ಪ್ರವಾಹ, ಭೂ ಕುಸಿತ, ವಿಪತ್ತು ನಿರ್ವಹಣೆಯಲ್ಲಿ ವಿಫಲ; ಪರಿಹಾರ ಪಾವತಿಯಲ್ಲಿ ಪಾರದರ್ಶಕತೆಯೂ ಇಲ್ಲ

ಬೆಂಗಳೂರು; ಪ್ರವಾಹ, ಭೂ ಕುಸಿತ ಸೇರಿದಂತೆ ಇನ್ನಿತರೆ ವಿಪತ್ತುಗಳನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಕೋಟ್ಯಂತರ ರುಪಾಯಿ ಮೊತ್ತದಲ್ಲಿ  ಅನೇಕ ತಂತ್ರಜ್ಞಾನ ಉಪಕರಣಗಳನ್ನು ಬಳಸಿದ್ದರೂ ಸಹ ಸಮರ್ಥ ಮತ್ತು ಪರಿಣಾಮಕಾರಿಯಾಗಿ ಬಳಸಿಲ್ಲ. ಮತ್ತು ವಿಪತ್ತು ನಿರ್ವಹಣೆ ಮತ್ತು ವಿಪತ್ತು ಪರಿಹಾರಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟುಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯೂ ಕಂಡು ಬಂದಿಲ್ಲ.

 

2017ರಿಂದ 2023ರವರೆಗೆ ರಾಜ್ಯದ ವಿಪತ್ತು ನಿರ್ವಹಣೆಯನ್ನು ಅಮೂಲಾಗ್ರವಾಗಿ ವಿಶ್ಲೇಷಿಸಿರುವ ಪ್ರಧಾನ ಮಹಾಲೆಕ್ಕ ಪರಿಶೋಧಕರು   2025ರ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವರದಿಯನ್ನು ಮಂಡಿಸಿದ್ದಾರೆ.  ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಸಿದ್ದರಾಮಯ್ಯ ಅವರ ಮೊದಲ ಅವಧಿ, ಆ ನಂತರ ಜೆಡಿಎಸ್‌ ಪಾಲುದಾರಿಕೆಯ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಅವಧಿಯಲ್ಲಿಯೂ ವಿಪತ್ತು ನಿರ್ವಹಣೆಯಲ್ಲಿನ ಅನೇಕ ಲೋಪಗಳನ್ನು ಸಿಎಜಿ ವರದಿಯು ದತ್ತಾಂಶಗಳ ಸಮೇತ ನಿರೂಪಿಸಿದೆ.

 

ರಾಜ್ಯದಲ್ಲಿ ಸಂಭವಿಸಿದ ಅನೇಕ ವಿಪತ್ತುಗಳ ನಿರ್ವಹಣೆ, ವಿಪತ್ತುಗಳನ್ನು ತಡೆಗಟ್ಟುವಲ್ಲಿ ಆಗಿರುವ ವೈಫಲ್ಯಗಳು ಮತ್ತು ವಿಪತ್ತು ನಿರ್ವಹಣೆ, ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯು, ಅನೇಕ ನೈಜತೆಯ ಅಂಶಗಳನ್ನು ಹೊರಗೆಡವಿದೆ.

 

16 ಇಲಾಖೆಗಳಲ್ಲಿ ಗಂಭೀರ ಲೋಪ ಪತ್ತೆ

 

ರಾಜ್ಯದ ಹದಿನಾರು ಇಲಾಖೆಗಳು 2020-21ನೇ ಸಾಲಿನಲ್ಲಿ ಮಾತ್ರ ತಮ್ಮ ಡಿಎಂಪಿಗಳನ್ನು ಸಿದ್ಧಪಡಿಸಿವೆ. ಆದರೆ ಅವುಗಳನ್ನು ಪರಿಶೀಲಿಸಿಲ್ಲ ಮತ್ತು ನವೀಕರಿಸಿಲ್ಲ. ಬೆಂಗಳೂರು ನಗರ ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಿ ರಾಜ್ಯದ ಯಾವುದೇ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ಪರೀಕ್ಷಾ ಪರಿಶೀಲನೆಗೆ ಒಳಗಾದ ಜಿಲ್ಲೆಗಳು ಅಗತ್ಯವಾದ ವಿಪತ್ತು ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸಿಲ್ಲ ಎಂದು ಸಿಎಜಿ ವರದಿಯು ಗಂಭೀರ ಲೋಪಗಳನ್ನು ಪತ್ತೆಹಚ್ಚಿದೆ.

 

ವಿಪತ್ತು ಮಾದರಿಗಳನ್ನೇ ರಚಿಸಿರಲಿಲ್ಲ

 

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಮಾನವ ಸಂಪನ್ಮೂಲ ಮತ್ತು ಮೂಲ ಸೌಕರ್ಯಗಳ ವಿಷಯದಲ್ಲಿ ಕಡಿಮೆ ಪ್ರಮಾಣದಲ್ಲಿ ಸಜ್ಜುಗೊಂಡಿತ್ತು. ಹೀಗಾಗಿ ವಿಪತ್ತು ನಿರ್ವಹಣೆಯ  ಕಾರ್ಯನಿರ್ವಹಣೆಯ ಮೇಲೆ ಇದರ  ಪರಿಣಾಮ ಬೀರಿದೆ. ವಿವಿಧ ವಿಪತ್ತುಗಳ ಮುನ್ಸೂಚನೆ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ದತ್ತಾಂಶ ಸಂಗ್ರಹನೆ, ಮುನ್ಸೂಚನೆ ಮತ್ತು ಪ್ರಸರಣ ಕಾರ್ಯವಿಧಾನವು ನಿಷ್ಕ್ರೀಯವಾಗಿತ್ತು.  ದೋಷಯುಕ್ತ ಉಪಕರಣಗಳು, ದೋಷಯುಕ್ತ ದತ್ತಾಂಶಗಳ, ಅಸಮರ್ಪಕವಾಗಿ ಒಪ್ಪಂದಗಳನ್ನು ನಿರ್ವಹಣೆ ಮಾಡಲಾಗಿತ್ತು. ವಿಪತ್ತು ಮಾದರಿಗಳನ್ನು ರಚಿಸಿರಲಿಲ್ಲ. ಸಂವೇದಕಗಳನ್ನು ಸ್ಥಾಪನೆ ಮಾಡಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.

 

ನವೀಕೃತವಾಗದ ದತ್ತಾಂಶ- ನಷ್ಟದ ನಿಖರ ಮಾಹಿತಿಯೂ ಸಾಧ್ಯವಿಲ್ಲ

 

ವಿಪತ್ತು ಪ್ರತಿಕ್ರಿಯೆ ಪಡೆ ಘಟಕಗಳು ಮಂಜೂರಾದ ಸಾಮರ್ಥ್ಯದ ಶೇ.67ರಿಂದ 96ರವರೆಗೆ ಭಾರೀ ಖಾಲಿ ಹುದ್ದೆಗಳನ್ನು ಹೊಂದಿದ್ದವು. ಮುಖ್ಯವಾಗಿ ಪೊಲೀಸ್‌ ಮತ್ತು ಅಗ್ನಿಶಾಮ ಸೇವಾ ಸಿಬ್ಬಂದಿಯ ಕೇಡರ್‍‌ ಘಟಕಗಳು, ಶಿಫ್ಟ್‌ವಾರು ಕರ್ತವ್ಯಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ತೊಂದರೆಗಳನ್ನು ಎದುರಿಸುತ್ತಿದ್ದವು.

 

ಗೃಹ ವ್ಯವಹಾರಗಳ ಸಚಿವಾಲಯವು ಅಭಿವೃದ್ಧಿಪಡಿಸಿದದ ಸಮಗ್ರ ಆನ್‌ಲೈನ್‌ ಅಪ್ಲಿಕೇಷನ್‌ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗೆ ಸಂಬಂಧಿಸಿದಂತೆ ದತ್ತಾಂಶವನ್ನು ರಾಜ್ಯಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ ನಿಯಮಿತವಾಗಿ ನವೀಕರಿಸುತ್ತಿಲ್ಲ. ವಿಪತ್ತುಗಳಿಂದ ಉಂಟಾಗುವ ಹಾನಿ ಮತ್ತು ನಷ್ಟಗಳ ಬಗ್ಗೆ ಮಾಹಿತಿಯನ್ನು ನಿಖರವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

 

ಅನುಮತಿಯಿಲ್ಲದೇ ಬ್ಯಾಂಕ್‌ ಖಾತೆ ತೆರೆದ ತಾಲೂಕುಗಳು

 

ರಾಜ್ಯಮಟ್ಟದಲ್ಲಿ ಹೊರಡಿಸಿರುವ ಆದೇಶಗಳ ಪ್ರಕಾರ ಬಿಡುಗಡೆಯಾದ ಹಣವು ವಿಪತ್ತು ನಿರ್ದಿಷ್ಟ, ಘಟಕಗಳ ಎಂದು ನಿರ್ದಿಷ್ಟವಾಗಿರಲಿಲ್ಲ. ಹೀಗಾಗಿ ಎನ್‌ಡಿಆರ್‍‌ಎಫ್‌ ಮತ್ತು ಎಸ್‌ಡಿಆರ್‍ಎಫ್‌ ಅನುದಾನಗಳ ನೈಜ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಕಷ್ಟಕರವಾಗಿತ್ತು. ಸರ್ಕಾರ, ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ  ತಾಲೂಕುಗಳಲ್ಲಿ ಅನೇಕ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ ಮತ್ತು ನಿರ್ವಹಿಸಲಾಗಿದೆ. ಇದು ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದೆ.

 

ಬಳಕೆಯಾಗದ 7.69 ಕೋಟಿ- 18.59 ಲಕ್ಷ ರು ದುರುಪಯೋಗ

 

ಅಗ್ನಿಶಾಮಕ ಮತ್ತು ತುರ್ತು ಇಲಾಖೆಯು 23.68 ಕೋಟಿ ರುಪಾಯಿಗಳನ್ನು ಬಳಸಿದೆ. ಮತ್ತು 7.69 ಕೋಟಿ ರು ಗಳನ್ನು ಬಳಕೆಯಾಗಿಲ್ಲ. ಬಳಕೆಯಾಗದೇ ಮಾರ್ಚ್‌ 2023ರ ಅಂತ್ಯದ ವೇಳೆಗೆ ಬ್ಯಾಂಕ್‌ ಖಾತೆಯಲ್ಲಿ ಉಳಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ 18.59 ಲಕ್ಷ ರುಪಾಯಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಇದಲ್ಲದೇ ಹಾವೇರಿ ಜಿಲ್ಲೆಯ ತಾಲೂಕುಗಳು ನೈಸರ್ಗಿಕ ವಿಕೋಪ, ವಿಪತ್ತುಗಳಿಗೆ ಸಂಬಂಧಿಸದ ಕಾರಣಗಳಿಗಾಗಿ ಎಸ್‌ಡಿಆರ್‍‌ಎಫ್‌ ನಿಧಿಯಿಂದ 1.81 ಕೋಟಿ ರು.ಗಳನ್ನು ಪಾವತಿಸಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

 

ಬರ ನಿರ್ವಹಣೆ, ಮಾರ್ಗಸೂಚಿಗಳೇ ಇಲ್ಲ

 

ಬರ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಇನ್ನೂ ಪ್ರದೇಶ, ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರತಂದಿಲ್ಲ. ಕೆಎಸ್‌ಎನ್‌ಡಿಎಂಸಿ ಹಂತಹಂತವಾಗಿ (2009-2015) ಟೆಲಿಮೆಟ್ರಿಕ್‌ ರನ್‌ ಗೇಜ್‌ಗಳು ಮತ್ತು ಟಿಡಬ್ಲ್ಯೂಎಸ್‌ಗಳನ್ನು ಸ್ಥಾಪಿಸಿದೆ. ಆದರೂ 2023ರ ಡಿಸೆಂಬರ್‍‌ ಹೊತ್ತಿಗೆ ದೋಷಯುಕ್ತ ಉಪಕರಣಗಳ ಶೇಕಡವಾರು ಪ್ರಮಾಣವು ಕ್ರಮವಾಗಿ ಶೇ. 43 ಮತ್ತು 52ರಷ್ಟಿತ್ತು. ಇದಕ್ಕೆ ಕಾರಣ 2022ರ ಮಾರ್ಚ್‌ನಿಂದ ಎಎಂಸಿಯನ್ನು ಪರಿಷ್ಕರಿಸಿರಲಿಲ್ಲ.

 

 

 

ಬಿಕ್ಕಟ್ಟು ನಿರ್ವಹಣಾ ಯೋಜನೆಯೇ ಇಲ್ಲ

 

ರಾಜ್ಯ ಸರ್ಕಾರವು 2022-23ರವರೆಗೆ ಕೆಎಸ್‌ಡಿಎಂಎ ಮತ್ತು ಎಸ್‌ಇಸಿ ಅಂದರೆ ಬಿಕ್ಕಟ್ಟು ನಿರ್ವಹಣಾ ಯೋಜನೆಯನ್ನೇ ರೂಪಿಸಿಲ್ಲ. ರಾಜ್ಯದಲ್ಲಿ ಸ್ಥಾಪಿಸಿರುವ ಬೆಳೆ ಹವಾಮಾನ ನಿಗಾ ಗುಂಪು 2017ರಿಂದ 2022ರ ಅವಧಿಯಲ್ಲಿ ನಿರೀಕ್ಷಿಸಿದಂತೆ ಪೂರೈಸಿರಲಿಲ್ಲ. 2022-23ರ ಹೊತ್ತಿಗೆ ಬರ ಶಮನಗೊಳಿಸಲು ಉದ್ದೇಶಿತ ಮಿಷನ್‌ ಕಾರ್ಯಪಡೆಯನ್ನು ರಾಜ್ಯದಲ್ಲಿ ಸ್ಥಾಪಿಸಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ಕೊಳವೆ ಬಾವಿಗಳ ದತ್ತಾಂಶವೂ ಇಲ್ಲ

 

ಕರ್ನಾಟಕ ಅಂತರ್ಜಲ ಪ್ರಾಧಿಕಾರವು ಖಾಸಗಿ ನೀರಿನ ಟ್ಯಾಂಕ್‌ಗಳ ಮೂಲಕ ವಾಣಿಜ್ಯ ಉದ್ದೇಶಗಳಿಗಾಗಿ ಅಂತರ್ಜಲವನ್ನು ಅಕ್ರಮವಾಗಿ ಮತ್ತು ಅತಿಯಾಗಿ ಹೊರತೆಗೆಯುವುದನ್ನು ನಿಯಂತ್ರಿಸಲಿಲ್ಲ.  ರಾಜ್ಯದಲ್ಲಿ ಕೊಳವೆಬಾವಿಗಳ ಸಂಖ್ಯೆಯ ಬಗ್ಗೆ ಸಮಯ, ಸರಣಿ ದತ್ತಾಂಶವನನು ಹೊಂದಿಲ್ಲ. ಅಲ್ಲದೇ ನೀರಿನ ಸಂಕಷ್ಟದಿಂದ ಬಳಲುತ್ತಿರುವ ಅಧಿಸೂಚಿತ ತಾಲೂಕುಗಳಲ್ಲಿ ಕೊರೆದ ಒಟ್ಟು ಕೊಳವೆಬಾವಿಗಳ ಸಂಖ್ಯೆಯ ದತ್ತಾಂಶವನ್ನೂ ಹೊಂದಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

ರಚನೆಯಾಗದ ಜಲ ವಿಜ್ಞಾನದ ಮಾದರಿ- 2.45 ಕೋಟಿ ರು ನಿಷ್ಪಲ ಹೂಡಿಕೆ

 

ಬರಪೀಡಿತ ರಾಜ್ಯವಾಗಿದ್ದರೂ ಸಹ ಕರ್ನಾಟಕವು ಕಳೆದ ದಶಕದಲ್ಲಿ ತೀವ್ರ ಪ್ರವಾಹ ಮತ್ತು ಭೂ ಕುಸಿತವನ್ನು ಎದುರಿಸಿದೆ. ಪ್ರವಾಹ ಅಪಾಯ ನಿರ್ವಹಣೆಗಾಗಿ ರಾಜ್ಯಕ್ರಿಯಾ ಯೋಜನೆಯನ್ನು 2021ರಲ್ಲಿ ಮಾತ್ರ ಹೊರತಂದಿದೆ.  ಮತ್ತು ಎನ್‌ಡಿಎಂಎ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ಮನರಂಜನಾ ಸಂಸ್ಥೆಗಳು ಇತ್ಯಾದಿಗಳಿಂದ ಪ್ರವಾಹ ನಿರ್ವಹಣೆ ಯೋಜನೆಗಳನ್ನು ಸಿದ್ಧಪಡಿಸಲು ಅವಕಾಶ ನೀಡಲಿಲ್ಲ.  ಮೂಲಭೂತ ದತ್ತಾಂಶದ ಅನುಪಸ್ಥಿತಿಯಲ್ಲಿ  ರಾಜ್ಯ ಸರ್ಕಾರವು  ಕೆಎಸ್ಎಎನ್‌ಡಿಎಂಸಿ ಮತ್ತು ರಾಜ್ಯ, ಪ್ರದೇಶದಲ್ಲಿ ಪ್ರವಾಹ ಮುನ್ಸೂಚನೆಗಾಗಿ ಜಲ ವಿಜ್ಞಾನದ ಮಾದರಿಗಳನ್ನು ರಚಿಸಲು ಸಾಧ್ಯವಾಗಲಿಲ್ಲ. ಇದು ಸಂವೇದಕಗಳು ಮತ್ತು ಸ್ಟೀಮ್‌ ಗೇಜ್‌ ಮಾನಿಟರ್‍‌ಗಳ ಮೇಲೆ 2.45 ಕೋಟಿ ರು.ಗಳ ಹೂಡಿಕೆಯು ಹೆಚ್ಚಾಗಿ ನಿಷ್ಪ್ರಯೋಜಕವಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಕಾರ್ಯನಿರ್ವಹಿಸದ ನೀರಿನ ಮಟ್ಟದ ಸಂವೇದಕಗಳು

 

ವೈರ್‍‌ಲೆಸ್‌ ಪ್ರಸಾರ ವ್ಯವಸ್ಥೆಯ ಮೂಲಕ ಅಳಿವಿನಂಚಿನಲ್ಲಿರುವ ಜನರನ್ನು ಪ್ರವಾಹದ ಮುನ್ನೆಚ್ಚರಿಕೆಯಿಂದ ಎಚ್ಚರಿಸಲು ತಳಮಟ್ಟದಲ್ಲಿ ಉಪಕರಣಗಳನ್ನು ಸ್ಥಾಪಿಸುವ ಉದ್ದೇಶವನ್ನು ಸಾಧಿಸಿಲ್ಲ.  ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆರ್ಥಿಕ ನೆರವಿನಿಂದ ಬೆಂಗಳೂರಿಗೆ ನಗರ ಪ್ರವಾಹ ಮಾದರಿ ತಯಾರಿಕೆ ಎಂಬ ಕಾಮಗಾರಿಗಳ ಅಡಿಯಲ್ಲಿ ಸ್ಥಾಪಿಸಲಾಗಿದ್ದ 25 ಟೆಲಿಮೆಟ್ರಿಕ್‌ ಜಲ ಕೇಂದ್ರಗಳು ಮತತು 04 ಅಲ್ಟ್ರಾಸಾನಿಕ್ ನೀರಿನ ಮಟ್ಟ ಸಂವೇದಕಗಳನ್ನು ಸ್ಥಾಪಿಸಿದೆ.  2023ರ ಡಿಸೆಂಬರ್ ಹೊತ್ತಿಗೆ ಬೆಂಗಳೂರಿನ ಮಳೆ ನೀರಿನ ಚರಂಡಿಗಳಲ್ಲಿ ಸ್ಥಾಪಿಸಿರುವ  100 ನೀರಿನ ಮಟ್ಟದ ಸಂವೇದಕಗಳಲ್ಲಿ 49 ಕಾರ್ಯನಿರ್ವಹಿಸುತ್ತಿಲ್ಲ ಸಿಎಜಿಯು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಪ್ರವಾಹ ಪೀಡಿತ ಬೀದಿಗಳಲ್ಲಿ ಸ್ಥಾಪಿಸಲಾದ 5 ಡಬ್ಲ್ಯೂಎಲ್‌ಎಸ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ, ದತ್ತಾಂಶವೂ ಲಭ್ಯವಿಲ್ಲ ಇದಲ್ಲದೇ 184 ಉಪಕರಣಗಳಲ್ಲಿ 69 ಅಂದರೇ ಟೆಲಿಮೆಟ್ರಿಕ್‌ ಮಳೆ ಮಾಪಕ, ಟೆಲಿಮೆಟ್ರಿಕ್‌ ಹವಾಮಾನ ಕೇಂದ್ರಗಳು, ಮಂಗಳೂರು ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿಗಳ ಅಡಿಯಲ್ಲಿ ಸ್ಥಾಪಿಸಲಾದ ಟೆಲಿ ಮೆಟ್ರಿಕ್‌ ನೀರಿನ ಮಟ್ಟ ಸಂವೇದಕಗಳು ಕಾರ್ಯನಿರ್ವಹಿಸುತ್ತಿಲ್ಲ.

 

ತನ್ನ ಪ್ರವಾಹ ಕ್ರಿಯಾ ಯೋಜನೆಯಲ್ಲಿ ಕಾನೂನು ಚೌಕಟ್ಟಿನ ಅಗತ್ಯವನ್ನು ಉಲ್ಲೇಖಿಸಿತ್ತು. ಆದರೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಮೂಲಸೌಕರ್ಯಗಳ ನಿರ್ಮಾಣಕ್ಕೆ ಏಜೆನ್ಸಿಗಳಿಂದ ಕಡ್ಡಾಯ ಅನುಮತಿಗಳನ್ನು ಪಡೆಯಲು ರಾಜ್ಯವು ಕಾನೂನು ಚೌಕಟ್ಟನ್ನು ಸ್ಥಾಪಿಸಲಿಲ್ಲ. ಇದರ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯದ ಹೆದ್ದಾರಿಗಳು, ರೇಲ್ವೇ ಮತ್ತು ಇತರೆ ರಸ್ತೆಗಳು ಪ್ರವಾಹ, ಮುಳುಗಡೆಯಾದ ಉದಾಹರಣೆಗಳು ಕಂಡು ಬಂದಿವೆ.

 

ಹಾನಿಯ ವರ್ಗೀಕರಣಕ್ಕೆ ಮಾರ್ಗಸೂಚಿಯೇ ಇಲ್ಲ

 

ವಿಶೇಷವಾಗಿ ಮನೆ ಹಾನಿ ಮತ್ತು ಬೆಳೆ ನಷ್ಟವನ್ನು ಸರಿದೂಗಿಸುವಲ್ಲಿ ಪರಿಹಾರ ನೆರವು ಒದಗಿಸುವಲ್ಲಿ ಕೊರತೆ ಗಮನಕ್ಕೆ ಬಂದಿದೆ. ಕೆಲವು ವೈಯಕ್ತಿಕ ಪಾವತಿ ಕಡತಗಳ ಪರಿಶೀಲನೆಯು ಜಿಪಿಎಸ್‌ ನಿರ್ದೇಶಾಂಕಗಳನ್ನು ಹೊಂದಿರದ ಛಾಯಾಚಿತ್ರಗಳು ಅಥವಾ ಹಾನಿಗೊಳಗಾದ ಭಾಗ, ಕುಸಿದ ಕಟ್ಟಡಗಳ ಮೇಲೆ ಮಳೆ, ತೇವಾಂಶದ ಚಿಹ್ನೆಗಳಿರದ ಛಾಯಾಚಿತ್ರಗಳು ಪಾವತಿಗೆ ಆಧಾರವಾಗಿದೆ ಎಂದು ತೋರಿಸಿದೆ.  ಹಾನಿಯ ವರ್ಗೀಕರಣ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳ ಅನುಪಸ್ಥಿತಿ ಮತ್ತು ವರ್ಗಗಳ ನಡುವಿನ ಪರಿಹಾರ ಪಾವತಿಯಲ್ಲಿನ ಭಾರೀ ವ್ಯತ್ಯಾಸವು ಅಧಿಕಾರಿಗಳಿಂದ ಅನಿಯಂತ್ರಿತ ವಗೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ.  ಇದು ಅದೇ ಶೇಕಡವಾರು ವ್ಯಾಪ್ತಿಯ ಹಾನಿಗೆ ವ್ಯತಿರಿಕ್ತ ಪರಿಹಾರಕ್ಕೆ ಕಾರಣವಾಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

22,496 ಪ್ರಕರಣಗಳಲ್ಲಿ ಪುನರ್‍‌ ನಿರ್ಮಾಣವಿಲ್ಲ

 

2019ರಿಂದ 2023ರಲ್ಲಿ ಪುನರ್ ನಿರ್ಮಾಣಕ್ಕಾಗಿ ಮನೆ ಹಾನಿಯ 1,10,407 ಅನುಮೋದಿತ ಪ್ರಕರಣಗಳ ಬದಲಿಗೆ 22,496 ಪ್ರಕರಣಗಳಲ್ಲಿ (ಶೇ.20) ನಿರ್ಮಾಣ ಪ್ರಾರಂಭವಾಗಿಲ್ಲ. ಇದಕ್ಕಾಗಿ 213.94 ಕೋಟಿ ರು.ಗಳನ್ನು ಈಗಾಗಲೇ ಪಾವತಿಸಲಾಗಿದೆ. ಇದು ಮಾಡಿದ ಮೌಲ್ಯಮಾಪನಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿರುವುದು ವರದಿಯಿಂದ ತಿಳಿದು ಬಂದಿದೆ.

 

ಬೆಳೆ ನಷ್ಟ ಪರಿಹಾರ ಪಾವತಿಯಲ್ಲೂ ಲೋಪ

 

ಪರಿಹಾರ ಪೋರ್ಟ್‌ಲ್‌ನ ಮಾದರಿ ವಿಶ್ಲೇಷಣೆಯು ( ವೈಯಕ್ತಿಕ ಆಧಾರ್ ಸಂಖ್ಯೆಯನ್ನು ಆಧರಿಸಿ) ಬೆಳೆ  ನಷ್ಟಕ್ಕೆ ಪರಿಹಾರ ಪಾವತಿಸುವಲ್ಲಿ ಲೋಪಗಳನ್ನು ಬಹಿರಂಗಪಡಿಸಿದೆ. ಪರಿಹಾರ ಪೋರ್ಟ್‌ಲ್‌ ನಲ್ಲಿನ ದತ್ತಾಂಶ ಪರಿಶೀಲನೆ ಪ್ರಕಾರ (ವೈಯಕ್ತಿಕ ಆಧಾರ್ ಸಂಖ್ಯೆ, ವರ್ಷ, ಋತು, ವಿಪತ್ತು ಇತ್ಯಾದಿಗಳನ್ನೊಳಗೊಂಡ ದತ್ತಾಂಗಳ ಹೂಡುವಿಕೆ ಮೂಲಕ) ಮಾರ್ಗಸೂಚಿಗಳನ್ನು ಉಲ್ಲಂಘಿಸಿ  ಪರಿಹಾರ ಪಾವತಿಸಿದ ನಿರ್ದಶನಗಳನ್ನು ತೋರಿಸಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ರಾಮನಗರ ಜಿಲ್ಲೆಯಲ್ಲಿ 2022-23ರನೇ ಸಾಲಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮೂರು ಸೇತುವೆಗಳು ಮತ್ತು ಎರಡು ರಸ್ತೆಗಳ (ರಾಜ್ಯ ಹೆದ್ದಾರಿ) ಜಂಟಿ ಭೌತಿಕ ತಪಾಸಣೆ ಮಾಡಿದ್ದ (2022 ಅಕ್ಟೋಬರ್‍‌) ಸೇತುವೆ, ರಸ್ತೆಗಳನ್ನು ಪುನಃ ಸ್ಥಾಪಿಸಿಲ್ಲ.

 

ಭೂ ಕುಸಿತ ನಿರ್ವಹಣೆಯಲ್ಲಿ ಅಸಮರ್ಪಕತೆ

 

ಭೂ ಕುಸಿತ ನಿರ್ವಹಣೆಯಲ್ಲಿ ವಿಳಂಬವಾದ ರಾಜ್ಯ ಕ್ರಿಯಾ ಯೋಜನೆಯೊಂದಿಗೆ ರಾಜ್ಯದ ಪ್ರತಿಕ್ರಿಯೆಯು ಅಸಮರ್ಪಕವಾಗಿತ್ತು. ನಿರ್ಣಾಯಕ ಅಂರಗಳು, ನಿಖರವಲ್ಲದ ಭೂ ಕುಸಿತದ ಅಪಾಯದ ವಲಯ ನಕ್ಷೆಗಳು, ಭೂಕುಸಿತದ ದಾಸ್ತಾನಿನ ಕೊರತೆ ಮತ್ತು ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳ ಕೊರತೆಯನ್ನು ಒಳಗೊಂಡಿದೆ.

 

ಕೊಡಗು ಜಿಲ್ಲೆಯಲ್ಲಿ ಕೃಷಿಯಿಂದ ಕೃಷಿಯೇತರ ಉದ್ದೇಶಗಳಿಗೆ ಭೂಮಿಯನ್ನು ಪರಿವರ್ತಿಸಲು ವಿಧಿಸಲಾಗಿದ್ದ ನಿಷೇಧವನ್ನು ರಾಜ್ಯ ಸರ್ಕಾರವು ಹಿಂಪಡೆದಿದೆ. ಕೊಡಗಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನೂ ಭೂ ಕುಸಿತ ಪೀಡಿತಕ್ಕೊಳಗಾಗಬಹುದಾದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ 6.25 ಕೋಟಿ ರು ವೆಚ್ಚದ ಹೊರತಾಗಿಯೂ ಅಸುರಕ್ಷಿತವಾಗಿದೆ ಎಂದು ಸಿಎಜಿ ವರದಿಯು ಹೇಳಿದೆ.

 

 

ರಾಷ್ಟ್ರೀಯ ಚಂಡಮಾರುತ ಅಪಾಯ ಶಮನಗೊಳಿಸುವ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಿದೆ. ಇಡಬ್ಲ್ಯೂಎಸ್‌ ಉಪಕರಣಗಳನ್ನು ಇನ್ನೂ ಪರೀಕ್ಷಿಸಬೇಕಾಗಿದೆ. ಮತ್ತು ಯಾವುದೇ ಎಂಪಿಸಿಎಸ್‌ಗೆ ಆಶ್ರಯ ಮಟ್ಟದ ಉಪಕರಣಗಳನ್ನು ಪೂರೈಸಿಲ್ಲ. ಜಿಲ್ಲಾಡಳಿತಗಳು ಒದಗಿಸಿದ ಸಿಡಿಲಿನಿಂದ ಮಾನವ ಜೀವಹಾನಿಗೆ ಸಂಬಂಧಿಸಿದ ಅಂಕಿ ಅಂಶಗಳು ಮತ್ತು ಕಂದಾಯ ಇಲಾಖೆಯು ಪ್ರಕಟಿಸಿದ ಗುಡುಗು ಮತ್ತು ಮಿಂಚಿನ ಕ್ರಿಯಾ ಯೋಜನೆ 2022ರಲಲಿ ತೋರಿಸಲಾದ ಜಿಲ್ಲಾ ಮಟ್ಟದ ದತ್ತಾಂಶಗಳ ನಡುವೆ ವ್ಯತ್ಯಾಸವಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಗುಡುಗು-ಸಿಡಿಲು ಹಾನಿ ಎದುರಿಸಲ್ಲೂ ಸಜ್ಜಾಗಿಲ್ಲ

 

2018-23ನೇ ಸಾಲಿನಲ್ಲಿ ಸಿಡಿಲಿನಿಂದ ಸಂಭವಿಸಿದ ಸಾವುಗಳು ಯಾವುದೇ ಕಡಿಮೆಯಾಗುವ ಪ್ರವೃತ್ತಿಯನ್ನು ತೋರಿಸಿಲ್ಲ. ಸುಧಾರಿತ ತಾಂತ್ರಿಕ ವಿಧಾನಗಳ ಜೊತೆಯಲ್ಲಿ ಸಿಡಿಲಿನಿಂದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಮುದಾಯ ಜಾಗೃತಿಯೂ  ಸರಿಯಾಗಿ ನಡೆದಿಲ್ಲ.  ಅಲ್ಲದೇ 2024ರ ಆಗಸ್ಟ್‌ ಹೊತ್ತಿಗೂ ಗುಡುಗು ಮತ್ತು ಮಿಂಚಿನಿಂದ ಉಂಟಾಗುವ ಹಾನಿಯನ್ನು ಎದುರಿಸಲು ಸೂಚಿಸಿದ ಕ್ರಿಯಾತ್ಮಕ ಕಾರ್ಯತಂತ್ರಗಳ ಬಗ್ಗೆ ಇನ್ನೂ ಕ್ರಮವನ್ನೂ ಪ್ರಾರಂಭಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

Your generous support will help us remain independent and work without fear.

Latest News

Related Posts