ಸ್ಥಿರಾಸ್ತಿಯ ಕಡಿಮೆ ಮೌಲ್ಯಮಾಪನ; ಡಿಎಲ್‌ಎಫ್‌, ಬೆಂಗಳೂರು ಡಿವೈನಿಟಿ ಪರ ಆದೇಶ, ಬಹುಕೋಟಿ ನಷ್ಟ

ಬೆಂಗಳೂರು: ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಪಾಲುದಾರಿಕೆಯ ಡಿಎಲ್‌ಎಫ್‌ ಕಂಪನಿಯಿಂದ ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯು ಕ್ರಯಕ್ಕೆ ಪಡೆದಿದ್ದ  6 ಎಕರೆ 8 ಗುಂಟೆ ವಿಸ್ತೀರ್ಣದ ಸ್ಥಿರಾಸ್ತಿಯ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆಗೊಳಿಸಿರುವುದು ಇದೀಗ ಬಹಿರಂಗವಾಗಿದೆ.

 

ಉಪ ನೋಂದಣಾಧಿಕಾರಿಗಳು, ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯ  6 ಎಕರೆ 8 ಗುಂಟೆ ವಿಸ್ತೀರ್ಣದ ಸ್ಥಿರಾಸ್ತಿಯನ್ನು ಸರ್ಕಾರಿ ಮಾರ್ಗಸೂಚಿ ಮೌಲ್ಯಕ್ಕಿಂತಲೂ ಕಡಿಮೆ ಮೌಲ್ಯಮಾಪನ ಮಾಡಿದ್ದಾರೆ. ಮತ್ತು ಕೆಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ವಿಶೇಷವೆಂದರೇ ಈ ಪ್ರಕರಣದಲ್ಲಿನ ಸ್ಥಿರಾಸ್ತಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ  ಕಡಿಮೆ ಮೌಲ್ಯಮಾಪನ ಮಾಡಲಾಗಿತ್ತು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದೂರು ಸಲ್ಲಿಕೆಯಾಗಿದೆ. ಈ ದೂರನ್ನಾಧರಿಸಿ ಈಗಿನ ಕಾಂಗ್ರೆಸ್‌ ಸರ್ಕಾರವೂ ತನಿಖೆ ನಡೆಸಲು ಮೀನಮೇಷ ಎಣಿಸುತ್ತಿದೆ.

 

ಇನ್ಫೋಸಿಸ್‌ ಮಾರಾಟ ಮಾಡಿದ ಭೂಮಿಯನ್ನು ಕೆಲವು ಉಪನೋಂದಣಾಧಿಕಾರಿಗಳು ಅಕ್ರಮವಾಗಿ ನೋಂದಣಿ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಡಿಎಲ್‌ಎಫ್‌ನಿಂದ ಕ್ರಯಕ್ಕೆ ಪಡೆದಿದ್ದ ಜಮೀನಿನ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಉಪ ನೋಂದಣಾಧಿಕಾರಿಗಳ ರಕ್ಷಣೆಗೆ ನಿಂತಿದೆ.

 

ಪುಷ್ಪಲತಾ ಎಂಬುವರು ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇಗೌಡ, ಮುಖ್ಯ ಕಾರ್ಯದರ್ಶಿಗೆ ದಾಖಲೆ ಸಹಿತ 2025ರ ಅಕ್ಟೋಬರ್‍‌ 27ರಂದೇ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಒಳಾಡಳಿತ , ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗೆ ರವಾನಿಸಿದೆ. ಈ ದೂರು ಮತ್ತು ಆಸ್ತಿ ದಾಖಲೆಗಳು, ಸೇಲ್‌ ಡೀಡ್‌ಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ವರ್ತೂರು ನರಸೀಪುರ ಗ್ರಾಮದಲ್ಲಿರುವ ಸರ್ವೆ ನಂಬರ್ 1, 2, 3, 4, 5, 6,7,8,9, 11, 12, 13,15 ಮತ್ತು 16, 17,18,19,20,21,22,23,24,25,26,27, 28,29,31 ರಲ್ಲಿನ ಸ್ಥಿರಾಸ್ತಿಗಳ ನೋಂದಣಿ ಸಂದರ್ಭದಲ್ಲಿ ಡಿಎಲ್‌ಎಫ್‌ ಮತ್ತು ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಗೆ ಪರವಾಗಿ ಮತ್ತು  ಉದ್ದೇಶಪೂರ್ವಕವಾಗಿ ಕಡಿಮೆ ಮೌಲ್ಯಮಾಪನ ಮಾಡಲಾಗಿದೆ. ಇದರಿಂದಾಗಿ  ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿನಷ್ಟು ನಷ್ಟವುಂಟಾಗಿದೆ ಎಂದು ಆರೋಪಿಸಲಾಗಿದೆ.

 

ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಉಪ ನೋಂದಣಾಧಿಕಾರಿಗಳಾದ ಸತೀಶ್ ಕುಮಾರ್ ಮತ್ತು ಎ ಎನ್ ಭಾರತಿ ಎಂಬುವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.

 

 

 

 

ಸ್ಥಿರಾಸ್ತಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯಂತೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ನಿಗದಿಪಡಿಸುವಲ್ಲಿ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಉಪ ನೋಂದಣಾಧಿಕಾರಿ ಭಾರತಿ ಮತ್ತು ಸತೀಶ್‌ ಅವರ ವಿರುದ್ಧ ವಿಚಾರಣೆ ನಡೆಯಬೇಕು ಮತ್ತು ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಬೇಕು ಎಂದೂ ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.

 

ಈ ದೂರು ಸಲ್ಲಿಕೆಯಾಗುವ ಮುನ್ನವೇ ಸರ್ವೆ ನಂಬರ್ 12, 13,15 ಮತ್ತು 16ರಲ್ಲಿ 06 ಎಕರೆ 8 ಗುಂಟೆ ವಿಸ್ತೀರ್ಣದ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಶಾಂತಿ ನಗರ ವಲಯದ ಉಪ ನೋಂದಣಾಧಿಕಾರಿಗಳು ಇದೇ ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿ ವಿರುದ್ಧ ಜಯನಗರ ನೋಂದಣಿ ಜಿಲ್ಲೆ ನ್ಯಾಯಾಲಯದಲ್ಲಿ 2022ರಲ್ಲಿ ದಾವೆ ಹೂಡಿದ್ದರು.

 

ಈ ದಾವೆಯನ್ನು ಆಲಿಸಿದ್ದ ಜಿಲ್ಲಾ ನೋಂದಣಾಧಿಕಾರಿಗಳಾದ ಎ ಎನ್ ಭಾರತಿ ಅವರು ಚಾಲ್ತಿ ಮಾರುಕಟ್ಟೆ ಮೌಲ್ಯ ಮತ್ತು ದಾಖಲಾತಿಗಳಲ್ಲಿ ಇದ್ದಂತಹ ಅಂಕಿ ಅಂಶಗಳ ಅನ್ವಯ ಸ್ವತ್ತಿನ ಮಾರುಕಟ್ಟೆ ಮೌಲ್ಯ ಮತ್ತು ಪಾವತಿಸಬೇಕಾದ ವ್ಯತ್ಯಾಸ ಶುಲ್ಕಗಳನ್ನು ನಿರ್ಣಯಿಸಿದ್ದರು.

 

ಪುಷ್ಪಲತಾ ಅವರು ಸಲ್ಲಿಸಿರುವ ದೂರಿನಲ್ಲಿಯೇ ಈ ನಿರ್ಣಯದ ಆದೇಶವನ್ನೂ ಸಹ ಹಾಜರುಪಡಿಸಿರುವುದು ಗೊತ್ತಾಗಿದೆ. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಡಿಎಲ್ಎಫ್‌ ಕಂಪನಿಯು 1982-85ರ ಸಾಲಿನಲ್ಲಿ ತಮ್ಮ ಪರವಾಗಿ ಹೊಂದಿದ್ದ ಸೇಲ್‌ ಡೀಡ್‌ಗಳನ್ನು ಜಿಲ್ಲಾ ನೋಂದಣಾಧಿಕಾರಿ ಸತೀಶ್‌ ಕುಮಾರ್ ಅವರು ಬುಕ್‌ ನಂ 1ರಲ್ಲಿ ನಮೂದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಮತ್ತೊಬ್ಬ ಜಿಲ್ಲಾ ನೋಂದಣಾಧಿಕಾರಿಯಾದ ಎ ಎನ್ ಭಾರತಿ ಅವರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಪುಷ್ಪಲತಾ ಅವರು ದೂರಿದ್ದಾರೆ.

 

 

ಇದಕ್ಕೆ ಸಂಬಂಧಿಸಿದಂತೆ ಮೆಮೋ ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೇ ಇದನ್ನು ದೆಹಲಿಯಿಂದ ಕಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ 1989ರಲ್ಲಿ ತಿದ್ದುಪಡಿ ಮಾಡಿರುವ ಸೆಕ್ಷನ್‌ 29 ರ ಪ್ರಕಾರ ನ್ಯಾಯವ್ಯಾಪ್ತಿಯ ಹೊರಗೆ ಮಾರಾಟ ಪತ್ರ, ನೋಂದಣಿ ಮತ್ತು ನಮೂದು ಮಾಡಲು ಅವಕಾಶವಿಲ್ಲ. ಮತ್ತು ಅದಕ್ಕೆ ಅನುಮತಿಯೂ ಇಲ್ಲ. ಎಲ್ಲಾ ದಾಖಲೆಗಳ ನೋಂದಣಿಯನ್ನು ಆಸ್ತಿ ಹೊಂದಿರುವ ನ್ಯಾಯ ವ್ಯಾಪ್ತಿಯಲ್ಲಿಯೇ ನೋಂದಾಯಿಸಬೇಕು ಎಂದು ಕಡ್ಡಾಯ ಮಾಡಲಾಗಿದೆ.

 

ಮೆಮೋ ಸೃಷ್ಟಿಸಲಾಗಿತ್ತೇ?

 

ಕಾನೂನಿನಲ್ಲಿರುವ ಈ ಅಡ್ಡಿಯನ್ನು ನಿವಾರಿಸಲು ಮೆಮೋ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಡಿಎಲ್‌ಎಫ್‌ ಪಾವತಿಸಿದ್ದ ನೋಂದಣಿ ಮುದ್ರಾಂಕ ಶುಲ್ಕದ ಮೌಲ್ಯವನ್ನು ನಿರ್ಣಯಿಸುವಲ್ಲಿ ಉದ್ದೇಶಪೂರ್ವಕವಾಗಿ ರಾಜ್ಯ ಖಜಾನೆಗೆ ನಷ್ಟವುಂಟು ಮಾಡಲಾಗಿದೆ. ಬುಕ್‌ 1 ರಲ್ಲಿ ನಮೂದಿಸಿದ್ದ ದಿನಾಂಕದಂದು ನಿಗದಿಪಡಿಸಿದ್ದ ದರವು, ಸರ್ಕಾರಿ ಮಾರ್ಗಸೂಚಿ ಮೌಲ್ಯಕ್ಕಿಂತ ಬಹಳ ಕಡಿಮೆ ಮೌಲ್ಯವನ್ನು ಹೊಂದಿದೆ. ಮತ್ತು ಕಡಿಮೆ ಮೌಲ್ಯವನ್ನಾಧರಿಸಿ ಡಿಎಲ್‌ಎಫ್‌ಗೆ ಅತ್ಯಲ್ಪವಾದ ನೋಂದಣಿ ಮುದ್ರಾಂಕ ಶುಲ್ಕವನ್ನು ಪಾವತಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಬುಕ್‌ 1ರಲ್ಲಿ ನಮೂದಿಸಿದ ನಂತರ ಡಿಎಲ್‌ಎಫ್‌ ಕಂಪನಿಯು ಇಡೀ ಭೂಮಿಯನ್ನು ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಗೆ ನೋಂದಾಯಿತ ಮಾರಾಟ ಪತ್ರಗಳ ಮೂಲಕ ಮಾರಾಟ ಮಾಡಿದೆ. 2022ರಲ್ಲಿ ಇದನ್ನು ನೋಂದಾಯಿಸುವಾಗಲೂ ಉದ್ದೇಶಪೂರ್ವಕವಾಗಿ ಕಡಿಮೆ ಮೌಲ್ಯಮಾಪನ ಮಾಡಿ ಕಡಿಮೆ ಮೊತ್ತದಲ್ಲೇ ನೋಂದಣಿ ಮುದ್ರಾಂಕ ಶುಲ್ಕವನ್ನು ಭರಿಸಿಕೊಳ್ಳಲಾಗಿದೆ. ಇದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿಯಷ್ಟು ನಷ್ಟವುಂಟಾಗಲು ಕಾರಣವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ಅಲ್ಲದೇ ಬುಕ್‌ 1 ರಲ್ಲಿ ನಮೂದಿಸಿರುವುದಕ್ಕೆ ಸಂಬಂಧಿಸಿದಂತೆ ನೋಂದಣಿ ಮಹಾಪರಿವೀಕ್ಷಕರು ಸಹ ವಿಚಾರಣೆ ನಡೆಸಿದ್ದಾರೆ. ಬುಕ್‌ 1 ರಲ್ಲಿ ನಮೂದಿಸಲು ಬಳಸಿದ್ದ ಮೆಮೋವನ್ನು ಸೃಷ್ಟಿಸಲಾಗಿತ್ತು ಎಂದು ವಿಚಾರಣೆಯಲ್ಲಿಯೂ ಸಾಬೀತಾಗಿದೆ. ಆದರೆ ಈ ಕೃತ್ಯಕ್ಕೆ ಶಿಕ್ಷೆಯಾಗಿಲ್ಲ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ದಾಖಲೆಗಳನ್ನು ಸೃಷ್ಟಿಸಿ ನೋಂದಾಯಿಸಿದ್ದಲ್ಲದೇ ಉದ್ದೇಶಪೂರ್ವಕವಾಗಿ ಭೂಮಿಯ ಮೌಲ್ಯವನ್ನು ಕಡಿಮೆ ಮಾಡಲಾಗಿದೆ. ಈ ಸಂಚಿನಲ್ಲಿ ಸತೀಶ್ ಕುಮಾರ್ ಮತ್ತು ಭಾರತಿ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಲೋಕಾಯುಕ್ತ ಅಥವಾ ಇತರೆ ತನಿಖಾ ಸಂಸ್ಥೆಗಳಿಗೆ ವಹಿಸಬೇಕು ಎಂದು ದೂರದಾರರಾದ ಪುಷ್ಪಲತಾ ಅವರು ಸರ್ಕಾರಕ್ಕೆ ಕೋರಿದ್ದಾರೆ.

 

ಈ ದೂರಿನ ಕುರಿತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ವಲಯದಲ್ಲಿ ಚರ್ಚೆಯಾಗಿದೆ. ಈ ಕಡತವು 2026ರ ಜನವರಿ 5ರಂದು ಶಾಖಾಧಿಕಾರಿ ಲಾಗಿನ್‌ಲ್ಲಿರುವುದು ಗೊತ್ತಾಗಿದೆ.

 

 

ಈ ಪ್ರಕರಣವು ಬೆಂಗಳೂರಿನ ಜಯನಗರದಲ್ಲಿರುವ ಜಿಲ್ಲಾ ನೋಂದಣಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿತ್ತು.

 

ನೋಂದಣಿ, ಮುದ್ರಾಂಕ ಶುಲ್ಕ ಪಾವತಿಯಾಗಿರಲಿಲ್ಲವೇ?

 

ವರ್ತೂರು, ನರಸೀಪುರದಲ್ಲಿನ ಪ್ರಶ್ನಿತ ಸ್ವತ್ತನ್ನು ಡಿಎಲ್‌ಎಫ್‌ನಿಂದ  ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯು 3,00,00,000 ರುಗಳಿಗೆ ಖರೀದಿಸಿದೆ.

 

 

 

ಇದನ್ನು ಶಾಂತಿನಗರ ಉಪ ನೋಂದಣಿ ಕಚೇರಿಯಲ್ಲಿ 2021ರ ನವೆಂಬರ್‍‌ 11ರಂದು ಪ್ರಸ್ತಾವಿಸಿ ಕ್ರಯ ಪತ್ರವನ್ನು ಸಲ್ಲಿಸಿದ್ದರು.

 

 

ಈ ದಸ್ತಾವೇಜನ್ನು ಪರಿಶೀಲಿಸಿದ್ದ ಶಾಂತಿ ಉಪನೋಂದಣಾಧಿಕಾರಿಯವರು ಸ್ಥಿರಾಸ್ತಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯಂತೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿ ಮಾಡಿಲ್ಲ ಎಂದು ಮನವರಿಕೆ ಮಾಡಿಕೊಂಡಿದ್ದರು. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45-ಎ(1)ರಂತೆ ಸರಿಯಾಧ ಮೌಲ್ಯ ನಿರ್ಧಾರಕ್ಕಾಗಿ ಪೆಂಡಿಂಗ್‌ ದಸ್ತಾವೇಜು (ಸಂಖ್ಯೆ ಪಿ-4288/2021-22) ನ್ನು ಜಿಲ್ಲಾ ನೋಂದಣಾಧಿಕಾರಿಗಳ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು.

 

 

 

ದಸ್ತಾವೇಜಿನಲ್ಲಿದ್ದ ಸ್ಥಿರಾಸ್ತಿ ಪರಿಶೀಲಿಸಿದ್ದ ಜಿಲ್ಲಾ ನೋಂದಣಾಧಿಕಾರಿ ಭಾರತಿ ಅವರು ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವ ) ನಿಯಮಾವಳಿಗಳೂ 1977ರ ನಿಯಮ 4ರ ಪ್ರಕಾರ 2022ರ ಜನವರಿ 21ರಂದು ನೋಟೀಸ್‌ ಜಾರಿಗೊಳಿಸಿದ್ದರು. ಈ ಸಂಬಂಧ ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯ ಪ್ರತಿನಿಧಿಯು ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರು.

 

ಲಿಖಿತ ಆಕ್ಷೇಪಣೆಯಲ್ಲೇನಿದೆ?

 

ಪ್ರಶ್ನಿತ ಸ್ವತ್ತನ್ನು ಡಿಎಲ್‌ಎಫ್‌ ಲಿಮಿಟೆಡ್‌ನಿಂದ ಕ್ರಯದ ಕರಾರು ಪತ್ರವನ್ನು ಮಾಡಿಕೊಂಡು ಕ್ರಯದ ಕರಾರಿನಲ್ಲಿರುವಂತೆ ಬಹುತೇಕ ಪ್ರತಿಫಲನದ ಮೊತ್ತವನ್ನು 2017 ಮತ್ತು 2018ರಲ್ಲಿ ಸ್ವತ್ತಿನ ಮಾಲೀಕರಿಗೆ ಪಾವತಿಸಿದೆ. ಅದರಂತೆ ಆ ವರ್ಷದಲ್ಲಿ ನೋಂದಣಿ ಹಾಜರುಪಡಿಸಿದಾಗ ನೋಂದಣಿ ಪ್ರಾಧಿಕಾರದವರು ಅಭಿವೃದ್ಧಿ ಹೊಂದಿರದ ವಾಸದ ಉದ್ದೇಶಕ್ಕೆ ಪರಿವರ್ತನೆಯಾಗಿರುವ ಜಮೀನನ್ನು ನೋಂದಣಿ ಮಾಡಲು ಸಾಧ್ಯವಿಲ್ಲವೆಂದು ಹೇಳಿತ್ತು. ಅಲ್ಲದೇ ಮಾಲೀಕರು ಈ ಜಮೀನಿಗೆ ಗಣಕೀಕೃತ ಪಂಚಾಯತ್‌ ಖಾತೆ ಪಡೆಯಲು ಸಾಕಷ್ಟು ಸಮಯ ವ್ಯರ್ಥವಾಗಿತ್ತು. ಹೀಗಾಗಿ ಕ್ರಯ ಪತ್ರ ಬರೆಯಿಸಿಕೊಳ್ಳಲು ವಿಳಂಬವಾಗಿತ್ತು ಎಂದು ಹೇಳಿತ್ತು.

 

 

ಹೀಗಾಗಿ ಕ್ರಯದ ಕರಾರಿನಲ್ಲಿ 2017-18ರಲ್ಲಿ ಸ್ವತ್ತಿನ ಮಾಲೀಕರಿಗೆ ಅಭಿವೃದ್ಧಿ ಹೊಂದಿರದ ವಾಸದ ಉದ್ದೇಶಕ್ಕೆ ಪರಿವರ್ತನೆಯಾಗಿರುವ ಜಮೀನಿಗೆ ಕ್ರಯಪತ್ರದಂತೆ ಪಾವತಿಸಿರುವ ಮೊತ್ತವನ್ನೇ ಸ್ವತ್ತಿನ ಮೌಲ್ಯವೆಂದು ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯ ಪ್ರತಿನಿಧಿಯು ಲಿಖಿತ ಆಕ್ಷೇಪಣೆಯಲ್ಲಿ ಕೋರಿದ್ದರು.

 

 

ಸ್ವತ್ತಿನ ಮೌಲ್ಯ ನಿಗದಿಪಡಿಸಿದ್ದು ನ್ಯಾಯಸಮ್ಮತವಾಗಿರಲಿಲ್ಲವೇ?

 

ಅಲ್ಲದೇ ಅಭಿವೃದ್ಧಿ ಹೊಂದಿರದ ವಾಸದ ಉದ್ದೇಶಕ್ಕಾಗಿ ಪರಿವರ್ತನೆಯಾಗಿರುವ ಜಮೀನಿಗೆ ಮೂಲಭೂತ ಸೌಲಭ್ಯಗಳು, ರಸ್ತೆ, ಒಳಚರಂಡಿ, ವಿದ್ಯುತ್‌ ಸೌಲಭ್ಯಗಳಿಲ್ಲ. ಆದರೂ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸಕ್ಕೆ ನಕ್ಷೆ ಅನುಮೋದನೆ ಪಡೆಯದ ಸ್ವತ್ತಿಗೆ ಚದರಡಿಗಳಂತೆ ಸ್ವತ್ತಿನ ಮೌಲ್ಯ 17,31,23,080 ರು ಎಂದು ಪ್ರಸ್ತಾವನೆ ಮಾಡಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ವಾದಿಸಿದ್ದರು.

 

 

ಚದರ ಮೀಟರ್‍‌ ಲೆಕ್ಕಕ್ಕೆ ಆಕ್ಷೇಪ

 

ಹಾಗೆಯೇ ನಿವೇಶನ ದರ ಆಕರಣೆ ಮಾಡಿರುವುದು ಸಹ ನ್ಯಾಯಯುತವಾಗಿಲ್ಲ. ಕ್ರಯಕ್ಕೆ ಪಡೆದಿರುವ ಸ್ವತ್ತು ಸಮತಟ್ಟಾಗಿಲ್ಲ, ಬೃಹದಾದಾಕಾರದ, ಲ್ಯಾಂಡ್‌ ಲಾಕ್‌ ಆಗಿರುವ ಹಾಗೂ ಅರ್ಕಾವತಿ ಜಲಾನಯನ ಪ್ರದೇಶ ವ್ಯಾಪ್ತಿಗೆ ಒಳಪಡುವ ಸ್ವತ್ತಾಗಿದೆ. ಮತ್ತು ಸ್ವತ್ತು ಅಭಿವೃದ್ಧಿ ಹೊಂದದ ವಾಸದ ಉದ್ದೇಶಕ್ಕೆ ಪರಿವರ್ತನೆಯಾಗಿರುವ ಜಮೀನನ್ನು ಉಪ ನೋಂದಣಾಧಿಕಾರಿಗಳು ಚದರ ಮೀಟರ್‍‌ಗೆ ಲೆಕ್ಕ ಹಾಕಿ ನಿವೇಶನ ದರ ಪ್ರಸ್ತಾವನೆ ಮಾಡಿದ್ದರು.

 

 

ಇದು ನ್ಯಾಯಯುತವಾಗಿಲ್ಲ ಎಂದು ಪ್ರತಿಪಾದಿಸಿದ್ದ ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯ ಪ್ರತಿನಿಧಿಯು, ಇಂತಹ ದೊಡ್ಡ ಅಭಿವೃದ್ಧಿ ಹೊಂದದ ವಾಸದ ಉದ್ದೇಶಕ್ಕೆ ಪರಿವರ್ತನೆಯಾಗಿರುವ ಜಮೀಣಿಗೆ ಸಣ್ಣ ಅಳತೆಯ ನಿವೇಶನಗಳಿಗೆ ನಿಗದಿಪಡಿಸುವಂತೆ ನಿವೇಶನ ದರ ಲೆಕ್ಕ ಹಾಕುವುದು ನ್ಯಾಯಯುತವಾಗಿಲ್ಲ ಎಂದು ವಾದಿಸಿದ್ದರು.

 

ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯ ಪ್ರತಿನಿಧಿಯು ಸರ್ವೋಚ್ಛ, ಉಚ್ಛ ನ್ಯಾಯಾಲಯ ಸೇರಿದಂತೆ ಹಲವು ನ್ಯಾಯಾಲಯಗಳ ವ್ಯಾಖ್ಯಾನ ಒದಗಿಸಿದ್ದರು.

 

‘ನ್ಯಾಯಾಲಯಗಳ ಆದೇಶಗಳನ್ನು ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕು. ವ್ಯತ್ಯಾಸದ ಮೊತ್ತಕ್ಕೆ ಕೊರತೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿಸಿದಲ್ಲಿ ಆದಾಯ ತೆರಿಗೆಯಿಂದ ಕ್ರಮಕೈಗೊಳ್ಳುವ ಪ್ರಮೇಯ ಬರಲಿದೆ. ಆದ್ದರಿಂದ ಉಪ ನೋಂದಣಾಧಿಕಾರಿಗಳ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು. ನನ್ನ ಲಿಖಿತ ವಾದ ಹಾಗೂ ಮೌಖಿಕವಾದ ಅಂಶಗಳನ್ನು ಪರಿಗಣಿಸಿ ನಾನು ಖರೀದಿಸಿರುವ ಬೆಲೆಗೆ ದರ ನಿಗದಿಪಡಿಸಿ ಪ್ರಕರಣ ಮುಕ್ತಾಯಗೊಳಿಸಬೇಕು ,’ ಎಂದು ಕೋರಿದ್ದರು.

 

ಪ್ರಶ್ನಿತ ಆಸ್ತಿಯ ಸ್ಥಳ ಪರಿವೀಕ್ಷಣೆಯಲ್ಲಿ ಕಂಡುಬಂದಿದ್ದೇನು?

 

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ವರ್ತೂರು, ನರಸೀಪುರ ಗ್ರಾಮದಲ್ಲಿರುವ ಸರ್ವೆ ನಂಬರ್ 12, 13,15 ಮತ್ತು 16ರಲ್ಲಿನ 06 ಎಕರೆ 08 ಗುಂಟೆಯ ಪ್ರಶ್ನಿತ ಆಸ್ತಿಯನ್ನು ಪ್ರತಿವಾದಿ ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯ ಸಮಕ್ಷಮದಲ್ಲಿಯೇ 2022ರ ಮಾರ್ಚ್‌ 11ರಂದೇ ಪರಿವೀಕ್ಷಣೆ ಮಾಡಲಾಗಿತ್ತು.

 

 

ಈ ಗ್ರಾಮವು ಬೆಂಗಳೂರು ಕೇಂದ್ರ ನಿಲ್ದಾಣದಿಂದ ಸುಮಾರು 23.7ಕಿ ಮೀ ಇದೆ. ಈ ಸ್ವತ್ತು ಪಾಳು ಬಿದ್ದಿದೆ, ಯಾವುದೇ ಕೃಷಿ ಚಟುವಟಿಕೆ ಮಾಡಿಲ್ಲ ಎಂಬುದನ್ನು ಸ್ಥಳ ಪರಿವೀಕ್ಷಕರು ಗಮನಿಸಿದ್ದರು.

 

ಸ್ವತ್ತಿಗೆ ಯಾವುದೇ ರಸ್ತೆ ಇಲ್ಲ. ಇತರರ ಜಮೀನಿನ ಮುಖಾಂತರ ಈ ಸ್ವತ್ತಿಗೆ ಹೋಗಬೇಕು. ಸ್ವತ್ತಿನ ಸಾಕಷ್ಟು ಭಾಗವು ಹಳ್ಳದಿಂದ ಕೂಡಿದೆ. ಸ್ವತ್ತಿನ ಪಕ್ಕದಲ್ಲದೇ ಅರ್ಕಾವತಿ ನದಿ ಹರಿದು ಹೋಗಿದೆ. ಸ್ವತ್ತಿನ ಸುತ್ತಮುತ್ತಲೂ ಭಾಗಶಃ ಕೃ‍ಷಿ ಚಟುವಟಿಕೆಯಿದೆ. ಯಾವುದೇ ನಾಗರಿಕ ಸೌಲಭ್ಯಗಳಿಲ್ಲ. ವಾಸದ ಉದ್ದೇಶಕ್ಕೆ ಸ್ವತ್ತು ಪರಿವರ್ತನೆಯಾಗಿದ್ದರೂ ಸಹ ಅಭಿವೃದ್ಧಿ ಕಾರ್ಯ ಮಾಡದೇ ಪಾಳು ಬಿಡಲಾಗಿದೆ. ಸ್ವತ್ತು ಭೂ ಪರಿವರ್ತನೆಗೊಂಡ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೇ ಸ್ವತ್ತಿನ ಒಳಗೆ ಒಳಚರಂಡಿ, ಬಡಾವಣೆಯಲ್ಲಿ ಸರ್ವ ವೃತ್ತ ರಸ್ತೆಗಳು, ಇತ್ಯಾದಿ ಮೂಲಭೂತ ಸೌಕರ್ಯಗಳು ಅಭಿವೃದ್ಧಿಪಡಿಸಿರಲಿಲ್ಲ ಎಂಬುದು ಸ್ಥಳ ಪರಿವೀಕ್ಷಣೆಯಲ್ಲಿ ಕಂಡು ಬಂದಿತ್ತು.

 

ಪ್ರತಿವಾದಿಯ ಲಿಖಿತವಾದ, ಆಕ್ಷೇಪಣೆ ಮತ್ತು ಮೌಖಿಕವಾದ ಪರಿಶೀಲನೆ ಆಧರಿಸಿದ್ದ ಜಿಲ್ಲಾ ನೋಂದಣಾಧಿಕಾರಿಗಳು ಪ್ರತಿವಾದಿಯ ವಾದವನ್ನು ಎತ್ತಿ ಹಿಡಿದಿದ್ದರು. ಈ ಸ್ವತ್ತು ಅಭಿವೃದ್ಧಿ ಹೊಂದಿರದ ಮತ್ತು ಯಾವುದೇ ಉತ್ತಮತೆ ಇರದ ಕೇವಲ ಪರಿವರ್ತಿತ ಜಮೀನಾಗಿದೆ. ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಿದ್ದ ಪರಿವರ್ತಿತ ಆದೇಶ (ಎಎಲ್‌ಎನ್‌/ಎಸ್‌ಆರ್‍‌/14/1979-80 ದಿನಾಂಕ 05-04-1982) ಪರಿಶೀಲನೆ ಮಾಡಿ ಈ ಸ್ವತ್ತು ವಸತಿ ಉದ್ದೇಶಕ್ಕೆ ಭೂಪರಿವರ್ತನೆಯಾಗಿದೆ. ಹೀಗಾಗಿ ಪ್ರತಿವಾದಿಯ ವಾದದಲ್ಲಿ ಸತ್ಯಾಂಶವಿರುವುದು ದೃಢಪಟ್ಟಿರುತ್ತದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳು ನಿಲುವು ತಳೆದಿದ್ದರು.

 

ಇದೇ ಸ್ವತ್ತಿಗೆ ಕೇಂದ್ರ ಮೌಲ್ಯಮಾಪನ ಸಮಿತಿಯು ದರ ನಿಗದಿಪಡಿಸಿತ್ತು. ಇದರ ಪ್ರಕಾರ ವರ್ತೂರು, ನರಸಿಪುರದಲ್ಲಿ ಸ್ಥಳೀಯ ಸಕ್ಷಮ ಪ್ರಾಧಿಕಾರವು ನಿಗದಿಪಡಿಸಿದ ಮಾರ್ಗಸೂಚಿ ಮಾರುಕಟ್ಟೆ ದರವು ಪ್ರತಿ ಚದರ ಮೀಟರ್‍‌ಗೆ (ವಸತಿ ನಿವೇಶನ) 9,500 ರು., ಇದೆ. ಸ್ಥಳೀಯ ಸಂಸ್ಥೆಗಳು ಪ್ರತಿ ಚದರ ಮೀಟರ್‍‌ಗೆ 6,000 ರು ನಿಗದಿಪಡಿಸಿದೆ. ಕೃಷಿ ಜಮೀನಿಗೆ ಪ್ರತಿ ಎಕರೆಗೆ 75 ಲಕ್ಷ ರು ನಿಗದಿಪಡಿಸಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳ ಆದೇಶದಲ್ಲಿ ವಿವರಿಸಲಾಗಿದೆ.

 

 

ಇದೇ ದರವು ವರ್ತೂರಿನಲ್ಲಿಯೂ ಇತ್ತು. ಕುರುಬರಹಳ್ಳಿಯಲ್ಲಿ ಸ್ಥಳೀಯ ಸಕ್ಷಮ ಪ್ರಾಧಿಕಾರವು ನಿಗದಿಪಡಿಸಿದ ಮಾರ್ಗಸೂಚಿ ಮಾರುಕಟ್ಟೆ ದರವು ಪ್ರತಿ ಚದರ ಮೀಟರ್‍‌ಗೆ (ವಸತಿ ನಿವೇಶನ) 10,000 ರು., ಇದೆ. ಸ್ಥಳೀಯ ಸಂಸ್ಥೆಗಳು ಪ್ರತಿ ಚದರ ಮೀಟರ್‍‌ಗೆ 7,000 ರು ನಿಗದಿಪಡಿಸಿದೆ. ಕೃಷಿ ಜಮೀನಿಗೆ ಪ್ರತಿ ಎಕರೆಗೆ 1.20 ಕೋಟಿ ಲಕ್ಷ ರು ನಿಗದಿಪಡಿಸಿದೆ ಗಂಗೇನಹಳ್ಳಿಯಲ್ಲಿ ಸ್ಥಳೀಯ ಸಕ್ಷಮ ಪ್ರಾಧಿಕಾರವು ನಿಗದಿಪಡಿಸಿದ ಮಾರ್ಗಸೂಚಿ ಮಾರುಕಟ್ಟೆ ದರವು ಪ್ರತಿ ಚದರ ಮೀಟರ್‍‌ಗೆ (ವಸತಿ ನಿವೇಶನ) 6,900 ರು., ಇದೆ. ಸ್ಥಳೀಯ ಸಂಸ್ಥೆಗಳು ಪ್ರತಿ ಚದರ ಮೀಟರ್‍‌ಗೆ 4,500 ರು ನಿಗದಿಪಡಿಸಿದೆ. ಕೃಷಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರು ನಿಗದಿಪಡಿಸಿದೆ ಎಂದು ವಿವರಿಸಿದ್ದರು.

 

ಬೆಂಗಳೂರು ಡಿವೈನಿಟಿ ಎಲ್‌ಎಲ್‌ಪಿಯ ದಸ್ತಾವೇಜಿನ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರಕಾರ ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್‍‌ 12,13,15 ಮತ್ತು 16ರಲ್ಲಿ ಒಟ್ಟು 06 ಎಕರೆ 08 ಗುಂಟೆ ಅಭಿವೃದ್ಧಿ ಹೊಂದಿರದ ವಾಸದ ಉದ್ದೇಶಕ್ಕಾಗಿ ಪರಿವರ್ತನೆಯಾಗಿದೆ. ಪ್ರಶ್ನಿತ ಸ್ವತ್ತಿಗೆ ನಾಗರಿಕ ಸೌಲಭ್ಯಗಳಿಲ್ಲ. ಸ್ವತ್ತಿಗೆ ರಸ್ತೆ ಸಂಪರ್ಕವಿಲ್ಲ. ಲ್ಯಾಂಡ್‌ ಲಾಕ್‌ ಆಗಿದೆ. ಈ ಸ್ವತ್ತನ್ನು ವಾಣಿಜ್ಯ ಉಪಯೋಗಕ್ಕೆ ಬಳಸಿಲ್ಲ. ಅಲ್ಲದೇ ಅರ್ಕಾವತಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಟ್ಟ ಜಮೀನಾಗಿದೆ ಎಂದು ಆದೇಶದಲ್ಲಿಯೇ ಸ್ಷಷ್ಟಪಡಿಸಿದ್ದರು.

 

 

ಹಿಮಾಲಯ ಹೌಸ್‌ ಕಂ ಲಿಮಿಟೆಡ್‌/ ಸಿಸಿಆರ್‍‌ಎ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿನ ಎರಡು ಅಂಶಗಳನ್ನು ಜಿಲ್ಲಾ ನೋಂದಾಣಿಧಿಕಾರಿಗಳು ಪರಿಗಣಿಸಿದ್ದರು. ಇದರ ಆಧಾರದ ಮೇಲೆ ಪ್ರತಿವಾದಿಯ ‘ದುರುದ್ದೇಶ’ವನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ. ಪ್ರತಿವಾದಿಯದ್ದು ಪ್ರಾಮಾಣಿಕ ಉದ್ದೇಶವಾಗಿದೆಯೇ ಹೊರತು ದುರುದ್ದೇಶಪೂರಿತವಾಗಿಲ್ಲ ಎಂದೂ ವಿವರಿಸಿದ್ದರು.

 

ಮಾರುಕಟ್ಟೆ ಮೌಲ್ಯದ ಬಗ್ಗೆ ಆದೇಶದಲ್ಲೇನಿದೆ?

 

ಮಾರುಕಟ್ಟೆ ಮೌಲ್ಯದ ಬಗ್ಗೆಯೂ ಜಿಲ್ಲಾ ನೋಂದಣಾಧಿಕಾರಿಗಳು ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ. ಯಾವುದೇ ಒಂದು ಸ್ವತ್ತಿನ ಬೆಲೆಯನ್ನು ಅದು ಇರುವ ಸ್ಥಿತಿ, ಜಾಗ ಅದರಿಂದ ಸಿಗುವ ಹಾಗೂ ಮುಂದೆ ಸಿಗಬಹುದಾದ ಉಪಯೋಗಗಳು ಹಾಗೂ ಕ್ರಯಕ್ಕೆ ಕೊಡುವವರ ಮತ್ತು ಕೊಳ್ಳುವವರ ಮನದ ಇಚ್ಛೆಯ ಮೇಲೆ ನಿರ್ಧಾರವಾಗುತ್ತದೆ. ಹಾಗೂ ಯಾವುದೇ ಸ್ವತ್ತಿನ ಮಾರುಕಟ್ಟೆ ಬೆಲೆಯನ್ನು ಮಾರ್ಗಸೂಚಿ ಬೆಲೆ ಅಧಾರದ ಮೇಲೆ ನಿರ್ಧರಿಸುವುದು ಸರಿಯಲ್ಲ. ಈ ಸಂಬಂಧ ಹರ್ಯಾಣ ರಾಜ್ಯ ಸರ್ಕಾರದ ಕೃಷಿ ಮಾರುಕಟ್ಟೆ ಮಂಡಳಿ /ಕೃಷ್ಣನ್ ಕುಮಾರ್ ಮತ್ತು ಇತರರು ಪ್ರಕರಣ, ಮೇಜರ್ ಜನರಲ್ ಕಪಿಲ್ ಮೆಹ್ರಾ ಮತ್ತು ಇತರರು/ ಯೂನಿಯನ್ ಆಫ್‌ ಇಂಡಿಯಾ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯಗಳು ನೀಡಿದ್ದ ಆದೇಶವನ್ನು ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಕೇವಲ ಮಾರ್ಗಸೂಚಿ ಬೆಲೆಯೇ ಯಾವುದೇ ಒಂದು ಸ್ವತ್ತಿನ ಮಾರುಕಟ್ಟೆ ಬೆಲೆ ಆಗುವುದಿಲ್ಲ. ಮಾರ್ಗಸೂಚಿ ಬೆಲೆ ಸಂಬಂಧಿಸಿದ ಅಧಿಕಾರಿಗಳ ಮಾರ್ಗದರ್ಶನಕ್ಕಾಗಿ ಮಾತ್ರ ಇದೆ. ಅದೇ ಬೆಲೆ ಎಲ್ಲಾ ಸ್ವತ್ತಿಗೂ ಮಾರುಕಟ್ಟೆ ಬೆಲೆ ಆಗುವುದಿಲ್ಲ. ಸ್ವತ್ತುಗಳು ಒಂದೇ ಪ್ರದೇಶದಲ್ಲಿದ್ದರೂ ಜಾಗದಿಂದ ಜಾಗಕ್ಕೆ ಬೇರೆ ಬೇರೆಯೇ ಆಗಿರುತ್ತದೆ. ಆದ ಕಾರಣ ಮಾರ್ಗಸೂಚಿ ಬೆಲೆಯನ್ನು ಸಂಬಂಧಿಸಿದವರು ಪ್ರಶ್ನಿಸಿದಾಗ ಅವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು. ಅವುಗಳ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಂತಾಗುವುದಿಲ್ಲ ಎಂದು ಆದೇಶದಲ್ಲಿ ವಿವರಿಸಿದೆ.

 

 

 

ಪ್ರಶ್ನಿತ ಸ್ವತ್ತಿಗೆ ಉಪ ನೋಂದಣಾಧಿಕಾರಿಗಳು ಅವೈಜ್ಞಾನಿಕವಾಗಿ ನಿವೇಶನ ದರ ನಿಗದಿಪಡಿಸಿದ್ದಾರೆ ಎಂದು ಪ್ರತಿವಾದಿಯ ಪ್ರತಿಪಾದನೆಯನ್ನೂ ಜಿಲ್ಲಾ ನೋಂದಣಾಧಿಕಾರಿಗಳು ಗಮನಿಸಿದ್ದಾರೆ. ಸ್ವತ್ತು ಅಭಿವೃದ್ಧಿ ಹೊಂದಿಲ್ಲದ ಜಮೀನಿಗೆ ನಿವೇಶನ ದರ ಆಕರಣೆ ಮಾಡಿರುವುದು ನ್ಯಾಯಯುತವಲ್ಲವೆಂದು ಅಭಿಪ್ರಾಯಪಟ್ಟಿದೆ. ಈ ಸಂಬಂಧ ನ್ಯಾಯಾಲಯದ ಆದೇಶಗಳನ್ನೂ ಪರಿಶೀಲಿಸಿದ್ದಾರೆ.

 

 

ಶಾಂತಿ ನಗರ ಉಪ ನೋಂದಣಾಧಿಕಾರಿಗಳು ಸ್ವತ್ತಿಗೆ ನಿಗದಿಪಡಿಸಿರುವ ನಿವೇಶನ ದರವು ಸಮಂಜಸವಾಗಿಲ್ಲ. ಸ್ವಾಭಾವಿಕ ನ್ಯಾಯದ ದೃಷ್ಟಿಯಿಂದಲೂ ಸಮಂಜಸವಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ನೋಂದಣಾಧಿಕಾರಿಗಳು, ಈ ಸ್ವತ್ತು ಅರ್ಕಾವತಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಸ್ವತ್ತಿಗೆ ಇರುವ ಅನುಕೂಲ ಹಾಗೂ ಅನಾನುಕೂಲ ಪರಿಗಣಿಸಿ ನ್ಯಾಯಯುತವಾಗಿ ಪುನರ್ ವಿಮರ್ಶಿಸಿದ ದರ ನಿಗದಿಪಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವುದು ಆದೇಶದಿಂದಿ ತಿಳಿದು ಬಂದಿದೆ.

 

 

ಸಬ್‌ ರಿಜಿಸ್ಟ್ರಾರ್ ಪರ ನಿಲ್ಲದ ಜಿಲ್ಲಾ ನೋಂದಣಾಧಿಕಾರಿ

 

ಈ ಪ್ರಕರಣದಲ್ಲಿ ಜಿಲ್ಲಾ ನೋಂದಣಾಧಿಕಾರಿ, ಶಾಂತಿನಗರ ಉಪ ನೋಂದಣಾಧಿಕಾರಿ ನಿಂತಿಲ್ಲ. ಖರೀದಿದಾರರ ವಾದವನ್ನು ಒಪ್ಪದೇ ಉಪ ನೋಂದಣಾಧಿಕಾರಿಗಳು ನಮೂದಿಸಿದ್ದ ಬೆಲೆಯನ್ನು ಒಪ್ಪಿಲ್ಲ.

 

 

ಸ್ಥಳ ತನಿಖೆ, ಹಣದ ವಹಿವಾಟು, ಸ್ವತ್ತು ಇರುವಂತಹ ಪ್ರದೇಶ, ಅಭಿವೃದ್ಧಿ ಮತ್ತು ಇತರೆ ಅನುಕೂಲ ಮತ್ತು ಅನಾನುಕೂಲತೆಗಳನ್ನು ಮರು ಪರಿಗಣಿಸಿ ಮೌಲ್ಯವನ್ನು ನಿರ್ಧರಿಸಿರುವುದು ಆದೇಶದಿಂದ ಗೊತ್ತಾಗಿದೆ.

 

 

 

ಒಟ್ಟು 06 ಎಕರೆ 8 ಗುಂಟೆ ವಿಸ್ತೀರ್ಣದ ಅಭಿವೃದ್ಧಿ ಹೊಂದದ ಸ್ವತ್ತಿಗೆ ಪುನರ್ ವಿಮರ್ಶಿಸಿದ ಕೃಷಿ ಜಮೀನಿನ ದರ ಎಕರೆಯೊಂದಕ್ಕೆ 45,00,000 ಹಾಘೂ ಕೃಷಿಯೇತರ ವಾಸದ ಉದ್ದೇಶಕ್ಕೆ ಪರಿವರ್ತನೆಯಾಗಿದೆ. ಹೀಗಾಗಿ  ಮಾರ್ಗಸೂಚಿ ಮಾರುಕಟ್ಟೆ ದರಪಟ್ಟಯ ಪ್ರಕಾರ ಕೃಷಿ ಜಮೀನಿನ ದರಕ್ಕೆ ಶೇ.65ರಷ್ಟು ಅಂದರೇ 29,25,000 ರು ಹೆಚ್ಚಿಸಿ ಒಟ್ಟು ಸ್ವತ್ತಿನ ದರ ಎಕರೆಯೊಂದಕ್ಕೆ 74,25,000 ರು ನಿಗದಿಪಡಿಸುವುದು ಸೂಕ್ತ. ಇದರ ಪ್ರಕಾರ 10,66,500 ರು.ಗಳನ್ನು ಕೊರತೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಬೇಕು ಎಂದು 2022ರ ಮಾರ್ಚ್‌ 16ರಂದೇ ಆದೇಶಿಸಿದ್ದರು.

 

ಸದ್ಯ ಸರ್ವೆ ನಂಬರ್‍‌ 12ರಲ್ಲಿ ಪಿ ಬಸು, ಸತ್ಯ ಮೆಹ್ರಾ ಮತ್ತು ಆರ್‍‌ ಕೆ ಖನ್ನಾ ಎಂಬುವರು ಸ್ವಾಧೀನದಲ್ಲಿದ್ದಾರೆ.

 

 

ಸರ್ವೆ ನಂಬರ್‍‌ 13ರಲ್ಲಿ ಸೀತಾ ದೇವಿಂದರ್ ಸಿಂಗ್‌, ವೈ ಕೆ ಮಾಲೈ ಎಂಬುವರು ಅನುಭವದಲ್ಲಿದ್ದಾರೆ.

 

 

 

 

 

ಸರ್ವೆ ನಂಬರ್‍‌ 14ರಲ್ಲಿ ಜೆ ಜೆ ಡಿ ಲೋಬೋ ಮತ್ತು ಹರುಣ್ ಕುಮಾರ್ ಸೇನ್ ಎಂಬುವರು ಸ್ವಾಧೀನದಲ್ಲಿರುವುದು ಗೊತ್ತಾಗಿದೆ.

 

 

 

ಸರ್ವೆ ನಂಬರ್‍‌ 15ರಲ್ಲಿ ಜೆ ಜೆ ಡಿ ಲೋಬೋ ಅವರು ಸ್ವಾಧೀನದಲ್ಲಿದ್ದಾರೆ.

 

 

ಸರ್ವೆ ನಂಬರ್‍‌ 16ರಲ್ಲಿ ಕುಲಭೂಷಣ ಮೆಹರ್, ಸತ್ಯ ಮೆಹರ್ ಅವರು ಅನುಭವದಲ್ಲಿರುವುದು ಭೂಮಿ ದಾಖಲೆಗಳಿಂದ ಗೊತ್ತಾಗಿದೆ.

 

 

 

 

ವಿಶೇಷವೆಂದರೇ ಪುಷ್ಪಲತಾ ಅವರು ದೂರಿನಲ್ಲಿ ಉಲ್ಲೇಖಿಸಿರುವ ಸರ್ವೆ ನಂಬರ್‍‌ 28ರಲ್ಲಿ 5 ಎಕರೆ 11 ಗುಂಟೆ ವಿಸ್ತೀರ್ಣದಲ್ಲಿ ಡಿಎಲ್‌ಎಫ್‌ ಗೌಸಿಂಗ್‌ ಎಂಬುವರು ಸ್ವಾಧೀನದಲ್ಲಿರುವುದು ಭೂಮಿ ದಾಖಲೆಯಿಂದ ತಿಳಿದು ಬಂದಿದೆ.

 

 

ಇದೇ ಡಿಎಲ್‌ಎಫ್‌ಗೆ ಸಂಬಂಧಿಸಿದ ಬೇರೊಂದು ಪ್ರಕರಣದಲ್ಲಿ ತಹಶೀಲ್ದಾರ್‍‌ಗಳ ವಿರುದ್ಧವೂ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಪೂರ್ವಾನುಮತಿ ನೀಡಿರಲಿಲ್ಲ.

 

ರಾಬರ್ಟ್ ವಾದ್ರಾಗೆ ಸಹಕರಿಸಿದ ಆರೋಪ;ತಹಶೀಲ್ದಾರ್‍‌ಗಳ ವಿಚಾರಣೆಗೆ ಇನ್ನೂ ದೊರಕದ ಅನುಮತಿ

 

ಈ ಕುರಿತು ದಿ ಫೈಲ್‌ 2026ರ ಜೂನ್‌ 13ರಂದೇ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts