ್ಲ ಅನ್ನೋದು ಖಾತ್ರಿ ಇದೆ. ಯಾಕೆ 2 ತಿಂಗಳು ಪೆಂಡಿಂಗ್, ಅದನ್ನ ಅವರು ಕೇಳ್ತಾ ಇಲ್ಲ?
ಮಹೇಶ್ ಬಾಬು : ಹೌದು, ಈ ಸತಿನೂ ಕೇಳಿಲ್ಲ. ಹಳೆದ್ರಲ್ಲಿ ನಾನು ಡೈರೆಕ್ಟರ್ ಇರಲಿಲ್ಲ, ಅವರು ಕೇಳಿದ್ದಾರೆ. ಈ ಸತಿ ನಾನೇ ಡೈರೆಕ್ಟರ್ ಇರೋದು, ಮಾರ್ಚ್ ತಿಂಗಳು ಕೂಡ ಪತ್ರ ಬರೆದಿದ್ದೀವಿ.
ಸಾಮಾಜಿಕ ಹೋರಾಟಗಾರ: ಅಲ್ಲಿಗೆ ನೀವು ಎಷ್ಟು ತಿಂಗಳಿಗೆ ಕೇಳ್ತಾ ಇದ್ದೀರಾ ಒಟ್ಟಾರೆ?
ಮಹೇಶ್ ಬಾಬು: ನಾನು ಹಿಂದೆ 2 ತಿಂಗಳದ್ದು ಬರೆದಿದ್ದೆ ಮೊದಲೇ. ಇವಾಗ ಬರೆಯಲ್ಲ ಅದು. ಇವಾಗ 1 ತಿಂಗಳದ್ದು ಬಂದಿದೆ.
ಸಾಮಾಜಿಕ ಹೋರಾಟಗಾರ: ಈ 1 ತಿಂಗಳದ್ದು ಬರೆದಿದ್ದೀರಿ, ಕರೆಕ್ಟ್? ಓಕೆ, ಗುಡ್. ಹಳೆ 2 ತಿಂಗಳದ್ದು ಹ್ಯಂಗೆ…
ಮಹೇಶ್ ಬಾಬು: ಬರೆದಿದ್ದೀವಿ.
ಸಾಮಾಜಿಕ ಹೋರಾಟಗಾರ: ಬರೆದಿದ್ದೀರಾ, ಅದಕ್ಕೇನೂ ಉತ್ತರ ಇಲ್ಲ.
ಮಹೇಶ್ ಬಾಬು : ಫೈನಾನ್ಷಿಯಲ್ ಇಯರ್ ಕ್ಲೋಸ್ ಆದಮೇಲೆ ಸಿಗಲ್ಲ.
(ಅಧಿಕಾರಿ ನಗುತ್ತಾರೆ)
ಸಾಮಾಜಿಕ ಹೋರಾಟಗಾರ: ದಾವಣಗೆರೆ ಎಲೆಕ್ಷನ್ ಆಯ್ತಲ್ಲ, ಅದಕ್ಕೆ ನಿಮಗೆ… ಇಲ್ಲ ಅದೂ ಸಿಗಲಿಲ್ಲ.
ಮಹೇಶ್ ಬಾಬು: ದಾವಣಗೆರೆಯಲ್ಲಿ ಎಲೆಕ್ಷನ್ ಕರೆಕ್ಟ್ ಆಗಿ ಎಲೆಕ್ಷನ್ಗೆ ಇನ್ನೇನು 15 ದಿನ ಇದ್ದಾಗ ಆಯ್ತು. ಎಲೆಕ್ಷನ್ ಇರಲಿಲ್ಲ, ಅದೂ ಸಿಗ್ತಿರಲಿಲ್ಲ…
ಸಾಮಾಜಿಕ ಹೋರಾಟಗಾರ: ಈಗ ನಾವು ನೇರವಾಗಿ ಕೇಳಬೇಕಾಗಿರೋದು ಸರಕಾರದ ಮೇಲೆನೆ.
ಮಹೇಶ್ ಬಾಬು : ಕೊಡೆಲ್ಲಾ ಅಂತ ಅವರೇ ಅಧಿಕೃತವಾಗಿ ಆದಮೇಲೆ, ಸರಕಾರದಲ್ಲಿ ಬಿಟ್ರೆ ಇನ್ನೇನು ಬರೆಯೋಕೆ ಆಗಲ್ಲ. ನೀವೇ ಹೇಳ್ತಾ ಇದ್ದೀರಿ, ‘ಇನ್ನೇನು ಬರೆಯೋಕೆ ಆಗಲ್ಲ, ಫೈನಾನ್ಷಿಯಲ್ ಇಯರ್ ಮುಗಿದುಹೋಯ್ತು’… ಮತ್ತೆ ಎಲೆಕ್ಷನ್ ಬರೋ ತನಕ ಮತ್ತೆ…
ಸಾಮಾಜಿಕ ಹೋರಾಟಗಾರ: ಈಗ ಏನು ಸಾರ್ ಮಾಡೋದು? ಈಗ ನಮ್ಮದು ಆಯ್ತು, ಈ ಪ್ರಕರಣ ನಾವು ಮಾತಾಡ್ತೀವಿ… ನಮ್ಮ ಪ್ರಕರಣನ ನಿಮಗೆ ನಾನು…
ಈ ಸಂಭಾಷಣೆ ಕುರಿತು ದಿ ಫೈಲ್, ಮಹೇಶ್ ಬಾಬು ಅವರ ಪ್ರತಿಕ್ರಿಯೆ ಕೋರಿ ಇ-ಮೈಲ್ ಕಳಿಸಿತ್ತು. ‘ಸದರಿ ಪ್ರಸ್ತಾಪಿತ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇರುವುದಿಲ್ಲ,’ ಎಂದು ಪ್ರತಿಕ್ರಿಯಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಗೆ ಆರ್ಹರಾಗಿದ್ದ ಒಟ್ಟು ಫಲಾನುಭವಿಗಳಲ್ಲಿ ಮೃತ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿದೆ ಎಂಬ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು ನೀಡಿರುವ ಅಂಕಿ ಅಂಶಗಳಿಗೂ ರಾಜ್ಯಮಟ್ಟದ ಬ್ಯಾಂಕ್ಗಳ ಸಮಿತಿ (ಎಸ್ಎಲ್ಬಿಸಿ) ತುಸು ವ್ಯತ್ಯಾಸ ಕಂಡುಬಂದಿತ್ತು.
ಮೃತ ಫಲಾನುಭವಿಗಳಿಗೂ 2,000 ರುಪಾಯಿ ಪಾವತಿಯಾಗುತ್ತಿದೆ, ಇದರ ಮೊತ್ತವೇ 225 ಕೋಟಿ ಇದೆ ಎಂದು ಸಿಎಜಿಯು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದಿಂದ ಸ್ಪಷ್ಟೀಕರಣ ಬಯಸಿ ಪತ್ರ ಬರೆದಿತ್ತು. ಈ ಪತ್ರವನ್ನಾಧರಿಸಿ ಹಲವು ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿದ್ದವು. ಈ ವರದಿಗಳಿಗೆ ಸಂಬಂಧಿಸಿದಂತೆ ಇಲಾಖೆಯು ಬಿಡುಗಡೆಗೊಳಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ ಎಸ್ಎಲ್ಬಿಸಿಯನ್ನೂ ಉಲ್ಲೇಖಿಸಿ ಅಂಕಿ ಅಂಶಗಳನ್ನು ಒದಗಿಸಿತ್ತು.
ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.




