ಬೆಂಗಳೂರು; ‘ಮಂಡ್ಯ ಜಿಲ್ಲೆಯಲ್ಲಿ ಸಿದ್ಧಪಡಿಸಿದ ಕೈಗಾರಿಕೆ ಪ್ರದೇಶದ ಭೂಮಿಯು ಪ್ರಸ್ತುತ ಲಭ್ಯವಿಲ್ಲ. ಒಂದು ವೇಳೆ ಕಂಪನಿಯು ರಾಜ್ಯ ಸರ್ಕಾರಕ್ಕೆ ತನ್ನ ಯೋಜನೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿ ಅವಶ್ಯಕ ಭೂಮಿಯನ್ನು ಗುರುತಿಸಿ ಭೂ ಸ್ವಾಧೀನಕ್ಕೆ ಹಾಗೂ ಹಂಚಿಕೆಗೆ ಕೋರಿದಲ್ಲಿ ಮಾತ್ರ ಅಗತ್ಯ ಬೆಂಬಲ ಸೇವೆ ನೀಡಲಾಗುವುದು. ಮತ್ತು ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರದಿಂದಲೇ ನಿಯಮಾನುಸಾರ ಭೂ ಸ್ವಾಧೀನ ಮಾಡಿಕೊಡಲಾಗುವುದು,’
ಹೀಗೆಂದು ಬೃಹತ್ ಮತ್ತು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಸದನಕ್ಕೆ ಸರ್ಕಾರದ ನಿಲುವು ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಸಿಗುತ್ತಿಲ್ಲ ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
‘ರಾಜ್ಯ ಸರಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಕಳೆದ ಒಂದು ವರ್ಷದಿಂದ ಕೈಗಾರಿಕೆ ಸ್ಥಾಪನೆಗೆ ಜಾಗ ಹುಡುಕಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಇನ್ನೂ ಜಾಗ ಸಿಕ್ಕಿಲ್ಲ,’ ಎಂದು ರಾಜ್ಯ ಸರಕಾರದ ಬೆಂಬಲದ ಕೊರತೆಯನ್ನು ತೆರೆದಿಟ್ಟಿದ್ದರು.
ಅಲ್ಲದೇ ‘ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅದ್ಯಾವ ಕೈಗಾರಿಕೆ ತರುತ್ತಾರೋ ತರಲಿ, ನಾನು ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ ಜಾಗ ನೀಡಲು ಸಿದ್ಧ,’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ ಎಂ ನರೇಂದ್ರಸ್ವಾಮಿ ಅವರೂ ಸವಾಲು ಎಸೆದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೆ ಆರ್ ಪೇಟೆ ಶಾಸಕ ಹೆಚ್ ಟಿ ಮಂಜು ಅವರ ಗಮನ ಸೆಳೆಯುವ ಸೂಚನೆಗೆ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿರುವ ಪ್ರಕಟಿಸಿರುವ ನಿಲುವು ಮುನ್ನೆಲೆಗೆ ಬಂದಿದೆ.
ಕಂಪನಿಯೇ ಪ್ರಸ್ತಾವ ಸಲ್ಲಿಸಲಿ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಸಿಗುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು. ಆದರೆ ಸರ್ಕಾರವು ಒದಗಿಸಿರುವ ಉತ್ತರದಲ್ಲಿ ಮಂಡ್ಯದಲ್ಲಿ ಜಮೀನು ಲಭ್ಯವಿದೆ. ಆದರೆ ಲಭ್ಯವಿರುವ ಬಹುತೇಕ ಜಮೀನು, ವ್ಯಾಜ್ಯಗಳು ಮತ್ತು ಭೂ ಸ್ವಾಧೀನ ಪ್ರಶ್ನಿಸಿ ಹಲವಾರು ರೈತರು ನ್ಯಾಯಾಲಯದ ಕಟಕಟೆ ಏರಿದ್ದಾರೆ. ಹೀಗಾಗಿ ಸರ್ಕಾರವು ಮಂಡ್ಯ ಜಿಲ್ಲೆಯಲ್ಲಿ ಸಿದ್ಧಪಡಿಸಿದ ಕೈಗಾರಿಕೆ ಪ್ರದೇಶದ ಭೂಮಿಯು ಪ್ರಸ್ತುತ ಲಭ್ಯವಿಲ್ಲ ಎಂದು ಉತ್ತರ ಒದಗಿಸಿದೆ.

ಆದರೆ ಒಂದು ವೇಳೆ ಕಂಪನಿಯು ರಾಜ್ಯ ಸರ್ಕಾರಕ್ಕೆ ತನ್ನ ಯೋಜನೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಬೇಕು. ಅವಶ್ಯಕ ಭೂಮಿಯನ್ನು ಗುರುತಿಸಿ ಭೂ ಸ್ವಾಧೀನಕ್ಕೆ ಹಾಗೂ ಹಂಚಿಕೆಗೆ ಕೋರಬೇಕು. ಆಗ ಮಾತ್ರ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಬೆಂಬಲ ಸೇವೆ ನೀಡಿ ಅಗತ್ಯವಿರುವ ಭೂಮಿಯನ್ನು ನಿಯಮಾನುಸಾರ ಭೂ ಸ್ವಾಧೀನ ಮಾಡಿಕೊಡಲಾಗುತ್ತದೆ ಎಂದು ಎಂ ಬಿ ಪಾಟೀಲ್ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
100 ಎಕರೆ ಜಮೀನು ಲಭ್ಯವಿಲ್ಲವೇ?
ಅಮೇರಿಕಾ ಮೂಲದ ಸ್ಯಾನ್ಸ್‌ನ್ ಗ್ರೂಪ್‌ಗೆ ರಾಜ್ಯ ಸರ್ಕಾರದಿಂದ ಮಂಡ್ಯ ಜಿಲ್ಲೆಯ ಸುತ್ತಮುತ್ತಲು 100 ಎಕರೆ ಭೂಮಿಯನ್ನು ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಘಟಕ ಸ್ಥಾಪಿಸಲು ಹಂಚಿಕೆ ಮಾಡಬೇಕು ಎಂದು ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್ ಡಿ ಕುಮಾರಸ್ವಾಮಿ ಅವರು 2025ರ ಅಕ್ಟೋಬರ್ 31ರಂದು ತಮ್ಮ ಪತ್ರದಲ್ಲಿ ಕೋರಿದ್ದಾರೆ. ಈ ಪ್ರಸ್ತಾವವು ಸದ್ಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವರು ಒದಗಿಸಿರುವ ಉತ್ತರದಿಂದ ಗೊತ್ತಾಗಿದೆ.
ಆದರೆ ಅಮೇರಿಕಾ ಮೂಲದ ಸ್ಯಾನ್ಸನ್ ಗ್ರೂಪ್ ನಿಂದ ಯೋಜನೆ ಅನುಮೋದನೆ ಹಾಗೂ ಭೂಮಿ ಹಂಚಿಕೆ ಕುರಿತು ರಾಜ್ಯ ಸರ್ಕಾರಕ್ಕೆ ನೇರವಾಗಿ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದೂ ತನ್ನ ಉತ್ತರದಲ್ಲಿ ಹೇಳಿದೆ.
ಮಂಡ್ಯ ತಾಲೂಕಿನ ನೊದೇಕೊಪ್ಪಲು ಗ್ರಾಮದಲ್ಲಿ 284.25 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಲು 2022ರ ಜನವರಿ 28ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗಿನಿಂದ ಇಂದಿನವರೆಗೂ ಗ್ರಾಮಸ್ಥರು ಭೂ ಸ್ವಾಧೀನ ವಿರೋಧಿಸುತ್ತಿರುವುದರಿಂದ ಜೆಎಂಸಿ ಕಾರ್ಯ ನಿರ್ವಹಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುದರುಗುಂಡಿ ಗ್ರಾಮದಲ್ಲಿ 109 ಎಕರೆ 4 ಗುಂಟೆ ಜಮೀನನ್ನುಸ್ವಾಧೀನಪಡಿಸಲು 2021ರ ಫೆ.2ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. 98 ಎಕರೆ 12 ಗುಂಟೆ ವಿಸ್ತೀರ್ಣದ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲು ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಉಳಿದ 10 ಎಕರೆ 32 ಗುಂಟೆ ಜಮೀನಿಗೆ ಭೂ ಪರಿಹಾರ ನೀಡುವ ಹಂತದಲ್ಲಿದೆ ಎಂದು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೆನ್ನಾಪುರ, ಬೀಚನಹಳ್ಳಿ, ಹಟ್ನ, ಬಿಳಗುಂದ ಗ್ರಾಮಗಳಲ್ಲಿ 1,277 ಎಕರೆ 02 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಲು 2020ರ ಆಗಸ್ಟ್ 14ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೂ ರೈತರು, ಅಧಿಸೂಚಿತ ಖಾತೆದಾರರು ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ವಿರೋಧ ವ್ಯಕ್ತಪಡಿಸಿದ್ರಿಂದ ಜೆಎಂಸಿ ಕಾರ್ಯ ನಡೆಸಿ ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿರುವುದು ತಿಳಿದು ಬಂದಿದೆ.
ಏನಿದು ಯೋಜನೆ?
ಅಮೇರಿಕಾ ಮೂಲದ ಪ್ರತಿಷ್ಠಿತ ತಂತ್ರಜ್ಞಾನ ಉದ್ಯಮವಾದ ಸ್ಯಾನ್ಸನ್ ಗ್ರೂಪ್‌ನ ಕಂಪನಿಯು ಭಾರತದಲ್ಲಿ ಸಿಲಿಕಾಕ್ ಮತ್ತಿ ಸಿಲಿಕಾನ್ ಕಾರ್ಬೈಟ್ ಉತ್ಪಾದನಾ ಸೌಲಭ್ಯಕ್ಕಾಗಿ ಎಂಡ್ ಟು ಎಂಡ್ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಘಟಕ ಸ್ಥಾಪಿಸವ ಉದ್ದೇಶ ಹೊಂದಿದೆ. ಮತ್ತು ಈ ಹಯಟೆಕ್ ಹಾರ್ಡ್‌ವೇರ್ ಎಂಜಿನಿಯರಿಂಗ್ ಯೋಜನೆಯನ್ನು ಕರ್ನಾಟಕದಲ್ಲೇ ಇರಿಸಲು ಬಲವಾದ ಆದ್ಯತೆ ಹೊಂದಿದೆ.
ಪ್ರಸ್ತಾಪಿತ ಸೌಲಭ್ಯವು ಮ್ಯಾಕ್ರೋ ಎಲೆಕ್ಟ್ರಾನಿಕ್ ವಲಯದಲ್ಲಿ ಸಿಲಿಕಾನ್ ಮತ್ತು ಸಿಲಿಕಾನ್ ಕಾರ್ಬೈಟ್ ಉತ್ಪಾದನೆಯಿಂದ ಸೌರ ಫಲಕ ಬ್ಯಾಟರಿಗಳು, ಡಯೋಡ್‌ಗಳೂ ಇತ್ಯಾದಿಗಳನ್ನು ಸಿದ್ಧಪಡಿಸಿ ಉತ್ಪನ್ನಗಳವರೆಗೆ ಸಂಪೂರ್ಣ ಅರೆವಾಹಕ ಮೌಲ್ಯ ಸರಪಳಿಯನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.
ಈ ಯೋಜನೆಯನ್ನು ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಉಪಕ್ರಮಗಳ ದೃಷ್ಟಿಗೆ ಅನುಗುಣವಾಗಿ ಅರೆವಾಹಕ ವಲಯದಲ್ಲಿ ಗಮನಾರ್ಹ ತಂತ್ರಜ್ಞಾನ ಸೇರ್ಪಡೆ ಹೆಚ್ಚಿನ ಮೌಲ್ಯದ ಉದ್ಯೋಗ ಸೃಷ್ಟಿ ಮತ್ತು ಸಾಮರ್ಥ್ಯ ವೃದ್ಧಿಗೆ ಭರವಸೆ ನೀಡಲಿದೆ ಎಂದು ಹೇಳಲಾಗಿದೆ.
ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 30ರಿಂದ 40 ಸಾವಿರ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಒದಗಿಸುವ ಭರವಸೆ ಕೂಡ ನೀಡಲಾಗಿರುತ್ತದೆ. ಆದ ಕಾರಣ ಸದರಿ ಸಂಸ್ಥೆಗೆ ಸರ್ಕಾರದಿಂದ ಮಂಡ್ಯ ಜಿಲ್ಲೆಯ ಸುತ್ತಮುತ್ತಲು 100 ಎಕರೆ ಬಯಲು ಭೂಮಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ಸ್ಯಾನ್ಸನ್ ಗ್ರೂಪ್‌ನ ಕಂಪನಿಯು ಬೇಡಿಕೆ ವ್ಯಕ್ತಪಡಿಸಿದೆ.

ಅದರಂತೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವರಿಗೆ ಕೆಂದ್ರ ಸರ್ಕಾರದ ಭಾರೀ ಮತ್ತು ಉಕ್ಕು ಸಚಿವರ ಕಛೇರಿಯಿಂದ ಪತ್ರ ಬರೆದಿತ್ತು. ಈ ಕಂಪನಿಯ ಬೇಡಿಕೆಯಂತೆ ಮಂಡ್ಯ ಜಿಲ್ಲೆಯ ಸುತ್ತಮುತ್ತಲು ಬಯಲು ಭೂಮಿ ಜಮೀನನ್ನು ಮಂಜೂರು ಮಾಡಿ ನಿರುದ್ಯೋಗಿ ಯುವಕ ಯುವತಿಯರಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿದೆ.
ರಾಜ್ಯ ಸರಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಕಳೆದ ಒಂದು ವರ್ಷದಿಂದ ಕೈಗಾರಿಕೆ ಸ್ಥಾಪನೆಗೆ ಜಾಗ ಹುಡುಕಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಇನ್ನೂ ಜಾಗ ಸಿಕ್ಕಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು. ಅಲ್ಲದೇ ಕನಿಷ್ಠ ಒಂದು ಕಾರ್ಖಾನೆಯನ್ನಾದರು ಮಂಡ್ಯಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಇನ್ನೂ ಸರಕಾರ ನಮಗೆ ಜಾಗ ನೀಡಿಲ್ಲ ಎಂದು ನೀಡಿದ್ದ ಹೇಳಿಕೆಯನ್ನು ಸ್ಮರಿಸಬಹುದು.









