ಬೆಂಗಳೂರು; ಕಳೆದ 15 ವರ್ಷದ ಹಿಂದೆಯೇ ಹಂಚಿಕೆಯಾಗಿದ್ದ 2,643.25 ಎಕರೆ ಭೂಮಿಯಲ್ಲಿ ಉಕ್ಕು ಕಂಪನಿಯನ್ನು ಆರಂಭಿಸದ ಆರ್ಸೆಲರ್ ಮಿತ್ತಲ್ ಸಮೂಹವು ಇದೀಗ ರೈತರಿಂದ ಹೆಚ್ಚುವರಿ ಭೂ ಪರಿಹಾರ ಮತ್ತು ಕಚ್ಛಾ ವಸ್ತು ಕಬ್ಬಿಣ ಅದಿರು ಪೂರೈಕೆ ಸಾಧ್ಯವಾಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿದೆ.
ವಿಶೇಷವೆಂದರೇ ಈ ಕಂಪನಿ ವಿರುದ್ಧ 15 ವರ್ಷವಾದರೂ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವು ದಾವೋಸ್‌ನಲ್ಲಿ ಇತ್ತೀಚೆಗೆ ನಡೆದಿದ್ದ ವಿಶ್ವ ಆರ್ಥಿಕ ಸೃಂಗ ಸಭೆಯಲ್ಲಿ 6,000 ಕೋಟಿ ರು ಬಂಡವಾಳ ಹೂಡಲು ಇದೇ ಮಿತ್ತಲ್ ಕಂಪನಿಯೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಂಡಿತ್ತು.
ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್‌ನ ಯೋಜನೆಗಾಗಿ ಬಳ್ಳಾರಿಯ ಹರಗಿನ ಡೋಣಿ, ಕುಡಿತಿನಿ ಮತ್ತು ವೇಣಿ ವೀರಾಪುರ ಗ್ರಾಮಗಳಲ್ಲಿ 2010ರ ಮೇ 4 ಮತ್ತು 2012ರ ಜೂನ್ 28ರಂದು ಒಟ್ಟು 5,368.83 ಎಕರೆ ಜಮೀನಿಗೆ ಕಲಂ 28(4)ರ ಅನ್ವಯ ಅಂತಿಮ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನಪಡಿಸಿಕೊಂಡಿತ್ತು. ಇಷ್ಟು ದೀರ್ಘ ವರ್ಷಗಳಾದರೂ ಆರ್ಸೆಲರ್ ಮಿತ್ತಲ್ ಸಮೂಹವು, ಕಂಪನಿಯನ್ನು ಆರಂಭಿಸಿಲ್ಲ. ಆದರೂ ಸರ್ಕಾರವು ಈ ಬಗ್ಗೆ ಕಠಿಣ ಕ್ರಮವನ್ನೂ ಕೈಗೊಂಡಿಲ್ಲ.
ರೈತರಿಂದ ಹೆಚ್ಚುವರಿ ಭೂ ಪರಿಹಾರ ಮತ್ತು ಕಚ್ಛಾ ವಸ್ತು ಕಬ್ಬಿಣ ಅದಿರು ಪೂರೈಕೆ ಸಾಧ್ಯವಾಗಿಲ್ಲ ಎಂದು ಆರ್ಸೆಲರ್ ಮಿತ್ತಲ್ ಕಂಪನಿಯ ನೀಡಿರುವ ಕಾರಣದ ಮಾಹಿತಿಯು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಒದಗಿಸಿರುವ ಉತ್ತರದಲ್ಲಿದೆ. ಅಲ್ಲದೇ ಈ ಸಂಬಂಧ ಪೂರಕ ದಾಖಲೆಗಳನ್ನೂ ಸದನಕ್ಕೆ ನೀಡಿದ್ದಾರೆ.
ಈ ಕುರಿತು ವಿಧಾನ ಪರಿಷತ್ ಸದಸ್ಯ ವೈ ಎಂ ಸತೀಶ್ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಿಂದಲೂ ಇದೇ ಪ್ರಶ್ನೆ ಕೇಳುತ್ತಲೇ ಬಂದಿದ್ದಾರೆ. ಸರ್ಕಾರವೂ ಹಿಂದಿನ ಉತ್ತರವನ್ನೇ ಸದನಕ್ಕೆ ಮಂಡಿಸುತ್ತಿದೆ.
ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಯೋಜನೆಗಾಗಿ ಹರಗಿನ ಡೋಣಿ, ಕುಡಿತಿನಿ ಮತ್ತು ವೇಣಿ ವೀರಾಪುರ ಗ್ರಾಮಗಳಲ್ಲಿ 2010ರ ಮೇ 4 ಮತ್ತು 2012ರ ಜೂನ್ 28ರಂದು ಒಟ್ಟು 5,368.83 ಎಕರೆ ಜಮೀನಿಗೆ ಕಲಂ 28(4)ರ ಅನ್ವಯ ಅಂತಿಮ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನಪಡಿಸಿಕೊಂಡಿತ್ತು.

ಅಂತಿಮ ಅಧಿಸೂಚನೆಯಲ್ಲಿ ಒಳಗೊಂಡಿರುವ ಕುಡುತಿನಿ ಗ್ರಾಮದ ಕೃಷಿ ಜಮೀನಿಗೆ ಪ್ರತಿ ಎಕರೆಗೆ 8 ಲಕ್ಷ, ಹರಗಿನ ಡೋಣಿ ಗ್ರಾಮದ ಕೃಷಿ ಜಮೀನಿಗೆ ಪ್ರತಿ ಎಕರೆಗೆ 8 ಲಕ್ಷ, ರಾಷ್ಟ್ರೀಯ ಹೆದ್ದಾರಿ 500 ಮೀಟರ್ ಒಳಗೆ ಬರುವ ಪ್ರದೇಶಕ್ಕೆ ಎಕರೆ ಒಂದಕ್ಕೆ 12 ಲಕ್ಷ, ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಪ್ರದೇಶಕ್ಕೆ ಎಕರೆ 1ಕ್ಕೆ 16 ಲಕ್ಷ ರು ಭೂ ಪರಿಹಾರ ಪಾವತಿಸಲು ನಿರ್ಣಯ ಮಾಡಲಾಗಿತ್ತು ಎಂದು ಸಚಿವ ಎಂ ಬಿ ಪಾಟೀಲ್ ಅವರು ಉತ್ತರದಲ್ಲಿ ವಿವರಿಸಿದ್ದಾರೆ.
343 ಎಕರೆ ಜಮೀನುಗಳ ಪ್ರಕರಣಗಳಲ್ಲಿ ಆರ್ಸೇಲರ್ ಮಿತ್ತಲ್ ಕಂಪನಿಯು ಪ್ರತಿ ಎಕರೆಗೆ 1.30 ಕೋಟಿ ರು ಪಾವತಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆದೇಶಿಸಿದೆ. ಅದರಂತೆ ಕಂಪನಿಯು ಹಣವನ್ನು ಪಾವತಿಸಿದೆ. ಬಾಕಿ 657 ಎಕರೆ ಜಮೀನುಗಳ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದೆ. ಈ ಜಮೀನುಗಳಿಗೂ ಆರ್ಸೆಲರ್ ಮಿತ್ತಲ್ ಕಂಪನಿಯು ನ್ಯಾಯಾಲಯದ ಆದೇಶದಂತೆ ಬಾಕಿ ಭೂ ಪರಿಹಾರ ನೀಡಬೇಕು.
ಇದುವರೆಗೂ 4,914 ಎಕರೆ 18 ಗುಂಟೆ ಜಮೀನಿಗೆ ಪರಿಹಾರ ಪಾವತಿಸಿದೆ. ಉಳಿದ 61 ಎಕರೆ ಜಮೀನಿಗೆ ಪರಿಹಾರ ಪಾವತಿಸಲು ಬಾಕಿ ಇದೆ. ಆರ್ಸೆಲರ್ ಮಿತ್ತಲ್ ಗೆ 2,643.25 ಎಕರೆ ವಿಸ್ತೀರ್ಣದ ಜಮೀನನ್ನು ಹಂಚಿಕೆ ಮಾಡಿದೆ. ಭೂ ಸ್ವಾಧೀನಪಡಿಸಿದ ಉಳಿದ 2,572 ಎಕರೆ ಜಮೀನಿನಲ್ಲಿ ಕುಡಿತಿನಿ ಕೈಗಾರಿಕೆ ಪ್ರದೇಶವನ್ನು ಕೆಐಎಡಿಬಿಯಿಂದ ಅಭಿವೃದ್ಧಿಪಡಿಸಿದೆ ಎಂದು ಮಾಹಿತಿ ಒದಗಿಸಿದ್ದಾರೆ.

ಈ ಕಂಪನಿಗೆ 2011ರ ಡಿಸೆಂಬರ್ 5 ಮತ್ತು 2012ರ ಅಕ್ಟೋಬರ್ 19ರಂದೇ ಸ್ವಾಧೀನ ಪತ್ರ ನೀಡಲಾಗಿತ್ತು. ಆದರೆ ಈ ಕಂಪನಿಯು ನಿಗದಿತ ವೇಳೆಯಲ್ಲಿ ಗುತ್ತಿಗೆ ಮತ್ತು ಮಾರಾಟ ಕರಾರು ಪತ್ರವನ್ನು ನೆರವೇರಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಿರಲಿಲ್ಲ. ಹೀಗಾಗಿ 2017ರ ಜನವರಿ 25ರಂದು ಈ ಕಂಪನಿಗೆ ನೋಟೀಸ್ ನೀಡಿತ್ತು.
‘ಅವಶ್ಯಕವಾದ ಕಚ್ಛಾ ವಸ್ತುವಾದ ಕಬ್ಬಿಣದ ಅದಿರು ಪೂರೈಕೆ ಸಾಧ್ಯವಾಗದ ಕಾರಣ, ಹಾಗೂ ಇನ್ನಿತರೆ ಕಾರಣಗಳಿಂದ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿರುವುದಿಲ್ಲ,’ ಎಂದು ಕಂಪನಿಯು ನೀಡಿರುವ ಉತ್ತರದ ಮಾಹಿತಿಯನ್ನು ಸಚಿವ ಎಂ ಬಿ ಪಾಟೀಲ್ ಅವರು ಸದನಕ್ಕೆ ನೀಡಿದ್ದಾರೆ.
ಅಲ್ಲದೇ ಯೋಜನೆ ಅನುಷ್ಠಾನಗೊಳಿಸಲು ಕಂಪನಿಗೆ 3 ವರ್ಷ ಹೆಚ್ಚುವರಿ ಕಾಲಾವಕಾಶ ನೀಡಿತ್ತು.
ಇದಾದ ನಂತರ 2,643.25 ಎಕರೆ ವಿಸ್ತೀರ್ಣದ ಜಮೀನಿಗೆ 2018ರ ನವೆಂಬರ್ 14ರಂದು 10 ವರ್ಷಗಳ ಗುತ್ತಿಗೆ ಅವಧಿಗೆ ಗುತ್ತಿಗೆ ಮತ್ತು ಮಾರಾಟ ಕರಾರು ಪತ್ರ ಮಾಡಿಕೊಟ್ಟಿತ್ತು.

ಈ ಷರತ್ತಿನ ಪ್ರಕಾರ 5 ವರ್ಷದೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿತ್ತು. ಆದರೆ ಈ ಮಧ್ಯೆ ಭೂ ಮಾಲೀಕರು ಹೆಚ್ಚುವರಿ ಭೂ ಪರಿಹಾರ ಕೋರಿ ವಿವಿಧ ನ್ಯಾಯಾಲಯಗಳಲ್ಲಿ ದಾವೆ, ತಕರಾರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕಂಪನಿಯು ನಿಗದಿತ ಅವಧಿಯೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ.

ಉತ್ತಮ್ ಗಾಲ್ವಾ ಫೆರ್‍ಹೋಸ್ ಕಂಪನಿಯೂ ಸಹ 441 ಎಕರೆ ಜಮೀನಿಗೆ ಸಂಬಂಧಿಸಿದಂತೆ ಸಾಮಾನ್ಯ ಐ ತೀರ್ಪು ರಚಿಸಿದೆ. ಈ ಪೈಕಿ 298 ಎಕರೆ ಜಮೀನಿನ ಮಾಲೀಕರು ಹೆಚ್ಚಿನ ಭೂ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದೆ. ನವೆಂಬರ್ 2024ರಲ್ಲಿ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಕಂಪನಿಯು 17.00 ಕೋಟಿ ರು.ಗಳ ಠೇವಣಿ ಇಟ್ಟಿದೆ ಎಂಬ ಮಾಹಿತಿಯನ್ನು ಒದಗಿಸಿದ್ದಾರೆ.
ಜಮೀನು ಹಿಂಪಡೆಯುವುದಲ್ಲಿ ವಿಫಲವಾಯಿತೇ ಸರ್ಕಾರ?
ಉಕ್ಕು ಕೈಗಾರಿಕೆ ಸ್ಥಾಪಿಸುವ ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯ ಕುಡಿತಿನಿ ಮತ್ತು ವೇಣಿವೀರಾಪುರ ಗ್ರಾಮಗಳಲ್ಲಿ ಒಟ್ಟಾರೆ 2,659.75 ಎಕರೆ ಜಮೀನನ್ನು 11 ವರ್ಷಗಳ ಹಿಂದೆಯೇ ಹಂಚಿಕೆಯಾಗಿದ್ದರೂ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಾಡಿರುವ ಆರ್ಸೆಲ್ಲಾರ್ ಮಿತ್ತಲ್ ಕಂಪನಿಗೆ ಹಿಂದಿನ ಬಿಜೆಪಿ ಸರ್ಕಾರವೂ ಸಹ 2023ರ ಫೆ.4ರಂದು ನೋಟೀಸ್ ನೀಡಿ ಕೈ ತೊಳೆದುಕಂಡಿತ್ತು. ಆದರೆ ಇದುವರೆಗೂ ಈ ಜಮೀನುಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರವೂ ವಿಫಲವಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಉಕ್ಕಿನ ಘಟಕ ಆರಂಭಿಸುವ ಉದ್ದೇಶದಿಂದ ಜಮೀನು ಹಂಚಿಕೆ ಮಾಡಿಸಿಕೊಂಡು ಕಾರ್ಖಾನೆಯನ್ನೇ ಸ್ಥಾಪಿಸದ ಕಾರಣ ಭೂಮಾಲೀಕರಿಗೆ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಕೆಐಎಡಿಬಿಯು ಯೋಜನೆ ಅನುಷ್ಠಾನಕ್ಕಾಗಿ 03 ವರ್ಷಗಳ ಕಾಲ ಹೆಚ್ಚುವರಿಯಾಗಿ ಕಾಲಾವಕಾಶ ನೀಡಿ ( 2017 ಜುಲೈ 31) ಆದೇಶ ಹೊರಡಿಸಿದ ನಂತರ 9 ವರ್ಷಗಳಾದರೂ ಉಕ್ಕು ಘಟಕ ಸ್ಥಾಪನೆ ಮಾಡಿಲ್ಲ. ನಿಗದಿತ ಅವಧಿಯೊಳಗಾಗಿ ಯೋಜನೆ ಅನುಷ್ಠಾನಗೊಳಿಸಲು ಸಕಾರಾತ್ಮಾಕ ಕ್ರಮಗಳನ್ನು ಆರ್ಸೆಲ್ಲಾರ್ ಮಿತ್ತಲ್ ವಿಫಲವಾಗುತ್ತಲೇ ಇದೆ.

ಕೆಐಎಡಿಬಿಯ ಯೋಜನೆ ಅನುಷ್ಠಾನಕ್ಕಾಗಿ 3 ವರ್ಷಗಳ ಹೆಚ್ಚುವರಿ ಕಾಲಾವಕಾಶ ನೀಡಿದ್ದು ಕಂಪನಿಯು ನಿಗದಿತ ಅವಧಿಯೊಳಗಾಗಿ ಯೋಜನೆ ಅನುಷ್ಠಾನಗೊಳಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ 2020ರ ನವೆಂಬರ್ 27ರಂದು ಮಂಡಳಿಯಿಂದ ನೋಟೀಸ್ ನೀಡಿತ್ತು.
ಇದಕ್ಕೆ ಉತ್ತರಿಸಿದ್ದ ಕಂಪನಿಯು ತಮಗೆ ಹಂಚಿಕೆಯಾಗಿದ್ದ ಜಮೀನಿನ ಪೈಕಿ ಕೆಲವು ಭೂಮಾಲೀಕರು ಹೆಚ್ಚುವರಿ ಭೂ ಪರಿಹಾರ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಎಸ್‌ಎಲ್‌ಪಿ (14772-851/2018) ಪ್ರಕರಣವು ಬಾಕಿ ಇರುವ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ವಿಳಂಬವಾಗುತ್ತಿದೆ,’ ಎಂದು ಸಮಜಾಯಿಷಿ ನೀಡಿತ್ತು.

ಇದೀಗ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಅಪೀಲ್ (ಸಂಖ್ಯೆ 621-700/2023) ಅಡಿಯಲ್ಲಿನ ದಾವೆಗೆ ಸಂಬಂಧಿಸಿದಂತೆ ಭೂ ಮಾಲೀಕರಿಗೆ 03 ತಿಂಗಳ ಒಳಗಾಗಿ ಎಚ್ಚುವರಿ ಭೂ ಪರಿಹಾರವನ್ನು ಪಾವತಿಸಬೇಕು ಎಂದು 2023ರ ಜನವರಿ 31ರಂದು ಆದೇಶಿಸಿದೆ. ಈ ಪ್ರಕರಣವು ಈಗ ಇತ್ಯರ್ಥಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರವು ನ್ಯಾಯಾಲಯದ ಆದೇಶದ ಅನ್ವಯ ಕ್ರಮ ವಹಿಸುತ್ತಿದೆ ಎಂದು ಹಿಂದಿನ ಬಿಜೆಪಿ ಸರ್ಕಾರವೂ ಸದನಕ್ಕೆ ಉತ್ತರ ಒದಗಿಸಿತ್ತು.
ಅಲ್ಲದೇ ಯೋಜನೆ ಅನುಷ್ಠಾನಗೊಳಿಸುವಲ್ಲಿನ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ 2023ರ ಫೆ.4ರಂದು ಕೆಐಎಎಡಿಬಿ ಕಾಯ್ದೆ ಕಲಂ 34-ಬಿ 1 ಅನ್ವಯ ನೋಟೀಸ್ ಜಾರಿಗೊಳಿಸಿದೆ ಎಂದೂ ಮಾಹಿತಿ ಒದಗಿಸಿತ್ತು.

ಉಕ್ಕು ಉತ್ಪಾದನಾ ಘಟಕ ಆರಂಭಿಸಲು ಬಳ್ಳಾರಿಯ ಸಂಡೂರು ತಾಲೂಕಿನ ಕುಡಿತಿನಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್‌ಗೆ 2,659.75 ಎಕರೆ ಹಂಚಿಕೆಯಾಗಿತ್ತು. ಹಂಚಿಕೆಯಾದ 8 ವರ್ಷದ ಬಳಿಕ ಆರ್ಸೆಲರ್ ಮಿತ್ತಲ್ ಕಂಪನಿಯು 2018ರಲ್ಲಿ ಗುತ್ತಿಗೆ ಕರಾರು ಪತ್ರ ಮಾಡಿಕೊಂಡಿತ್ತು. ಆದರೂ ಉದ್ಧೇಶಿತ ಯೋಜನೆ ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಮಿತ್ತಲ್ ಕಂಪನಿಯ ಧೋರಣೆಯಿಂದ 10 ಸಾವಿರ ಜನರ ಉದ್ಯೋಗದ ಕನಸು ಕಮರಿ ಹೋಗಿತ್ತು. ಆರ್ಸೆಲರ್ ಮಿತ್ತಲ್ ಉಕ್ಕಿನ ಕಾರ್ಖಾನೆಗೆ ವಶಪಡಿಸಿಕೊಂಡ ಜಮೀನಿನಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಯಾಗದೇ, ಈ ಜಮೀನುಗಳಲ್ಲಿ ಸೌರವಿದ್ಯುತ್ ಘಟಕ ಸ್ಥಾಪನೆ ಮಾಡಲು ಮಿತ್ತಲ್ ಸಂಸ್ಥೆ ಸರ್ಕಾರದೊಡನೆ ನಡೆಸಿದ್ದ ಮಾತುಕತೆಗೆ ಭೂ ಸಂತ್ರಸ್ತರ ವಿರೋಧವಿತ್ತು.
50,000 ಕೋಟಿ ರೂ ಮೊತ್ತದೊಂದಿಗೆ ಎಸ್ಸಾರ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಜಾಗತಿಕ ದೈತ್ಯ ಉಕ್ಕಿನ ಕಂಪನಿ ಆರ್ಸೆಲರ್ ಮಿತ್ತಲ್, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಉಕ್ಕು ಯೋಜನೆಗಳನ್ನು ವಿಸ್ತರಿಸಲು ಯೋಜಿಸಿತ್ತು. ಆದರೆ ಕರ್ನಾಟಕದಲ್ಲಿ ಉದ್ಧೇಶಿತ ಕೈಗಾರಿಕೆಯನ್ನು ಈವರೆವಿಗೂ ಸ್ಥಾಪಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಬದಲಿಗೆ ಪ್ರತೀ ವರ್ಷವೂ ಹೊಸತೊಂದು ಕಾರಣವನ್ನು ಮುಂದೊಡ್ಡುತ್ತಿದೆ.
12 ವರ್ಷಗಳಾದರೂ ಕೈಗಾರಿಕೆ ಸ್ಥಾಪನೆ ಮಾಡದ ಮಿತ್ತೆಲ್ ಕಂಪನಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ನೋಟೀಸ್ ನೀಡಿತ್ತು. ಈ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸೃಂಗ ಸಭೆಯಲ್ಲಿ 6,000 ಕೋಟಿ ರು ಬಂಡವಾಳ ಹೂಡಲು ಇದೇ ಮಿತ್ತಲ್ ಕಂಪನಿಯೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಂಡಿತ್ತು.
15 ವರ್ಷವಾದರೂ ಹೂಡಿಕೆಯಾಗಲಿಲ್ಲ 30 ಸಾವಿರ ಕೋಟಿ
2010ರಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್) ವೇಳೆ ಬಳ್ಳಾರಿಯಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಕಂಪನಿ ಸಹಿ ಮಾಡಿತ್ತು. 6 ಮಿಲಿಯನ್ ಟನ್ ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿತ್ತು.
ನಂತರ ಈ ಉದ್ದೇಶದಿಂದ ಹಿಂದೆ ಸರಿದಿದ್ದ ಈ ಕಂಪನಿಯು ಜಮೀನು ಹಂಚಿಕೆಯಾದ ನಂತರ ಕೆಲವು ಕಾರಣಗಳನ್ನು ಮುಂದಿಟ್ಟಿತ್ತು. ಸೋಲಾರ್ ಪ್ಲಾಂಟ್ ಸ್ಥಾಪನೆಗೆ ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರಿತ್ತು. ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಈ ಕಂಪನಿ ಇದ್ದಕ್ಕಿದ್ದಂತೆ ಹಿಂದಕ್ಕೆ ಸರಿದು ಸೋಲಾರ್ ಪವರ್ ಘಟಕಗಳನ್ನು ಉತ್ಪಾದಿಸಲು ಕೋರಿತ್ತಾದರೂ ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ.
ಅಷ್ಟೇ ಅಲ್ಲದೇ ಬಳ್ಳಾರಿ ಜಿಲ್ಲೆಯಲ್ಲಿ ಆರ್ಸೆಲರ್ ಮಿತ್ತಲ್ ಸೇರಿದಂತೆ ಹಲವು ಕಂಪನಿಗಳು ಸಾವಿರಾರು ಎಕರೆಯನ್ನು 10-12 ವರ್ಷಗಳ ಹಿಂದೆಯೇ ಮಂಜೂರು ಮಾಡಿಸಿಕೊಂಡಿದ್ದರೂ ಇದುವರೆಗೂ ಒಂದೇ ಒಂದು ಘಟಕವನ್ನು ಆರಂಭಿಸಿಲ್ಲ. ಹೀಗಾಗಿ 11,543.37 ಎಕರೆ ನಿಷ್ಪ್ರಯೋಜಕವಾಗಿದೆ.
ಕೆಲವು ಕಂಪನಿಗಳಿಗಾಗಿಯೇ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕೆ ಪ್ರದೇಶಗಳನ್ನು ಅಭಿವೃದ್ದಿಪಡಿಸಿದ್ದರೂ 10 ವರ್ಷಗಳಾದರೂ ಒಂದೇ ಒಂದು ಘಟಕವನ್ನೂ ಆರಂಭಿಸಿಲ್ಲ ಎಂದು ಹಿಂದಿನ ಸಚಿವ ನಿರಾಣಿ ಅವರು ಉತ್ತರ ಒದಗಿಸಿದ್ದರು.
ಬಳ್ಳಾರಿ ಜಿಲ್ಲೆಯೊಂದರಲ್ಲೇ ಕೈಗಾರಿಕೆಗಳ ಸ್ಥಾಪನೆಗಾಗಿ ಕಳೆದ 10-12 ವರ್ಷಗಳಿಂದ 15,778.19 ಎಕರೆ ಮಂಜೂರು ಮಾಡಿದ್ದರ ಪೈಕಿ 11,543.37 ಎಕರೆ ಫಡಾ ಬಿದ್ದಿತ್ತು.
ಅದೇ ರೀತಿ ತುಂಗಾಭದ್ರಾ ಮಿನರಲ್ ಪ್ರೈವೈಟ್ ಲಿಮಿಟೆಡ್‌ಗೆ 2008ರ ನವೆಂರ್ 14ರಂದು 135.46 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. 2013ರ ಮೇ 31ರಂದು ಉತ್ತಮ್ ಗಾಲ್ವಾ ಕಂಪನಿಗೆ 3,966 ಎಕರೆ ಮತ್ತು 2015ರ ಜೂನ್ 15ರಂದು 911.8 ಎಕರೆ, ಬಳ್ಳಾರಿ ಗಾರ್ಮೆಂಟ್ಸ್ ಎಕ್ಸ್‌ಪೋರ್ಟ್ಸ್ ಕ್ಲಸ್ಟರ್ ಪ್ರೈ ಲಿಮಿಟೆಡ್‌ಗೆ 50 ಎಕರೆ, ಕರ್ನಾಟಕ ಫೆರೋ ಕಂಪನಿಗೆ 156.01 ಎಕರೆ, ಕರ್ನಾಟಕ ವಿಜಯನಗರ ಸ್ಟೀಲ್ ಲಿಮಿಟೆಡ್ (ಎನ್‌ಎಂಡಿಸಿ) 2,843.98 ಎಕರೆಯನ್ನು 2018ರ ಜನವರಿ 11ರಂದು ಮಂಜೂರು ಮಾಡಲಾಗಿತ್ತು.
ಇದಲ್ಲದೇ ಉತ್ತಮ್ ಗಾಲ್ವಾ ಫೆರೋಸ್ ಲಿಮಿಟೆಡ್‌ಗೆ 4,877.81 ಎಕರೆ ಜಮೀನನ್ನು ಕೈಗಾರಿಕೆ ನಿರ್ಮಾಣ ಉದ್ಧೇಶಕ್ಕೆ ಜಮೀನು ಹಂಚಿಕೆ ಮಾಡಿತ್ತು. ಉತ್ತಮ್ ಗಾಲ್ವಾ ಫೆರೋಸ್ ಲಿಮಿಟೆಡ್ 2017ರಲ್ಲಿ ಗುತ್ತಿಗೆ ಕರಾರು ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಪ್ರಕ್ರಿಯೆ ನಡೆದು 5 ವರ್ಷಗಳಾದರೂ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಉತ್ತಮ್ ಗಾಲ್ವಾ ಫೆರ್‍ಹೋಸ್ ನ ಸದ್ಯದ ಸ್ಥಿತಿ ಏನು?
ಉತ್ತಮ್ ಗಾಲ್ವಾ ಪೆರ್‍ಹೋಸ್ ಲಿಮಿಟೆಡ್‌ನ ಯೋಜನೆಗಾಗಿ ಕುಡುತಿನಿ, ವೇಣಿ ವೀರಾಪುರ, ಕೊಳಗಲ್ಲು ಮತ್ತು ಯರಂಗಳಿಗೆ ಗ್ರಾಮಗಳಲ್ಲಿ 2010-12ರಲ್ಲಿ ಒಟ್ಟು 4,950.61 ಎಕರೆ ಜಮೀನಿಗೆ ಕಲಂ 28(4)ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿತ್ತು ಕುಡುತಿನಿ ಗ್ರಾಮದ ಕುರುಗೋಡು ರಸ್ತೆಗೆ ಹೊಂದಿಕೊಂಡು 500 ಮೀಟರ್ ಒಳಗೆ ಬರುವ ಜಮೀನಿಗೆ ಪ್ರತಿ ಎಕರೆಗೆ 6 ಲಕ್ಷ, ರೈಲ್ವೇ ಟ್ರಾಕ್ ಮತ್ತು ರಾಷ್ಟ್ರೀಯ ಹೆದ್ದಾರಿ 63ರ ಮಧ್ಯೆ ಬರುವ ಜಮೀನುಗಳಿಗೆ ಪ್ರತಿ ಎಕರೆಗೆ 8 ಲಕ್ಷ, ಉಳಿದ ಜಮೀನುಗಳಿಗೆ ಪ್ರತಿ ಎಕರೆಗೆ 50 ಲಕ್ಷ, ವೇಣಿ ವೀರಾಪುರ ಮತ್ತು ಯರಂಗಳಿಗೆ ಗ್ರಾಮಗಳಿಗೆ ಪ್ರತಿ ಎಕರೆಗೆ 5 ಲಕ್ಷ ರು.ಗಳಂತೆ ಪರಿಹಾರ ಪಾವತಿಸಲು ನಿರ್ಣಯಿಸಿತ್ತು.

ಇದುವರೆಗೆ 4,723.05 ಎಕರೆ ಜಮೀನಿಗೆ ಪರಿಹಾರ ಪಾವತಿಸಿದೆ. 135 ಎಕರೆ 15 ಗುಂಟೆ ಜಮೀನಿಗೆ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯಲ್ಲಿದೆ ಎಂದು ಸಚಿವ ಎಂ ಬಿ ಪಾಟೀಲ್ ಅವರು ಉತ್ತರ ಒದಗಿಸಿದ್ದಾರೆ.
ಕರ್ನಾಟಕ ವಿಜಯನಗರ ಸ್ಟೀಲ್ಸ್ ಲಿಮಿಟೆಡ್ ಕಂಪನಿಗಯೂ ಸಹ ಜಾನುಕುಂಟೆ ಮತ್ತು ವೇಣಿವೀರಾಪುರ ಗ್ರಾಮದಲ್ಲಿ 2014-15ರಲ್ಲಿ 2,850 ಎಕರೆ 26 ಗುಂಟೆ ಜಮೀನಿಗೆ ಕಲಂ 28(4)ರ ಅಡಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ ವೇಣಿ ವೀರಾಪುರ ಗ್ರಾಮದ ಕೃಷಿ ಜಮೀನಿಗೆ ಪ್ರತಿ ಎಕರೆಗೆ 23 ಲಕ್ಷ, ಜಾನುಕುಂಟೆ ಗ್ರಾಮದ ಕೃಷಿ ಜಮೀನಿಗೆ ಪ್ರತಿ ಎಕರೆಗೆ 12 ಲಕ್ಷ, ವೇಣಿ ವೀರಾಪುರ ಗ್ರಾಮದಲ್ಲಿನ ಕೃಷಿಯೆತರ ಜಮೀನುಗಳಿಗೆ ಪ್ರತಿ ಎಕರೆಗೆ 45 ಲಕ್ಷ, ಇದೇ ಗ್ರಾಮದಲ್ಲಿ ಭೂ ಪರಿವರ್ತನೆಯಾಗಿರುವ ಅನುಮೋದಿತ ನಿವೇಶನಗಳಿಗೆ ಚದರ ಅಡಿ 350 ರು ನಂತೆ ಪರಿಹಾರ ಪಾವತಿಸಲು ನಿರ್ಣಯಿಸಿತ್ತು.
ಇದುವರೆಗೂ 2,567 ಎಕರೆ ಜಮೀನಿಗೆ ಪರಿಹಾರ ಪಾವತಿಸಿದೆ. ಇನ್ನೂ 282 ಎಕರೆ 35 ಗುಂಟೆ ಜಮೀನಿಗೆ ಪರಿಹಾರ ಪಾವತಿ ಕಾರ್ಯವು ಪ್ರಗತಿಯಲ್ಲಿದೆ.
ಸಾವಿರಾರು ಎಕರೆ ಜಮೀನಿನಲ್ಲಿ ಉದ್ದೇಶಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಎರಡೂ ಕಂಪನಿಗಳಿಗೆ 2020ರ ನವೆಂಬರ್ 27ರಂದೇ ತಿಳಿವಳಿಕೆ ನೋಟೀಸ್ ಜಾರಿಗೊಳಿಸಿತ್ತು.
2010ರ ಸಮಾವೇಶದಲ್ಲಿ 36 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದ್ದ ರೆಡ್ಡಿ ಸೋದರರ ಒಡೆತನದ ಬ್ರಾಹ್ಮಿಣಿ ಇಂಡಸ್ಟ್ರೀಸ್ ಕರ್ನಾಟಕ ಲಿಮಿಟೆಡ್ ಕಂಪನಿಯು ಹಂಚಿಕೆ ಮಾಡಿಸಿಕೊಂಡಿದ್ದ ಜಮೀನನ್ನು ಉತ್ತಮ್ ಗಾಲ್ವಾ ಫೆರೋಸ್ ಲಿಮಿಟೆಡ್‌ಗೆ ಅಕ್ರಮವಾಗಿ ಮಾರಾಟ ಮಾಡಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಆ ಕಂಪನಿಯು ಕೂಡ ಕಾರ್ಖಾನೆ ಸ್ಥಾಪನೆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ .









