ಸ್ಯಾನಿಟೈಸರ್‌‌ ಖರೀದಿಯಲ್ಲಿ ಅಕ್ರಮ; ಸಚಿವ ಸುಧಾಕರ್‌ ಸೇರಿ 3 ಐಎಎಸ್‌ ಅಧಿಕಾರಿಗಳ ವಿರುದ್ಧ ದೂರು

ಬೆಂಗಳೂರು; ಆಂಧ್ರಪ್ರದೇಶ ಮೂಲದ ಎಸ್‌ಪಿವೈ ಆಗ್ರೋ ಇಂಡಸ್ಟ್ರೀಸ್‌ನಿಂದ 2,500 ರು. ದರದಲ್ಲಿ ಸ್ಯಾನಿಟೈಸರ್‌ ಖರೀದಿಸಿರುವ ಪ್ರಕರಣವೂ ಸೇರಿದಂತೆ ವಿವಿಧ ಕಂಪನಿಗಳಿಂದ ವಿವಿಧ ದರಗಳಲ್ಲಿ ಸ್ಯಾನಿಟೈಸರ್‌ ಖರೀದಿಸಿರುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಸೇರಿದಂತೆ ಮೂವರು ಐಎಎಸ್‌ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ.

ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮಗಳ ಕುರಿತು ದನಿ ಎತ್ತಿರುವ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ದುಬಾರಿ ದರದಲ್ಲಿ ಖರೀದಿಯಾಗಿರುವ ಸ್ಯಾನಿಟೈಸರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದಾಖಲೆಗಳ ಸಮೇತ ಮತ್ತೊಂದು ದೂರು ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ಡಾ ಕೆ ಸುಧಾಕರ್‌ ಅವರನ್ನು 7ನೇ ಪ್ರತಿವಾದಿಯನ್ನಾಗಿಸಿರುವ ಡಾ ಬಗಲಿ ಅವರು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಕಾರ್ಯದರ್ಶಿ ಪಂಕಜಕುಮಾರ್‌ ಪಾಂಡೆ ಮತ್ತು ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕಿ ಎನ್‌ ಮಂಜುಶ್ರೀ ಅವರನ್ನು ಇತರೆ ಪ್ರತಿವಾದಿಗಳನ್ನಾಗಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರ ಅಧ್ಯಕ್ಷತೆಯಲ್ಲಿ 2020ರ ಮಾರ್ಚ್‌ 30ರಂದು ನಡೆದಿದ್ದ ಸಭೆಯು ಆಂಧ್ರಪ್ರದೇಶ ಮೂಲದ ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ಗೆ 180 ಎಂ ಎಲ್ ಪ್ರಮಾಣಕ್ಕೆ ತಲಾ 90 ರು.ನಂತೆ ಒಟ್ಟು 30,000 ಯೂನಿಟ್‌, 2,500 ರು. ದರದಲ್ಲಿ 15,000 ಯೂನಿಟ್‌ಗಳ ಖರೀದಿಸಲು ಅನುಮೋದಿಸಿದೆ(KDL/PUR/239/2019-20/Dated 30-03-2020) ಎಂದು ಡಾ ಬಗಲಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಎಸ್‍ಪಿವೈ ಆಗ್ರೋ ಇಂಡಸ್ಟ್ರೀಸ್‍ನಿಂದ ಕೆಡಿಎಲ್‍ಡಬ್ಲ್ಯೂಸ್ 5 ಲೀಟರ್ ಪ್ರಮಾಣದ ಸ್ಯಾನಿಟೈಸರ್ ಕ್ಯಾನ್‍ನ್ನು ತಲಾ 2,500 ರು. ದರದಲ್ಲಿ ಖರೀದಿಸಿತ್ತು. ಇದೇ ಕಂಪನಿ ಆಂಧ್ರಪ್ರದೇಶಕ್ಕೆ 520 ರು. ದರದಲ್ಲಿ ತಲಾ 5 ಲೀಟರ್ ಕ್ಯಾನ್ ಸರಬರಾಜು ಮಾಡಿದೆ. ಆಂಧ್ರ ಮತ್ತು ಕರ್ನಾಟಕ ಸರ್ಕಾರದ ದರ ವ್ಯತ್ಯಾಸ 1,980 ರು. ಇದ್ದದ್ದನ್ನು ‘ದಿ ಫೈಲ್‌’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಅದೇ ರೀತಿ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ರಾಜ್ಯದ ಜಿಲ್ಲಾ ಮಟ್ಟದಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಸ್ಯಾನಿಟೈಸರ್‌ನ್ನು ಖರೀದಿಸಿರುವ ದರಕ್ಕೂ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ ಖರೀದಿಸಿರುವ ದರದಲ್ಲಿ ಭಾರೀ ವ್ಯತ್ಯಾಸವಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಮಂಗಳೂರಿನ ವೆನ್‍ಲಾಕ್‌ ಜಿಲ್ಲಾ ಆಸ್ಪತ್ರೆಯು 2020ರ ಮಾರ್ಚ್‌ 16ಕ್ಕೆ 500 ಎಂ ಎಲ್ ಪ್ರಮಾಣದ ಬಾಟಲ್‌ವೊಂದಕ್ಕೆ 117.01 ರು.ದರದಲ್ಲಿ (ಜಿಎಸ್‌ಟಿ ಸೇರಿದಂತೆ) ಒಟ್ಟು 2,37,395 ರು.ನಲ್ಲಿ 2,000 ಬಾಟಲ್‍ಗಳನ್ನು ಖರೀದಿಸಲು ಆದೇಶ ನೀಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯು ರಮಣ್ ಅಂಡ್ ವೇಲ್ ಕಂಪನಿಯಿಂದ 500 ಎಂ ಎಲ್ ಒಂದು ಬಾಟಲ್‍ಗೆ 121.97 ರು.ನಲ್ಲಿ ಒಟ್ಟು 50 ಬಾಟಲ್‌ಗಳನ್ನು 6,098 ರು.ದರದಲ್ಲಿ ಖರೀದಿಸಲು 2020ರ ಮಾರ್ಚ್‌ 16ರಂದೇ ಆದೇಶ ಹೊರಡಿಸಿತ್ತು.

ಬೆಂಗಳೂರಿನಲ್ಲಿರುವ ರಾಜೀವ್‌ಗಾಂಧಿ ಎದೆ ರೋಗಗಳ ಸಂಸ್ಥೆಯು 500 ಎಂ ಎಲ್‌ ಬಾಟಲ್‌ನ್ನು 142.24 ರು. ದರದಂತೆ ಒಟ್ಟು 2,300 ಬಾಟಲ್‌ಗಳನ್ನು 3,27,152 ರು.ದರದಲ್ಲಿ ಖರೀದಿಸಲು 2020ರ ಮಾರ್ಚ್‌ 7 ಮತ್ತು 17ರಂದು ಖರೀದಿ ಆದೇಶ ಹೊರಡಿಸಿದೆ ಎಂದು ಬಗಲಿ ಅವರು ದೂರಿನಲ್ಲಿ ದಾಖಲೆ ಸಮೇತ ವಿವರಿಸಿದ್ದಾರೆ.ಕೆಡಿಎಲ್‍ಡಬ್ಲಯೂಸ್‌ ಕರೆದಿದ್ದ ಟೆಂಡರ್‌ನಲ್ಲಿ ಮೂಲತಃ ಸ್ಯಾನಿಟೈಸರ್ ಉತ್ಪಾದಕರಾದ ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ (ಇಂಡೆಂಟ್ ನಂಬರ್ 628) 500 ಎಂಎಲ್‍ಗೆ 97.44 ರು. (ಜಿಎಸ್‍ಟಿ ಸೇರಿ) ನಮೂದಿಸಿ ಎಲ್ 1 ಆಗಿತ್ತು. ಖರೀದಿ ಆದೇಶ ಪಡೆದಿದ್ದ ಈ ಕಂಪನಿ ಸ್ಯಾನಿಟೈಸರ್‌ನ್ನು ಸರಬರಾಜು ಮಾಡಲಿಲ್ಲ. ಹೀಗಾಗಿ ಟೆಂಡರ್ ಷರತ್ತಿನ ಪ್ರಕಾರ ಎಲ್ 2 ರಮಣ್ ಅಂಡ್ ವೇಲ್ ಕಂಪನಿ (99 ರು.ಗೆ ಕೋಟ್ ಮಾಡಿತ್ತು) ಗೆ ಖರೀದಿ ಆದೇಶ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಹಲವು ಕೋಟಿ ನಷ್ಟವುಂಟಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಅದರೂ ಅಧಿಕಾರಿಗಳು ಪುನಃ ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ಗೆ 500 ಎಂಎಲ್‍ಗೆ ದರ ಹೆಚ್ಚಳ ಮಾಡಿ 108 ರು. ಗೆ ಖರೀದಿ ಆದೇಶ ನೀಡಿದ್ದಾರೆ. ಆದರೆ ಕಂಪನಿ ಈ ದರದಲ್ಲೂ ಸರಬರಾಜು ಮಾಡಲಿಲ್ಲ. ಪುನಃ 138 ರು.ಗೆ ಆದೇಶ ಪಡೆದುಕೊಂಡರು. ಆಗಲೂ ಸರಬರಾಜು ಮಾಡಲಿಲ್ಲ. ಕಡೆಗೆ 250 ರು.ಗೆ ಖರೀದಿ ಆದೇಶ ಹೊರಬೀಳುತ್ತಿದ್ದಂತೆ ಸ್ಯಾನಿಟೈಸರ್‌ ಸರಬರಾಜು ಮಾಡಿದೆ. ಇದರಲ್ಲಿ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯವಿದೆ ಎಂದು ದೂರಿನಲ್ಲಿ ಬಗಲಿ ಅವರು ತಿಳಿಸಿದ್ದಾರೆ.

ಈ ಕಂಪನಿ ಜತೆ ಮಾಡಿಕೊಂಡಿದ್ದ ದರ ಒಪ್ಪಂದ 15 ತಿಂಗಳವರೆಗೆ ಚಾಲ್ತಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿತ್ತು. ಆದರೂ 152.56 ಪೈಸೆಗೆ ಹೆಚ್ಚುವರಿ ದರದಲ್ಲಿ ಇದೇ ಕಂಪನಿಯಿಂದಲೇ ಸ್ಯಾನಿಟೈಸರ್‌ ಖರೀದಿಸಿದೆ. ದರ ಒಪ್ಪಂದವನ್ನು ಉಲ್ಲಂಘಿಸಿದ್ದರೂ ಕಪ್ಪು ಪಟ್ಟಿಗೆ ಸೇರಿಸದೇ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಅಲ್ಲದೆ, ರಾಮನಗರ ಮತ್ತು ಕಲ್ಬುರ್ಗಿಗೆ ಇದೇ ಕಂಪನಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಗುಣಮಟ್ಟದಿಂದ ಕೂಡಿಲ್ಲ ಎಂದು ಔಷಧ ನಿಯಂತ್ರಣ ಪ್ರಾಧಿಕಾರದ ಪರೀಕ್ಷೆಯಿಂದ ದೃಢಪಟ್ಟಿತ್ತು. ಕನಿಷ್ಠ 2 ಬ್ಯಾಚ್‌ನಲ್ಲಿ ಕಳಪೆ ಎಂದು ಕಂಡು ಬಂದರೆ ಟೆಂಡರ್‌ ಷರತ್ತುಗಳ ಪ್ರಕಾರ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಆದರೂ ಈ ಕಂಪನಿಯನ್ನೂ ಈವರೆವಿಗೂ ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Your generous support will help us remain independent and work without fear.

Latest News

Related Posts