ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಕ್ತ ಮಾರುಕಟ್ಟೆಯ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ 418 ಕಂಪ್ಯೂಟರ್ ಮತ್ತು 102 ಪ್ರಿಂಟರ್‍ಗಳನ್ನು ಖರೀದಿ ಮಾಡಿದ್ದ ಪ್ರಕರಣವನ್ನು ಹಾಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಕ್ತಾಯಗೊಳಿಸಿದೆ.
ದುಪ್ಪಟ್ಟು ದರದಲ್ಲಿ ಕಂಪ್ಯೂಟರ್, ಪ್ರಿಂಟರ್ ಖರೀದಿಸಿದ್ದ ಸಾರಿಗೆ ಇಲಾಖೆಯು ಖಾಸಗಿ ಕಂಪನಿಗೆ 1.35 ಕೋಟಿಯಷ್ಟು ಹೆಚ್ಚುವರಿ ದರ ಪಾವತಿಸಿತ್ತು. ಇದಕ್ಕೆ ಮಹಾಲೇಖಪಾಲರೂ ಆಕ್ಷೇಪಣೆ ಎತ್ತಿದ್ದರಲ್ಲದೇ ಈ ಸಂಬಂಧ ಇಲಾಖೆಯಿಂದ ವಿವರಣೆ ಕೇಳಿದ್ದರು.
ಆದರೀಗ ಅಧಿಕೃತ ಸರ್ಕಾರಿ ಇ-ಮಾರುಕಟ್ಟೆ (ಜೆಮ್ ಪೋರ್ಟಲ್) ವೇದಿಕೆ ಮೂಲಕ ಸ್ಪರ್ಧಾತ್ಮಕ ದರದಲ್ಲೇ ಕೈಗೊಳ್ಳಲಾಗಿದೆ. ಹೀಗಾಗಿ ಮಾರುಕಟ್ಟೆ ಮೌಲ್ಯಕ್ಕಿಂತ ಅಧಿಕ ಬೆಲೆ ಕೊಟ್ಟು ಕಂಪ್ಯೂಟರ್‍ಗಳನ್ನು ಖರೀದಿಸಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದಿನ ಬಿಜೆಪಿ ಸರ್ಕಾರದ ಅಕ್ರಮವನ್ನು ಮಣ್ಣೆಳೆದು ಮುಚ್ಚಿ ಹಾಕಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಸಚಿವ ಆರ್ ರಾಮಲಿಂಗಾರೆಡ್ಡಿ ಅವರು ಉತ್ತರ ಒದಗಿಸಿದ್ದಾರೆ. ಈ ಉತ್ತರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮಹಾಲೇಖಪಾಲರ ಟಿಪ್ಪಣಿಯಲ್ಲೇನಿತ್ತು?
418 ಕಂಪ್ಯೂಟರ್ ಮತ್ತು 102 ಪ್ರಿಂಟರ್‍ಗಳ ಖರೀದಿ ಸಂಬಂಧ ಪಾವತಿಯಾಗಿರುವ ದುಪ್ಪಟ್ಟು ದರವನ್ನು ಹೆಚ್ಚುವರಿ ವೆಚ್ಚವೆಂದು ಮಹಾಲೇಖಪಾಲರ ಟಿಪ್ಪಣಿಯಲ್ಲಿ ಉಲ್ಲೇಖಿಸಿತ್ತು. ಕಂಪ್ಯೂಟರ್‍ವೊಂದಕ್ಕೆ ಮಾರುಕಟ್ಟೆಯಲ್ಲಿ 85,000 ರು ದರವಿದೆ. ಆದರೂ ಸಾರಿಗೆ ಇಲಾಖೆಯ ಭ್ರಷ್ಟ ಅಧಿಕಾರಿಗಳು ಕಂಪ್ಯೂಟರ್‍ವೊಂದಕ್ಕೆ 1,27, 858 ರು. (i7) ಮತ್ತು 1,09, 501 ರು ದರದಲ್ಲಿ (i5) ಖರೀದಿಸಿರುವುದು ಎಜಿ ಟಿಪ್ಪಣಿಯಲ್ಲಿ ಹೇಳಿತ್ತು.

ಅಂದರೇ ಕಂಪ್ಯೂಟರ್‍ವೊಂದಕ್ಕೆ ಹೆಚ್ಚುವರಿಯಾಗಿ 42,000 ರು. ನೀಡಿದಂತಾಗಿತ್ತು. ಒಟ್ಟಾರೆ ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳಿಗೆ ಮಾರುಕಟ್ಟೆಗಿಂತಲೂ ಹೆಚ್ಚಿನ ದರ ನೀಡಿರುವುದರಿಂದ ಒಟ್ಟಾರೆ 1.35 ಕೋಟಿಯಷ್ಟು ಆರ್ಥಿಕ ನಷ್ಟವಾಗಿದೆ ಎಂದು ಎಜಿ ಆಕ್ಷೇಪಿಸಿತ್ತು.

ಪ್ರಕರಣದ ವಿವರ
ಸಾರಿಗೆ ಆಯುಕ್ತರ ಕಚೇರಿ ಸೇರಿದಂತೆ ಇಲಾಖೆಯ ಎಲ್ಲಾ ಅಧೀನ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಟಾನಗೊಳಿಸುವ ಉದ್ದೇಶದಿಂದ i7-30 ಮಾದರಿಯ 88, i5-388 ಮಾದರಿ ಸೇರಿದಂತೆ ಒಟ್ಟು 432 ಕಂಪ್ಯೂಟರ್ ಮತ್ತು ಹೆಚ್ ಪಿ ಲೇಸರ್ ಜೆಟ್ ಪಿ 1108/1050 ಪ್ಲಸ್ ಮಾದರಿಯ ಪ್ರಿಂಟರ್‍ಗಳನ್ನು ಖರೀದಿಸಲು ಸಾರಿಗೆ ಆಯುಕ್ತರು ಕೋರಿದ್ದರು. ಇದರಲ್ಲಿ i7-30 ಮಾದರಿಯ ಕಂಪ್ಯೂಟರ್‍ವೊಂದಕ್ಕೆ 1,00,000 ರು., i 5 ಮಾದರಿ ಕಂಪ್ಯೂಟರ್‍ಗೆ 70,000 ರು ವೆಚ್ಚವಾಗಲಿದೆ ಎಂದು ದರವನ್ನು ನಮೂದಿಸಿದ್ದರು.

ಸಾರಿಗೆ ಆಯುಕ್ತರು ತಿಳಿಸಿದ್ದ ವೆಚ್ಚಕ್ಕಿಂತಲೂ ಹೆಚ್ಚಿನ ದರವನ್ನೂ ಪಾವತಿಸಿತ್ತು. i 7 ಮಾದರಿಯ ಕಂಪ್ಯೂಟರ್‍ಗೆ 1,27, 858 ರು., i5-388 ಮಾದರಿಯ ಕಂಪ್ಯೂಟರ್‍ವೊಂದಕ್ಕೆ 1,09,501 ರು (ತೆರಿಗೆ ಸೇರಿ) ಒಟ್ಟಾರೆ 418 ಕಂಪ್ಯೂಟರ್, ಪ್ರಿಂಟರ್‍ವೊಂದಕ್ಕೆ 32,443 ರು ದರದಲ್ಲಿ 106 ಪ್ರಿಂಟರ್‍ಗಳಿಗೆ 29,14,371 ರು ಸೇರಿದಂತೆ ಒಟ್ಟಾರೆ 4,97,61,086.00 ರು. ವೆಚ್ಚ ಮಾಡಲಾಗಿತ್ತು.
ಸಾರಿಗೆ ಆಯುಕ್ತರ ಪ್ರಸ್ತಾವನೆ ಪ್ರಕಾರ ಪ್ರಿಂಟರ್‍ವೊಂದಕ್ಕೆ 25,000 ರು. ದರದಲ್ಲಿ ಒಟ್ಟು 1,17, 25,000 ರು. ಸೇರಿ ಒಟ್ಟಾರೆ 5,07,65,000 ರು. ಗಳ ಅನುದಾನ ಕೋರಿತ್ತು. ಈ ವೆಚ್ಚವನ್ನು ಆಧುನೀಕರಣ ಅಡಿಯಲ್ಲಿ ಭರಿಸಿತ್ತು. ಈ ಸಂಬಂಧ 2022ರ ನವೆಂಬರ್ 24ರಂದು ಸಾರಿಗೆ ಇಲಾಖೆಯ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.
ಗಣಕ ಯಂತ್ರ ಮತ್ತು ಪ್ರಿಂಟರ್‍ಗಳನ್ನು ಖರೀದಿ ಮಾಡಲು ಜೆಮ್ ಪೋರ್ಟ್‌ಲ್ ಮೂಲಕ 2023ರ ಫೆ.20ರಂದು ಟೆಂಡರ್ ಕರೆಯಲಾಗಿತ್ತು. ಈ ಸಂಬಂಧ 2023ರ ಮಾರ್ಚ್ 8ರಂದು ನಡೆದಿದ್ದ ಟೆಂಡರ್ ಪರಿಶೀಲನ ಸಭೆ ನಡೆದಿತ್ತು. ಈ ಸಭೆಯಲ್ಲಿ ಹೆಚ್ಚುವರಿ ಸಾರಿಗೆ ಆಯುಕ್ತ ಉಮಾಶಂಕರ್ ಬಿ ಪಿ, ಸಿ ಮಲ್ಲಿಕಾರ್ಜುನ, ಜಂಟಿ ಸಾರಿಗೆ ಆಯುಕ್ತರಾದ ಓಂಕಾರೇಶ್ವರಿ ಭಾಗವಹಿಸಿದ್ದರು.

ಈ ಟೆಂಡರ್‍ನಲ್ಲಿ ಬಿಗ್ ಸಿ ಟೆಕ್ನಾಲಜೀಸ್ ಪ್ರೈವೈಟ್ ಲಿಮಿಟೆಡ್, ಮ್ಯಾಟ್ರಿಕ್ಸ್ ಸಿಸ್ಟಂ, ಸೂಪಿರಿಯರ್ ಡಿಜಿಟಲ್ ಪ್ರೈವೈಟ್ ಲಿಮಿಟೆಡ್, ವಂಟೇಜ್ ನೆಟ್‌ವರ್ಕ್ ಸೊಲ್ಯುಷನ್ಸ್ ಬಿಡ್ ಮಾಡಿದ್ದವು.
ಈ ದಾಖಲೆಗಳನ್ನು ಟೆಂಡರ್ ಪರಿಶೀನಾ ಸಮಿತಿಯು ಪರಿಶೀಲಿಸಿತ್ತು. ಅದರಲ್ಲಿ ಮ್ಯಾಟ್ರಿಕ್ಸ್ ಸಿಸ್ಟಂ ಸಲ್ಲಿಸಿದ್ದ ನೋಂದಣಿ ಪ್ರಮಾಣ ಪತ್ರದ ಚಾಲ್ತಿ ಅವಧಿಯು ಮುಗಿದಿತ್ತು. ವಂಟೇಜ್ ನೆಟ್‌ವರ್ಕ್ ಸೊಲ್ಯುಷನ್ಸ್ ಸಂಸ್ಥೆಯು ಕ್ರಮ ಸಂಖ್ಯೆ 07 ಮತ್ತು 13ರಲ್ಲಿ ನಿಗದಿಪಡಿಸಿದ್ದ ಮಾನದಂಡಗಳ ಅನ್ವಯ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಆದ್ದರಿಂದ ಈ ಎರಡೂ ಸಂಸ್ಥೆಗಳನ್ನು ಟೆಂಡರ್ ಆಯ್ಕೆ ಪ್ರಕ್ರಿಯೆಯಿಂದ ಕೈಬಿಟ್ಟಿತ್ತು.

ನಂತರ ಬಿಗ್ ಸಿ ಟೆಕ್ನಾಲಜೀಸ್ ಪ್ರೈವೈಟ್ ಲಿಮಿಟೆಡ್ ಮತ್ತು ಸೂಪಿರಿಯರ್ ಡಿಜಿಟಲ್ ಪ್ರೈವೈಟ್ ಲಿಮಿಟೆಡ್ ಮಾನದಂಡಗಳ ಅನ್ವಯ ದಾಖಲೆಗಳನ್ನು ಸಲ್ಲಿಸಿತ್ತು. ಈ ಎರಡೂ ಸಂಸ್ಥೆಗಳೂ ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಪಡೆದಿದ್ದವು.

ಈ ಪೈಕಿ ರಾಜ್ಯದ ಬೆಂಗಳೂರು ನಗರ ಸೇರಿದಂತೆ ಒಟ್ಟು 89 ಕಚೇರಿಗಳಿಗೆ 418 ಕಂಪ್ಯೂಟರ್ ಮತ್ತು 106 ಪ್ರಿಂಟರ್‍ಗಳನ್ನು ಪೂರೈಕೆ ಮಾಡಲು 2023ರ ಮಾರ್ಚ್ 27ರಂದು ಸೂಪಿರಿಯರ್ ಡಿಜಿಟಲ್ ಪ್ರೈವೈಟ್ ಲಿಮಿಟೆಡ್‌ಗೆ ಜೆಮ್ ಪೋರ್ಟಲ್ ಮೂಲಕ ಸರಬರಾಜು ಆದೇಶ ಹೊರಡಿಸಿತ್ತು.

ಎಲ್ಲಾ ಅಧೀನ ಕಚೇರಿಗಳಿಗೆ ಖರೀದಿಸಿದ್ದ ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳನ್ನು ವೈಷ್ಣವಿ ಎಂಟರ್ ಪ್ರೈಸೆಸ್‌ನಿಂದ ತಪಾಸಣೆ ನಡೆಸಿತ್ತು. ಇದಕ್ಕಾಗಿ 1,85,319 ರು.ಗಳನ್ನು ಪಾವತಿಸಲಾಗಿತ್ತು. ಈ ಹಣವನ್ನು ಪಾವತಿಸಲು 2023ರ ಮಾರ್ಚ್ 30ರಂದು ಸಾರಿಗೆ ಇಲಾಖೆಯು ಅಧಿಕೃತ ಜ್ಞಾಪನ ಪತ್ರ ಹೊರಡಿಸಿತ್ತು.

2023ರ ಫೆ.7ರಂದು 520 ಕಂಪ್ಯೂಟರ್ ಮತ್ತು 469 ಪ್ರಿಂಟರ್‍ಗಳನ್ನು 4.99 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಹೆಚ್ಚುವರಿ ಅನುದಾನವನ್ನು ಸಾರಿಗೆ ಇಲಾಖೆ ಆಯುಕ್ತರು ಕೋರಿದ್ದರು. ಸಾರಿಗೆ ಇಲಾಖೆಗಳ ಪ್ರಾದೇಶಿಕ ಕಚೇರಿಗಳು ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳನ್ನು ಅಳವಡಿಸಲಾಗಿದೆ ಎಂದು 2023ರ ಏಪ್ರಿಲ್‌ನಲ್ಲಿ ಆಯುಕ್ತರಿಗೆ ಪತ್ರವನ್ನೂ ಬರೆದಿದ್ದರು.
ಈ ಕುರಿತು ‘ದಿ ಫೈಲ್’, 2024ರ ಸೆಪ್ಟಂಬರ್ 17ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಂಪ್ಯೂಟರ್ ಹಗರಣ; ದುಪ್ಪಟ್ಟು ದರದಲ್ಲಿ ಖರೀದಿ, 1.35 ಕೋಟಿ ನಷ್ಟ, ಎ ಜಿ ಪತ್ರವನ್ನೇ ಮುಚ್ಚಿಟ್ಟ ಭ್ರಷ್ಟಕೂಟ
ಆದರೀಗ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಪ್ರಕರಣದಲ್ಲಿ ಸರ್ಕಾರಕ್ಕೆ ಯಾವುದೇ ತರಹದಲ್ಲೂ ಆರ್ಥಿಕ ನಷ್ಟವುಂಟಾಗಿಲ್ಲ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಕ್ಕೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಉತ್ತರವೇನು?
ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಮಾಡುವ ಪ್ರಮುಖ ಇಲಾಖೆಯಾಗಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಒದಗಿಸಲು ಅನೇಕ ಉಪ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಫೇಸ್ ಲೆಸ್ ಮತ್ತು ಕಾಂಟಾಕ್ಟ್ ಲೆಸ್ ಸೇವೆಗಳನ್ನು ಜಾರಿಗೆ ತಂದಿದೆ. ಈ-ಆಫೀಸ್ ಅನುಷ್ಠಾನಗೊಳಿಸುತ್ತಿದೆ. ಇದಕ್ಕೆ ತಕ್ಕಂತೆ ನವೀನ ಮಾದರಿಯ ಹೊಸ ಆವೃತ್ತಿಯ ಕಂಪ್ಯೂಟರ್ ಮತ್ತ ಪ್ರಿಂಟರ್‍ಗಳ ಅವಶ್ಯಕತೆಯನ್ನು ಮನಗಂಡು ತ್ವರಿತ ಹಾಗೂ ಅಡೆತಡೆಯಿಲ್ಲದಂತೆ ಕಚೇರಿ ಕೆಲಸ ಕಾರ್ಯಗಳಿಗೆ ಸರಿಹೊಂದಬಲ್ಲ ಸೂಕ್ತ, ತಾಂತ್ರಿಕ ವೈಶಿಷ್ಟ್ಯಗಳನ್ನುಳ್ಳ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು2023-23ನೇ ಸಾಲಿನಲ್ಲಿ ಖರೀದಿಸಿದೆ ಎಂದು ವಿವರಿಸಿದ್ದಾರೆ.

2022-23ನೇ ಸಾಲಿನ ಮಾರ್ಚ್‌ನಲ್ಲಿ ಸಾರಿಗೆ ಇಲಾಖೆಯಲ್ಲಿ ಕೈಗೊಂಡಿರುವ ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳ ಖರೀದಿಯು ಕೆಟಿಪಿಪಿ ಕಾಯ್ದೆಗೆ ಅನುಗುಣವಾಗಿದೆ. ಖರೀದಿ ಪ್ರಕ್ರಿಯೆಯನ್ನು ಅಧಿಕೃತ ಸರ್ಕಾರಿ ಇ-ಮಾರುಕಟ್ಟೆ (ಜೆಮ್ ಪೋರ್ಟಲ್) ವೇದಿಕೆ ಮೂಲಕ ಸ್ಪರ್ಧಾತ್ಮಕ ದರದಲ್ಲೇ ಕೈಗೊಳ್ಳಲಾಗಿದೆ. ಹೀಗಾಗಿ ಮಾರುಕಟ್ಟೆ ಮೌಲ್ಯಕ್ಕಿಂತ ಅಧಿಕ ಬೆಲೆ ಕೊಟ್ಟು ಕಂಪ್ಯೂಟರ್‍ಗಳನ್ನು ಖರೀದಿಸಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಖರೀದಿ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವುದು ಉತ್ತರದಿಂದ ತಿಳಿದು ಬಂದಿದೆ.
ಎ ಜಿ ಆಕ್ಷೇಪಣೆ ಮುಕ್ತಾಯಗೊಳಿಸಿದ ಸಚಿವ
2022-23ನೇ ಸಾಲಿನ ಲೆಕ್ಕ ಪತ್ರಗಳ ಪರಿಶೋಧನಾ ಸಮಯದಲ್ಲಿ ಮಹಾಲೇಖಪಾಲರು (Audit Enquiry Ref No 8( AENCQ 278337)ನಲ್ಲಿ ಆಕ್ಷೇಪಣೆ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಉಪಕರಣಕ್ಕೆ ಅನುಮೋದಿಸಲಾದ ವಿವರಣೆಯು ಜೆಮ್ ಪೋರ್ಟಲ್‌ನಲ್ಲಿ ಲಭ್ಯವಿಲ್ಲದ ಕಾರಣ, ಎಂಆರ್‍ಪಿ ತಿಳಿಯಲು ಸಾಧ್ಯವಾಗಲಿಲ್ಲ. ಮತ್ತು ಬೆಲೆಯ ಸಮಂಜಸತೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಇಲಾಖೆಯು ಸಂಗ್ರಹಣೆಯಲ್ಲಿ ಮಿತವ್ಯಯವನ್ನು ಖಚಿತಪಡಿಸಿಕೊಂಡಿಲ್ಲ ಎಂದು ಉತ್ತರವು ಸೂಚಿಸುತ್ತದೆ. ಹೀಗಾಗಿ ಈ ಆಕ್ಷೇಪಣೆಯನ್ನೇ ಮುಕ್ತಾಯಗೊಳಿಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಪಾದಿಸಿರುವುದು ಗೊತ್ತಾಗಿದೆ.
ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳ ಖರೀದಿಯು ಕೆಟಿಪಿಪಿ ಕಾಯ್ದೆಗೆ ಅನುಗುಣವಾಗಿದ್ದು ಖರೀದಿ ಪ್ರಕ್ರಿಯೆಯನ್ನು ಅಧಿಕೃತ ಸರ್ಕಾರಿ ಇ ಮಾರುಕಟ್ಟೆ ವೇದಿಕೆ ಮೂಲಕ ಸ್ಪರ್ಧಾತ್ಮಕ ದರದಲ್ಲೇ ಕೈಗೊಳ್ಳಲಾಗಿದೆ. ಮಾರುಕಟ್ಟೆ ಮೌಲ್ಯಕ್ಕಿಂತ ದುಪ್ಪಟ್ಟು ಬೆಲೆ ಕೊಟ್ಟು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳನ್ನು ಖರೀದಿಸಿರುವುದಿಲ್ಲ. ಹೀಗಾಗಿ ನಷ್ಟದ ಪ್ರಶ್ನೆಯು ಉದ್ಭವಿಸುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಸದನಕ್ಕೆ ಉತ್ತರಿಸಿದ್ದಾರೆ.
ಮಾರುಕಟ್ಟೆ ಮೌಲ್ಯಕ್ಕಿಂತ ಅಧಿಕ ಬೆಲೆಕೊಟ್ಟು ಕಂಪ್ಯೂಟರ್‍ಗಳನ್ನು ಖರೀದಿಸಲು ಯಾವುದೇ ಸಮಿತಿಯು ಶಿಫಾರಸ್ಸು ಮಾಡಿರುವುದಿಲ್ಲ. 2022-23ನೇ ಸಾಲಿನಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳನ್ನು ಖರೀದಿಸಲು ತಾಂತ್ರಿಕ ವಿಶಿಷ್ಟತೆಗಳನ್ನು ನಿಗದಿಪಡಿಸುವ ಸಂಬಂಧ ಇಲಾಖಾ ತಾಂತ್ರಿಕ ಸಲಹಾ ಸಮಿತಿಯು 2023ರ ಜನವರಿ 20 ರಂದು ಸಭೆ ನಡೆಸಿ ತಾಂತ್ರಿಕ ವಿಶಿಷ್ಟತೆಗಳನ್ನು ನಿಗದಿಪಡಿಸಿರುತ್ತದೆ.

ಮುಂದುವರೆದು ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಪರಿಶೀಲನಾ ಸಮಿತಿಯು 2023ರ ಮಾರ್ಚ್ 8ರಂದು ಸಭೆ ನಡೆಸಿ ಟಂಡರ್‍ನ ತಾಂತ್ರಿಕ ಬಿಡ್‌ಗಳನ್ನು ಪರಿಶೀಲಿಸಿ ನಡವಳಿ ಸಲ್ಲಿಸಿ ಆರ್ಥಿಕ ಬಿಡ್‌ಗನ್ನು ತೆರೆಯಲು ಸಾರಿಗೆ ಆಯುಕ್ತರ ಆನುಮತಿಗೆ ಮಂಡಿಸಲಾಗಿರುತ್ತದೆ.
ಸಾರಿಗೆ ಆಯುಕ್ತರ ಅನುಮತಿ ಮೇರೆಗೆ ಆರ್ಥಿಕ ಬಿಡ್‌ಗಳನ್ನು ತೆರೆದು ಟೆಂಡರ್‍ನಲ್ಲಿ ಎಲ್ 1 ಆಗಿ ಹೊರಹೊಮ್ಮಿರುವ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ. ಈ ಖರೀದಿಯು ಪಾರದರ್ಶಕವಾಗಿ ಕೆಟಿಪಿಪಿ ಕಾಯ್ದೆಗೆ ಅನುಗುಣವಾಗಿ ನಡೆದಿದೆ. ಖರೀದಿ ಪ್ರಕ್ರಿಯೆಯನ್ನು ಅಧಿಕೃತ ಸರ್ಕಾರಿ ಇ ಮಾರುಕಟ್ಟೆ ವೇದಿಕೆ ಮೂಲಕವೇ ಸ್ಪರ್ಧಾತ್ಮಕ ದರದಲ್ಲೇ ಕೈಗೊಂಡಿರುವುದರಿಂದ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವರು ಉತ್ತರಿಸಿರುವುದು ಗೊತ್ತಾಗಿದೆ.

ಬಿ ಶ್ರೀರಾಮುಲು ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿನ ಕಂಪ್ಯೂಟರ್ ಖರೀದಿ ಪ್ರಕ್ರಿಯೆ ನಡೆದಿತ್ತು. ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚುವರಿ ದರದಲ್ಲಿ ಖರೀದಿ ಮಾಡಿರುವ ಪ್ರಕರಣದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳ ಭ್ರಷ್ಟ ಕೂಟವು, ಮಹಾಲೇಖಪಾಲರ ಟಿಪ್ಪಣಿಯನ್ನು ಹಾಲಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಅವರ ಗಮನಕ್ಕೂ ತಂದಿರಲಿಲ್ಲ. ಬದಲಾಗಿ ಟಿಪ್ಪಣಿಯನ್ನೇ ಮುಚ್ಚಿಟ್ಟಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು.









