ಭಾರೀ ಅಕ್ರಮ; ಡಿ ಸಿ ಖಾತೆ, ತಹಶೀಲ್ದಾರ್ ಖಾತೆಯ ಮೊತ್ತದಲ್ಲಿ ಬಹು ಕೋಟಿ ವ್ಯತ್ಯಾಸ, ವಿಪತ್ತು ನಿಧಿ ಲೂಟಿ?

ಬೆಂಗಳೂರು;  ವಿಪತ್ತು ಪೀಡಿತ ಪ್ರದೇಶಗಳ ಭಾದಿತ ಜನರ ಗುಂಪಿಗೆ ಒಂದೇ ನಮೂನೆಯಲ್ಲಿ  ಪರಿಹಾರ ಪಾವತಿ ಮಾಡಿರುವ ಸರ್ಕಾರವು,  ಹಲವರಿಗೆ  ಪರಿಹಾರ ಪಾವತಿಸಿಲ್ಲ. ಈಗಾಗಲೇ ಮಾಡಿರುವ  ಈ  ಪಾವತಿಗಳಿಗೆ  ದೃಢೀಕರಣವನ್ನೂ ಮಾಡಿಲ್ಲ. ಹಾಗೆಯೇ ರಾಜ್ಯದ ಹಲವು ತಾಲೂಕುಗಳು,  ಪಾವತಿಗಳಿಗೆ ಸಂಬಂಧಿಸಿದಂತೆ ಮತ್ತು  ಪಾವತಿಸದೇ ಹಿಂದಿರುಗಿದ ಚೆಕ್‌ಗಳ ಲೆಕ್ಕವನ್ನೂ ಇಟ್ಟಿಲ್ಲ.

 

ಅದೇ ರೀತಿ ವಿಪತ್ತು ನಿಧಿಗೆ ಬಿಡುಗಡೆಯಾಗಿರುವ ಮೊತ್ತಕ್ಕೆ ಸಂಬಂಧಿಸಿದಂತೆ ಜಿಲ್ಲಾ ಖಾತೆಗಳು ಮತ್ತು ತಾಲೂಕು ಖಾತೆಗಳಲ್ಲಿ ಅಪಾರ ವ್ಯತ್ಯಾಸ ಕಂಡು ಬಂದಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಒಟ್ಟಾರೆ 50.84 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ.

 

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿರುವ ವರದಿಯು ಕರ್ನಾಟಕದಲ್ಲಿ ವಿಪತ್ತು ಕಾರ್ಯನಿರ್ವಹಣೆಯಲ್ಲಿ ಭಾರೀ ಪ್ರಮಾಣದ ಹಣಕಾಸು ಅಪರಾ ತಪರಾಗಳ ವಿವಿಧ ಮುಖಗಳನ್ನು ತೆರೆದಿಟ್ಟಿದೆ.

 

ಸಿದ್ದರಾಮಯ್ಯ ಮೊದಲ ಅವಧಿ, ಹೆಚ್‌ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವಧಿ ತನಕವೂ ಲೆಕ್ಕ ತಪಾಸಣೆ ನಡೆದಿದೆ.  ವಿಪತ್ತು  ನಿರ್ವಹಣೆ ಮತ್ತು ಬಳಕೆಯಾಗಿರುವ ನಿಧಿ ಕುರಿತು  ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು  ವರದಿ ನೀಡಿದ್ದಾರೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ  ಲಭ್ಯವಾಗಿದೆ.

 

 

ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣದ ಅಂತರ ವರ್ಗಾವಣೆ ಮತ್ತಿತರ ಬಾಬ್ತುಗಳಿಗೆ ಸಂಬಂಧಿಸಿದಂತೆ  ದಾಖಲೆಗಳೇ ಲಭ್ಯವಿಲ್ಲದಿರುವುದು ತಾಲೂಕುಗಳ ವಹಿವಾಟುಗಳನ್ನು ದೃಢಪಡಿಸುವುದು ಲೆಕ್ಕ ಪರಿಶೋಧನೆಗೂ ಕಷ್ಟಕರವಾಗಿತ್ತು. ಹಣಕಾಸಿನ ಈ ದುರಾಡಳಿತದ ಬಗ್ಗೆ ಸಿಎಜಿ ನೀಡಿರುವ ವರದಿಯು, ರಾಜ್ಯ ವಿಪತ್ತು ಕಾರ್ಯಪಡೆಯ ಅನುದಾನ ಬಳಕೆಯಲ್ಲಿಯೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದೆ.

 

ಹೀಗೆ  ಕೋಟಿ ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಿದ್ದರೂ ಸಹ  ಹಲವು ತಹಶೀಲ್ದಾರ್‍‌ಗಳು ಯಾವುದೇ ದಾಖಲೆಗಳನ್ನೂ ಸಿಎಜಿಗೆ ಹಾಜರುಪಡಿಸಿಲ್ಲ. ನಗದು ಪುಸ್ತಕ ನಿರ್ವಹಣೆ ಮತ್ತು ಬ್ಯಾಂಕ್‌ ಖಾತೆಗಳ ನಿರ್ವಹಣೆಯಲ್ಲಿಯೂ ಹಲವು ಅಕ್ರಮಗಳು ನಡೆದಿವೆ ಎಂದು ಸಿಎಜಿಯು ಬಹಿರಂಗಗೊಳಿಸಿದೆ.

 

ಪ್ರವಾಹ, ಬರ, ಮಳೆ ಪ್ರವಾಹ ಭೂ ಕುಸಿತ ಸೇರಿದಂತೆ ಇನ್ನಿತರೆ ವಿಪತ್ತುಗಳಿಂದ ಬಾಧಿತವಾಗದೇ ಇದ್ದರೂ ಸಹ ಜಿಲ್ಲಾಧಿಕಾರಿಗಳ ಹೆಸರಿನಲ್ಲಿದ್ದ ಪಿ ಡಿ ಖಾತೆಯಲ್ಲಿ 5 ಕೋಟಿ ಗಿಂತ ಕಡಿಮೆ ಹಣವಿದೆ ಎಂದು ಉಲ್ಲೇಖಿಸಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದಾರೆ.

 

ವಿಪತ್ತು ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಾಲಕಾಲಕ್ಕೆ ಬಿಡುಗಡೆ ಮಾಡಿದ್ದ ಅನುದಾನ, ನಿಧಿಗಳನ್ನು ಅಸಮರ್ಪಕವಾಗಿ ಲೆಕ್ಕಚಾರ ಮಾಡಿರುವುದನ್ನೂ ಸಹ ಸಿಎಜಿಯು ಬಹಿರಂಗಗೊಳಿಸಿದೆ. ವಿಪತ್ತು, ಘಟಕಗಳು ಮತ್ತು ಲೆಕ್ಕ ಪತ್ರದ ಶೀರ್ಷಿಕೆಗೆ ಸಂಬಂಧಿಸದೇ ಇದ್ದರೂ  ಜಿಲ್ಲೆಗಳಿಗೆ, ತಾಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿರುವುದನ್ನು ಸಹ ಸಿಎಜಿಯು ಲೆಕ್ಕ ಪರಿಶೋಧನೆ ವೇಳೆ ಬೆಳಕಿಗೆ ತಂದಿದೆ.

 

‘ರಾಜ್ಯಮಟ್ಟದಿಂದ ನಿಧಿ ಬಿಡುಗಡೆ ಆದೇಶಗಳ ಪರಿಶೀಲನೆಯ ನಂತರ ಲೆಕ್ಕ ಪರಿಶೋಧನೆ ಬಿಡುಗಡೆಗಳು ವಿಪತ್ತು ನಿರ್ದಿಷ್ಟ/ ಘಟಕ ನಿರ್ದಿಷ್ಟವಲ್ಲ ಮತ್ತು ಅನೇಕ ಬಾರಿ ಅನೇಕ ವಿಪತ್ತುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಖಾತೆಯ ಒಂದೇ ಉದ್ದೇಶದ ಶೀರ್ಷಿಕೆಯಡಿಯಲ್ಲಿ ಒಳಗೊಂಡಿದೆ,’ ಎಂದು ಲೆಕ್ಕ ಪರಿಶೋಧನೆಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

ಹಾಗೆಯೇ ಪ್ರವಾಹ-ಬರ, ಮಳೆ-ಪ್ರವಾಹ, ಭೂ ಕುಸಿತ ಇತ್ಯಾದಿ ವಿಪತ್ತುಗಳಿಂದ ಬಾಧಿತವಾಗದೇ ಇದ್ದರೂ ಸಹ ಪಿಡಿ ಖಾತೆಗಳಲ್ಲಿ ಕೊರತೆಯುಳ್ಳ ಶಿಲ್ಕು 5 ಕೋಟಿ ಗಿಂತ ಕಡಿಮೆ ಇದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಹಣ ಬಿಡುಗಡೆ ಮಾಡಿರುವ ಹಲವು ನಿದರ್ಶನಗಳನ್ನು ಲೆಕ್ಕ ಪರಿಶೋಧನೆಯು ಹೊರಗೆಡವಿರುವುದು ತಿಳಿದು ಬಂದಿದೆ.

 

‘ಅದಲ್ಲದೇ ಜಿಲ್ಲೆಗಳಿಂದ ತಾಲೂಕುಗಳಿಗೆ ಆದ ಬಿಡುಗಡೆಗಳು ವಿಪತ್ತುಗಳು/ಘಟಕಗಳು ಅಥವಾ ಲೆಕ್ಕಪತ್ರದ ಶೀರ್ಷಿಕೆಗೆ ಸಂಬಂಧಿಸಿಲ್ಲ. ಕೋವಿಡ್‌ 19ರ ವೆಚ್ಚವೂ ಸೇರಿದಂತೆ ಇನ್ನಿತರೆ  ವಿಪತ್ತುವಾರು ಸ್ವೀಕೃತ, ವೆಚ್ಚಗಳಿಗೆ ಯಾವುದೇ ನಿರ್ದಿಷ್ಟ ಲೆಕ್ಕವಿಲ್ಲದೇ ಎಲ್ಲಾ ಪರೀಕ್ಷಾ ತನಿಖೆ  ನಡೆಸಿದ ಜಿಲ್ಲೆಗಳಲ್ಲಿ ನಗದು ಪುಸ್ತಕವನ್ನು ವಾಡಿಕೆಯ ವಿಷಯದಂತೆ ನಿರ್ವಹಿಸಲಾಗಿದೆ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಜಿಲ್ಲಾಧಿಕಾರಿಗಳು ತಾಲೂಕುಗಳು ಮತ್ತು ಇತರೆ ಅನುಷ್ಠಾನಗಳ ಏಜೆನ್ಸಿಗಳಿಗೆ ಸ್ಥಳೀಯ ಅಗತ್ಯ ಬೇಡಿಕೆಗಳ ಆಧಾರದ ಮೇಲೆ ಖಜಾನೆ ಚೆಕ್‌ಗಳ ಮೂಲಕ ಹಣ ಬಿಡುಗಡೆ ಮಾಡಿದ್ದಾರೆ. ತಾಲೂಕುಗಳು ಮತ್ತು ಅನುಷ್ಠಾನ ಸಂಸ್ಥೆಗಳು ತಮ್ಮ ಬ್ಯಾಂಕ್‌ ಖಾತೆಗಳಲ್ಲಿ ವಿಪತ್ತು ನಿರ್ವಹಣೆ ನಿಧಿಯನ್ನು ನಿರ್ವಹಿಸುತ್ತವೆ.

 

ತಾಲೂಕುಗಳು ಪರಿಹಾರ ಪಾವತಿ, ಪರಿಹಾರ ಕೇಂದ್ರಗಳ ಕಾರ್ಯಾಚರಣೆ, ತಾತ್ಕಾಲಿಕ ಪುನಸ್ಥಾಪನೆ ಮುಂತಾದ ಚಟುವಟಿಕೆಗಳಿಗೆ ಹಣ ಬಳಸಲಾಗಿದೆ. ಅದೇ ರೀತಿ ಅನುಷ್ಟಾನ ಸಂಸ್ಥೆಗಳು ಸಹ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಅವರಿಗೆ ವಹಿಸಿದ ಕಾಮಗಾರಿಗಳನ್ನು ಕಾರ್ಯನಿರ್ವಹಿಸುತ್ತವೆ. ಜಿಲ್ಲೆಗಳಂತೆಯೇ ಯಾವುದೇ ತಾಲೂಕುಗಳಲ್ಲಿ ವಿಪತ್ತವಾರು ಘಟಕವಾರು ವಿವರಗಳನ್ನು ನಿರ್ವಹಿಸಿಲ್ಲ ಎಂದು ಸಿಎಜಿ ವರದಿಯು ಮುನ್ನೆಲೆಗೆ ತಂದಿದೆ.

 

ನಗದು ಪುಸ್ತಕ ನಿರ್ವಹಣೆಯಲ್ಲಿ ಅಕ್ರಮಗಳು

 

ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ತಾಲೂಕುಗಳು ನಗದು ಪುಸ್ತಕಗಳನ್ನು ನಿರ್ವಹಿಸಿಲ್ಲ ಮತ್ತು ಅವುಗಳನ್ನು ನವೀಕರಿಸಿಲ್ಲ. ನಿರ್ವಹಿಸಲಾಗಿರುವ ನಗದು ಪುಸ್ತಕಗಳಲ್ಲಿನ ನಮೂದುಗಳು ಸಹ ಅನುಚಿತವಾಗಿವೆ. ಪಾವತಿಗಳ ನಿರೂಪಣೆಯನ್ನು ದಾಖಲಿಸಿಲ್ಲ. ಒಂದೇ  ನಮೂನೆಯಲ್ಲಿ ಜನರ ಗುಂಪಿಗೆ ಪಾವತಿ, ದೃಢೀಕರಿಸದ ಪಾವತಿಗಳು, ಪಾವತಿಸದೇ ಹಿಂದಿರುಗಿದ ಚೆಕ್‌ಗಳ ಲೆಕ್ಕವಿಲ್ಲ.

 

ಬ್ಯಾಂಕ್‌ ಖಾತೆಯ ಪಾಸ್‌ ಶೀಟ್‌ನಲ್ಲಿನ ನಮೂದುಗಳ ಆಧಾರದ ಮೇಲೆ ನಗದು ಪುಸ್ತಕಗಳನ್ನು ಬರೆಯಲಾಗಿದೆ ಎಂದು ಅನೇಕ ಛಾಯಾಚಿತ್ರಗಳು ಸಾಬೀತುಪಡಿಸುತ್ತೆ. ಆದರೆ ಪಾವತಿಗಾಗಿ ಚೆಕ್‌ಗಳನ್ನು ಡ್ರಾ ಮಾಡಿದಾಗೆಲ್ಲ ಈ ಲೋಪಗಳ ಹಿನ್ನೆಲೆಯಲ್ಲಿ , ನಕಲಿ ಫಲಾನುಭವಿಗಳಿಗೆ ಮೋಸದ ಪಾವತಿಗಳಾಗಿವೆಯೇ ಎಂಬುದನ್ನು ಸಹ ಲೆಕ್ಕ ಪರಿಶೋಧನೆಯಲ್ಲಿಸಿಎಜಿಗೂ  ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ಈ ವಿಷಯವನ್ನು ವಿವರವಾಗಿ ತನಿಖೆ ನಡೆಸಬೇಕಾಗಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

 

 

ಅಸಮರ್ಪಕ ನಿರ್ವಹಣೆ ಎಲ್ಲೆಲ್ಲಿ?

 

ಬೆಳಗಾವಿಯ ಅಥಣಿ ತಹಶೀಲ್ದಾರ್‍‌ ಕಚೇರಿಯಲ್ಲಿ 2019ರ ಜುಲೈ 19ರಿಂದ 2023ರ ಮಾರ್ಚ್‌ವರೆಗೆ ನಗದು ಪುಸ್ತಕವನ್ನು ಬರೆದಿಲ್ಲ. ಮೂಡಲಗಿ ತಹಶೀಲ್ದಾರ್‍‌, 2018-19ರಿಂದ 2022-23ರವರೆಗೆ, ನಿಪ್ಪಾಣಿ ತಹಶೀಲ್ದಾರ್‍‌ 2021ರ ಮಾರ್ಚ್‌ 25ರಿಂದ 2023ರ ಮಾರ್ಚ್‌ 31ವರೆಗೆ ನಗದು ಪುಸ್ತಕವನ್ನು ಬರೆದಿಲ್ಲ.

 

 

ಚಿಕ್ಕಬಳ್ಳಾಪುರದ ಚಿಂತಾಮಣಿ ತಹಶೀಲ್ದಾರ್‍‌ 2021ರ ನವೆಂಬರ್‍‌ವರೆಗೆ ನಗದು ಪುಸ್ತಕವನ್ನು ನಿರ್ವಹಿಸಿಲ್ಲ. ಬಾಗೇಪಲ್ಲಿ ತಹಶೀಲ್ದಾರ್‍‌ 2021ರ ಡಿಸೆಂಬರ್‍‌ವರೆಗೆ, ಗೌರಿಬಿದನೂರಿನ ತಹಶೀಲ್ದಾರ್‍‌ 2019ರ ಮೇ ವರೆಗೆ, ಗುಡಿಬಂಡೆ ತಹಶೀಲ್ದಾರ್‍‌ 2020ರ ಡಿಸೆಂಬರ್‍‌ವರೆಗೆ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ  ತಹಶೀಲ್ದಾರ್‍‌  2017-18ನೇ ಸಾಲಿನವರೆಗೆ ನಗದು ಪುಸ್ತಕವನ್ನೇ ನಿರ್ವಹಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

ಬಂಟ್ವಾಳದಲ್ಲಿ 7.03 ಕೋಟಿ ಏನಾಯಿತು?

 

ದಕ್ಷಿಣ ಕನ್ನಡದ ಸುಳ್ಳ ತಹಶೀಲ್ದಾರ್ 2021-22ರವರೆಗೆ ನಗದು ಪುಸ್ತಕವನ್ನು ನಿರ್ವಹಿಸಿರಲಿಲ್ಲ. ಮೂಡಬಿದಿರೆ ತಹಶೀಲ್ದಾರ್ 2018-19ರವರೆಗೆ, ಕಡಬ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಅವರು 2020-21ರವರೆಗೆ ನಗದು ಪುಸ್ತಕವನ್ನು ನಿರ್ವಹಿಸಿಲ್ಲ. ಅಲ್ಲದೇ 2017ರಿಂದ 2023ರವರೆಗೆ ಬಂಟ್ವಾಳಕ್ಕೆ 7.03 ಕೋಟಿ ರುಪಾಯಿಗಳನ್ನು ವಿಪತ್ತು ನಿರ್ವಹಣೆ ನಿಧಿಗೆ  ಬಿಡುಗಡೆ ಮಾಡಲಾಗಿತ್ತು. ಆದರೆ ಬಂಟ್ವಾಳದ ತಹಶೀಲ್ದಾರ್‍‌, ಈ ನಿಧಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನೂ ಸಿಎಜಿಗೆ ಹಾಜರುಪಡಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಅಧಿಕಾರಿಗಳು ಬ್ಯಾಂಕ್‌ ಪಾಸ್‌ ಶೀಟ್‌ಗಳ ನಮೂದುಗಳ ಆಧಾರದ ಮೇಲೆ ನಗದು ಪುಸ್ತಕವನ್ನು ಬರೆದಿದ್ದಾರೆಯೇ ಹೊರತು ವಹಿವಾಟು ನಡೆದಾಗ ಬರೆದಿಲ್ಲ. ಎಲ್ಲಾ ತಾಲೂಕುಗಳಲ್ಲಿ ಫಲಾನುಭವಿಯ ಹೆಸರು ಮತ್ತು ಮೊತ್ತವನ್ನು ಹೊರತುಪಡಿಸಿ ನಗದು ಪುಸ್ತಕದ ನಮೂದುಗಳು ಪಾವತಿಗಳ ಸರಿಯಾದ ನಿರೂಪಣೆಯನ್ನೇ ಒಳಗೊಂಡಿಲ್ಲ.

 

ದಾವಣಗೆರೆ ತಹಶೀಲ್ದಾರ್ ಅವರು ಪ್ರತಿ ತಿಂಗಳು ಒಂದು ನಮೂದು ಮಾತ್ರ ತೋರಿಸಿದ್ದರು. ಆದರೆ ವಹಿವಾಟುಗಳನ್ನು ಸ್ಪಷ್ಟವಾಗಿ ತೋರಿಸಿರಲಿಲ್ಲ. ಜಗಳೂರು ತಾಲೂಕಿನ ತಹಶೀಲ್ದಾರ್‍‌ ಅವರು 2019ರ ಮೇ ತಿಂಗಳಿನವರೆಗೆ ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ.

 

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಹಶೀಲ್ದಾರ್‍‌ 2018ರ ಜೂನ್‌ 30ರವರೆಗೆ ನಗದು ಪುಸ್ತಕ ನಿರ್ವಹಿಸಿರಲಿಲ್ಲ  ಮತ್ತು ರಟ್ಟಿಹಳ್ಳಿ ತಹಶೀಲ್ದಾರ್‍‌ 2020-21ನೇ ಸಾಲಿನವರೆಗೆ ನಗದು ಪುಸ್ತಕವನ್ನು ಬರೆದಿರಲಿಲ್ಲ. ಹಾಗೆಯೇ ಸೋಮವಾರಪೇಟೆ ತಹಶೀಲ್ದಾರ್‍‌ ಅವರು 2017-18ನೇ ಸಾಲಿನ ಮತ್ತು ಶಿವಮೊಗ್ಗದ ತಹಸೀಲ್ದಾರ್‍‌ 2022-23ನೇ ಸಾಲಿನ ಇಡೀ ವರ್ಷಕ್ಕೆ  ನಗದು ಪುಸ್ತಕ ಬರೆದಿರಲಿಲ್ಲ ಎಂಬುದನ್ನು ಸಿಎಜಿ ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಬ್ಯಾಂಕ್‌ ಖಾತೆಗಳ ನಿರ್ವಹಣೆಯಲ್ಲೂ ಅಕ್ರಮ

 

ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಒಟ್ಟು 23 ತಾಲೂಕುಗಳಲ್ಲಿನ ಬ್ಯಾಂಕ್‌ ಖಾತೆಗಳಲ್ಲೂ ವಿವಿಧ ರೀತಿಯ ಅಕ್ರಮಗಳು ನಡೆದಿವೆ ಎಂದು ಸಿಎಜಿಯು ಲೆಕ್ಕ ಪರಿಶೋಧನೆ ವೇಳೆ ಪತ್ತೆ ಹಚ್ಚಿದೆ.

 

 

ಈ ಎಲ್ಲಾ ತಾಲೂಕುಗಳು ಹೆಚ್‌ಡಿಎಫ್‌ಸಿ, ಆಕ್ಸಿಸ್‌, ಯೆಸ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳಲ್ಲಿ 77 ಖಾತೆಗಳನ್ನು ತೆರೆದಿವೆ. ಬೆಳಗಾವಿ ತಾಲೂಕಿನಲ್ಲಿ 03, ಗೋಕಾಕ್‌ನಲ್ಲಿ 3, ಖಾನಾಪುರದಲ್ಲಿ 2, ನಿಪ್ಪಾಣಿಯಲ್ಲಿ 4, ರಾಮದುರ್ಗದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 05, ಗೌರಿಬಿದನೂರಿನಲ್ಲಿ 5, ದಾವಣಗೆರೆಯಲ್ಲಿ 02, ನ್ಯಾಮತಿಯಲ್ಲಿ 2, ಬ್ಯಾಡಗಿಯಲ್ಲಿ 06, ಹಾನಗಲ್‌ನಲ್ಲಿ 2, ಹಾವೇರಿಯಲ್ಲಿ 04, ಹಿರೇಕೆರೂರಿನಲ್ಲಿ 04, ರಾಣೆಬೆನ್ನೂರಿನಲ್ಲಿ 04, ರಟ್ಟಿಹಳ್ಳಿಯಲ್ಲಿ 03, ಸವನಾರ್‍‌ನಲ್ಲಿ 02, ಶಿಗ್ಗಾಂವ್‌ನಲ್ಲಿ 06, ಕೊಡಗಿನ ಸೋಮವಾರಪೇಟೆಯಲ್ಲಿ 02, ವಿರಾಜಪೇಟೆಯಲ್ಲಿ 02, ಶಿವಮೊಗ್ಗದಲ್ಲಿ 02, ಭದ್ರಾವತಿಯಲ್ಲಿ 3, ಸಾಗರದಲ್ಲಿ 2, ಸೊರಬದಲ್ಲಿ 02 ಸೇರಿದಂತೆ ಒಟ್ಟಾರೆ 77 ಖಾತೆಗಳನ್ನು ತೆರೆಯಲಾಗಿತ್ತು.

 

ಈ ಎಲ್ಲಾ ಖಾತೆಗಳನ್ನು ಸಿಎಜಿಯು ಪರಿಶೀಲನೆ ಮತ್ತು ಲೆಕ್ಕ ತಪಾಸಣೆ  ನಡೆಸಿದೆ. ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಗಳ ಅನುಮತಿ ಇಲ್ಲದೆಯೇ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು 2017ರಲ್ಲಿ ಸರ್ಕಾರವು ಹೊರಡಿಸಿರುವ ಅಧಿಸೂಚನೆ ಉಲ್ಲಂಘಿಸಿರುವುದನ್ನು  ಪತ್ತೆ ಹಚ್ಚಿದೆ.

 

ಎಲ್ಲಾ ತಹಶೀಲ್ದಾರ್‍‌ಗಳು ಖಜಾನೆಯಲ್ಲಿನ ವೈಯಕ್ತಿಕ ಠೇವಣಿ ಖಾತೆಗಳ ಮೂಲಕ ಮಾತ್ರ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ವಹಿವಾಟು ನಡೆಸಬೇಕು ಎಂದು   2022ರ ಮೇ 23ರಂದು ರಾಜ್ಯ ಸರ್ಕಾರವು ನಿರ್ದೇಶನ ನೀಡಿತ್ತು. ಆದರೆ ಈ ಯಾವ ತಾಲೂಕುಗಳು ಪಿಡಿ ಖಾತೆಗಳಿಗೆ ಉಳಿತಾಯ ವರ್ಗಾವಣೆ ಮಾಡುವ ಮೂಲಕ ಪಿಡಿ ಖಾತೆ ಕಾರ್ಯಾಚರಣೆಗೆ ಸಂಪೂರ್ಣವಾಗಿ ಬದಲಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

2024ರ ಆಗಸ್ಟ್‌ವರೆಗೆ ಚಿಕ್ಕಬಳ್ಳಾಪುರದಲ್ಲಿ ಪಿ ಡಿ ಖಾತೆಗಳನ್ನೇ ತೆರೆದಿರಲಿಲ್ಲ. ಮತ್ತು ಬ್ಯಾಂಕ್ ಖಾತೆ ಮೂಲಕ ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಅನುದಾನವನ್ನು ನಿರ್ವಹಿಸುತ್ತಿದೆ. ಹಲವು ತಾಲೂಕುಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕಚೇರಿಗಳ ದಾಖಲೆಗಳ ಪ್ರಕಾರ ಬಿಡುಗಡೆ ಮತ್ತು ತಾಲೂಕು ಕಚೇರಿಗಳ ತೋರಿಸುವ ರಸೀದಿಗಳ ನಡುವೆ ಅಪಾರ ವ್ಯತ್ಯಾಸಗಳು ಕಂಡು ಬಂದಿವೆ.

 

1.37 ಕೋಟಿ ಬಿಡುಗಡೆಗೆ ಆದೇಶಗಳೇ ಲಭ್ಯವಿಲ್ಲ

 

2017-18ನೇ ಸಾಲಿಗೆ ಸಂಬಂಧಿಸಿದಂತೆ  ಶಿವಮೊಗ್ಗ ಜಿಲ್ಲಾಧಿಕಾರಿ  ಸಾಗರ ತಾಲೂಕಿಗೆ 1.37 ಕೋಟಿ ರು ಬಿಡುಗಡೆ ಮಾಡಿದ್ದರು. ಆದರೆ ಲೆಕ್ಕ ಪರಿಶೋಧನೆಗೆ ಒದಗಿಸಿದ್ದ ನಗದು ಪುಸ್ತಕ ಮತ್ತು ತಾಲೂಕಿನ ಬ್ಯಾಂಕ್‌ ಖಾತೆಯಲ್ಲಿ ಅದು ಪತ್ತೆಯಾಗಲಿಲ್ಲ. ಲೆಕ್ಕ ಪರಿಶೋಧನೆ ವಿಚಾರಿಸಿದ ತಹಶೀಲ್ದಾರ್ ಅವರು ಹೊಸ ಬ್ಯಾಂಕ್‌ ಖಾತೆಯ ವಿವರವನ್ನು ಸಲ್ಲಿಸಿದ್ದರು. ಶಿವಮೊಗ್ಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಮೊತ್ತವನ್ನು ಬಿಡುಗಡೆ ಮಾಡಿರುವಂತೆ ತೋರಿಸಿದೆ. ಆದರೂ ಸಹ ಬಿಡುಗಡೆ ಆದೇಶಗಳು ಜ್ಞಾಪನ ಪತ್ರಗಳ ವಿವರಗಳು ಲೆಕ್ಕ ಪರಿಶೋಧನೆಗೆ ಲಭ್ಯವಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

 

ಹಾಗೆಯೇ ಶಿವಮೊಗ್ಗ ಜಿಲ್ಲಾಧಿಕಾರಿ 2020ರ ಜನವರಿ 28ರ ಆದೇಶದ ಮೂಲಕ ಶಿವಮೊಗ್ಗ ತಾಲೂಕಿಗೆ 50 ಲಕ್ಷ ರು ಬಿಡುಗಡೆ ಮಾಡಿದ್ದರು. ಆದರೆ ಇದನ್ನು ನಗದು ಪುಸ್ತಕದಲ್ಲಿ ತೋರಿಸಿಲ್ಲ. ಇದರಿಂದ ರಸೀತಿ ಮತ್ತು ತಹಶೀಲ್ದಾರ್ ಹತ್ತಿರ ಇರುವ ಅಂತಿಮ ಶಿಲ್ಕು ಕಡಿಮೆ ತೋರಿಸಿರುವುದು ಸಿಎಜಿ ವರದಿಯಿಂದ ಕಂಡು ಬಂದಿದೆ.

 

ವೋಚರ್‍‌ ಪ್ರತಿ ಒದಗಿಸದ ತಹಶೀಲ್ದಾರ್‍‌

 

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಹಣ ದುರುಪಯೋಗವಾಗಿದೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ನಗದು ಪುಸ್ತಕ ನಿರ್ವಹಿಸಿಲ್ಲ. ನಿಧಿ ಬಳಕೆಯನ್ನು ಖಚಿತಪಡಿಸಲು ಕಚೇರಿ ಜ್ಞಾಪಕ ಪತ್ರಗಳು, ವೋಚರ್‍‌ಗಳ ಪ್ರತಿಗಳನ್ನು ಒದಗಿಸಿಲ್ಲ. ಇದರಿಂದಾಗಿ ಲೆಕ್ಕ ಪರಿಶೋಧನೆಗೆ ನಿಧಿ ಬಳಕೆಯ ಬಗ್ಗೆ ಭರವಸೆ ನೀಡುವುದು ಕಷ್ಟವಾಗಿತ್ತು ಎಂದು ಸಿಎಜಿಯು ವಿಶ್ಲೇಷಿಸಿದೆ. ಹೀಗಾಗಿ ಚಿಂತಾಮಣಿ ತಾಲೂಕು ಮತ್ತು ರಾಜ್ಯ ವಿಪತ್ತು ನಿವ್ಹಣಾ ಪಡೆ ವೆಚ್ಚದ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಸಿಎಜಿಯು ಇದೇ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

 

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1.03 ಕೋಟಿಗಳನ್ನು ನಗದು ಪುಸ್ತಕದಲ್ಲಿ ಲೆಕ್ಕ ಹಾಕಿಲ್ಲ. 2021ರ ಡಿಸೆಂಬರ್‍‌ 20ರಂದು ಬ್ಯಾಂಕ್‌ ಅಧಿಕಾರಿಗಳು ಬ್ಯಾಂಕ್ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಕಡಿತ ಮಾಡಿದ್ದಾರೆ. ಈ ಕುರಿತು ಲೆಕ್ಕ ಪರಿಶೋಧಕರು ಪ್ರಶ್ನಿಸಿದ್ದರು. ಆಗ ತಹಶೀಲ್ದಾರ್‍‌ 2024ರ ಆಗಸ್ಟ್‌ 21ರಂದು ಬ್ಯಾಂಕ್‌ಗೆ ಪತ್ರ ಬರೆದಿದ್ದರು. ಇದರಲ್ಲಿ ಇಡೀ ಮೊತ್ತಕ್ಕೆ ಚೆಕ್‌ ಡ್ರಾ ಮಾಡಿ ಕಳೆದ ಮೂರು ವರ್ಷಗಳಿಂದ ಸಂದೇಹ ಸ್ಥಿತಿಯಲ್ಲಿಡಲಾಗಿತ್ತು.

 

ಬೆಳಗಾವಿಯಲ್ಲಿ 50.84 ಕೋಟಿಯಷ್ಟು ವ್ಯತ್ಯಾಸ

 

ಬೆಳಗಾವಿ ಜಿಲ್ಲೆಯ ತಾಲೂಕುಗಳಲ್ಲಿನ ಬ್ಯಾಂಕ್‌ ಖಾತೆಗಳಲ್ಲಿಯೂ ವ್ಯತ್ಯಾಸಗಳು ಕಂಡು ಬಂದಿವೆ. 2017-18ರಿಂದ 2021-22ರ ಅವಧಿಗೆ ಜಿಲ್ಲೆ ಮತ್ತು ತಾಲೂಕುಗಳ ಲೆಕ್ಕಪತ್ರಗಳಿಗೂ ನಿಧಿ ಬಿಡುಗಡೆಯಲ್ಲಿ ವ್ಯತ್ಯಾಸಗಳಿದ್ದವು. ಇದರ ಒಟ್ಟಾರೆ ವ್ಯತ್ಯಾಸದ ಮೊತ್ತ 50.84 ಕೋಟಿಯಷ್ಟಿದೆ.  ಬೆಳಗಾವಿ ತಾಲೂಕಿನ ಜಿಲ್ಲಾ ಖಾತೆಗಳ ಪ್ರಕಾರ 23.49 ಕೊಟಿ ರು ಇದ್ದರೇ ತಾಲೂಕು ಖಾತೆಗಳ ಪ್ರಕಾರ 12.91 ಕೋಟಿ ರು ಇತ್ತು. ಇದು ಒಟ್ಟಾರೆ 10.58 ಕೋಟಿಯಷ್ಟು ವ್ಯತ್ಯಾಸವಿತ್ತು.

 

ಹುಕ್ಕೇರಿಯಲ್ಲಿ ಜಿಲ್ಲಾ ಖಾತೆಗಳ ಪ್ರಕಾರ 22.81 ಕೋಟಿ ಇದ್ದರೇ ತಾಲೂಕು ಖಾತೆಗಳ ಪ್ರಕಾರ 21.71 ಕೋಟಿ ಇತ್ತು. 1.07 ಕೋಟಿಯಷ್ಟು ವ್ಯತ್ಯಾಸವಿತ್ತು. ಕಿತ್ತೂರಿನಲ್ಲಿ ಜಿಲ್ಲಾ ಖಾತೆಗಳ ಪ್ರಕಾರ 7.13 ಕೋಟಿ ಇದ್ದರೇ ತಾಲೂಕು ಖಾತೆ ಪ್ರಕಾರ 6.74 ಕೋಟಿ ಇತ್ತು. 0.39 ಕೋಟಿ ವ್ಯತ್ಯಾಸವಿದೆ. ರಾಮದುರ್ಗದಲ್ಲಿ ಜಿಲ್ಲಾ ಖಾತೆ ಪ್ರಕಾರ 30.03 ಕೋಟಿ ಇದ್ದರೇ ತಾಲೂಕು ಖಾತೆ ಪ್ರಕಾರ 28.85 ಕೋಟಿ ಇದೆ. ವ್ಯತ್ಯಾಸ 1.18 ಕೋಟಿಯಷ್ಟಿದೆ. ಗೋಕಾಕ್‌ನಲ್ಲಿ 60.08 ಕೋಟಿ ರು ಜಿಲ್ಲಾ ಖಾತೆಗಳ ಪ್ರಕಾರ ಇದ್ದರೇ ತಾಲೂಕು ಖಾತೆಗಳ ಪ್ರಕಾರ 59.53  ಕೋಟಿ ಇದೆ. 0.55 ಕೋಟಿಯಷ್ಟು ವ್ಯತ್ಯಾಸವಿದೆ.

 

 

ಹಾಗೆಯೇ ಚಿಕ್ಕೋಡಿಯಲ್ಲಿ ಜಿಲ್ಲಾ ಖಾತೆಗಳ ಪ್ರಕಾರ 103.03 ಕೋಟಿ ಇದ್ದರೇ ತಾಲೂಕು ಖಾತೆಗಳ ಪ್ರಕಾರ 102.89 ಕೋಟಿ ಇದೆ. 0.14 ಕೋಟಿಯಷ್ಟು ವ್ಯತ್ಯಾಸವಿದೆ. ರಾಯಭಾಗ್‌ನಲ್ಲಿ ಜಿಲ್ಲಾ ಖಾತೆಗಳ ಪ್ರಕಾರ 61.23 ಕೋಟಿ ಇದ್ದರೇ ತಾಲೂಕು ಖಾತೆಗಳ ಪ್ರಕಾರ 42.44 ಕೋಟಿ ಇದೆ. 18.79 ಕೋಟಿಯಷ್ಟು ವ್ಯತ್ಯಾಸವಿದೆ. ಅಥಣಿಯಲ್ಲಿ 93.45 ಕೋಟಿಯು ಜಿಲ್ಲಾ ಖಾತೆಗಳ ಪ್ರಕಾರ ಇದ್ದರೇ ತಾಲೂಕು ಖಾತೆಗಳ ಪ್ರಕಾರ 75.31 ಕೋಟಿ ಇದೆ. 18.14 ಕೋಟಿಯಷ್ಟು ವ್ಯತ್ಯಾಸವಿದೆ. ಒಟ್ಟಾರೆ ಈ 8 ತಾಲೂಕುಗಳಲ್ಲಿ ಒಟ್ಟಾರೆ 50.84 ಕೋಟಿಯಷ್ಟು ವ್ಯತ್ಯಾಸವಿದೆ.

 

 

‘ಅನೇಕ ಬ್ಯಾಂಕ್‌ ಖಾತೆಗಳ ಕಾರ್ಯಾಚರಣೆ ಮತ್ತು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣದ ಅಂತರ ವರ್ಗಾವಣೆ, ನಗದು ಪುಸ್ತಕಗಳ ಅಸಮರ್ಪಕ ನಿರ್ವಹಣೆ ಮತ್ತು ಸರಿಯಾದ ಬಳಕೆ ಪ್ರಮಾಣ ಪತ್ರಗಳ ಅಲಭ್ಯತೆಯಿಂದಾಗಿ ತಾಲೂಕುಗಳ ವಹಿವಾಟುಗಳನ್ನು ದೃಢಪಡಿಸುವುದು ಲೆಕ್ಕಪರಿಶೋಧನೆಗೂ ಕಷ್ಟಕರವಾಗಿತ್ತು,’ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಿಸಿದೆ.

 

ಹೀಗಾಗಿ ದಾಖಲೆಗಳನ್ನು ನಿರ್ವಹಿಸದೇ ಇರುವುದು ಮತ್ತು ನಿಧಿಗಳ ಲೆಕ್ಕಪತ್ರದಲ್ಲಿ ಪಾರದರ್ಶಕತೆಯ ಅನುಪಸ್ಥಿತಿ ಮತ್ತು ಹೊಂದಾಣಿಕೆ ಮಾಡದಿರುವ ಪ್ರಕರಣಗಳನ್ನು ನೋಡಿದರೇ ಬಹುಕೋಟಿಯಷ್ಟು ಅನುದಾನವು ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂದು ಸಿಎಜಿ ವರದಿಯು ಹೇಳಿದೆ.

Your generous support will help us remain independent and work without fear.

Latest News

Related Posts