ಬೆಂಗಳೂರು; ಹುಬ್ಬಳ್ಳಿಯ ಇನಾಮ ವೀರಾಪುರ ಗ್ರಾಮದಲ್ಲಿ ಈಚೆಗೆ ನಡೆದಿರುವ ಮರ್ಯಾದೆ ಹತ್ಯೆ ಪ್ರಕರಣದ ಕುರಿತು ತ್ವರಿತಗತಿಯಲ್ಲಿ ವಿಚಾರಣೆ ನಡೆಸದಿದ್ದಲ್ಲಿ ಕುಟುಂಬದ ಸದಸ್ಯರಿಗೆ ಸಮಾಜದ ಒತ್ತಡ ಹೆಚ್ಚಾಗಲಿದೆ. ಅಲ್ಲದೇ ದೀರ್ಘ ಕಾಲೀನ ವಿಚಾರಣೆಯಿಂದ ಪೀಡಿತರ ಕುಟುಂಬವು ಮಾನಸಿಕ ಯಾತನೆ ಅನುಭವಿಸುವ ಸಾಧ್ಯತೆಯಿದೆ ಎಂದು ನಾಗರಿಕ ಹಕ್ಕು ಪೊಲೀಸ್ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕ ಡಾ ಕೆ ರಾಮಚಂದ್ರರಾವ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಡಾ ಕೆ ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಅಮಾನತಾಗಿದ್ದಾರೆ. ಅಮಾನತಾಗಿ ಅತ್ಯಲ್ಪ ದಿನದಲ್ಲೇ ಮರ್ಯಾದೆ ಹತ್ಯೆ ಪ್ರಕರಣದ ಕುರಿತು ಡಾ ಕೆ ರಾಮಚಂದ್ರರಾವ್ ಅವರು ಸರ್ಕಾರಕ್ಕೆ ಬರೆದಿದ್ದ ಪತ್ರವೂ ಬಹಿರಂಗವಾಗಿದೆ. ಅಲ್ಲದೇ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಕುರಿತು ವಿಳಂಬವಾಗಿರುವ ನಡುವೆಯೇ ಈ ಪತ್ರವು ಮುನ್ನೆಲೆಗೆ ಬಂದಿದೆ.
2026ರ ಜನವರಿ 7ರಂದು ಬರೆದಿದ್ದ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ಅಂತರ್ಜಾತಿ ವಿವಾಹದ ಕಾರಣದಿಂದ ಯುವತಿಯೊಬ್ಬಳನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ತನಿಖೆಯಿಂದ ಕಂಡು ಬಂದಿದೆ. ಈ ಪ್ರಕರಣವು ಕ್ರಿಮಿನಲ್ ಸಂಚು, ಪ್ರಚೋದನೆ ಹಾಗೂ ಜಾತಿ ಆಧಾರಿತ ದೌರ್ಜನ್ಯ ಅಂಶಗಳನ್ನು ಒಳಗೊಂಡಿದೆ. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ತಡೆ ) ಕಾಯ್ದೆ ಅಡಿಯಲ್ಲಿ ಬರುವ ಗಂಭೀರ ಸ್ವರೂಪದ ಅಪರಾಧಗಳನ್ನುಒಳಗೊಂಡಿದೆ. ಈ ಪ್ರಕರಣದಲ್ಲಿ 14 ಜನ ಆರೋಪಿತರು ಕೃತ್ಯ ಎಸಗಿದ್ದಾರೆ ಎಂದು ದೂರು ಸಲ್ಲಿಕೆಯಾಗಿದೆ.
ಇಲ್ಲಿಯವರೆಗೆ 8 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿರುವುದು ಪತ್ರದಿಂದ ಗೊತ್ತಾಗಿದೆ.

ಈ ಪ್ರಕರಣವು ಸಾರ್ವಜನಿಕರಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದೆ. ಕುಟುಂಬದ ಸದಸ್ಯರನ್ನು ಒಳಗೊಂಡಂತೆ ಹಲವಾರು ಆರೋಪಿಗಳಿದ್ದಾರೆ. ಪ್ರಕರಣವು ಸಾಮಾಜಿಕ ಅತೀ ಸಂವೇದನಾಶೀಲ ಮತ್ತು ಕಾನೂನು ಪರವಾಗಿ ಸಂಕೀರ್ಣವಾಗಿದೆ. ಇದೊಂದು ಅತೀ ಗಂಭೀರ ಹಾಗೂ ಕ್ರೂರ ಅಪರಾಧವಾಗಿದೆ. ಶೀಘ್ರ ವಿಚಾರಣೆ ನಡೆದಲ್ಲಿ ಭವಿಷ್ಯದಲ್ಲಿ ಇಂತಹ ಅಪರಾಧಗಳು ನಡೆಯದಂತೆ ತಡೆಯುವ ಶಕ್ತಿಯುತ ಸಂದೇಶ ನೀಡುತ್ತದೆ ಎಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿರುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ವಿಚಾರಣೆಯು ವಿಳಂಬವಾದಲ್ಲಿ ಪಿರ್ಯಾದುದಾರರ ಆರೋಪಿತರು ಅಭಿಯೋಜನೆ ಪರ ಸಾಕ್ಷಿಗಳಿಗೆ ಬೆದರಿಕೆ, ಪ್ರಲೋಭನೆ ಮತ್ತು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯದಿಂದ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದ ರಾಮಚಂದ್ರರಾವ್ ಅವರು ಈ ಪ್ರಕರಣದಲ್ಲಿ ಸಂಚು ಕಂಡು ಬಂದಿದೆ. ಹೀಗಾಗಿ ಪ್ರಕರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿರಂತರ ವಿಚಾರಣೆಯ ಅವಶ್ಯಕತೆ ಇದೆ ಎಂದು ಸರ್ಕಾರದ ಗಮನಕ್ಕೆ ತಂದಿರುವುದು ಪತ್ರದಿಂದ ಗೊತ್ತಾಗಿದೆ.
‘ಇಂತಹ ಪ್ರಕರಣದಿಂದ ಸಾರ್ವಜನಿಕ ಶಾಂತಿ ಸೌಹಾರ್ದವು ಹದಗೆಡುವ ಸಂಭವವಿದೆ. ಶೀಘ್ರ ನ್ಯಾಯವು ಕಾನೂನು ಪ್ರಭುತ್ವದ ಮೇಲಿನ ಜನರ ವಿಶ್ವಾಸವನ್ನು ಬಲಪಡಿಸುತ್ತದೆ. ದೀರ್ಘ ಕಾಲದ ವಿಚಾರಣೆಯಿಂದ ಪೀಡಿತರ ಕುಟುಂಬವು ಮಾನಸಿಕ ಯಾತನೆ ಅನುಭವಿಸುವ ಸಾಧ್ಯತೆ ಇರುತ್ತದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಈ ಪ್ರಕರಣವನ್ನು ಶೀಘ್ರ ವಿಚಾರಣೆಗೆ ಒಳಪಡಿಸಿದ್ದೇ ಆದಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿಯನ್ನು ನಿಗ್ರಹಿಸುವ ಮಾದರಿ ನ್ಯಾಯ ಒದಗಿಸುತ್ತದೆ. ಅಲ್ಲದೇ ಅನಗತ್ಯ ಮುಂದೂಡಿಕೆ ಮತ್ತು ಪ್ರಕ್ರಿಯಾತ್ಮಕ ವಿಳಂಬಗಳು ಕಡಿಮೆಯಾಗುತ್ತವೆ. ಶಕ್ತಿ ವಾಹಿನಿ/ಭಾರತ ಸರ್ಕಾರದ 2018ರ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಮರ್ಯಾದೆ ಹತ್ಯೆ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಸೇರಿದಂತೆ ತಡೆಗಟ್ಟುವ ಪರಿಹಾರಾತ್ಮಕ ಮತ್ತು ಶಿಕ್ಷಾತ್ಮಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಸರ್ಕಾರದ ಗಮನ ಸೆಳೆದಿರುವುದು ಗೊತ್ತಾಗಿದೆ.

ಅಲ್ಲದೇ ಈ ಪ್ರಕರಣದಲ್ಲಿ ನೊಂದ ಸಂತ್ರಸ್ತರಿಗೆ ಕಾನೂನು ನೆರವು ಮತ್ತು ರಕ್ಷಣೆ ನೀಡುವಲ್ಲಿ ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಸಮಾಜ ಕಲ್ಯಾಣ ಇಲಾಖೆಯೂ ಸಹ 2026ರ ಜನವರಿ 6ರಂದು ನಿರ್ದೇಶನ ನೀಡಿದೆ. ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.

ಹುಬ್ಬಳ್ಳಿ ತಾಲೂಕು ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಘಟನೆಯು, ಭಾರತದ ಸಂವಿಧಾನದ ವಿಧಿ 14,15,37, 21ರ ಘೋರ ಉಲ್ಲಂಘನೆಯಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 2015ರ ತಿದ್ದುಪಡಿ ಕಾಯ್ದೆಯಡಿಯಲ್ಲಿಯೂ ಅಪರಾಧವಾಗಿದೆ. ಈ ಘಟನೆ ನಡೆದ ಬಳಿಕವೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ತಹಶೀಲ್ದಾರ್ ಅವರು ಕಾನೂನುಬದ್ಧವಾಗಿರುವ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ನಿಭಾಯಿಸಿಲ್ಲ. ಹಲವು ಲೋಪಗಳನ್ನು ಎಸಗಿದ್ದಾರೆ ಎಂದು ಸಂಜೀವ ಹನುಮಂತಪ್ಪ ಬಂಡಿವಡ್ಡರ ಅವರು 2025ರ ಡಿಸೆಂಬರ್ 29ರಂದು ದೂರು ನೀಡಿದ್ದರು.

ಈ ಘಟನೆ ನಡೆದ ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಸಹ ಯಾವುದೇ ಕರೆಗಳಿಗೆ ಸ್ಪಂದಿಸಿಲ್ಲ. ಗಂಭೀರ ಪ್ರಕರಣವಾಗಿದ್ದರೂ ಕೂಡ ಮೂರು ದಿನಗಳ ನಂತರ ಗಾಯಾಳುಗಳನ್ನು ನೋಡಲು ಬಂದಿದ್ದಾರೆ. ಮಾನ್ಯಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂಜೀವ ಬಂಡಿವಡ್ಡರ ಅವರು ದೂರಿರುವುದು ಗೊತ್ತಾಗಿದೆ.

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು 2026ರ ಜನವರಿ 16ರಂದು ನಡೆದಿದ್ದ ಸಭೆಗೆ ಸಮಾಜ ಕಲ್ಯಾಣ ಇಲಾಖೆಯು ಈ ಪ್ರಕರಣದ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ. ಇದರ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.

ನೊಂದ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಧನ ಮಂಜೂರು ಮಾಡಲಾಗಿದೆ. ಮಹಿಳಾ ಸಂತ್ರಸ್ತರಿಗೆ ತಲಾ 1,00,000 ಗಳಂತೆ ನಾಲ್ವರು ಪುರುಷರಿಗೆ 25,000 ರು. ಗಳಂತೆ ಒಟ್ಟು 5,00,000 ರು.ಗಳ ಪರಿಹಾರ ಧನ ಮಂಜೂರು ಮಾಡಲಾಗಿದೆ. ಸಂತ್ರಸ್ತರ ಕುಟುಂಬಕ್ಕೆ 3 ತಿಂಗಳ ಆಹಾರ ಸಾಮಗ್ರಿಗಳನ್ನು ಸಮಾಜ ಕಲ್ಯಾಣ ಇಲಾಖೆಯು ಪೂರೈಸಿದೆ ಎಂದು ಸಮಾಜ ಕಲ್ಯಾಣ ಇಲಾಖೆಯು ವಿಧಾನಮಂಡಲದ ಸಮಿತಿಗೆ ಮಾಹಿತಿ ಒದಗಿಸಿದೆ.

ಯಲ್ಲಪ್ಪ ದೇವಪ್ಪಾ ದೊಡ್ಡಮನಿ, ಸಂಗೀತಾ ಯಲ್ಲಪ್ಪ ದೊಡ್ಡಮನಿ, ರೇಣುಕಾ ಮರಿಯಪ್ಪ ದೊಡ್ಡಮನಿ, ಉವಮ್ಮಾ ಮರಿಯಪ್ಪ ದೊಡ್ಡಮನಿ, ಅನನ್ಯಾ ಮರಿಯಪ್ಪ ದೊಡ್ಡಮನಿ, ಮರಿಯಪ್ಪ ದೇವಪ್ಪ ದೊಡ್ಡಮಲನಿ, ವಿವೇಕಾನಂದ ಮರಿಯಪ್ಪ ದೊಡ್ಡಮನಿ, ಸುನೀಲ ಬಸವರಾಜ ಹರಿಜನ ಇವರಿಗೆ ತಲಾ 2 ಲಕ್ಷ ರು.ಗಳಂತೆ ಒಟ್ಟಾರೆ 16.00 ಲಕ್ಷ ರು ಗಳನ್ನು ಇಲಾಖೆಯು ನೀಡಿದೆ. ಹಾಗೆಯೇ ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸರ್ಕಾರವು ಅನುಮತಿ ನೀಡಿದೆ ಎಂದು ಸಮಿತಿಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ.

ಇನಾಂ ವೀರಾಪುರ ಗ್ರಾಮದಲ್ಲಿ ಒಟ್ಟಾರೆ 635 ಮಂದಿ ಇದ್ದಾರೆ. ಇದರಲ್ಲಿ 325 ಪುರುಷರು, 310 ಮಹಿಳೆಯರಿದ್ದಾರೆ. ಈ ಪೈಕಿ 98 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ.

157 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ಧಾರೆ. 99 ಮಂದಿ ಮುಸ್ಲಿಂ ಜನಸಂಖ್ಯೆ ಇದ್ದರೇ ಲಿಂಗಾಯತ ಜಾತಿಗೆ ಸೇರಿದವರು 281 ಮಂದಿ ಇದ್ದಾರೆ ಎಂಬ ಅಂಕಿ ಅಂಶಗಳನ್ನೂ ಸಮಿತಿಗೆ ನೀಡಿರುವುದು ಗೊತ್ತಾಗಿದೆ.









