ಬೆಂಗಳೂರು; ದೆಹಲಿಯಲ್ಲಿರುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿನ ಕನ್ನಡ ಅಧ್ಯಯನ ಪೀಠಕ್ಕೆ 2020ರಿಂದ 2025ರವರೆಗಿನ ಅವಧಿಯಲ್ಲಿ ಅನುದಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಕೋರಿಕೆಯನ್ನೂ ಸಲ್ಲಿಸಿರಲಿಲ್ಲ ಮತ್ತು ಸರ್ಕಾರಕ್ಕೆ ಯಾವುದೇ ಪತ್ರವನ್ನೂ ಬರೆದಿರಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರತಿಕ್ರಿಯೆ ನೀಡಿದೆ.
ಜೆಎನ್‌ಯು ಕನ್ನಡ ಅಧ್ಯಯನ ಪೀಠಕ್ಕೆ 10 ಕೋಟಿ ಅನುದಾನದಿಂದ ಹಿಂದೆ ಸರಿಯಿತೇ ಎಂದು ‘ದಿ ಫೈಲ್’ 2025ರ ಡಿಸೆಂಬರ್ 8ರಂದು ವರದಿ ಪ್ರಕಟಿಸಿತ್ತು.
ಜೆಎನ್‌ಯು ಕನ್ನಡ ಅಧ್ಯಯನ ಪೀಠ; 10 ಕೋಟಿ ಅನುದಾನದಿಂದ ಹಿಂದೆ ಸರಿಯಿತೇ ಸರ್ಕಾರ?
ಈ ವರದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೀಡಿರುವ ಅಧಿಕೃತ ಪ್ರತಿಕ್ರಿಯೆಯಲ್ಲಿ ಈ ಮಾಹಿತಿ ಇದೆ.
2020ರಿಂದ 2025ರವರೆಗಿನ ಅವಧಿಯಲ್ಲಿ ಜೆಎನ್‌ಯು ಕನ್ನಡ ಅಧಯ್ಯನ ಪೀಠಕ್ಕೆ ಅನುದಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಯಾವುದೇ ಕೋರಿಕೆಯನ್ನು ಸಲ್ಲಿಸಿರಲಿಲ್ಲ. ಮತ್ತು ಈ ಸಂಬಂಧ ಸರ್ಕಾರಕ್ಕೆ ಯಾವುದೇ ಪತ್ರವನ್ನೂ ಬರೆದಿರಲಿಲ್ಲ ಎಂದು ಮಾಹಿತಿ ಒದಗಿಸಿದೆ.
ಟಿ ಎಸ್ ನಾಗಾಭರಣ ಅವರು 2019ರಿಂದ 2022ರವರೆಗೆ ಅಧ್ಯಕ್ಷರಾಗಿದ್ದರು. 2022ರಿಂದ 2023ರವರೆಗೆ ಅಧ್ಯಕ್ಷರ ನಾಮ ನಿರ್ದೇಶನವಾಗಿರಲಿಲ್ಲ. ಪುರುಷೋತ್ತಮ ಬಿಳಿಮಲೆ 2024ರ ಜೂನ್‌ನಲ್ಲಿ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಗಿತ್ತು.
ಜೆಎನ್‌ಯು ಕನ್ನಡ ಅಧ್ಯಯನ ಪೀಠಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಾಡಿಕೊಂಡಿರುವ ಒಪ್ಪಂದವನ್ನು ಪರಿಷ್ಕೃತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಧಿಕೃತವಾಗಿ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕ ಸರಕಾರ ನೀಡಿರುವ 5 ಕೋಟಿ ರೂಪಾಯಿಗಳನ್ನು ಇಡುಗಂಟಾಗಿ ಇರಿಸಿ, ಅದರಿಂದ ಬರುವ ಬಡ್ಡಿ ಹಣದಲ್ಲಿ ಕನ್ನಡ ಪೀಠವನ್ನು ನಡೆಸಬೇಕೆಂಬ ಒಪ್ಪಂದ ಜೆ ಎನ್ ಯು ಮತ್ತು ಕರ್ನಾಟಕ ಸರಕಾರದ ನಡುವೆ ಆಗಿತ್ತು.
2015ರಲ್ಲಿ ಈ ಒಪ್ಪಂದ ಆಗಿತ್ತು. ಆ ಪ್ರಕಾರ ಅಲ್ಲಿ ನೇಮಕಾತಿ ನಡೆದು ಸಾಕಷ್ಟು ಕೆಲಸಗಳು ನಡೆದಿದ್ದವು. ಆದರೆ 2024ರ ಹೊತ್ತಿಗೆ ಬಡ್ಡಿ ದರ ಇಳಿಕೆ ಮತ್ತು ಪ್ರಾಧ್ಯಾಪಕರ ವೇತನದಲ್ಲಾದ ಏರಿಕೆಗಳ ಕಾರಣದಿಂದ ಐದು ಕೋಟಿ ರೂಗಳ ಇಡುಗಂಟಿನ ಬಡ್ಡಿಯಲ್ಲಿ ಪ್ರಾಧ್ಯಾಪಕರ ನೇಮಕಾತಿ ಮಾಡುವುದು ಅಸಾಧ್ಯವಾಗಿತ್ತು. ಆದುದರಿಂದ, ಡಾ. ವಿಶ್ವನಾಥ್ ಅವರ ನಿವೃತ್ತಿಯ ಆನಂತರ ಜೆ ಎನ್ ಯು ವಿನಲ್ಲಿ ನೇಮಕಾತಿ ನಡೆಯಲೇ ಇಲ್ಲ. ಈ ಕುರಿತು ಜೆ ಎನ್ ಯು ಆಗಲೀ, ಪ್ರೊ ವಿಶ್ವನಾಥ್ ಅವರಾಗಲೀ ಅಧಿಕೃತವಾಗಿ ಕರ್ನಾಟಕ ಸರಕಾರಕ್ಕೆ ತಿಳಿಸಲೇ ಇಲ್ಲ.

ಹೀಗಾಗಿ 2024ರ ಡಿಸೆಂಬರ್ ತಿಂಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗವು ಡಾ. ಪುರುಷೋತ್ತಮ ಬಿಳಿಮಲೆಯವರ ನೇತೃತ್ವದಲ್ಲಿ ಜೆ ಎನ್ ಯು ವಿಗೆ ಭೇಟಿ ನೀಡಿತ್ತು. ಅಲ್ಲಿಯ ಸಮಾಲೋಚನೆಯಲ್ಲಿ ನಿರ್ಧಾರವಾದ ಪ್ರಕಾರ, ಈಗ ಇರುವ ಇಡುಗಂಟಿನ ಬಡ್ಡಿಯಲ್ಲಿ ಲಭ್ಯವಿರುವ ಹಣಕಾಸಿಗೆ ಅನುಗುಣವಾಗಿ, ಪ್ರಾಧ್ಯಾಪಕ ಅಥವಾ ಸಹಾಯಕ ಪ್ರಾಧ್ಯಾಪಕರೊಬ್ಬರ ನೇಮಕಾತಿ ನಡೆಯಲು ಅನುಕೂಲವಾಗುವಂತೆ ಹಿಂದಿನ ಒಪ್ಪಂದವನ್ನು ಪರಿಷ್ಕರಿಸಬೇಕು ಎಂದು ಚರ್ಚಿಸಲಾಗಿತ್ತು ಎಂದು ಮಾಹಿತಿ ಒದಗಿಸಿದೆ.
ಆ ಪ್ರಕಾರ ಪ್ರಾಧಿಕಾರವು ಒಪ್ಪಂದವನ್ನು ಪರಿಷ್ಕರಿಸಿ, ಜೆ ಎನ್ ಯು, ಸರ್ಕಾರದ ಕಾನೂನು ಇಲಾಖೆ, ಆರ್ಥಿಕ ಇಲಾಖೆ, ಸಂಸ್ಕೃತಿ ಇಲಾಖೆ ಮೊದಲಾದ ವಿಭಾಗಗಳಿಂದ ಒಪ್ಪಿಗೆ ಪಡೆದಿದೆ. ಆ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಜೆ ಎನ್ ಯುವಿನಲ್ಲಿ ಮತ್ತೆ ಕನ್ನಡ ಪೀಠ ಪುನರಾರಂಭಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದೆ.
’10 ಕೋಟಿ ರೂಪಾಯಿಗಳಿಗೆ ಇದುವರೆಗೆ ಅಧಿಕೃತವಾಗಿ ಯಾರೂ ಕೋರಿಕೆ ಸಲ್ಲಿಸಿದ್ದು ನನಗೆ ಗೊತ್ತಿಲ್ಲ. ಈಗ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆದ ಆನಂತರ ಪೀಠವು ಅಧಿಕೃತವಾಗಿ ಸರಕಾರಕ್ಕೆ 10 ಕೋಟಿಯ ಬೇಡಿಕೆಯನ್ನು ಜೆ ಎನ್ ಯು ಮೂಲಕ ಸಲ್ಲಿಸಬೇಕು. ಈಗ ಪೀಠದಲ್ಲಿ ಯಾರೂ ಇಲ್ಲದ್ದರಿಂದ ಇಂಥ ಕೆಲಸಗಳನ್ನು ಮಾಡಲಾಗಿಲ್ಲ. 10 ಕೋಟಿ ಅನುದಾನ ದೊರೆತರೆ, ಅಲ್ಲಿ ಪ್ರಾಧ್ಯಾಪಕರ ನೇಮಕಾತಿ ಮಾಡಬಹುದು. ಅಲ್ಲಿವರೆಗೆ ಸಹಾಯಕ ಪ್ರಾಧ್ಯಾಪಕರೊಬ್ಬರ ನೇಮಕಾತಿ ಮಾಡುವುದು ಬಹಳ ಅಗತ್ಯ,’ ಎಂದು ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೇವಲ 5 ಕೋಟಿ ರು ಅನುದಾನದಿಂದ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಅಭಿವೃದ್ಧಿ ಅಥವಾ ಈ ಪೀಠವು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಸಾಕಾರಗೊಳ್ಳಲಿದೆಯೇ ಎಂಬ ಪ್ರಶ್ನೆಗೂ ಪ್ರಾಧಿಕಾರವು ಉತ್ತರ ನೀಡಿದೆ.
ಅಲ್ಲಿ ನೇಮಕಗೊಳ್ಳುವ ಪ್ರಾಧ್ಯಾಪಕರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಅವಲಂಬಿಸಿಕೊಂಡು ಇದಕ್ಕೆ ಉತ್ತರ ಕಂಡುಕೊಳ್ಳಬೇಕು. ಪ್ರಾಧ್ಯಾಪಕರ ವೇತನಕ್ಕೆ ಬೇಕಾದಷ್ಟು ಹಣ ವಿದ್ದರೆ, ಉಳಿದ ಕಾರ್ಯಕ್ರಮಗಳಿಗೆ ಯೋಜನೆಗಳನ್ನು ಸಿದ್ಧಪಡಿಸಿ ವಿಶೇಷ ಅನುದಾನವನ್ನು ಪಡೆಯಬಹುದು ಎಂದು ಹೇಳಿದೆ.

ಜೆ ಎನ್ ಯು ಒಂದು ಕೇಂದ್ರೀಯ ವಿವಿ ಆಗಿರುವುದರಿಂದ ಈ ಕೆಲಸಗಳನ್ನು ಮಾಡುವುದು ಸುಲಭ. ಡಾ. ಪುರುಷೋತ್ತಮ ಬಿಳಿಮಲೆಯವರು ಪೀಠದ ಪ್ರಾಧ್ಯಾಪಕರಾಗಿರುವ ಸಮಯದಲ್ಲಿ ರನ್ನನ ಗದಾಯುದ್ದದ ಇಂಗ್ಲಿಷ್ ಅನುವಾದಕ್ಕೆ ಕರ್ನಾಟಕ ಸರಕಾರದ ರನ್ನ ಪ್ರತಿಷ್ಠಾನ ಅನುದಾನ ನೀಡಿತ್ತು. ಜಾನಪದ ಅಕಾಡೆಮಿ, ಮಾಧ್ಯಮ ಅಕಾಡೆಮಿಗಳು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜೆ ಎನ್ ಯುವಿನಲ್ಲಿ ಯಶಸ್ವಿಯಾಗಿ ಏರ್ಪಡಿಸಿತ್ತು.
ಕೇಂದ್ರ ಸಾಹಿತ್ಯ ಅಕಾಡೆಮಿ, ಕೇಂದ್ರ ಇತಿಹಾಸ ಅಕಾಡೆಮಿ, ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ಸೈನ್ಸ್ ರೀಸರ್ಚ್ ಮೊದಲಾದೆಡೆಗಳಲ್ಲಿ ಸಾಕಷ್ಟು ಹಣವಿದೆ. ಅಲ್ಲಿಯ ಹಣ ಕರ್ನಾಟಕ / ಕನ್ನಡಕ್ಕೆ ಸಿಕ್ಕಿದ್ದೇ ಕಡಿಮೆ. ಸರಕಾರದ ಅನುದಾನದ ಜೊತೆಗೆ ಇಂಥ ಇತರ ಮೂಲಗಳಿಂದಲೂ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪೀಠವನ್ನು ಬೆಳೆಸಬಲ್ಲವರು ಅಲ್ಲಿರಬೇಕು ಎಂದು ಹೇಳಿದೆ.









