ಬೆಂಗಳೂರು; ಕಬ್ಬು ಕಟಾವು ಮುಂಗಡ ಪಾವತಿ, ಕಬ್ಬಿನ ತೂಕ ಮತ್ತು ಹಣ ಪಾವತಿಯಲ್ಲಿ ಅಕ್ರಮವೆಸಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿರುವ ಪ್ರಕರಣದಲ್ಲಿ ಮಂಡ್ಯದಲ್ಲಿರುವ ಮೈಷುಗರ್ಸ್ ಕಂಪನಿಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಐಎಎಸ್ ರವಿಕುಮಾರ್ ಅವರೂ ಸೇರಿದಂತೆ ಒಟ್ಟಾರೆ 7 ಮಂದಿ ಅಧಿಕಾರಿ, ನೌಕರರ ವಿರುದ್ಧ ತನಿಖೆಗೆ ಸರ್ಕಾರವು ಆದೇಶ ಹೊರಡಿಸಿದೆ.
ದಿ ಮೈಸೂರು ಷುಗರ್ ಕಂಪನಿ ಲಿಮಿಟೆಡ್ನಲ್ಲಿ ನಡೆದಿದೆ ಎನ್ನಲಾಗಿದ್ದ ಹಲವು ಅವ್ಯವಹಾರ ಮತ್ತು ಅಕ್ರಮ ನೇಮಕಾತಿ ಮತ್ತು ಆರ್ಥಿಕ ನಷ್ಟವಾಗಿದೆ ಎಂದು ಸರ್ಕಾರಕ್ಕೆ ಹಲವರು ದೂರು ಸಲ್ಲಿಸಿದ್ದರು. ಈ ದೂರುಗಳನ್ನು ಪರಿಶೀಲನೆ ನಡೆಸಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಮಹಾರಾಷ್ಟ್ರದ ನಿವೃತತ ಐಎಎಸ್ ಅಧಿಕಾರಿ ಶೇಖರ್ ಗಾಯಕವಾಡ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದೆ.
ಈ ಸಂಬಂಧ 2026ರ ಜನವರಿ 14ರಂದು ಆದೇಶ ಹೊರಡಿಸಿದೆ. ಈ ಅದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮಹಾರಾಷ್ಟ್ರದ ನಿವೃತ್ತ ಐಎಎಸ್ ಅಧಿಕಾರಿ ಶೇಖರ್ ಗಾಯಕವಾಡ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮಹಾರಾಷ್ಟ್ರದ ಶುಗರ್ಸ್ ಎಂಜಿನಿಯರಿಂಗ್ ಇಂಜಿನಿಯರಿಂಗ್ ಇನ್ಸಿಟಿಟ್ಯೂಟ್ನ ಮುಖ್ಯಸ್ಥ ರಾಜೇಂದ್ರ ಚಾಂದಗುಡ್ಡೆ, ಬಡಗಲಪುರ ನಾಗೇಂದ್ರ, ಎಸ್ ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಬಿ ಎಸ್ ರಾಜಗೋಪಾಲ್, ತಾಂತ್ರಿಕ ಸಲಹೆಗಾರ ಸಿ ಬಿ ಪಾಟೀಲ, ಮುಜಾವರ ಬಹದೂರಲಿ ಇಬ್ರಾಹಿಂ ಲಾತೂರು ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ.
ಈ ಸಮಿತಿಯು ಕಂಪನಿಗೆ ಭೇಟಿ ನೀಡಿ ದೂರಿನಲ್ಲಿರುವ ಎಲ್ಲಾ ಅಂಶಗಳ ಕುರಿತು ಪರಿಶೀಲನೆ ನಡೆಸಿ 15 ದಿನಗಳ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ಸೂಚಿಸಿರುವುದು ಆದೇಶದಿಂದ ಗೊತ್ತಾಗಿದೆ.

ಮಂಡ್ಯದ ಮೈಷುಗರ್ಸ್ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಪ್ಪಾಸಾಹೇಬ್ ಪಾಟೀಲ್, ರವಿಕುಮಾರ್ ಎಂ ಆರ್, ಎಚ್ ಎಲ್ ನಾಗರಾಜು, ಹಾಲಿ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್, ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ತೇಜಸ್ವಿನಿ, ಸಿಬ್ಬಂದಿ ಅಧಿಕಾರಿ ರಮೇಶ್ ಚೆಲ್ಲಾಪುರ ಇವರ ಅಧಿಕಾರಾವಧಿಯಲ್ಲಿ ಸಾಕಷ್ಟು ಅಕ್ರಮಗಳು, ಅವ್ಯವಹಾರಗಳು ನಡೆದಿವೆ ಎಂದು ಹಲವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಪ್ರಮುಖವಾಗಿ ಕ್ಷೇತ್ರ ಸಹಾಯಕರ ಆಯ್ಕೆ, ಕಬ್ಬು ಕಟಾವು ಮುಂಗಡ ಪಾವತಿ, ಕಬ್ಬು ಕಟಾವು ಮತ್ತು ಸಾಗಣೆ, ಕಬ್ಬಿನ ತೂಕ, ಹಣ ಪಾವತಿ, ಹೊರಗುತ್ತಿಗೆ ನೌಕರರ ನೇಮಕಾತಿ, ಸಕ್ಕರೆ ಮಾರಾಟ, ಕಾರ್ಖಾನೆ ಆವರಣದಲ್ಲಿನ ಮರಗಳ ಕಟಾವು, ಕಾಮಗಾರಿಗಳ ನಿರ್ವಹಣೆ, ನಿವೃತ್ತ ಮತ್ತು ಸ್ವಯಂ ನಿವೃತ್ತಿ ಪಡೆದ ನೌಕರರ ನೇಮಕ, ಕರ್ತವ್ಯ ನಿರ್ಲಕ್ಷ್ಯತೆ, ಕಂಪನಿಯ ಖಾಲಿ ಜಾಗವನ್ನು ಗುತ್ತಿಗೆ ನೀಡುವಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ, ಅವ್ಯವಹಾರಗಳು ನಡೆದಿವೆ ಎಂದು ದೂರುಗಳಲ್ಲಿ ವಿವರಿಸಲಾಗಿತ್ತು.
ಅಲ್ಲದೇ ಸಭೆ ನಡವಳಿಗಳಿಗೆ ನಿಯಮಬಾಹಿರವಾಗಿ ಸಹಿ ಮಾಡಿರುವುದು ಮತ್ತು ನಿಯಮಬಾಹಿರವಾಗಿ ತನಿಖಾ ಸಮಿತಿ ರಚಿಸಲಾಗಿತ್ತು. ಈ ಎಲ್ಲದರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿತ್ತು.

ಮೈಷುಗರ್ಸ್ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ್ ಪಾಟೀಲ್ ಅವರ ಅಧಿಕಾರವಾಧಿಯಲ್ಲಿ ಭಾರೀ ಗಾತ್ರದ ಮರಗಳನ್ನು ಕಡಿದು ವಿಲೇವಾರಿ ಮಾಡಲಾಗಿತ್ತು. ಅವರನ್ನು ಅಮಾನತಿನಲ್ಲಿರಿಸಬೇಕು ಎಂದು ಶಿವಕುಮಾರ್ ಎಂಬುವರು ಮನವಿ ಸಲ್ಲಿಸಿದ್ದರು. ಅಲ್ಲದೇ ಇವರ ಅಧಿಕಾರಾವಧಿಯಲ್ಲಿಯೇ ಇವರ ಕರ್ತವ್ಯ ನಿರ್ಲಕ್ಷ್ಯತೆಯಿಂದಾಗಿ 2022-23ನೇ ಸಾಲಿನಲ್ಲಿ ಕಂಪನಿಯಲ್ಲಿ ನಷ್ಟ ಉಂಟಾಗಿತ್ತು.
ಇವರ ವಿರುದ್ಧ ಮತ್ತು ಇವರಿಗೆ ತಾಂತ್ರಿಕವಾಗಿ ಸಹಕರಿಸಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ಅಲ್ಲದೇ ಇವರನ್ನು ಕಂಪನಿಯ ಸೇವೆಯಿಂದ ಬಿಡುಗಡೆಗೊಳಿಸಬೇಕು ಹಾಗೂ ಇವರಿಂದಲೇ ಆರ್ಥಿಕ ನಷ್ಟವನ್ನು ವಸೂಲು ಮಾಡಬೇಕು ಎಂದೂ ಕೋರಿದ್ದರು.
ಅದೇ ರೀತಿ ಮೈಸೂರು ಷುಗರ್ಸ್ ಕಂಪನಿಯಲ್ಲಿ ಸರ್ಕಾರದ ಮೀಸಲಾತಿ ನೀತಿ ಉಲ್ಲಂಘಿಸಿ ನೇಮಕಾತಿಗಳನ್ನು ಮಾಡಲಾಗಿತ್ತು. ಸ್ವಯಂ ನಿವೃತ್ತಿ ಪಡೆದ ಮತ್ತು ನಿವೃತ್ತಿ ಹೊಂದಿದವರನ್ನು ಮರು ನೇಮಕ ಮಾಡಲಾಗಿತ್ತು. ಇಂತಹ ನೌಕರರನ್ನು ವಜಾಗೊಳಿಸಬೇಕು. ಹಾಗೂ ಕಂಪನಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಅಪ್ಪಾಸಾಹೇಬ ಪಾಟೀಲ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ದೂರುಗಳು ಸಲ್ಲಿಕೆಯಾಗಿದ್ದವು.

ಅಪ್ಪಾಸಾಹೇಬ ಪಾಟೀಲ್ ಅವರ ವಿರುದ್ಧದ ಆರೋಪಗಳ ಕುರಿತು ಆಡಳಿತ ಮಂಡಳಿಯಲ್ಲಿಯೂ ಚರ್ಚೆ ನಡೆದಿತ್ತು. ಏಕ ಸದಸ್ಯ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ನೇಮಿಸಿ ವರದಿ ಪಡೆಯಬೇಕು ಎಂದು ಸಭೆಯಲ್ಲಿ ನಿರ್ಣಯವಾಗಿತ್ತು. ವರದಿ ಬಂದ ನಂತರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕರು ವರದಿ ಮಾಡಿದ್ದರು ಎಂದು ಆದೇಶದಲ್ಲಿ ವಿವರಿಸಲಾಗಿದೆ.









