ಪ್ರಶ್ನೆಪತ್ರಿಕೆ ಸೋರಿಕೆ; ಖಜಾನೆ ನಿರ್ದೇಶಕರ ಪಾತ್ರದ ಕುರಿತು ವರದಿ ಸಲ್ಲಿಸದ ಇಲಾಖೆ

ಬೆಂಗಳೂರು; ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಜಾನೆ ಇಲಾಖೆಯ ಹಿಂದಿನ ನಿರ್ದೇಶಕಿ ಜ್ಯೋತಿ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ಕುರಿತು ಸರ್ಕಾರಕ್ಕೆ ಈವರೆವಿಗೂ ವರದಿ ಸಲ್ಲಿಕೆಯಾಗಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿದ ಕಡತವನ್ನು ಸರ್ಕಾರದ ಹಂತದಲ್ಲೇ ಮುಕ್ತಾಯಗೊಳಿಸಲು ನಿರ್ಧರಿಸಿರುವ ಇಲಾಖೆ, ಇದಕ್ಕೆ ಪದವಿಪೂರ್ವ ಶಿಕ್ಷಣ ಮಂಡಳಿಯೇ ಜವಾಬ್ದಾರಿ ಹೊರಬೇಕು ಎಂದು ಎಚ್ಚರಿಸಿದೆ.


4 ವರ್ಷಗಳಾದರೂ ವರದಿ ಸಲ್ಲಿಸದ ಕಾರಣ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ಕುರಿತು 15 ದಿನದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಅರೆ ಸರ್ಕಾರಿ ಪತ್ರದಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
‘ಈ ಬಗ್ಗೆ ವೈಯಕ್ತಿಕ ಗಮನಹರಿಸಿ 15 ದಿನದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ನಿರ್ದೇಶನಾಲಯದ ಜವಾಬ್ದಾರಿ ಮೇಲೆ ಸರ್ಕಾರದ ಹಂತದಲ್ಲೇ ಕಡತ ಮುಕ್ತಾಯಗೊಳಿಸಲಾಗುವುದು,’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಎಂ ಕನಗವಲ್ಲಿ ಅವರಿಗೆ ಜಂಟಿ ಕಾರ್ಯದರ್ಶಿ ಎಚ್ಚರಿಸಿದ್ದಾರೆ ಎಂದು ಗೊತ್ತಾಗಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ 2017ರಿಂದಲೂ ಪತ್ರ ಬರೆಯುತ್ತಲೇ ಇದೆ. 2020ರ ಜನವರಿ 18ರಂದು ಈ ಬಗ್ಗೆ ಪತ್ರ ಬರೆದಿತ್ತು. ಆದರೆ ಪದವಿಪೂರ್ವ ಶಿಕ್ಷಣ ಇಲಾಖೆ ಯಾವುದೇ ವರದಿಯನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಇಲಾಖೆಯ ಜಂಟಿ ಕಾರ್ಯದರ್ಶಿ ಮತ್ತೊಂದು ಅರೆ ಸರ್ಕಾರಿ ಪತ್ರವನ್ನು ಬರೆದಿದ್ದಾರೆ ಎಂದು ತಿಳಿದು ಬಂದಿದೆ.


ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಕೋಲಾರ ಜಿಲ್ಲೆ ಮಾಲೂರಿನ ಖಜಾನೆಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಖಚಿತಪಡಿಸಿದ್ದರು. ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ವಿಧಾನ ಸಭೆಯ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತ್ತು. ಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆದಿತ್ತು.


ಸಿಐಡಿ ತನಿಖೆಯ ನೇತೃತ್ವ ವಹಿಸಿದ್ದ ಅಂದಿನ ಡಿಐಜಿ ಸೋನಿಯಾ ನಾರಂಗ್ ಅವರ ತಂಡ ಮಾಲೂರಿಗೆ ತೆರಳಿ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗಿರುವ ಸ್ಥಳ ಪರಿಶೀಲನೆ ನಡೆಸಿದ್ದ ತಂಡ ಸೋರಿಕೆ ಹಿಂದೆ ಖಜಾನೆ ಅಧಿಕಾರಿ ಹಾಗೂ ಇತರ ಸಿಬ್ಬಂದಿಯ ಕೈವಾಡ ಬಲವಾಗಿದೆ ಎಂದು ಅನುಮಾನಿಸಿತ್ತು.


ಖಜಾನೆ ಭದ್ರತೆಗೆ ಸದಾ ಕಾಲ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಹೀಗಾಗಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಬೇಕಾದರೆ ಖಜಾನೆಯ ಉಸ್ತುವಾರಿ ವಹಿಸುವ ಈ ನಾಲ್ವರ ಪೈಕಿ ಯಾರಾದರೂ ಲೋಪವೆಸಗಿರಬೇಕು ಅಥವಾ ಭದ್ರತಾ ಸಿಬ್ಬಂದಿ ಲೋಪವಿರಬೇಕು ಎನ್ನುವ ನಿರ್ಧಾರಕ್ಕೆ ಸಿಐಡಿ ಅಧಿಕಾರಿಗಳು ಬಂದಿದ್ದರು.


2016ರಲ್ಲೇ ಆರು ತಿಂಗಳ ಅವಧಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮೂವರು ಆಯುಕ್ತರು ಬದಲಾಗಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಪಿಯು ಮಂಡಳಿ ಅಧಿಕಾರಿಗಳೇ ಕಾರಣ. ಅವರು ಶಾಮೀಲಾಗದಿದ್ದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರಲಿಲ್ಲ ಒಂದೋ ಇದಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು, ಇಲ್ಲವೇ ಅಂದಿನ ಸಚಿವ ಕಿಮ್ಮನೆ ರತ್ನಾಕರ ಅವರೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಆಗ್ರಹಿಸಿದ್ದನ್ನು ಸ್ಮರಿಸಬಹುದು.


ರಾಜ್ಯದ ಜಿಲ್ಲಾ ಕೇಂದ್ರ ಹಾಗೂ ತಾಲೂಕುಗಳು ಸೇರಿ ಒಟ್ಟು 187 ಖಜಾನೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆ ನಡೆಯುವ ಕೆಲ ದಿನಗಳ ಮುಂಚೆಯೇ ತಂದಿರಿಸಲಾಗುತ್ತದೆ. ಖಜಾನೆಯ ಉಸ್ತುವಾರಿ ಜವಾಬ್ದಾರಿಯು ತಹಸೀಲ್ದಾರ್, ಕಾಲೇಜಿನ ಪ್ರಾಂಶುಪಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಖಜಾನೆ ಅಧಿಕಾರಿಗೆ ಇರುತ್ತದೆ. ಪ್ರಶ್ನೆಪತ್ರಿಕೆಯನ್ನು ಭದ್ರವಾಗಿ ನೋಡಿಕೊಳ್ಳುವುದು ಹಾಗೂ ಅವುಗಳ ಸೂಕ್ತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ನೋಡಿಕೊಳ್ಳವ ಜವಾಬ್ದಾರಿಯು ಅವರದೇ ಆಗಿರುತ್ತದೆ.

the fil favicon

SUPPORT THE FILE

Latest News

Related Posts