ವೈದ್ಯಕೀಯ ಕಾಲೇಜುಗಳಲ್ಲಿ ಹೇಳೋರಿಲ್ಲ ಕೇಳೋರಿಲ್ಲ; ಹೆಚ್ಚಿನ ವೆಚ್ಚಕ್ಕೂ ಕಡಿವಾಣವಿಲ್ಲ

ಬೆಂಗಳೂರು; ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕಿಮ್ಸ್‌), ರಾಯಚೂರಿನ ರಾಜೀವ್‌ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ರಾಜ್ಯದ ಬಹುತೇಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಸರ್ಕಾರದ ಅನುಮೋದನೆ ಇಲ್ಲದೆಯೇ ಹೆಚ್ಚಿನ ವೆಚ್ಚ ಮಾಡುತ್ತಿರುವುದು ಬಹಿರಂಗವಾಗಿದೆ. ಹಾಗೆಯೇ ಆಯವ್ಯಯದ ಅಂದಾಜು ಮಿತಿಗಿಂತಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ವೆಚ್ಚ ಮಾಡುತ್ತಿವೆ.


ಕೋವಿಡ್‌ ಆರ್ಥಿಕ ಸಂಕಷ್ಟದಲ್ಲೂ ಹೆಚ್ಚುವರಿ ವೆಚ್ಚ ಮಾಡುತ್ತಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಡಳಿತ ಮಂಡಳಿಯ ಈ ಧೋರಣೆ, ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆ ಹೊರಿಸುವ ಸಾಧ್ಯತೆಗಳಿವೆ.


ರಾಜ್ಯದ ಹಲವು ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕೋವಿಡ್‌-19ರ ನಿರ್ವಹಣೆಗೆ ಸ್ಯಾನಿಟೈಸರ್‌, ಮಾಸ್ಕ್‌ ಸೇರಿದಂತೆ ವೈದ್ಯಕೀಯ ಪರಿಕರಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಿವೆ ಎಂಬ ಆರೋಪಕ್ಕೆ ಗುರಿಯಾಗಿರುವ ಬೆನ್ನಲ್ಲೇ ಅಂದಾಜು ಮಿತಿಗಿಂತಲೂ ಹೆಚ್ಚಿನ ವೆಚ್ಚ ಮತ್ತು ಅನುಮೋದನೆ ಇಲ್ಲದೆಯೇ ಮಾಡಿರುವ ವೆಚ್ಚದ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಆದರೆ ಈವರೆವಿಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿದು ಬಂದಿದೆ.


ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವೇತನ ಪಾವತಿ ಹೆಸರಿನಲ್ಲಿ ಹೆಚ್ಚುವರಿ ವೆಚ್ಚ ಮಾಡಲಾಗುತ್ತಿದೆ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಹೇಳುತ್ತಿವೆಯಾದರೂ, ಲಾಕ್‌ಡೌನ್‌ ಸಂದರ್ಭ ಮತ್ತು ಲಾಕ್‌ಡೌನ್‌ ತೆರವುಗೊಂಡ ಬಳಿಕವೂ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಪೂರ್ಣ ಪ್ರಮಾಣದಲ್ಲಿ ವೇತನ ಪಾವತಿಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.


ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಬಹುತೇಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ವೇತನ, ಔಷಧ, ರಾಸಾಯನಿಕಗಳ ಖರೀದಿ, ಕಚೇರಿ ವೆಚ್ಚ, ನಿರ್ವಹಣೆ ಸೇರಿದಂತೆ ಇನ್ನಿತರೆ ವೆಚ್ಚಗಳಿಗೆ ಅನುದಾನ ಬಿಡುಗಡೆ ಮಾಡಿ ಹೊರಡಿಸಿರುವ ಆದೇಶದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಹೆಚ್ಚುವರಿ ವೆಚ್ಚ ಮಾಡುತ್ತಿರುವುದು ತಿಳಿದು ಬಂದಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


‘ಸಾಮಾನ್ಯ ವೆಚ್ಚಗಳಿಗಾಗಿ ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ ಪಾವತಿಗಾಗಿ ಆಯವ್ಯಯದಲ್ಲಿ ಒದಗಿಸಲಾದ ಅಂದಾಜು ಮಿತಿಗಿಂತಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ವೆಚ್ಚ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ರೀತಿಯ ವೆಚ್ಚಗಳಿಗೆ ಆರ್ಥಿಕ ಸಮಿತಿ, ಆಡಳಿತ ಮಂಡಳಿ, ಸರ್ಕಾರದ ಅನುಮೋದನೆ ಇಲ್ಲದೇ ಹೆಚ್ಚುವರಿ ವೆಚ್ಚ ಮಾಡುತ್ತಿರುವುದರಿಂದ ಇದನ್ನು ಭರಿಸಲು ಸಾಧ್ಯವಿಲ್ಲ. ಹೆಚ್ಚುವರಿ ವೆಚ್ಚದ ಅಗತ್ಯವಿದ್ದಲ್ಲಿ ಸರ್ಕಾರದ ಹಾಗೂ ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ನಂತರವೇ ಹೆಚ್ಚುವರಿ ವೆಚ್ಚ ಮಾಡಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಸಂಸ್ಥೆಯ ಮುಖ್ಯಸ್ಥರೇ ಜವಾಬ್ದಾರಾಗುತ್ತಾರೆ,’ ಎಂದು ಆದೇಶದಲ್ಲಿ ಎಚ್ಚರಿಸಿದೆ.

ಒಪೆಕ್‌ಗೆ ಮೇ ಮತ್ತು ಜೂನ್ ತಿಂಗಳಿನ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ 2020ರ ಜುಲೈ 6ರಂದು ಹೊರಡಿಸಿರುವ ಆದೇಶದಲ್ಲಿ ಅನುದಾನ ಬಳಕೆ ಬಗ್ಗೆ ಸ್ಪಷ್ಟಪಡಿಸಿದೆ. ಈ ಆಸ್ಪತ್ರೆಯ ಸಿಬ್ಬಂದಿಯ ವೇತನಕ್ಕೆ 18.91 ಲಕ್ಷ ರು., ಸಾಮಾನ್ಯ ವೆಚ್ಚಗಳಿಗೆ 115.50 ಲಕ್ಷ ರು., ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವೇತನಕ್ಕೆ 26.66 ಲಕ್ಷ ರು., ಎಸ್‌ಸಿಪಿ ಯೋಜನೆಗೆ 1.00 ಲಕ್ಷ ರು., ಟಿಸಿಪಿ ಯೋಜನೆಗೆ 0.50 ಲಕ್ಷ ರು.ಗಳನ್ನು ಬಿಡುಗಡೆ ಮಾಡಿರುವುದು ಆದೇಶದಿಂದ ತಿಳಿದು ಬಂದಿದೆ.


ಅದೇ ರೀತಿ ಕೊಪ್ಪಳ ವೈದ್ಯಕೀಯ ಸಂಸ್ಥೆ(ಕಿಮ್ಸ್‌)ಗೆ 2020-21ನೇ ಸಾಲಿನ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಅನುಮೋದನೆ ಇಲ್ಲದೆ ಹೆಚ್ಚುವರಿ ವೆಚ್ಚ ಮತ್ತು ಮತ್ತು ಅಂದಾಜು ಮಿತಿಗಿಂತಲೂ ಹೆಚ್ಚು ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ವೆಚ್ಚ ಮಾಡುತ್ತಿದೆ ಎಂದು ಪುನರುಚ್ಛರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.


ಕಿಮ್ಸ್‌ಗೆ ವೇತನಕ್ಕೆಂದು 2.03 ಕೋಟಿ ರು., ಸಾಮಾನ್ಯ ಲೆಕ್ಕಶೀರ್ಷಿಕೆಗೆ 2.92 ಕೋಟಿ ರು., ಗುತ್ತಿಗೆ/ಹೊರಗುತ್ತಿಗೆ ಲೆಕ್ಕಶೀರ್ಷಿಕೆಗೆ 1.02 ಕೋಟಿ, ಎಸ್‌ಸಿಪಿ ಲೆಕ್ಕಶೀರ್ಷಿಕೆಗೆ 11.55 ಲಕ್ಷ ರು., ಟಿಸಿಪಿ 7.20 ಲಕ್ಷ ರು.ಗಳನ್ನು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts