ಬೆಂಗಳೂರು; ವಿಧಾನಸಭೆ ಕ್ಷೇತ್ರಗಳಲ್ಲಿ ಸಂಭವಿಸಿರುವ ಮುಂಗಾರು ಮಳೆ ಹಾನಿಗೆ ಪರಿಹಾರ ಒದಗಿಸುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕಾಂಗ್ರೆಸ್ ಶಾಸಕರನ್ನೇ ಗೋಳಾಡಿಸುತ್ತಿದೆ. ಬೆಳೆ, ರಸ್ತೆ, ಜನ ಜಾನುವಾರುಗಳಿಗೆ ಆಗಿರುವ ಹಾನಿಯನ್ನು ಕಾಂಗ್ರೆಸ್ ಶಾಸಕರು ಕಣ್ಣಿಗೆ ಕಟ್ಟುವಂತೆ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಪತ್ರ, ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿ ಏಳೆಂಟು ತಿಂಗಳು ಕಳೆದರೂ ಇನ್ನೂ ಪರಿಹಾರ ದೊರೆತಿಲ್ಲ.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸಿರುವ ವಿಧಾನಸಭೆ ಕ್ಷೇತ್ರಗಳಿಗೆ ಬರ ಪರಿಹಾರವನ್ನೂ ನಿಗದಿತ ಅವಧಿಯಲ್ಲಿ ನೀಡಿರಲಿಲ್ಲ. ಇದರ ಬೆನ್ನಲ್ಲೇ ಮುಂಗಾರು ಮಳೆಯಿಂದ ಹಾನಿಗೀಡಾಗಿರುವ ಕಾಂಗ್ರೆಸ್ ಶಾಸಕರು ಪ್ರತಿನಿಧಿಸಿರುವ ವಿಧಾನಸಭೆ ಕ್ಷೇತ್ರಗಳಿಗೂ ನಿಗದಿತ ಅವಧಿಯಲ್ಲಿ ಪರಿಹಾರ ನೀಡಿಲ್ಲ.
ಮತ್ತೊಂದು ವಿಶೇಷವೆಂದರೇ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರು ಬರ ಪರಿಹಾರಕ್ಕೂ ಸರ್ಕಾರದ ಮೆಟ್ಟಿಲು ಹತ್ತಿಳಿದು ಬಸವಳಿದಿದ್ದರು. ಇದೀಗ ಇದೇ ಎನ್ ಹೆಚ್ ಕೋನರೆಡ್ಡಿ ಅವರು ಮುಂಗಾರು ಮಳೆಯ ಹಾನಿಯಿಂದಾಗಿರುವ ಹಾನಿಗೂ ಪರಿಹಾರ ಪಡೆಯಲು ಸರ್ಕಾರದ ಮೆಟ್ಟಿಲಿಳಿದು ಬಸವಳಿದು ಹೋಗಿದ್ದಾರೆ.
ಎನ್ ಹೆಚ್ ಕೋನರೆಡ್ಡಿ ಅವರು ನವಲಗುಂದ ಕ್ಷೇತ್ರದ ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳಲ್ಲಿ ಮುಂಗಾರು ಮಳೆಯಿಂದ ಆಗಿರುವ ಅಪಾರ ಹಾನಿಗೆ ಸೂಕ್ತ ಅನುದಾನ ನೀಡಬೇಕು ಎಂದು 2025ರ ಜೂನ್ 18ರಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರ ಬರೆದು 6 ತಿಂಗಳಾದರೂ ಸಹ ಇನ್ನೂ ಅನುದಾನ ಮಂಜೂರಾಗಿಲ್ಲ.
ಅದೇ ರೀತಿ ಸಚಿವರ ಪತ್ರ ಆಧರಿಸಿ ಕೃಷಿ ಇಲಾಖೆಯ ಬೆಳೆ ಅಭಿವೃದ್ಧಿ ಮತ್ತು ಯೋಜನೆಯ ಶಾಖೆಯ ಹೆಚ್ಚುವರಿ ನಿರ್ದೇಶಕರು 2025ರ ಜುಲೈ 14ರಂದು, ಅನುದಾನ ಮತ್ತು ಪರಿಹಾರಕ್ಕೆ ಕಂದಾಯ ಇಲಾಖೆಯ ವಿಪತ್ತು, ನಿರ್ವಹಣೆ ವಿಭಾಗದ ಸರ್ಕಾರದ ಉಪ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರ ಬರೆದು 4 ತಿಂಗಳಾಗಿವೆ. ಆದರೂ ಅನುದಾನ ಬಿಡುಗಡೆಯಾಗಿಲ್ಲ.
ಆದರೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ಅವರು 2025ರ ಡಿಸೆಂಬರ್ 22ರಂದು, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗಳಿಗೆ ಪರಿಹಾರ ವಿತರಿಸಲು ಅನುದಾನ ಬಿಡುಗಡೆ ಮಾಡುವ ಸಂಬಂಧ ಧಾರವಾಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಅನುದಾನ ಕೋರಿಕೆಯ ಪತ್ರ, ಪ್ರಸ್ತಾವಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎನ್ನುವಂತೆ ಅತ್ತಿಂದಿತ್ತ ಚಲಿಸುತ್ತಿವೆಯೇ ವಿನಃ ಪರಿಹಾರ, ಅನುದಾನ ಮಾತ್ರ ಬಿಡುಗಡೆಯಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕೋನರೆಡ್ಡಿ ಅವರ ಪತ್ರದಲ್ಲೇನಿದೆ?
2025-26ನೇ ಸಾಲಿನ ಜೂನ್ ತಿಂಗಳಿನಲ್ಲಿ ಸುರಿದ ಅಪಾರ ಮಳೆಯಿಂದ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭೆ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳಲ್ಲಿ ಹಾನಿಯಾಗಿದೆ. ರೈತರು ಬೆಳೆದ ಮುಂಗಾರು ಬೆಳೆಗಳು, ಎಲ್ಲ ಇಲಾಖೆಯ ರಸ್ತೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಕೆಲವು ಕಡೆ ಬಸ್ ಸಂಚಾರಗಳು ಸ್ಥಗಿತಗೊಂಡಿವೆ. ಹೆಸರು, ಉದ್ದು, ಈರುಳ್ಳಿ, ಮೆಕ್ಕಜೋಳ, ಮೆಣಸಿನ ಕಾಯಿ, ಹತ್ತಿ, ಶೇಂಗಾ ಹಾಗೂ ತೋಟಗಾರಿಕೆ ಬೆಳೆಗಳು ಕೆಲವು ಕಡೆ ಬಿತ್ತನೆ ಮಾಡಿದರೂ ಸತತವಾಗಿ ಸುರಿದ ಭಾರೀ ಮಳೆಯಿಂದ ಸಸಿ ಹುಟ್ಟಲು ಸಹ ತೊಂದರೆಯಾಗಿದೆ ಎಂದು ಕೋನರೆಡ್ಡಿ ಅವರು 2025ರ ಜೂನ್ 18ರಂದು ಬರೆದ ಪತ್ರದಲ್ಲಿ ವಿವರಿಸಿದ್ದರು.

ಇನ್ನು ಈ ಕ್ಷೇತ್ರ ವ್ಯಾಪ್ತಿಯಲ್ಲಿನ ನರಗುಂದ, ಶಲವಡಿ ರಸ್ತೆಯ ತಡಹಾಳ ಗ್ರಾಮದ ಹತ್ತಿರವಿರುವ ಬೆಣ್ಣಿ ಹಳ್ಳ ಸೇತುವೆಯ ಮಣ್ಣು ಕೊಚ್ಚಿ ಹೋಗಿದೆ. ಪಡೆಸೂರ-ಹಾಳಕುಸುಗಲ್ಲ-ಬಳ್ಳೂರ ರಸ್ತೆ, ಗುಡಿಸಾಗರ-ತಡಹಳ, ಯಮನೂರ-ಮೊರಬ-ಗುಮ್ಮಗೋಳ ರಸ್ತೆ, ತಿರ್ಲಾಪುರ ಹತ್ತಿರ ಹಾಗೂ ಮೊರಬ ಸಮೀಪ ಅಲ್ಲಲ್ಲಿ ರಸ್ತೆಗಳು ಕಿತ್ತು ಹೋಗಿವೆ. ತಲೆಮೊರಬ-ಅಮ್ಮಿನಬಾವಿ ರಸ್ತೆಯ ಗ್ರಾಮದ ಹತ್ತಿರವಿರುವ ಹುಣಸಿಕಟ್ಟಿ ಹಳ್ಳದ ಪರಸರ ಕೆಲಸ ಕಡೆ ಕಿತ್ತು ಹೋಗಿವೆ. ದುರಸ್ತಿ ಮಾಡಬೇಕಿದೆ ಎಂದು ಪತ್ರದಲ್ಲಿ ವಸ್ತುಸ್ಥಿತಿಯನ್ನು ವಿವರಿಸಿದ್ದರು.

ಹಾಗೆಯೇ ಗುಮ್ಮಗೋಳ-ಬೆಟಸೂರ, ಶಿರಕೋಳ-ಬಳ್ಳೂರ, ಇಬ್ರಾಹಿಂಪೂರ-ಹಳ್ಳಿಕೇರಿ, ಶಿಶ್ವಿನಹಳ್ಳಿ-ಇಂಗಳಹಳ್ಳಿ-ಶಿಶ್ವಿನಹಳ್ಳ-ಬೆನ್ನೂರ ಮುಂತಾದ ರಸ್ತೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಒಟ್ಟು ಕಡೆ 7 ರಸ್ತೆಗಳಲ್ಲಿ ಬಸ್ ಸಂಚಾರ ಸ್ಥಗಿಗೊಂಡಿದೆ. ತಕ್ಷಣ ರಸ್ತೆಯನ್ನು ಸರಿಪಡಿಸಿ ಸಂಚಾರ ಮುಕ್ತಗೊಳಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಸುಮಾರು 150 ಕುರಿಗಳು ಪ್ರವಾಹದಲ್ಲಿ ಸಿಲುಕಿದ್ದವು. ಇಂಗಳಹಳ್ಳಿ ಗ್ರಾಮದ ಹತ್ತಿರ ಸುಮಾರು 400 ಕುರಿಗಳು ಬಂಡಿವಾಡ ಗ್ರಾಮದ ಹತ್ತಿರ ಸುಮಾರು 100 ಕುರಿಗಳನ್ನು ರಕ್ಷಿಸಲಾಗಿದೆ. ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಪ್ರಮುಖವಾಗಿ ಬೆಣ್ಣಿ ಹಳ್ಳ, ತುಪ್ಪರಿಹಳ್ಳ, ಗದ್ನೆಹಳ್ಳ, ಮಳ್ಳಹಳ್ಳ, ಬನ್ನಿಹಳ್ಳ, ರಾಮಣ್ಣವರ ಹಳ್ಳ, ಕಲ್ಲಹಳ್ಳ, ಹುಣಸಿಕಟ್ಟಿ ಹಳ್ಳ, ರಾಡಿಹಳ್ಳ, ಸವುಳ ಹಳ್ಳ, ಹಂದಿಗನಹಳ್ಳ, ನೀರಲಹಳ್ಳ, ದೇಸಾಯಿ ಹಳ್ಳ, ನಿಗದಿಹಳ್ಳ, ಯಮನಿಹಳ್ಳ ಹೀಗೆ ಹಳ್ಳಗಳ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿಗೆ ಕಾರಣವಾಗಿವೆ. ಈ ಎಲ್ಲ ಹಳ್ಳಗಳನ್ನು ಅಭಿವೃದ್ಧಿಪಡಿಸಬೇಕಾಇದೆ. ಹೀಗಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಪರಿಹಾರ ವಿತರಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಕೋನರೆಡ್ಡಿ ಅವರು ಪತ್ರದಲ್ಲಿ ಕೋರಿದ್ದರು.
ಈ ಪತ್ರವನ್ನು ಕೃಷಿ ಸಚಿವರ ಆಪ್ತ ಕಾರ್ಯದರ್ಶಿ, ಇಲಾಖೆಯ ಆಯುಕ್ತರಿಗೆ 2025ರ ಜೂನ್ 27ರಂದು ರವಾನಿಸಿದ್ದರು. ಶಾಸಕರ ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.

ಆದರೆ ಈ ಪತ್ರವನ್ನು ಕೃಷಿ ಇಲಾಖೆಯ ಆಯುಕ್ತರ ಕಚೇರಿಯ ಬೆಳೆ ಅಭಿವೃದ್ಧಿ ಯೋಜನೆಯ ಹೆಚ್ಚುವರಿ ಕೃಷಿ ನಿರ್ದೇಶಕರು 2025ರ ಜುಲೈ 14ರಂದು ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗಳಿಗೆ ರವಾನಿಸಿದ್ದರು.

ನಂತರ ಈ ಪತ್ರವನ್ನು ಕಂದಾಯ ಇಲಾಖೆಯು 5 ತಿಂಗಳವರೆಗೆ ತನ್ನ ಬಳಿಯೇ ಇಟ್ಟುಕೊಂಡಿತ್ತು. 5 ತಿಂಗಳ ನಂತರ ಅಂದರೇ 2025ರ ಡಿಸೆಂಬರ್ 22ರಂದು ಈ ಪತ್ರವನ್ನು ಧಾರವಾಡ ಜಿಲ್ಲಾಧಿಕಾರಿಗಳಿಗೆ ರವಾನಿಸಿ ಕೈ ತೊಳೆದುಕೊಂಡಿದೆ.
ಎನ್ ಹೆಚ್ ಕೋನರೆಡ್ಡಿ ಅವರು ಪತ್ರದಲ್ಲಿನ ಕೋರಿಕೆ ಅಂಶಗಳನ್ನೇ ಪುನರುಚ್ಛರಿಸಿರುವ ಕಂದಾಯ ಇಲಾಖೆಯು ಈ ಬಗ್ಗೆ ಕೇಂದ್ರ ಸರ್ಕಾರದ ಎಸ್‌ಡಿಆರ್‍ಎಫ್, ಎನ್‌ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಅಧಿಸೂಚನೆ, ಆದೇಶ, ಸುತ್ತೋಲೆಗಳ ಅನ್ವಯ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ನಂತರ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂದು ಧಾರವಾಡ ಜಿಲ್ಲಾಧಿಕಾರಿಗೆ ನಿರ್ದೇಶಿಸಿರುವುದು ಗೊತ್ತಾಗಿದೆ.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ತಲುಪಿಲ್ಲ ಬರ ಪರಿಹಾರ
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ವಿಧಾನಸಭೆ ಕ್ಷೇತ್ರಗಳಿಗೂ ಬರ ಪರಿಹಾರವು ಸೂಕ್ತ ಕಾಲದಲ್ಲಿ ಬಿಡುಗಡೆಯಾಗಿರಲಿಲ್ಲ. ಈ ಕುರಿತು ‘ದಿ ಫೈಲ್’, 2024ರ ಜೂನ್ 13ರಂದು ವರದ ಪ್ರಕಟಿಸಿತ್ತು.









