ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  (2022-23) ಹಂಚಿಕೆಯಾಗಿದ್ದ ನಿಧಿಯ 12.00 ಕೋಟಿ ರು ಕಳೆದು ಹೋಗಿದೆ. ಅದೇ ರೀತಿ ವಿಪತ್ತು ನಿರ್ವಹಣೆ ಚಟುವಟಿಕೆಗಳಿಗೆ ನಿಧಿಯ ಬಳಕೆಯನ್ನೂ ಸಹ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡದಿರುವುದು ಸೇರಿದಂತೆ ಹಲವು ಲೋಪಗಳನ್ನು   ಭಾರತ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

 

ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಭಾರತ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ನೀಡಿರುವ ವರದಿಯು, ವಿಪತ್ತು ನಿರ್ವಹಣೆಯಲ್ಲಿನ ಹಲವು ಗಂಭೀರ ಲೋಪಗಳನ್ನು ಮುನ್ನೆಲೆಗೆ ತಂದಿದೆ.

 

2025ರ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಈ ವರದಿಯು ಮಂಡನೆಯಾಗಿದೆ. ಆದರೆ ಈ ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇದುವರೆಗೂ ಚರ್ಚಿಸಿಲ್ಲ. ಹೀಗಾಗಿ ಎಂದಿನಂತೆ ಈ ಸಿಎಜಿ ವರದಿಯೂ ಕಂದಾಯ ಇಲಾಖೆಯ ಕಸದ ಬುಟ್ಟಿ ಸೇರಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

2013-14ರಿಂದ 2022-23ರವರೆಗೆ ಕಂದಾಯ ಇಲಾಖೆಯು ನೀಡಿದ್ದ ಒಟ್ಟು 43.37 ಕೋಟಿ ರು.ಗಳಲ್ಲಿ 23.68 ಕೋಟಿ ರು ಖರ್ಚಾಗಿದೆ. ಎನ್‌ಡಿಆರ್‍‌ ಪೋರ್ಸ್‌ನಲ್ಲಿ 7.69 ಕೋಟಿ ರು ಉಳಿದಿತ್ತು. ಆದರೆ 2022-23ರಲ್ಲಿ ಹಂಚಿಕೆಯಾಗಿದ್ದ  ನಿಧಿಯ ಒಟ್ಟು 12.00 ಕೋಟಿ ರುಪಾಯಿ ಕಳೆದು ಹೋಗಿದೆ ಎಂದು ಗಮನಿಸಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

2013-14ರಲ್ಲಿ ರಸೀದಿಗಳ ರೂಪದಲ್ಲಿ 7.63 ಕೋಟಿ ರು ಇತ್ತು. ಈ ಪೈಕಿ 2.89 ಕೋಟಿ ರು ವೆಚ್ಚವಾಗಿತ್ತು. ವೆಚ್ಚಕ್ಕೆ 4.74 ಕೋಟಿ ರು ಬಾಕಿ ಇತ್ತು. ಅದೇ ರೀತಿ 2014-15ರಲ್ಲಿ ಆರಂಭಿಕ ಶಿಲ್ಕಿನಲ್ಲಿದ್ದ    4.74 ಕೋಟಿ ರುಪಾಯಿ ಪೈಕಿ  ಬಿಡಿಗಾಸನ್ನೂ ಖರ್ಚು ಮಾಡಿರಲಿಲ್ಲ. ಹೀಗಾಗಿ 4.74 ಕೋಟಿ ರು ಬಳಕೆಯಾಗದೇ ಉಳಿದಿತ್ತು. 2015-16ರಲ್ಲಿಯೂ ಆರಂಭಿಕ ಶಿಲ್ಕಿನಲ್ಲಿ  4.74 ಕೋಟಿ ರು ಇತ್ತು. ಇದರಲ್ಲಿ 1.00 ಕೋಟಿ ರಸೀದಿ ಎಂದು ತೋರಿಸಿತ್ತು. ಇದರಲ್ಲಿ 0.05 ಕೋಟಿ ವೆಚ್ಚವಾಗಿತ್ತು. ಆದರೆ ಮುಕ್ತಾಯದ ಶಿಲ್ಕಿನಲ್ಲಿ 5.69 ಕೋಟಿ ರು ಎಂದು ತೋರಿಸಿತ್ತು. 2016-17ರಲ್ಲಿ ಆರಂಭಿಕ ಶಿಲ್ಕಿನಲ್ಲಿ  5.69 ಕೋಟಿ ರು ಪೈಕಿ ಬಿಡಿಗಾಸನ್ನೂ ಖರ್ಚು ಮಾಡಿರಲಿಲ್ಲ. ಹೀಗಾಗಿ ಮುಕ್ತಾಯದ ಶಿಲ್ಕಿನಲ್ಲಿ 5.69 ಕೋಟಿ ರು.ಗಳನ್ನು ಮುಂದುವರೆದಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

 

2017-18 ಮತ್ತು 2018-19 ರಲ್ಲಿಯೂ 5.69 ಕೋಟಿ ರು ಸಹ ಖರ್ಚಾಗದೇ ಉಳಿದಿತ್ತು. 2019-20ರಲ್ಲಿ ಆರಂಭಿಕ ಶಿಲ್ಕಿನಲ್ಲಿ 5.69 ಕೋಟಿ ರು ಮತ್ತು ರಸೀದಿಗಳಲ್ಲಿ 20.09 ಕೋಟಿ ರು ಎಂದು ತೋರಿಸಲಾಗಿದೆ. ಇದರಲ್ಲಿ 18.09 ಕೋಟಿ ರು ವೆಚ್ಚವಾಗಿತ್ತು. ಮುಕ್ತಾಯದ ಶಿಲ್ಕಿನಲ್ಲಿ 7.69 ಕೋಟಿ ರು ಹಾಗೆಯೇ ಉಳಿದಿದೆ. ಬಾಕಿ ಉಳಿದಿದ್ದ 7.69 ಕೋಟಿ ರು 2019-20, 2020-21, 2021-22ವರೆಗಿನ ಆರಂಭಿಕ ಶಿಲ್ಕಿನಲ್ಲಿ ಮುಂದುವರೆದಿತ್ತು. ಈ ಮೂರು ವರ್ಷಗಳಲ್ಲಿ ಬಿಡಿಗಾಸೂ ಖರ್ಚಾಗಿರಲಿಲ್ಲ.

 

ಆದರೆ 2022-23ರಲ್ಲಿ 7.69 ಕೋಟಿ ರು ಆರಂಭಿಕ ಶಿಲ್ಕಿನ ಜತೆಗೆ ರಸೀದಿಗಳ ಸ್ವರೂಪದಲ್ಲಿ 14.65 ಕೋಟಿ ರು ಇತ್ತು. ಇದರಲ್ಲಿ 2.65 ಕೋಟಿ ರು ವೆಚ್ಚವಾಗಿತ್ತು. ಆದರೆ 12.00 ಕೋಟಿ ರು ಕಳೆದು ಹೋಗಿದೆ ಎಂದು ಸಿಎಜಿ ಲೆಕ್ಕ ಪರಿಶೋಧನ ವರದಿಯು ಗಮನಿಸಿದೆ.

 

ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ 2013-15ನೇ ಸಾಲಿನಲ್ಲಿ ಅಂದರೇ ಲೆಕ್ಕ ಪರಿಶೋಧನೆಗೆ ಮೊದಲು ತರಬೇತಿ ಚಟುವಟಿಕೆಗಳಿಗೆ 1.33 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ ಕೇವಲ 38.54  ಲಕ್ಷ ರು ಮಾತ್ರ ಬಳಕೆಯಾಗಿತ್ತು. 2017-23ರ ಲೆಕ್ಕ ಪರಿಶೋಧನೆ ಅವಧಿಯಲ್ಲಿಯೂ ತರಬೇತಿ ಚಟುವಟಿಕೆಗಳಿಗೆ ಯಾವುದೇ ಹಣವನ್ನೂ ಬಿಡುಗಡೆ ಮಾಡಿರಲಿಲ್ಲ. ಮಾರ್ಚ್‌ 2023ರ ಅಂತ್ಯದ ವೇಳೆಗೆ ಎನ್‌ಡಿಆರ್‍‌ ಪೋರ್ಸ್‌ನ ಬ್ಯಾಂಕ್‌ ಖಾತೆಯಲ್ಲಿ 7.69 ಕೋಟಿ ರು ಉಳಿದಿತ್ತು. ಹಾಗೆಯೇ 2023-23ರ ಅವಧಿಯಲ್ಲಿ ಹಂಚಿಕೆಯಾದ ನಿಧಿಯ 12.00 ಕೋಟಿ ರು ಕಳೆದು ಹೋಗಿದೆ ಎಂದು ಗಮನಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಮೈಸೂರು ನಗರ ವ್ಯಾಪ್ತಿಯಲ್ಲಿ ಮಾತ್ರ 4,900 ಚುನಾಯಿತ ಜನಪ್ರತಿನಿಧಿಗಳು ಮತ್ತು ಸರ್ಕಾರೇತರ, ನಾಗರಿಕ ಸಮಾಜಗಳ 496 ಸಿಬ್ಬಂದಿಗೆ ವಿಪತ್ತು ನಿರ್ವಹಣೆ ಕುರಿತು ತರಬೇತಿ ನೀಡಲಾಗಿತ್ತು. ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು  ರಾಜ್ಯದಲ್ಲಿನ ಸಮುದಾಯಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳ ಸಾಮರ್ಥ್ಯವನ್ನು  ಹೆಚ್ಚಿಸುವ ಪ್ರಯತ್ನಗಳು ಅಸಮರ್ಪಕವಾಗಿದ್ದವು ಎಂದು ಸಿಎಜಿಯು ಬೊಟ್ಟು ಮಾಡಿ ತೋರಿಸಿದೆ.

 

ಎನ್‌ಡಿಆರ್‍‌ಎಫ್‌ ನಿಧಿಯ ದುರುಪಯೋಗ?

 

ಸಾವು, ಗಾಯ, ವರ್ಗಗಳ ಆಧಾರದ ಮೇಲೆ ಜನಸಂಖ್ಯೆ, ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಕೈಗಾರಿಕೆಗಳು, ರಸ್ತೆಗಳು, ಸೇತುವೆಗಳು, ಕಟ್ಟಡಗಳಂತಹ ನಿರ್ಣಾಯಕ ಮೂಲಸೌಕರ್ಯಗಳ, ಸಾಂಸ್ಕೃತಿಕ ಪರಂಪರೆಗಳು ಮತ್ತಿತರೆ ಕ್ಷೇತ್ರಗಳಲ್ಲಿನ ಆರ್ಥಿಕ ನಷ್ಟಗಳ ಕುರಿತು ರಾಜ್ಯ ಅಧಿಕಾರಿಗಳು, ಆಯಾ ಜಿಲ್ಲೆಗಳು ತಮ್ಮ ಸ್ಥಳೀಯ ವಿಪತ್ತುಗಳ ಕುರಿತು ದತ್ತಾಂಶವನ್ನು ನಮೂದಿಸಬೇಕು. ಆದರೆ ಇಂತಹ ಜವಾಬ್ದಾರಿಯು ಪರಿಣಾಮಕಾರಿಯಾಗಿ ನಿಭಾಯಿಸಿಲ್ಲ ಎಂದು ಸಿಎಜಿಯು ಪತ್ತೆ ಹಚ್ಚಿದೆ.

 

 

ರಾಜ್ಯಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ ದತ್ತಾಂಶವನ್ನು ಪ್ರತಿ ದಿನವೂ ನವೀಕರಿಸುತ್ತಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಹೀಗಾಗಿ ಎಸ್ಇಸಿ ಮತ್ತು ಇಲಾಖೆ ಈ ಎರಡೂ ಪರಿಣಾಮಕಾರಿ ಆಂತರಿಕ ನಿಯಂತ್ರಣ ಕಾರ್ಯವಿಧಾನವು ಜಾರಿಯಲ್ಲಿರಲಿಲ್ಲ. ವಿಪತ್ತು ನಿರ್ವಹಣೆ ಚಟುವಟಿಕೆಗಳಿಗೆ ನಿಧಿಯ ಬಳಕೆಯನ್ನೂ ಸಹ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ನಿಗದಿತ ಹಣಕಾಸು ದಾಖಲೆಗಳನ್ನು ನಿರ್ವಹಿಸದಿರುವುದು ಮತ್ತು ತಪ್ಪು ವರದಿ ಮಾಡುವುದು ಗಂಭೀರ ಕಳವಳಕಾರಿ ವಿಷಯವಾಗಿದೆ. ಮತ್ತು ಎನ್‌ಡಿಆರ್‍‌ಎಫ್‌ ನಿಧಿಯ ದುರುಪಯೋಗ ಆಗಿರುವುದು ಮತ್ತು ದುರುಪಯೋಗದ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ,’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

ಹೆಸರಿಗಷ್ಟೇ ಆಪ್ತಮಿತ್ರ!

 

ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ(2016-17)  ಕೇಂದ್ರ ಸರ್ಕಾರವು ಆಪ್ತಮಿತ್ರ ಯೋಜನೆಯನ್ನು ಅನುಮೋದಿಸಿತ್ತು. ಆದರೆ ಈ ಯೋಜನೆಯಡಿಯಲ್ಲಿ ತರಬೇತಿ ಪಡೆದಿದ್ದ ಸ್ವಯಂ ಸೇವಕರಿಗೆ ತುರ್ತು ಪ್ರತಿಸ್ಪಂದಕ ಕಿಟ್‌ಗಳನ್ನೇ ನೀಡಿರಲಿಲ್ಲ. ಹೀಗಾಗಿ ಈ  ಯೋಜನೆಯು ಹೆಸರಿಗಷ್ಟೇ ಆಪ್ತಮಿತ್ರವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

 

ಈ ಯೋಜನೆಯಡಿಯಲ್ಲಿ 2022ರ ಜೂನ್‌ನಿಂದ ಆಗಸ್ಟ್‌ವರೆಗೆ 11 ಜಿಲ್ಲೆಗಳಲ್ಲಿ 3,400 ಸ್ವಯಂ ಸೇವಕರಿಗೆ ತರಬೇತಿ ನೀಡಿತ್ತು. ಇದಕ್ಕಾಗಿ 4.14 ಕೋಟಿ ರು ವೆಚ್ಚವಾಗಿತ್ತು ಎಂದು ದಾಖಲೆಗಳಲ್ಲಿ ತೋರಿಸಿತ್ತು. ಆದರೆ ತುರ್ತು ಪ್ರತಿಸ್ಪಂದಕ ಕಿಟ್‌ಗಳನ್ನು ಖರೀದಿಸಿ ಯಾವುದೇ ಪ್ರಶಿಕ್ಷಣಾರ್ಥಿಗಳಿಗೆ ವಿತರಿಸಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಅಲ್ಲದೇ ತರಬೇತಿ ಪಡೆದಿದ್ದ ಸ್ವಯಂ ಸೇವಕರ ಸೇವೆಯನ್ನು ಅಪಾಯದ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ಸೂಚಿಸುವ ಯಾವುದೇ ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆಗಳಲ್ಲಿ ಯಾವುದೇ ದಾಖಲೆಗಳೂ ಲಭ್ಯವಿಲ್ಲ ಎಂದು ಸಿಎಜಿ ವರದಿಯು ಪತ್ತೆ ಹಚ್ಚಿದೆ.

 

‘ಆದ್ದರಿಂದ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ತರಬೇತಿ ಪಡೆದ ಸ್ವಯಂಸೇವಕರನ್ನು ಬಳಸಲಾಗಿದೆಯೇ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಮತ್ತು ಅವರು ತೊಡಗಿಸಿಕೊಂಡಿದ್ದರೂ ಸಹ ಕಿಟ್‌ಗಳಿಲ್ಲದೇ ರಕ್ಷಣಾ ಕಾರ್ಯಾಚರಣೆಗಳು ನಿಷ್ಪರಿಣಾಮಕಾರಿಯಾಗುತ್ತಿದ್ದವು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ತರಬೇತಿ ಪಡೆದ ಸ್ವಯಂ ಸೇವಕರು ಈ ಕಿಟ್‌ಗಳಿಲ್ಲದೇ ಅಪಾಯದ ಸಮಯದಲ್ಲಿ ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗದ ಕಾರಣ ರಾಜ್ಯವು ಈ  ಯೋಜನೆಯ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದೂ ಸಿಎಜಿಯು ಅಭಿಪ್ರಾಯಿಸಿದೆ.

 

ಜಿಲ್ಲಾ ವಿಪತ್ತು ನಿರ್ವಹಣೆ ಘಟಕಗಳಿಗೂ ಹಣ ನೀಡಲಿಲ್ಲ

 

ವಿಪತ್ತು ನಿರ್ವಹಣೆ ಕಾಯ್ದೆಯ ಪರಿಚ್ಛೇಧ 30(2)ರ ಪ್ರಕಾರ ಡಿಡಿಎಂಎ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಸಾಮರ್ಥ್ಯ ವೃದ್ಧಿಯ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಅಲ್ಲದೇ ಸ್ಥಳೀಯ ಸಂಸ್ಥೆಗಳು ವಿಪತ್ತುಗಳನ್ನು ನಿರ್ವಹಿಸಲು ಪರಿಹಾರ, ಪುನರ್ವಸತಿ ಮತ್ತು ಪೀಡಿತ ಪ್ರದೇಶಗಳಲ್ಲಿ ಪುನರ್‍‌ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲು ಅಧಿಕಾರಿಗಳು ನೌಕರರ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಹಾಗೆಯೇ ಇದನ್ನು ಖಚಿತಪಡಿಸಿಕೊಳ್ಳಬೇಕಿತ್ತು.

 

ಆದರೆ 2020-21ನೇ ಸಾಲಿನವರೆಗೂ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಗಾಗಿ ಡಿಡಿಎಂಎಗಳಿಗೆ ಯಾವುದೇ ಹಣವನ್ನೂ ಒದಗಿಸಲಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. 15ನೇ ಹಣಕಾಸು ಆಯೋಗದ ವರದಿ ಶಿಫಾರಸ್ಸುಗಳ ನಂತರವೇ ರಾಜ್ಯ ಸರ್ಕಾರವು ಹಣ ಬಿಡುಗಡೆ ಮಾಡಲು ಆರಂಭಿಸಿತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

‘ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಒಟ್ಟು 9,844 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಸಿಡಿಎಂ-ಎಟಿಐ ಸಂಸ್ಥೆಯು ಸಲ್ಲಿಸಿದ್ದ ಉತ್ತರಗಳನ್ನು ಕಂದಾಯ ಇಲಾಖೆಯು 2023ರ ಆಗಸ್ಟ್‌ನಲ್ಲಿ ಅನುಮೋದಿಸಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಈ ತರಬೇತಿ ನೀಡಿದೆ. ಆದರೂ ಸಮುದಾಯ ಮಟ್ಟದಲ್ಲಿ ಮೊದಲ ಪ್ರತಿಸ್ಪಂದಕರು ಅಂದರೇ ಸ್ಥಳೀಯ ನಿವಾಸಿಗಳು, ಸ್ವಯಂ ಪ್ರೇರಿತ ರಕ್ಷಣಾ ಕಾರ್ಯಕರ್ತರಿಗೆ ಯಾವುದೇ ಸಾಮರ್ಥ್ಯ ವೃದ್ಧಿ ಚಟುವಟಿಕೆಗಳನ್ನು ಒದಗಿಸಿಲ್ಲ ಎಂಬುದು ಸತ್ಯವಾಗಿದೆ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಅಣುಕು ಪ್ರದರ್ಶನಗಳೇ ಇಲ್ಲ

 

ತರಬೇತಿ ವೇಳಾಪಟ್ಟಿಗಳನ್ನು ವರದಿ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿದರೇ ಯಾವುದೇ ಪರೀಕ್ಷಾ ತನಿಖೆ ನಡೆಸಿದ್ದ ಜಿಲ್ಲೆಗಳಲ್ಲಿ ಸಮುದಾಯ ಮಟ್ಟದ ತರಬೇತಿ ನೀಡಿರುವ ವಿವರಗಳೇ ಲಭ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿದರೇ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳಿಗೆ ಅಣುಕು ಪ್ರದರ್ಶನಗಳನ್ನು ನೀಡಿಲ್ಲ.

 

‘ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಮುದಾಯ ಮಟ್ಟದ ತರಬೇತಿ ಒದಗಿಸದ ಕಾರಣ, ಸಾಮರ್ಥ್ಯ ವರ್ಧನೆ ಅಡಿಯಲ್ಲಿ ರಾಜ್ಯದಲ್ಲಿ ನೀಡಲಾದ ತರಬೇತಿಯು ವಿಪತ್ತುಗಳನ್ನು ನಿಭಾಯಿಸಲು ಅಸಮರ್ಪಕವಾಗಿತ್ತು,’ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

7.44 ಕೋಟಿ ಏನಾಯಿತು?

 

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗದಂತಹ ಯಾವುದೇ ಪ್ರಾಧಿಕಾರಗಳು ವಿಪತ್ತು ನಿರ್ವಹಣೆಗೆ ವಿವಿಧ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ರೇಡಿಯೋ, ದೂರದರ್ಶನದ ಮೂಲಕ ಸಾಮೂಹಿಕ ಸಂವಹನ, ಸಿದ್ಧತೆ, ಪ್ರತಿಕ್ರಿಯೆ ಚಟುವಟಿಕೆಗಳು, ತುರ್ತು ಸಂದರ್ಭಗಳಿಗೆ ಪ್ರತಿಕ್ರಿಯಿಸುವುದು ಮತ್ತಿತರೆ ವಿಪತ್ತು ನಿರ್ವಹಣೆಗೆ ಕೆಳ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಐಇಸಿ ಚಟುವಟಿಕೆಗಳನ್ನೇ ಕೈಗೊಂಡಿಲ್ಲ ಎಂಬುದನ್ನು ಸಿಎಜಿಯು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಜಾಗೃತಿ ಮತ್ತು ಐಇಸಿ ಚಟುವಟಿಕೆಗಳಿಗಾಗಿ  ಜಿಲ್ಲೆಗಳಿಗೆ 7.44 ಕೋಟಿ ರು  ಬಿಡುಗಡೆ ಮಾಡಲು 2022ರಲ್ಲಿ ಎಸ್‌ಇಸಿ ಸಭೆಯಲ್ಲಿ ಅನುಮೋದಿಸಲಾಗಿತ್ತು. ಆದರೆ 2023ರ ಅಕ್ಟೋಬರ್‍‌ವರೆಗೆ ನೋಡಲ್ ಇಲಾಖೆಯಿಂದ ಜಿಲ್ಲೆಗಳಿಗೆ ಈ ಹಣವನ್ನೇ ವಿತರಿಸಿರಲಿಲ್ಲ. ಸಾರ್ವಜನಿಕರು, ಎನ್‌ಜಿಒಗಳೂ ಸಿಎಸ್‌ಒಗಳಲ್ಲಿ ಯಾವುದೇ ಪ್ರಚಾರವನ್ನೂ ನೀಡಲಿಲ್ಲ. ಉಚಿತ ತರಬೇತಿಗಳಿಗೆ ದಾಖಲಾಗಲೂ ಸಹ ಸರ್ಕಾರಿ ಅಧಿಕಾರಿಗಳನ್ನು ಪ್ರೋತ್ಸಾಹಿಸಲಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.

 

 

‘ಸಮುದಾಯ ಜಾಗೃತಿ ಮತ್ತು ಐಇಸಿ ಚಟುವಟಿಕೆಗಳ ಮೂಲಕ ಪ್ರಮುಖ  ಅಂಶದ ಮೂಲಕ ತಳಮಟ್ಟದಲ್ಲಿ ವಿಪತ್ತು ಅಪಾಯಗಳಿಗೆ ಒಡ್ಡಿಕೊಂಡಿರುವ ಜನರನ್ನು ತಲುಪಲು ರಾಜ್ಯ ಸರ್ಕಾರವು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಈ ಅಂತರವು ವಿಳಂಬ ಅಥವಾ ಅಸಮರ್ಪಕ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ವಿಪತ್ತುಗಳ ಸಮಯದಲ್ಲಿ ಹೆಚ್ಚಿನ ದುರ್ಬಲತೆ ಮತ್ತು ಅಡಚಣೆಗಳಿಗೆ ಕಾರಣವಾಗಬಹುದು,’ ಎಂದು ಸಿಎಜಿ ವರದಿಯಲ್ಲಿ ಆತಂಕವನ್ನು ವ್ಯಕ್ತಪಡಿಸಿದೆ.

 

 

ರಾಜ್ಯ ಸರ್ಕಾರವು ಈಗಾಗಲೇ ಎನ್‌ಐಡಿಎಂ ಮತ್ತ ಯುಎನ್‌ಐಸಿಇಎಫ್‌ ಸಿದ್ಧಪಡಿಸಿದ ಹಾಗೂ ಉಚಿತವಾಗಿ ಲಭ್ಯವಿರುವ ಐಇಸಿ ಸಾಮಗ್ರಿಗಳನ್ನು ಬಳಸಬಹುದಿತ್ತು. ಮತ್ತು ಐಇಸಿಗೆ ಇನ್ನೊಬ್ಬ ಕಾರ್ಯನಿರ್ವಾಹಕ ಸಲಹೆಗಾರನ್ನು ನೇಮಿಸಿಕೊಂಡಿತ್ತು. ಆದರೆ ಇದರ ಅಗತ್ಯವಿರಲಿಲ್ಲ ಎಂದು ಸಿಎಜಿ ಹೇಳಿದೆ. ಹಾಗೆಯೇ ಇದು ಎಸ್‌ಡಿಆರ್‍‌ಎಫ್‌ ಅನುದಾನದ ಮೇಲೆ ಹೆಚ್ಚುವರಿಯಾಗಿ ಹೊರೆಯಾಗುತ್ತಿರಲಿಲ್ಲ ಎಂದು ಹೇಳಿದೆ.

 

 

ಮತ್ತೊಂದು ಸಂಗತಿ ಎಂದರೇ ಕಂದಾಯ ಇಲಾಖೆಯು ಪ್ರಸಾರ ಮಾಡಿದ ಡಿಜಿಟಲ್‌ ಐಇಸಿ ವಸ್ತುಗಳ ಪ್ರತಿಗಳನ್ನು ಅಥವಾ ಸಾಮಾಜಿಕ ಮಾಧ್ಯಮ ಲಿಂಕ್‌ಗಳನ್ನು ಲೆಕ್ಕ ಪರಿಶೋಧನೆಗೆ  ಒದಗಿಸಿಲ್ಲ.

 

 

ಹೀಗಾಗಿ ವಿಪತ್ತು ನಿರ್ವಹಣೆ ಜಾಗೃತಿಗೆ ಸಂಬಂಧಿಸಿದಂತೆ ಸಮೂಹ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಬಿಡುಗಡೆಯಾಗಿದ್ದ ಹಣವು ದುರುಪಯೋಗವಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

Your generous support will help us remain independent and work without fear.

Latest News

Related Posts