ಬಳ್ಳಾರಿ ಮೂಲದ ಕಂಪನಿಗೆ 39 ಕೋಟಿ ಸಾಲ; ಭದ್ರತೆಗೆ ನೀಡಿದ್ದ 57.79 ಎಕರೆಗೆ ತೆರಿಗೆ ರಸೀದಿ, ಆರ್‍‌ಟಿಸಿಯೇ ಇಲ್ಲ

ಬೆಂಗಳೂರು; ಸಾಲ ಮರುಪಾವತಿಯ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದೇ ಇದ್ದರೂ ಬಳ್ಳಾರಿ ಮೂಲದ ನೋಬಲ್‌ ಇಸ್ಪಾಟ್‌ ಅಂಡ್‌ ಎನರ್ಜಿಸ್‌ ಲಿಮಿಟೆಡ್‌ಗೆ 39 ಕೋಟಿ ಕೋಟಿ ಮೊತ್ತದ ಸಾಲವನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಮಂಜೂರು ಮಾಡಿದೆ. ಅಲ್ಲದೇ ಈ ಸಾಲ ಮಂಜೂರಾತಿಗೂ ಮುನ್ನ ಈ ಕಂಪನಿಯ ಆದಾಯ ತೆರಿಗೆ ರಿಟರ್ನ್ಸ್ ಮತ್ತು  ನಗದು ಹರಿವಿನ ಲೆಕ್ಕ ಸೇರಿದಂತೆ ಮತ್ತಿತರೆ ಮಹತ್ವದ ದಾಖಲಾತಿಗಳನ್ನು ಪಡೆದಿರಲಿಲ್ಲ ಶಾಸನಬದ್ಧ ಲೆಕ್ಕ ಪರಿಶೋಧಕರು ಬಹಿರಂಗಗೊಳಿಸಿದ್ದಾರೆ.

 

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ 2024-25ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕಪರಿಶೋಧನೆ ವರದಿಯು, ನೋಬಲ್‌ ಇಸ್ಪಾಟ್‌ ಅಂಡ್‌ ಎನರ್ಜಿ ಲಿಮಿಟೆಡ್‌ಗೆ ನಿಯಮಬಾಹಿರವಾಗಿ ಬಹುಕೋಟಿಯಷ್ಟು ಸಾಲ ನೀಡಿರುವುದನ್ನು ಬಯಲು ಮಾಡಿದೆ. ಅಲ್ಲದೇ ಸಾಲ ಮಂಜೂರಾತಿ ಪ್ರಕ್ರಿಯೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆದೇಶಗಳು, ಸುತ್ತೋಲೆಗಳನ್ನು ಹೇಗೆಲ್ಲಾ ಉಲ್ಲಂಘಿಸಿದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.

 

ಹಾಗೆಯೇ ಈ ಕಂಪನಿಯು ಸಾಲ ಪಡೆಯಲು ಬ್ಯಾಂಕ್‌ಗೆ ಭದ್ರತೆ ನೀಡಿದ್ದ ಸ್ವತ್ತುಗಳಲ್ಲಿಯೂ ಹಲವು ನ್ಯೂನತೆಗಳಿದ್ದವು. ಈ ವರದಿಯನ್ನು ಬ್ಯಾಂಕ್‌ನ ಅಧ್ಯಕ್ಷ ಬೆಳ್ಳಿ ಪ್ರಕಾಶ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಬಳ್ಳಾರಿ ಜಿಲ್ಲೆಯ ಮೋಕಾ ಹೋಬಳಿಯ ಸಿರಿವಾರ ಸುತ್ತಮುತ್ತಲಿನ 57.79 ಎಕರೆಗೂ ಮೀರಿದ ನೀಡಿದ್ದ ಸ್ವತ್ತುಗಳನ್ನು ಬ್ಯಾಂಕ್‌ಗೆ ಭದ್ರತೆ ರೂಪದಲ್ಲಿ ಒದಗಿಸಿತ್ತು. ಆದರೆ ಈ ಜಮೀನುಗಳಿಗೆ ಸಂಬಂಧಿಸಿದಂತೆ ಋಣಭಾರರಾಹಿತ್ಯ ಪ್ರಮಾಣವನ್ನೂ ಅಪೆಕ್ಸ್‌ ಬ್ಯಾಂಕ್‌ ಪಡೆದುಕೊಂಡಿರಲಿಲ್ಲ. ಅಲ್ಲದೇ ಈ ಎಲ್ಲಾ ಸ್ವತ್ತುಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ವರದಿ, ಇತ್ತೀಚೆಗೆ ಪಾವತಿಸಿದ್ದ ತೆರಿಗೆ ರಸೀದಿಯೂ ಇರಲಿಲ್ಲ. ಹೀಗಿದ್ದರೂ ಈ ಕಂಪನಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ 39 ಕೋಟಿಯಷ್ಟು ಸಾಲ ನೀಡಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

5 ಕೋಟಿ ಸಾಲ ಮಂಜೂರಾತಿಯ ನ್ಯೂನತೆಗಳ ಪಟ್ಟಿ

 

ನೋಬಲ್‌ ಇಸ್ಪಾಟ್‌ ಅಂಡ್‌ ಎನರ್ಜಿಸ್‌ ಲಿಮಿಟೆಡ್‌ಗೆ 5 ಕೋಟಿ ರು ಸಾಲ ಮಂಜೂರು ಮಾಡುವ ಮುನ್ನ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌, ಕಂಪನಿಯ ಆಡಳಿತ ಮಂಡಳಿಯ ಕೈಗೊಂಡಿದ್ದ ನಿರ್ಣಯ ಮತ್ತು ಆ ಸಭೆಗೆ ಹಾಜರಾಗಿದ್ದ ಸದಸ್ಯರ ಹಾಜರಾತಿ ಪಟ್ಟಿಯನ್ನೇ ಪಡೆದಿರಲಿಲ್ಲ.

 

 

ಅಲ್ಲದೇ 5 ಕೋಟಿ ಸಾಲ ಪಡೆದಿರುವ ನೋಬಲ್‌ ಇಸ್ಪಾಟ್‌ ಅಂಡ್‌ ಎನರ್ಜಿಸ್‌ ಲಿಮಿಟೆಡ್‌ನ ಮರು ಪಾವತಿಯ ಸಾಮರ್ಥ್ಯದ ಸ್ಪಷ್ಟ ಚಿತ್ರಣವನ್ನು ಪಡೆದಿಲ್ಲ. ಮಂಜೂರಾತಿ ಪತ್ರದ ನಿಯಮ 6(ಸಿ) ಪ್ರಕಾರ ಅಗತ್ಯ ನಗದು ಹರಿವಿನ ದಾಖಲೆಯನ್ನು ಪಡೆದಿಲ್ಲ.

 

 

ಮಂಜೂರಾತಿ ಪತ್ರದ ನಿಯಮ 7 ಪ್ರಕಾರ ಸ್ಥಿರಾಸ್ತಿಗಳ ಪಟ್ಟಿ, ಮತ್ತು ಇವುಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್‌ನ್ನು ರಚಿಸಲು ಅಧಿಕಾರ ನೀಡಿರುವ ಕಂಪನಿಯ ಆಡಳಿತ ಮಂಡಳಿಯ ಠರಾವನ್ನೇ ಪಡೆದಿಲ್ಲ ಎಂಬುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

 

 

 

 

ಹಾಗೆಯೇ 2023-24ನೇ ಸಾಲಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆಗೊಂಡ ಹಣಕಾಸು ದಾಖಲೆಗಳನ್ನೂ ಪಡೆದಿಲ್ಲ. ಕೇವಲ ತಾತ್ಕಾಲಿಕ ಹಣಕಾಸು ತಃಖ್ತೆಗಳನ್ನಷ್ಟೇ ಕಡತದಲ್ಲಿರಿಸಿದೆ. ಕಂಪನಿ ಕಾಯ್ದೆ 2013ರ ನಿಯಮ 180(1)(ಸಿ) ಪ್ರಕಾರ ಒಂದು ವೇಳೆ ತಂದ ಸಾಲಗಳ ಮೊತ್ತ (ಉದ್ದೇಶಿತ ಸಾಲದ ಮೊತ್ತವನ್ನು ಒಳಗೊಂಡಂತೆ) ಪಾವತಿಯಾದ ಷೇರು ಬಂಡವಾಳ ಮೊತ್ತ ಹಾಗೂ ಸ್ವತಂತ್ರವಾದ ಮೀಸಲು ಮೊತ್ತವನ್ನು ಮೀರಿದಲ್ಲಿ ಕಂಪನಿಯು ಷೇರುದಾರರ ಸಾಮಾನ್ಯ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದಿಸಿದ ವಿಶೇಷ ಠರಾವು ಇರಬೇಕು. ಈ ದಾಖಲೆಯು ಅತ್ಯಂತ ಅವಶ್ಯಕವಾಗಿತ್ತು. ಆದರೆ ಈ ದಾಖಲೆಯನ್ನೇ ಕಂಪನಿಯು, ಬ್ಯಾಂಕ್‌ಗೆ ನೀಡಿಲ್ಲ. ಆದರೂ 5 ಕೋಟಿ ಸಾಲ ಮಂಜೂರಾಗಿದೆ.

 

 

ಸಾಲಗಾರ ಸಂಸ್ಥೆಯ ನಿರ್ದೇಶಕರನ್ನು ಮತ್ತು ಷೇರುದಾರರನ್ನು ಹೊಂದಿರುವ ಎಸ್‌ ಎಲ್‌ ಡಿ ಸ್ಟೀಲ್ಸ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಕಾರ್ಪೋರೇಟ್‌ ಖಾತರಿ ಮತ್ತು ಭದ್ರತೆ ಪಡೆದಿದೆ. ಆದರೆ ಈ ಸಂಬಂಧ ಕಂಪನಿ ಕಾಯ್ದೆ 2013ರ ನಿಯಮ 185ರ ಅನುಸಾರ ಅಗತ್ಯ ಷೇರುದಾರರ ಅನುಮೋದನೆಯನ್ನೇ ಪಡೆದಿಲ್ಲ ಎಂಬುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.

 

 

ಮತ್ತೊಂದು ವಿಶೇಷವೆಂದರೇ ನೋಬಲ್‌ ಇಸ್ಪಾಟ್‌ ಅಂಡ್‌ ಎನರ್ಜಿಸ್‌ ಲಿಮಿಟೆಡ್‌ನ ನಿರ್ದೇಶಕರಲ್ಲಿ ಒಬ್ಬರಾಗಿರುವ ಎದ್ದಲಪುರಿ ಶ್ರೀನಿವಾಸ್‌ ಅವರು, ಎಸ್‌ ಎಲ್‌ ಡಿ ಸ್ಟೀಲ್ಸ್‌ ಪ್ರೈವೈಟ್‌ ಲಿಮಿಟೆಡ್‌ನ ನಿರ್ದೇಶಕರೂ ಹೌದು.

 

2024-25ನೇ ಸಾಲಿನ ವರ್ಷಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಪಡೆದಿಲ್ಲ. ಮಂಜೂರಾತಿ ಪತ್ರದಲ್ಲಿನ ನಿಯಮಗಳ ಪ್ರಕಾರ ಕಂಪನಿಯು/ಸಾಲಗಾರರು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸುಪರ್ದಿಯಲ್ಲಿರುವ ಮೂಲ ಮಾರಾಟ ಪತ್ರವನ್ನು ಸಮೂಹ ಬ್ಯಾಂಕ್‌ಗಳಿಗೆ ಸಾಲ ಮಂಜೂರಾದ ದಿನಾಂಕದಿಂದ 6 ತಿಂಗಳೊಳಗೇ ಸಲ್ಲಿಸಬೇಕು. ಆದರೆ 2025ರ ಜೂನ್‌ 3ರಲ್ಲಿದ್ದಂತೆ ನಿಗದಿತ 6 ತಿಂಗಳ ಅವಧಿ ಪೂರ್ಣಗೊಂಡಿದ್ದರೂ ಸಹ ಈ ಸಂಬಂಧ ಸಂಗ್ರಹಿಸಿದ ಮೂಲ ದಾಖಲಾತಿಗಳನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ.

 

‘ಮಂಜೂರಾತಿ ನಿಬಂಧನೆಗಳನ್ನು ಪೂರೈಸದಿರುವುದು, ಒಪ್ಪಂದದಲ್ಲಿನ ನಿಯಮಗಳನ್ನು ಪಾಲಿಸದಿರುವುದು ಎತ್ತಿ ತೋರಿಸುತ್ತದೆ. ಈ ಸಂಬಂಧ ಬ್ಯಾಂಕ್‌, ದಂಡ ಬಡ್ಡಿಯನ್ನು ವಿಧಿಸಬೇಕು. ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

 

 

34 ಕೋಟಿ ಮಂಜೂರಾತಿಯಲ್ಲಿಯೂ ಲೋಪ

 

ಅದೇ ರೀತಿ ಇದೇ ಕಂಪನಿಗೆ 34 ಕೋಟಿ ರು ಸಾಲವನ್ನು ಮಂಜೂರು ಮಾಡಿರುವುದರಲ್ಲಿಯೂ ಹಲವು ನ್ಯೂನತೆಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

 

ಈ ಕಂಪನಿಯ ಸ್ಥಾವರ ಮತ್ತು ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ವಿಮಾ ಪಾಲಿಸಿಯ ಚಾಲ್ತಿ ಅವಧಿಯು 2025ರ ಫೆ.21ಕ್ಕೆ ಮುಕ್ತಾಯಗೊಂಡಿತ್ತು. ಆದರೆ ಈ ಕಂಪನಿಗೆ 34 ಕೋಟಿ ರು ಸಾಲವನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಕಂಪನಿಯ ನವೀಕೃತ ವಿಮಾ ಪಾಲಿಸಿಯನ್ನು ಅಪೆಕ್ಸ್‌ ಬ್ಯಾಂಕ್‌ ಪಡೆದಿಲ್ಲ.

 

ಹಾಗೆಯೇ ಮಂಜೂರಾತಿ ಪತ್ರದಲ್ಲಿ ಸಮೂಹ ಬ್ಯಾಂಕ್‌ಗಳ ಪರವಾಗಿ ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಸಾಲದಾತ ಸಂಸ್ಥೆಯ ಸ್ವತಂತ್ರ ಇಂಜಿನಿಯರನ್ನು ನೇಮಕ ಮಾಡಿಕೊಳ್ಳಬೇಕು. ಆದರೆ ಈ ಕಂಪನಿಯು ಮೇಲ್ವಿಚಾರಣೆಗೆ ಸ್ವತಂತ್ರ ಇಂಜನಿಯರನ್ನು ನೇಮಕ ಮಾಡಿಕೊಂಡಿರಲಿಲ್ಲ. ಅಲ್ಲದೇ ಯಾವುದೇ ವರದಿಗಳನ್ನೂ ಸಾಲದಾತ ಸಂಸ್ಥೆಗಳು ಸ್ವೀಕರಿಸಿರಲಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ಈ ರೀತಿ ಸ್ವತಂತ್ರ ಇಂಜಿನಿಯರ್‍‌ನ್ನು ನೇಮಕ ಮಾಡಿಕೊಳ್ಳದೇ ಸಾಲದ ಮೊತ್ತಗಳನ್ನು ಬಿಡುಗಡೆ ಮಾಡಿರುವುದು ಕ್ರಮಬದ್ಧವಾಗಿರುವುದಿಲ್ಲ,’ ಎಂದು ಲೆಕ್ಕ ಪರಿಶೋಧನೆ ವರದಿಯು ಅಭಿಪ್ರಾಯಪಟ್ಟಿರುವುದು ಗೊತ್ತಾಗಿದೆ.

 

 

ಹಾಗೆಯೇ 2024ರ ನವೆಂಬರ್‍‌ 28ರಂದು ಹೈಪಾಥಿಕೇಷನ್ ಡೀಡ್‌ ನ್ನು ನಿರ್ವಹಿಸಿದೆ. ಮತ್ತು ಅದನ್ನು ಒಂದು ಪ್ರತ್ಯೇಕವಾದ ದಾಖಲಾತಿಯೆಂದು ಪರಿಗಣಿಸಿಲ್ಲ. ಅದೇ ದಿನಾಂಕದ ಹೈಪಾಥೀಕೇಷನ್ ಡೀಡ್‌ನ ಮುಂದುವರೆದ ಭಾಗವೆಂದು ನೋಂದಾಯಿಸಿದೆ. ಅಲ್ಲದೇ ಹೈಪಾಥಿಕೇಷನ್ ಡೀಡ್‌ ಬ್ಯಾಂಕ್‌ನ ಸಾಲಕ್ಕೆ ಅಡಮಾನ ಮಾಡಿದ ಸ್ವತ್ತುಗಳ ಸಂಪೂರ್ಣ ವಿವರಗಳನ್ನು ಮತ್ತು ಅವುಗಳ ಷೆಡ್ಯೂಲ್‌ನ್ನು ಒಳಗೊಂಡಿಲ್ಲ. ಪ್ರಾಮಿಷರಿ ನೋಟ್‌ ಮತ್ತು ಡಿಪಿಎನ್‌ಗೆ ಸಂಬಂಧಿಸಿದಂತೆ ಡೆಲಿವೆರಿ ನೋಟ್‌ ಇ ಶ್ರೀನಿವಾಸ್‌ ಅವರ ಸಹಿಯನ್ನೇ ಹೊಂಧಿಲ್ಲ. ಹಾಗೂ ಕಂಪನಿ ಸೀಲು ಹಾಕಿಲ್ಲ. ಆದರೂ 34 ಕೋಟಿ ರು ಸಾಲವನ್ನು ಮಂಜೂರು ಮಾಡಿದೆ.

 

ಮಂಜೂರಾತಿ ನಿಯಮಗಳಲ್ಲಿ ಪ್ರವರ್ತಕರ ಕೊಡುಗೆಯಾಗಿ ಶೇ. 5ರಷ್ಟನ್ನು ಬ್ಯಾಂಕ್‌ಗೆ ಪಾವತಿಸಬೇಕು. ಆದರೆ ಇದನ್ನು ಪ್ರವರ್ತಕರು ತಮ್ಮ ಸ್ವಂತ ಬಂಡವಾಳದಿಂದ ಪಾವತಿಸಿಲ್ಲ.ಬದಲಿಗೆ ಬ್ಯಾಂಕ್‌ ಮಂಜೂರು ಮಾಡಿದ್ದ ಮೊತ್ತದಲ್ಲೇ ಶೇ. 5ರಷ್ಟನ್ನು ಸಾಲಗಾರರಿಗೆ ಬಿಡುಗಡೆ ಮಾಡಿಲ್ಲ. ಆಂತರಿಕವಾಗಿ ಪ್ರವರ್ತಕ ಕೊಡುಗೆಯನ್ನು ವರ್ಗಾಯಿಸಿ, ನಿಯಮಗಳಿಗೆ ವಿರುದ್ಧವಾಗಿ ಈ ಪ್ರಕರಣವನ್ನು ಪರಿಗಣಿಸಿರುವುದು ತಿಳಿದು ಬಂದಿದೆ.

 

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸುತ್ತೋಲೆ ಪ್ರಕಾರ (ಸಂಖ್ಯೆ; RBI/DOS/2024-25/118 DOS.CO.FMG.SEC NO 5/23.04.001/2024-25) ಬ್ಯಾಂಕ್‌ 5 ಕೋಟಿ ರು ಗಳಿಗೆ ಮೇಲ್ಪಟ್ಟು ನೀಡಿದ ಎಲ್ಲಾ ಸಾಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಿಯತಕಾಲಿಕವಾಗಿ ಪೂರ್ಣ ಸಾಲದ ಚುಕ್ತಾ ಅಥವಾ ಮರು ಪಾವತಿ ಆಗುವವರೆಗೂ ಎಲ್ಲಾ ಟೈಟಲ್‌ ದಾಖಲೆಗಳು ಮತ್ತು ಇತರೆ ದಾಖಲೆಗಳನ್ನು ಕಾನೂನು ಲೆಕ್ಕ ಪರಿಶೋಧನೆ ಮತ್ತು ಪುನರ್‍‌ ವಿಮರ್ಶೆಗೆ ಒಳಪಡಿಸಬೇಕು.

 

ಆದರೆ ಈ ಪ್ರಕರಣದಲ್ಲಿ ಈ ಯಾವ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಮಾಡಿಲ್ಲ. ಅಲ್ಲದೇ ಸಣ್ಣ ಹಣಕಾಸು ಬ್ಯಾಂಕ್‌ಗಳಿಗೆ ಸ್ಥಳೀಯ ಪ್ರದೇಶದ ಬ್ಯಾಂಕ್‌ಗಳಿಗೆ ಮತ್ತು ಸ್ಥಳೀಯ ಗ್ರಾಮೀಣ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಟೈಟಲ್‌ ಡೀಡ್ಸ್‌ ಮತ್ತು ಇತರೆ ದಾಖಲೆಗಳ ಕಾನೂನು ಲೆಕ್ಕ ಪರಿಶೋಧನೆ ಅವಧಿಗೆ ಕೇವಲ 1 ಕೋಟಿಯಷ್ಟನ್ನೇ ನಿಗದಿಪಡಿಸಿತ್ತು.

 

57.79 ಎಕರೆ ಜಮೀನು ಭದ್ರತೆಯಲ್ಲಿಯೂ ಲೋಪ

 

ಬಳ್ಳಾರಿ ಜಿಲ್ಲೆಯ ಮೋಕಾ ಹೋಬಳಿಯ ಸಿರಿವಾರ ಸುತ್ತಮುತ್ತಲಿನ 57.79 ಎಕರೆಗೂ ಮೀರಿದ ನೀಡಿದ್ದ ಸ್ವತ್ತುಗಳನ್ನು ಬ್ಯಾಂಕ್‌ಗೆ ಭದ್ರತೆ ರೂಪದಲ್ಲಿ ಒದಗಿಸಿತ್ತು. ಆದರೆ ಈ ಜಮೀನುಗಳಿಗೆ ಸಂಬಂಧಿಸಿದಂತೆ ಋಣಭಾರರಾಹಿತ್ಯ ಪ್ರಮಾಣವನ್ನೂ ಅಪೆಕ್ಸ್‌ ಬ್ಯಾಂಕ್‌ ಪಡೆದುಕೊಂಡಿರಲಿಲ್ಲ.

 

 

 

 

 

 

 

 

 

ಈ ಎಲ್ಲಾ ಜಮೀನುಗಳ ಆರ್‍‌ಟಿಸಿ ದಾಖಲೆಗಳನ್ನು ‘ದಿ ಫೈಲ್‌’, ಭೂಮಿ ತಂತ್ರಾಂಶದ ಮೂಲಕ ಸ್ವತಂತ್ರವಾಗಿ ಪರಿಶೀಲಿಸಿದೆ.

 

ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮದ ಸರ್ವೆ ನಂಬರ್‍‌ 276ರಲ್ಲಿನ 7 ಎಕರೆ 62 ಗುಂಟೆ ಪರಿವರ್ತಿತ ಜಮೀನಿದೆ. ಭೂಮಿ ದಾಖಲೆಗಳ ಪ್ರಕಾರ ಈ ಜಮೀನು ಎಸ್‌ ಬಸವರಾಜ್ ಎಂಬುವರ ಹೆಸರಿನಲ್ಲಿದೆ. ಈ ಜಮೀನನ್ನು ಈ ಕಂಪನಿಯು ಬ್ಯಾಂಕ್‌ಗೆ ಭದ್ರತೆ ನೀಡಿತ್ತು.

 

 

ಈ ಜಮೀನನ್ನು ಬ್ಯಾಂಕ್‌ಗೆ ಭದ್ರತೆಯನ್ನಾಗಿ ನೀಡುವ ಸಂಬಂಧ ಪ್ಯಾನಲ್‌ನಲ್ಲಿದ್ದ ವಕೀಲರು ಕಾನೂನು ಪರಿಶೀಲನಾ ವರದಿಯ ಕಡೇ ಪುಟದಲ್ಲಿ ಸಹಿಯನ್ನೇ ಮಾಡಿರಲಿಲ್ಲ. ಕಡತದಲ್ಲಿ ಮೌಲ್ಯಮಾಪನ ವರದಿಯೂ ಇರಲಿಲ್ಲ. ಇತ್ತೀಚೆಗೆ ಪಾವತಿಸಿದ ತೆರಿಗೆ ರಸೀದಿಯೂ ಸಹ ಕಡತದಲ್ಲಿ ಇರಲಿಲ್ಲ. ಇತ್ತೀಚೆಗೆ ಪಡದ ಆರ್‍‌ಟಿಸಿ ಪ್ರತಿಯೂ ಸಹ ಇರಲಿಲ್ಲ.

 

ಅದೇ ರೀತಿ 2021ರ ಏಪ್ರಿಲ್‌ 19ರಿಂದ ಅಕ್ಟೋಬರ್‍‌ 11 ಅವಧಿಗೆ ಸಂಬಂಧಪಟ್ಟಂತೆ ಅಕ್ಟೋಬರ್‍‌ 13, 2021ರಿಂದ ಡಿಸೆಂಬರ್‍‌ 15, 2023ರವರ ಅವಧಿಗೆ ಸಂಬಂಧಪಟ್ಟಂಗತೆ ಡಿಸೆಂಬರ್‍‌ 17, 2023ರಿಂದ 2024ರ ಮಾರ್ಚ್‌ 31ರರ ಅವಧಿಗೆ ಋಣಭಾರರಾಹಿತ್ಯ ಪ್ರಮಾಣ ಪತ್ರವನ್ನೇ ಪಡೆದಿರಲಿಲ್ಲ.

 

ಅದೇ ರೀತಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮದ ಸರ್ವೆ ನಂಬರ್‍‌ 277ರಲ್ಲಿ 6 ಎಕರೆ 58 ಗುಂಟೆ ವಿಸ್ತೀರ್ಣದ ಪರಿವರ್ತನೆಗೊಂಡ ಜಮೀನಿದೆ. ಭೂಮಿ ದಾಖಲೆಗಳ ಪ್ರಕಾರ ಈ ಜಮೀನು ಸಹ ಎಸ್‌ ಬಸವರಾಜ್‌ ಅವರ ಹೆಸರಿನಲ್ಲಿದೆ. ಈ ಜಮೀನಿಗೆ ಸಂಬಂಧಿಸಿದಂತೆಯೂ ಯಾವುದೇ ಮೌಲ್ಯಮಾಪನ ವರದಿಯನ್ನು ಕಡತದಲ್ಲಿ ಇರಲಿಲ್. ಆರ್‍‌ಟಿಸಿ ಪ್ರತಿ, ತೆರಿಗೆ ರಸೀದಿ, ಋಣಭಾರರಾಹಿತ್ಯ ಪ್ರಮಾಣ ಪತ್ರವನ್ನೂ ಪಡೆದುಕೊಂಡಿರಲಿಲ್ಲ.

 

 

ಸರ್ವೆ ನಂಬರ್‍‌ 274/1ರಲ್ಲಿನ 5 ಎಕರೆ 87 ಗುಂಟೆ ವಿಸ್ತೀರ್ಣದ ಪರಿವರ್ತಿತ ಭೂಮಿಯನ್ನೂ ಸಹ ಭದ್ರತೆಯಾಗಿ ನೀಡಿತ್ತು. ಈ ಜಮೀನು ಎರ್‍ರಿಸ್ವಾಮಿ ಎಂಬುವರ ಹೆಸರಿನಲ್ಲಿದೆ.

 

 

ಈ ಜಮೀನಿಗೂ ಸಂಬಂಧಿಸಿದಂತೆ ಮೌಲ್ಯಮಾಪನ ವರದಿ ಇರಲಿಲ್ಲ. ಅದೇ ರೀತಿ ಆರ್‍‌ಟಿಸಿ ಪ್ರತಿಯೂ ಇರಲಿಲ್ಲ. ಋಣಭಾರರಾಹಿತ್ಯ ಪ್ರಮಾಣಪತ್ರವೂ ಇರಲಿಲ್ಲ.

 

 

ಸರ್ವೆ ನಂಬರ್‍‌ 275/2ರಲ್ಲಿಯೂ 4 ಎಕರೆ 92 ಗುಂಟೆ ಪರಿವರ್ತಿತ ಜಮೀನಿದೆ. ಈ ಜಮೀನು, ಎಸ್‌ ಬಸವರಾಜ್ ಎಂಬುವರ ಹೆಸರಿನಲ್ಲಿದೆ.

 

 

ಇದೇ ಗ್ರಾಮದ ಸರ್ವೆ ನಂಬರ್‍‌ 312/ಎ ರಲ್ಲಿ ಎಸ್‌ ಬಸವರಾಜ್‌ ಅವರ ಹೆಸರಿನಲ್ಲಿ 2 ಎಕರೆ 50 ಗುಂಟೆ ಇದೆ.

 

 

 

ಈ ಜಮೀನಿನ ಮೇಲೆ ನೋಬಲ್‌ ಡಿಸ್ಟರೀಸ್‌ ಮತ್ತು ಪವರ್‍‌ ಲಿ, ಮಾನಸೆಂಟ್‌ ಕಂಪನಿಯ ಹಕ್ಕುದಾರಿಕೆ ಇದೆ. ಈ ಜಮೀನಿಗೆ ಸಂಬಂಧಿಸಿದಂತೆ 14,18, 488 ರು ವಾಣಿಜ್ಯ ತೆರಿಗೆ ಬಾಕಿ ಇದೆ.

 

 

 

312/ಬಿ ರಲ್ಲಿನ 9 ಎಕರೆ 02 ಗುಂಟೆ ಪರಿವರ್ತಿತ ಜಮೀನಿದೆ. ಈ ಜಮೀನು ಎಸ್‌ ಬಸವರಾಜ್‌ ಹೆಸರಿನಲ್ಲಿದೆ. ಆದರೆ ಈ ಭೂಮಿಯು ವಿವಾದದಲ್ಲಿದೆ. ಹೀಗಾಗಿ ಇದರ ಹಕ್ಕುದಾರಿಕೆಯು ತಹಶೀಲ್ದಾರ್‍‌ ಹೆಸರಿನಲ್ಲಿದೆ.

 

274/2ರಲ್ಲಿ 5 ಎಕರೆ 88 ಗುಂಟೆ ಜಮೀನೂ ಸಹ ಎಸ್‌ ಬಸವರಾಜ್ ಹೆಸರಿನಲ್ಲಿದೆ. ಭೂಮಿ ದಾಖಲೆಗಳಲ್ಲಿ ನಮೂದಿಸಿರುವ ಪ್ರಕಾರ ಈ ಜಮೀನಿನ ಮೇಲೆ ಹಕ್ಕುದಾರಿಕೆಯು ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ಹೆಸರಿನಲ್ಲಿದೆ. ಹಾಗೆಯೇ 2,64, 29,116 ರು.ಗಳಿಗೆ ಆಯ್ಕೆ ಎಂದು ನಮೂದಾಗಿರುವುದು ಗೊತ್ತಾಗಿದೆ.

 

 

 

 

 

ಸರ್ವೆ ನಂಬರ್‍‌ 263/ಎ/3ನಲ್ಲಿ 85 ಗುಂಟೆ, ಎ/4ರಲ್ಲಿ 2 ಎಕರೆ 28 ಗುಂಟೆ,

 

 

ಎ/5ರಲ್ಲಿ 2 ಎಕರೆ 28 ಗುಂಟೆ,

 

 

ಎ/6ರಲ್ಲಿ 4 ಎಕರೆ 56 ಗುಂಟೆ,

 

 

ಎ/7ರಲ್ಲಿ 3 ಎಕರೆ 65 ಗುಂಟೆ ವಿಸ್ತೀರ್ಣದ ಪರಿವರ್ತಿತ ಜಮೀನಿದೆ.  ವಿಶೇಷವೆಂದರೇ ಸರ್ವೆ ನಂಬರ್ 263/ಎ/7ರಲ್ಲಿನ ಜಮೀನು, ಕೆ ವಿ ಆರ್‍‌ ಪ್ರಸಾದ್‌ ಎಂಬುವರ ಹೆಸರಿನಲ್ಲಿದೆ.  ಈ ಕೆ ವಿ ಆರ್ ಪ್ರಸಾದ್‌ ಎಂಬುವರು ಕೆ ಸಿ ಕೊಂಡಯ್ಯ ಅವರ ಮಗ ಎಂದು ಭೂಮಿ ದಾಖಲೆಗಳಲ್ಲಿ ನಮೂದಾಗಿದೆ. ಕೆ ಸಿ ಕೊಂಡಯ್ಯ ಅವರು ಕಾಂಗ್ರೆಸ್‌ ಮುಖಂಡರು ಎಂದು ಗೊತ್ತಾಗಿದೆ.

 

 

 

ಸರ್ವೆ ನಂಬರ್‍‌ 265/ಬಿ ನಲ್ಲಿ 5 ಎಕರೆ 88 ಗುಂಟೆ ಪರಿವರ್ತಿತ ಜಮೀನಿದೆ. ಇದರ ಮಾಲೀಕರು ಸಹ ಎಸ್‌ ಬಸವರಾಜ್‌ ಎಂದಿದೆ. ಈ ಜಮೀನೂ ಸಹ ವಿವಾದಗಳಿಂದ ಕೂಡಿದೆ.

 

 

271/ಎ/1ರಲ್ಲಿಯೂ 2 ಎಕರೆ 22 ಗುಂಟೆ, 273/3ನಲ್ಲಿ 3 ಎಕರೆ 38 ಗುಂಟೆ ಜಮೀನಿದೆ. ಈ ಜಮೀನೂ ಸಹ ಎಸ್‌ ಬಸವರಾಜ್ ಹೆಸರಿನಲ್ಲಿದೆ. ಇದು ಸಹ ವಿವಾದಗಳಿಂದ ಕೂಡಿದೆ. 2010ರಲ್ಲಿ ಈ ಜಮೀನು ಪರಿವರ್ತಿಗೊಂಡಿದೆ.

 

 

ಮೇಲಿನ ಈ ಎಲ್ಲಾ ಜಮೀನುಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ವರದಿ, ತೆರಿಗೆ ರಸೀದಿ, ಋಣಭಾರರಾಹಿತ್ಯ ಪ್ರಮಾಣ ಪತ್ರವನ್ನೇ ಪಡೆದುಕೊಂಡಿರಲಿಲ್ಲ.

 

ಅದೇ ರೀತಿ ಕೈಗಾರಿಕೆ ಉದ್ದೇಶಕ್ಕೆ ಪರಿವರ್ತನೆಗೊಂಡಿದ್ದ ಸರ್ವೆ ನಂಬರ್‍‌ 140ರಲ್ಲಿನ 4 ಎಕರೆ 80 ಗುಂಟೆ ಜಮೀನು, 146/ಎ ನಲ್ಲಿ 28 ಗುಂಟೆ ಜಮೀನನ್ನೂ ಭದ್ರತೆಯನ್ನಾಗಿ ಒದಗಿಸಿತ್ತು. ಕೈಗಾರಿಕೆ ಉದ್ದೇಶಕ್ಕಾಗಿ ಪರಿವರ್ತನೆಗೊಂಡ ಸರ್ವೆ ನಂಬರ್‍‌ 146/ಬಿರಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಇಎಂಟಿಡಿಯಲ್ಲಿ ಮಾರಾಟ ಪತ್ರದಲ್ಲಿ ಅವಧಿ ಸಾಲ ಒಪ್ಪಂದ ಪತ್ರದಲ್ಲಿ ಮತ್ತು ಮೌಲ್ಯಮಾಪನ ವರದಿಯಲ್ಲಿ ನಮೂದಿಸಿದ್ದ ಸ್ವತ್ತಿನ ಸುತ್ತಳತೆ ವಿವರಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದವು.

 

 

ಈ ದಾಖಲಾತಿಗಳಲ್ಲಿ ನಮೂದಿಸಿರುವ ಸುತ್ತಳತೆ ವಿವರಗಳು ಒಂದಕ್ಕೊಂದು ತಾಳೆಯಾಗಿರುವುದಿಲ್ಲ. ಈ ಕಾರಣಕ್ಕಾಗಿ ಭದ್ರತೆಯಾಗಿ ನೀಡಿರುವ ಸ್ವತ್ತಿಗೆ ಸಂಬಂಧಿಸಿದಂತೆ ನಿಖರವಾದ ವಿಸ್ತೀರ್ಣ ಬಗ್ಗೆ ಹಾಗೂ ಈ ಸ್ವತ್ತು ಯಾವ ಪ್ರದೇಶದಲ್ಲಿದೆ ಎಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ ಎಂದು ಲೆಕ್ಕ ಪರಿಶೋಧಕರು ಅನುಮಾನ ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts