ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಗೈರು; ಅಧಿಕಾರಿ, ನೌಕರರ ವಿರುದ್ಧ ನೋಟೀಸ್‌, ಚಾರ್ಜ್‌ಶೀಟ್‌ ಹೊರಡಿಸಿದ ಸರ್ಕಾರ

ಬೆಂಗಳೂರು; ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ್ದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ಕಾರ್ಯಕ್ಕೆ ಗೈರುಹಾಜರಾಗಿದ್ದ ಗಣತಿದಾರರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ದಂಡಾಸ್ತ್ರವನ್ನು ಪ್ರಯೋಗಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಚಾಲನೆ ನೀಡಿದೆ. ಹಲವು ಇಲಾಖೆಗಳ ಅಧಿಕಾರಿ, ನೌಕರರುಗಳ ವಿರುದ್ಧ ನೋಟೀಸ್‌, ದೋಷಾರೋಪಣೆ ಪಟ್ಟಿಗಳನ್ನೂ ಜಾರಿಗೊಳಿಸುತ್ತಿದೆ.

 

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ಬೆನ್ನಲ್ಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ಕಾರ್ಯಕ್ಕೆ ಗೈರುಹಾಜರಾಗಿದ್ದ ಗಣತಿದಾರರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿರುವುದು ಸಹ ಮುನ್ನೆಲೆಗೆ ಬಂದಿದೆ.

 

ಗ್ರೇಟರ್‍‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕಂದಾಯ, ಅರಣ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ರಾಜ್ಯದ ಎಲ್ಲಾ ಇಲಾಖೆಗಳಿಂದ ನೌಕರರನ್ನು ಗಣತಿಗೆ ನಿಯೋಜನೆ ಮಾಡಲಾಗಿತ್ತು. ನಿಯೋಜನೆಗೊಂಡಿದ್ದ ಬಹುತೇಕ ನೌಕರರು ಗಣತಿ ಕಾರ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಭಾಗವಾಗಿ ದೋಷಾರೋಪಣೆ ಪಟ್ಟಿ ಜಾರಿಗೊಳಿಸುತ್ತಿದೆ.

 

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಇಲಾಖಾವಾರು ಅಧಿಕಾರಿಗಳ ಪಟ್ಟಿಯನ್ನು ಸರ್ಕಾರವು ಸಿದ್ಧಪಡಿಸಿರುವುದು ಗೊತ್ತಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಸಮೀಕ್ಷೆಗೆ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ವ್ಯಾಪ್ತಿಯ ಹಲವು ಅಧಿಕಾರಿ, ನೌಕರರು ಗೈರಾಗಿದ್ದರು. ಈ ಇಲಾಖೆ ಅಧೀನದಲ್ಲಿರುವ ಕರ್ನಾಟಕ ಅರಣ್ಯ ಅರಣ್ಯ ಅಭಿವೃದ್ದಿ ನಿಗಮದ ಲೆಕ್ಕಾಧೀಕ್ಷಕರಾದ ಕೆ ಸುಮಿತ್ರ ಎಂಬುವರೂ ಸಹ ಈ ಗೈರಾದವರ ಪಟ್ಟಿಯ್ಲಲಿದ್ದರು.

 

ಹೀಗಾಗಿ ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಗ್ರೇಟರ್‍‌ ಬೆಂಗಳೂರು ಪ್ರಾಧಿಕಾರವು 2025ರ ಅಕ್ಟೋಬರ್‍‌ 18ರಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು. ಈ ಪತ್ರದ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2025ರ ನವೆಂಬರ್‍‌ 24ರಂದು ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಸಚಿವ ಈಶ್ವರ್ ಖಂಡ್ರೆ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪತ್ರದಲ್ಲೇನಿದೆ?

 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ 2025ರ ಅಕ್ಟೋಬರ್‍‌ 3ರಂದು ಎರಡನೇ ಹಾಗೂ ಅಂತಿಮ ತರಬೇತಿ ನೀಡಿ 2025ರ ಅಕ್ಟೋಬರ್‍‌ 4ರಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲು ಸೂಚಿಸಲಾಗಿತ್ತು. ಅದರಂತೆ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮ, ಮಂಡಳಿಗಳ ಗ್ರೂಪ್ ಬಿ ಮತ್ತು ಸಿ ವೃಂದದ ಹಲವು ಅಧಿಕಾರಿಗಳು, ನೌಕರರು ಸಮೀಕ್ಷೆ ಕಾರ್ಯ ಕೈಗೊಂಡಿರುತ್ತಾರೆ.

 

ಆದರೆ ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ವಿವಿಧ ನಿಗಮದ ಅಧಿಕಾರಿಗಳು, ನೌಕರರು ಸಮೀಕ್ಷೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಧಿಕಾರಿ, ನೌಕರರ ಪಟ್ಟಿಯನ್ನು ಒದಗಿಸಿತ್ತು.

 

 

 

ಪ್ರಥಮ ಹಂತದಲ್ಲಿ 2025ರ ಅಕ್ಟೋಬರ್‍‌ 4ರಿಂದ ಅಕ್ಟೋಬರ್‍‌ 10ರವರೆಗೆ ಹಂಚಿಕೆ ಮಾಡಿದ್ದ ವಾರ್ಡ್‌ಗಳಲ್ಲಿ ಹಾಜರಾಗಿರಲಿಲ್ಲ. ಸಮೀಕ್ಷೆ ಕಾರ್ಯದಲ್ಲಿಯೂ ಪಾಲ್ಗೊಂಡಿರಲಿಲ್ಲ. ಈ ಮೂಲಕ ಪ್ರಾಧಿಕಾರದ ಮುಖ್ಯ ಆಯುಕ್ತರ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಇವರ ವಿರುದ್ಧ ಶಿಸ್ತು ಕ್ರಮ ಮತ್ತು ಅಮಾನತುಗೊಳಿಸುವ ಆದೇಶಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೇ ನೋ ವರ್ಕ್ ನೋ ಪೇ ಎಂಬ ತತ್ವದ ಅಡಿಯಲ್ಲ Dies Non ಎಂದು ಪರಿಣಗಿಸಿ ಆದೇಶ ಹೊರಡಿಸಲಾಗಿದ್ದರೂ ಸಹ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಪ್ರಾಧಿಕಾರವು ತನ್ನ ಪತ್ರದಲ್ಲಿ ತಿಳಿಸಿತ್ತು.

 

ಮುಖ್ಯ ಆಯುಕ್ತರ ಅದೇಶವನ್ನು ಪಾಲಿಸದೇ ಉಲ್ಲಂಘಿಸಿದ್ದ ಅಧಿಕಾರಿಗಳ ಪಟ್ಟಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅರಣ್ಯ ಇಲಾಖೆಗೆ ಒದಗಿಸಿತ್ತು. ಈ ಪಟ್ಟಿಯಲ್ಲಿದ್ದ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕರಾದ ಸುಮಿತ್ರ ಕೆ ಎಂಬುವರಿಗೆ 2025ರ ಅಕ್ಟೋಬರ್‍‌ 18ರಂದೇ ಕಾರಣ ಕೇಳಿ ನೋಟೀಸ್‌ ಮತ್ತು ದೋಷಾರೋಪಣೆ ಪಟ್ಟಿಯನ್ನೂ ಜಾರಿಗೊಳಿಸಿತ್ತು.

 

ಆರೋಪದಲ್ಲೇನಿದೆ?

 

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ ದತ್ತಾಂಶದ ಅವಶ್ಯಕತೆ ಇದೆ. ಹೀಗಾಗಿ ಮನೆ ಮನೆ ಸಮೀಕ್ಷೆ ಸಂಗ್ರಹಿಸಲು ಗಣತಿದಾರರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ನಂತರ ಬೆಂಗಳೂರು ನಗರ ಪಾಲಿಕೆಯಲ್ಲಿನ ದಯಾನಂದ ನಗರ ವಾರ್ಡ್‌ನಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಪ್ರತಿ ದಿನ 15 ಮನೆಗಳ ಸಮೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ. ಈ ಕುರಿತು ಹಲವು ಬಾರಿ ಸೂಚನೆಗಳನ್ನು ನೀಡಿದ್ದರೂ ಸಹ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಇಲ್ಲಿಯವರೆಗೆ ಸಮೀಕ್ಷೆ ಕರ್ತವ್ಯಕ್ಕೆ ನಿರಂತರವಾಗಿ ಗೈರುಹಾಜರಾಗಿದ್ದೀರಿ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

 

 

ಅಲ್ಲದೆ ಈ ಸಂಬಂಧ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅನೇಕ ಬಾರಿ ಎಸ್‌ಎಂಎಸ್‌ ಸಂದೇಶ, ಐವಿಆರ್‍‌ಎಸ್‌ ಕರೆಳು, ಡೈಸ್‌-ನಾನ್‌ ಆದೇಶವನ್ನು ಜಾರಿ ಮಾಡಲಾಗಿತ್ತು. ಆದರೂ ಸಹ ನೀವು ಒಬ್ಬ ಜವಾಬ್ದಾರಿಯು ಅಧಿಕಾರಿ, ನೌಕರರಾಗಿ ನಿಮ್ಮ ಸಮೀಕ್ಷೆ ಕರ್ತವ್ಯವನ್ನು ನಿರ್ವಹಿಸದೇ ಆದೇಶಗಳನ್ನು ಧಿಕ್ಕರಿಸಿದ್ದೀರಿ. ಹೀಗಾಗಿ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಾವಳಿ 2021ರ ನಿಯಮವನ್ನು ಉಲ್ಲಂಘಿಸಿದ್ದೀರಿ. ಹೀಗಾಗಿ ನಿಯಮಾವಳಿ 1957ರ ಅನ್ವಯ ಶಿಸ್ತು ಕ್ರಮ ಜರುಗಿಸಲು ಅನುವು ಮಾಡಿಕೊಟ್ಟೀದ್ದೀರಿ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಈ ದೋಷಾರೋಪಣೆಗೆ ಪೂರಕವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸೂಕ್ತ ಸಮರ್ಥನೆ, ಪುರಾವೆಗಳನ್ನೂ ಒದಗಿಸಿತ್ತು.

 

ಇದನ್ನಾಧರಿಸಿ ಅರಣ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2025ರ ನವಂಬರ್‍‌ 24ರಂದು ಪತ್ರವನ್ನು ಇಲಾಖೆಯು ಬರೆದಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಪತ್ರದಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

 

 

ಜಾತಿ ಗಣತಿ ವಿವಾದ ಆಗಿದ್ದ ಹೊತ್ತಿನಲ್ಲೇ ಕೆಲವು ಸಿಬ್ಬಂದಿ ಸಮೀಕ್ಷೆಗೆ ಮನೆ ಮನೆಗೆ ತೆರಳಲು ಹಿಂದೇಟು ಹಾಕಿದ್ದರು. ಬೇರೆ ಬೇರೆ ಕಾರಣಗಳನ್ನು ನೀಡಿ ಸಮೀಕ್ಷೆಗೆ ತೆರಳಲು ಮುಂದಾಗಿರಲಿಲ್ಲ. ಹೀಗಾಗಿ ಈ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಜರಾಗದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ್ದರು.

 

ಮೊದಲ ಹಂತದಲ್ಲಿ, ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸವು, ಮನೆ ಪಟ್ಟಿ ಮತ್ತು ಅವುಗಳ ನಕ್ಷೆ (ಮ್ಯಾಪಿಂಗ್) ಸಿದ್ಧಪಡಿಸುವ ಕಾರ್ಯವನ್ನು ಒಳಗೊಂಡಿತ್ತು. ಅದು ರಾಜ್ಯದಾದ್ಯಂತ ಎಲ್ಲ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು ಮತ್ತು ಮ್ಯಾಪಿಂಗ್ ಮಾಡುವ ಕೆಲಸವನ್ನು ಸಾಧ್ಯವಾಗಿಸಲು ಪಣ ತೊಟ್ಟಿತ್ತು.

 

2ನೇ ಹಂತದಲ್ಲಿ ಸಮೀಕ್ಷೆಯ ಕಾರ್ಯವನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಸಮೀಕ್ಷೆಯ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿ ಸೆ.22ರಿಂದ ಅ.7ರ ವರೆಗೆ ನಡೆಸಲು ಗುರಿಯಾಗಿಟ್ಟುಕೊಂಡಿತ್ತು.

 

ಇ-ಆಡಳಿತ ಮತ್ತು ಇಂಧನ ಇಲಾಖೆಗಳು ವಿದ್ಯುತ್ ಮೀಟರ್ ಸಂಪರ್ಕದ (ಆರ್.ಆರ್. ನಂಬರ್) ಆಧಾರದ ಮೇಲೆ ವಿನ್ಯಾಸಗೊಳಿಸಿದ ಈ ನವೀನ, ಕ್ರಿಯಾತ್ಮಕ ಮತ್ತು ವಿಶಿಷ್ಟ ಪ್ರಕ್ರಿಯೆ ಅಭಿನಂದನೀಯವಾಗಿದೆ. ಅದಕ್ಕೆ ಅನುಗುಣವಾಗಿ ಒಂದು ‘ಆ್ಯಪ್’ ಅನ್ನು ಅಭಿವೃದ್ಧಿಪಡಿಸಿತ್ತು.

 

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಸೇರಿದಂತೆ ಆಯೋಗದ, ಇಂಧನ ಇಲಾಖೆಯ, ಇ.ಡಿ.ಸಿ.ಎಸ್ ಸಂಸ್ಥೆಯ ಸೃಜನಶೀಲ ಸಲಹಾ ತಂಡದ ಸಹಕಾರದೊಂದಿಗೆ ಈ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿತ್ತು.

Your generous support will help us remain independent and work without fear.

Latest News

Related Posts