ಗೃಹಜ್ಯೋತಿ; ರಾಜಸ್ವ ಕೊರತೆಗೆ ದೊಡ್ಡ ಕಾಣಿಕೆ, ಬಜೆಟ್‌ ಮೇಲೆ ಹಣಕಾಸು ಒತ್ತಡ, ಎಸ್ಕಾಂಗಳಲ್ಲೂ ಮುಗ್ಗಟ್ಟು

ಬೆಂಗಳೂರು; ನಿಗದಿತ ಮಾನದಂಡಗಳನ್ವಯ ಅರ್ಹ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆಯು 2023-24ನೇ ಸಾಲಿನಲ್ಲಿ ಗಣನೀಯ ಪ್ರಮಾಣದ, ಅಂದರೆ, ಶೇಕಡಾ 64.51ರಷ್ಟು ರಾಜಸ್ವ ಕೊರತೆಗೆ ಕಾರಣವಾಗಿದೆ.

 

ಹಾಗೆಯೇ  ರಾಜಸ್ವ ವೆಚ್ಚದ ಶೇಕಡಾ 18ರಷ್ಟಿದೆ. ಈ ಪೈಕಿ, ಗೃಹಜ್ಯೋತಿಗಾಗಿ ಗಣನೀಯ ಮೊತ್ತವನ್ನು ಅಂದರೆ ರಾಜಸ್ವ ವೆಚ್ಚದ ಶೇಕಡಾ 3.10ರಷ್ಟು  ವೆಚ್ಚ ಮಾಡಲಾಗಿದೆ. ರಾಜ್ಯದ ಒಟ್ಟು ಸಾಲದಲ್ಲಿ  ಗೃಹಜ್ಯೋತಿ ವೆಚ್ಚದ ಪಾಲು ಶೇಕಡಾ 1.55ರಷ್ಟಿದೆ.

 

ಮುಂಬರುವ ದಿನಗಳಲ್ಲಿ ಸರ್ಕಾರವು ಎಸ್ಕಾಂಗಳಿಗೆ ಮುಂಗಡ ಅನುದಾನ ಬಿಡುಗಡೆ ಮಾಡದೇ ಹೋದ ಪಕ್ಷದಲ್ಲಿ ಎಸ್ಕಾಂಗಳು ಹಣಕಾಸು ಮುಗ್ಗಟ್ಟಿಗೆ ಸಿಲುಕುತ್ತವೆ. ಈ ಯೋಜನೆಯು ಸರ್ಕಾರದ ವೆಚ್ಚವನ್ನು ಹೆಚ್ಚಿಸಿ ರಾಜ್ಯ ಬಜೆಟ್ ಮೇಲೆ ಹಣಕಾಸು ಒತ್ತಡ ಉಂಟು ಮಾಡುತ್ತಿದೆ.

 

ಗೃಹಜ್ಯೋತಿ ಯೋಜನೆಯ ವಿತ್ತೀಯ ಪರಿಣಾಮಗಳು ಕುರಿತು ರಾಜ್ಯ ಸರ್ಕಾರದ ವಿತ್ತೀಯ ಕಾರ್ಯನೀತಿ ಸಂಸ್ಥೆಯು  ನಡೆಸಿದ ‘ ಸಂಶೋಧನಾ ವರದಿಯು ಗೃಹ ಜ್ಯೋತಿ ಆರ್ಥಿಕ ಪರಿಣಾಮಗಳ ಕುರಿತು ವಿಶ್ಲೇಷಿಸಿದೆ.

 

ಈ  ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.

 

 

ಇದೇ ವೇಳೆ, ಯೋಜನೆಗಾಗಿ ಭರಿಸಲಾಗುತ್ತಿರುವ ಒಟ್ಟು ವೆಚ್ಚದಲ್ಲಿ ಶೇಕಡಾ 3.2ರಷ್ಟು (ರೂ 325.96 ಕೋಟಿ) ಜಿ.ಎಸ್.ಟಿ. ರೂಪದಲ್ಲಿ ಬೊಕ್ಕಸವನ್ನು ಮರಳಿ ಸೇರುತ್ತಿದೆ ಎಂಬ ಅಂಶಗಳು ಅಧ್ಯಯನದಿಂದ ತಿಳಿದುಬಂದಿವೆ.

 

ರಾಜ್ಯದ ಒಟ್ಟಾರೆ ರಾಜಸ್ವ ಕೊರತೆಯು 2023-24ನೇ ಸಾಲಿನಲ್ಲಿ ರೂ 13,951 ಕೋಟಿಗಳಾಗಿದ್ದು, ಇದರಲ್ಲಿ ಗೃಹಜ್ಯೋತಿಯ ಪಾಲು ಅತ್ಯಧಿಕವಾಗಿದೆ ಎಂದು ವರದಿ ಹೇಳಿದೆ.

 

ರಾಜ್ಯ ಸರ್ಕಾರದ ಮೇಲೆ ಗೃಹಜ್ಯೋತಿ ಯೋಜನೆಯ ನೇರ ಹಾಗೂ ಪರೋಕ್ಷ ಪರಿಣಾಮಗಳೇನು,  ಎಸ್ಕಾಂಗಳ ಹಣಕಾಸು ನಿರ್ವಹಣೆ ಮೇಲೆ ಗೃಹಜ್ಯೋತಿ ಯೋಜನೆಯ ಪರಿಣಾಮವೇನು, ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮಾನದಂಡಗಳನ್ನು ಯಾವ ರೀತಿಯಲ್ಲಿ ಮರುನಿಗದಿಗೊಳಿಸಬಹುದೇ,  ಹೀಗೆ, ಮಾನದಂಡಗಳನ್ನು ಮರುನಿಗದಿಗೊಳಿಸುವುದರಿಂದ ಉಂಟಾಗುವ ಹಣಕಾಸು ಪರಿಣಾಮಗಳೇನು ಎಂಬ  ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ವಿತ್ತೀಯ ಸಂಸ್ಥೆಯು ಈ ಅಧ್ಯಯನ ನಡೆಸಿದೆ.

 

ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ 2024-25ರಲ್ಲಿ ನಿಗದಿಗೊಳಿಸಿದ ಅನುದಾನ ಮೊತ್ತ ರೂ 52,009 ಕೋಟಿ ಆಗಿದ್ದು, ಇದು ಒಟ್ಟು ರಾಜಸ್ವ ವೆಚ್ಚದ ಶೇಕಡಾ 18ರಷ್ಟಿದೆ. ಈ ಪೈಕಿ, ಗೃಹಜ್ಯೋತಿಗಾಗಿ ಗಣನೀಯ ಮೊತ್ತವನ್ನು, ಅಂದರೆ, ರಾಜಸ್ವ ವೆಚ್ಚದ ಶೇಕಡಾ 3.10ರಷ್ಟನ್ನು ವೆಚ್ಚ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

 

ಶೇ 1.55ರಷ್ಟು ಋಣಭಾರ

 

ಇನ್ನು ಸಾಲದ ವಿಷಯಕ್ಕೆ ಬಂದರೆ, ಹಣಕಾಸು ವರ್ಷ 2023-24ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ ರೂ 5,81,228 ಕೋಟಿ ಇದ್ದು, ಇದರಲ್ಲಿ ಗೃಹಜ್ಯೋತಿ ವೆಚ್ಚದ ಪಾಲು ಶೇಕಡಾ 1.55ರಷ್ಟಾಗುತ್ತದೆ. ಹಾಗೆಯೇ, ಇದು ರಾಜ್ಯದ ಒಟ್ಟು ವಿತ್ತೀಯ ಕೊರತೆಯಾದ ರೂ 68,505 ಕೋಟಿಯಲ್ಲಿ ಶೇಕಡಾ 12.64ರಷ್ಟಾಗುತ್ತದೆ ಎಂಬುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

 

ಯೋಜನೆಯ ಪ್ರಯೋಜನ ಪಡೆಯಲು 2024ರ ಜೂನ್ ವೇಳೆಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಂಡ ಕುಟುಂಬಗಳ ಸಂಖ್ಯೆ 1.67 ಕೋಟಿ ಇದ್ದು, ಇದರಲ್ಲಿ 1.6 ಕೋಟಿ ಕುಟುಂಬಗಳು ಪಡೆದಿವೆ. 2024ರ ಆಗಸ್ಟ್ 31ರ ಅಂಕಿಅಂಶದ ಪ್ರಕಾರ ಬೆಂಗಳೂರು ನಗರ ವಿಭಾಗವು ಅತ್ಯಧಿಕ ಸಂಖ್ಯೆಯ ನೋಂದಾಯಿತ ಫಲಾನುಭವಿಗಳನ್ನು ಹೊಂದಿತ್ತು.

 

ನಂತರದ ಸ್ಥಾನಗಳಲ್ಲಿ ಬೆಳಗಾವಿ, ಮೈಸೂರು, ತುಮಕೂರು, ದಕ್ಷಿಣ ಕನ್ನಡ ವಿಭಾಗಗಳಿದ್ದವು. ಹುಕ್ಕೇರಿಯು ರಾಜ್ಯದಲ್ಲೇ ಅತ್ಯಂತ ಕಡಿಮೆ ಸಂಖ್ಯೆಯ ಫಲಾನುಭವಿಗಳಿರುವ ವಿಭಾಗವಾಗಿತ್ತು.

 

 

ಕೊಡಗು, ಯಾದಗಿರಿ, ಗದಗ, ಬಳ್ಳಾರಿ ಕಡಿಮೆ ಫಲಾನುಭವಿಗಳ ಪಟ್ಟಿಯಲ್ಲಿನಂತರದ ಸ್ಥಾನಗಳಲ್ಲಿವೆ. ಒಟ್ಟಾರೆ, ನೋಂದಾಯಿತ ಫಲಾನುಭವಿಗಳು ಹಾಗೂ ನೈಜ ಫಲಾನುಭವಿಗಳ ಅನುಪಾತವು 0.99ರಷ್ಟಿರುವುದು ನೋಂದಾಯಿತ ಬಹುತೇಕ ಕುಟುಂಬಗಳು ಫಲಾನುಭವಿಗಳಾಗಿರುವುದನ್ನು ಸೂಚಿಸುತ್ತದೆ ಎಂಬ ಅಂಶವನ್ನು ವರದಿ ಒಳಗೊಂಡಿದೆ.

 

 

 

ರಾಜ್ಯದ ಗರಿಷ್ಠ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 2023ರ ಮಾರ್ಚ್ 31ರ ಪ್ರಕಾರ 31,991.37 ಮೆಗಾವಾಟ್ ಗಳಾಗಿದೆ. ಇದರಲ್ಲಿ ಶೇಕಡಾ 30.84ರಷ್ಟು ಜಲ ಹಾಗೂ ಉಷ್ಣು ವಿದ್ಯುತ್ ಸ್ಥಾವರಗಳ ಪಾಲಾಗಿದ್ದು, ಶೇಕಡಾ 53.63ರಷ್ಟು ನವೀಕರಣ ಮೂಲಗಳಿಂದ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರ್ಕಾರದ ಉತ್ಪಾದನಾ ಕೇಂದ್ರಗಳಿಂದ ರಾಜ್ಯಕ್ಕೆ ಶೇಕಡಾ 14.90ಷ್ಟು ಪಾಲು ಬರುತ್ತಿದ್ದು, ಉಳಿದದ್ದು ಸ್ವತಂತ್ರ ವಿದ್ಯುತ್ ಉತ್ಪಾದಕರು ಹಾಗೂ ಕೋ-ಜನರೇಷನ್ ನಿಂದ ಪೂರೈಕೆಯಾಗುತ್ತಿದೆ. ಒಟ್ಟಾರೆ ಬೇಡಿಕೆಯಲ್ಲಿ, ಕೃಷಿ ವಲಯದ ಬಳಕೆ ಪ್ರಮಾಣ ಶೇಕಡಾ 36.14ರಷ್ಟಿದ್ದರೆ (ಹಣಕಾಸು ವರ್ಷ 2022ರ ಅಂಕಿಅಂಶದ ಪ್ರಕಾರ) ಗೃಹ ಬಳಕೆಯು ಶೇಕಡಾ 27.54ರಷ್ಟಿದೆ ಎಂದು ತಜ್ಞರು ವಿವರಿಸಿದ್ದಾರೆ.

 

ಉಳಿತಾಯ ಹೆಚ್ಚಳ

 

ಗೃಹಜ್ಯೋತಿ ಯೋಜನೆಯಿಂದಾಗಿ ಶೇಕಡಾ 65ರಷ್ಟು ಫಲಾನುಭವಿ ಕುಟುಂಬಗಳಲ್ಲಿ ತಿಂಗಳಿಗೆ ರೂ 200ರಿಂದ ರೂ 500ರವರೆಗೆ ಉಳಿತಾಯ ಸಾಧ್ಯವಾಗುತ್ತಿದೆ. ಶೇಕಡಾ 20ರಷ್ಟು ಕುಟುಂಬಗಳು ರೂ 500ರಿಂದ ರೂ 1000ದವರೆಗೆ ಉಳಿತಾಯ ಮಾಡುತ್ತಿದ್ದರೆ, ರೂ 1,000ರಿಂದ ರೂ 1,500ದವರೆಗಿನ ಫಲಾನುಭವಿ ಕುಟುಂಬಗಳ ಸಂಖ್ಯೆ ಶೇಕಡಾ 5ರಷ್ಟಿದೆ ಎಂಬುದು ಕಂಡುಬಂದಿದೆ.

 

ರಾಜ್ಯದಲ್ಲಿ ಪ್ರತಿಕುಟುಂಬದ ಪ್ರತಿದಿನದ ವಿದ್ಯುತ್ ಬಳಕೆಯು ನಗರ ಪ್ರದೇಶಗಳಲ್ಲಿ 4.35 ಕಿಲೊವಾಟ್ ಅವರ್ (4.35 ಕೆಡಬ್ಲ್ಯುಹೆಚ್) ಆಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 1.77 ಕೆಡಬ್ಲ್ಯುಹೆಚ್ ಆಗಿದೆ. ಆಗಸ್ಟ್ 2023ರಿಂದ ಮಾರ್ಚ್ 2024ರ ಅವಧಿಯಲ್ಲಿ ಗೃಹಜ್ಯೋತಿಯಿಂದಾಗಿ ನಗರ ಪ್ರದೇಶ ವ್ಯಾಪ್ತಿಯಲ್ಲಿ 181.29 ಕೋಟಿ ಜಿಎಸ್ ಟಿ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಇದು ರೂ 144.67 ಕೋಟಿ ಸಂಗ್ರಹವಾಗಿದೆ . ಹೀಗಾಗಿ, ಒಟ್ಟಾರೆ ರಾಜ್ಯದಲ್ಲಿ ಈ ಅವಧಿಯಲ್ಲಿ ಆದ ಜಿಎಸ್ ಟಿ ಸಂಗ್ರಹ ಪ್ರಮಾಣ ರೂ 325.96 ಕೋಟಿ ಎಂದು ಅಂದಾಜಿಸಲಾಗಿದೆ. ಇದು ತಿಂಗಳಿಗೆ ಸರಾಸರಿ ರೂ 40.75 ಕೋಟಿ ಆಗಿದ್ದು, ರಾಜ್ಯದ ಒಟ್ಟಾರೆ ಜಿ.ಎಸ್.ಟಿ,ಯಲ್ಲಿ ಶೇಕಡಾ 5.38ರಷ್ಟು ಎಂದು ಹೇಳಲಾಗಿದೆ.

 

ಪರಿಷ್ಕೃತ ಮಾನದಂಡಗಳು

 

ಯೋಜನೆಯ ಪ್ರಯೋಜನ ಪಡೆಯಲು ಪ್ರಸ್ತುತ ಕುಟುಂಬವೊಂದಕ್ಕೆ ತಿಂಗಳಿಗೆ ಗರಿಷ್ಠ 200 ಯುನಿಟ್ ಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ರಾಜ್ಯದಲ್ಲಿ ಕುಟುಂಬದ ತಲಾ ವಿದ್ಯುತ್ ಬಳಕೆಯ ಸರಾಸರಿ 53 ಯುನಿಟ್ ಆಗಿದೆ. ಆದರೆ, ಸರ್ಕಾರವು ಯೋಜನೆಗೆ ನಿಗದಿಗೊಳಿಸಿರುವ ಗರಿಷ್ಠ ಮಿತಿಯು ಸರಾಸರಿಗಿಂತ ಮೂರು ಪಟ್ಟಿಗೂ ಜಾಸ್ತಿ ಇದೆ. ಹೀಗಾಗಿ, ಬಹುತೇಕ ಎಲ್ಲ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ.

 

ಅಲ್ಲದೆ, ತಿಂಗಳಿಗೆ 200 ಯುನಿಟ್ ಗಳು ಎಲ್ಲ ಬಗೆಯು ವಿದ್ಯುತ್ ಉಪಕರಣಗಳು, ಐಷಾರಾಮಿ ಸೌಲಭ್ಯಗಳೆನ್ನಬಹುದಾದ ಹವಾ ನಿಯಂತ್ರಕಗಳು, ಗೀಸರ್ ಗಳ ಬಳಕೆಗೂ ಸಾಕಾಗುತ್ತದೆ. ಯೋಜನೆಗೆ ಯಾವುದೇ ಆದಾಯ ಮಿತಿ ನಿಗದಿಯಾಗದೇ ಇರುವುದರಿಂದ ಸಮಾಜದ ಮೇಲ್ವರ್ಗಗಳಿಗೂ ಪ್ರಯೋಜನ ಲಭ್ಯವಾಗುತ್ತಿದೆ ಎಂಬುದನ್ನು ವರದಿಯಲ್ಲಿ ಒತ್ತಿ ಹೇಳಲಾಗಿದೆ.

 

ಒಂದೊಮ್ಮೆ, ಕುಟುಂಬಗಳ ಬಳಕೆ ಪ್ರಮಾಣ ಆಧರಿಸಿ ಪರಿಷ್ಕೃತ ಮಿತಿ ನಿಗದಿಗೊಳಿಸಿದರೆ ಆರ್ಥಿಕವಾಗಿ ಏನು ವ್ಯತ್ಯಾಸವಾಗುತ್ತದೆ ಎಂಬುದನ್ನು ಅಂದಾಜಿಸಲು ಗೃಹಜ್ಯೋತಿ ಜಾರಿಗೆ ಮುಂಚಿನ ಹಾಗೂ ನಂತರದ ಮಾಸಿಕ ವಿದ್ಯುತ್ ಬಳಕೆಗೆ ಸಂಬಂಧಿಸಿದ ದತ್ತಾಂಶಗಳು ಅಗತ್ಯವಿರುತ್ತವೆ. ಆದರೆ, ಸದ್ಯ ಅಂತಹ ದತ್ತಾಂಶವು ಇಂಧನ ಇಲಾಖೆಯಲ್ಲಾಗಲೀ ಅಥವಾ ಸಾರ್ವಜನಿಕ ವಲಯದಲ್ಲಾಗಲೀ ಲಭ್ಯವಿಲ್ಲ. ಹೀಗಾಗಿ, ಸಿಮ್ಯುಲೇಷನ್ ವಿಧಾನದ ಮೂಲಕ ಬಳಕೆ ಮಿತಿಯನ್ನು ತಿಂಗಳಿಗೆ 150 ಯುನಿಟ್ ಗಳಿಗೆ ಕಡಿಮೆಗೊಳಿಸಿದರೆ ಆದಾಯ ಹಾಗೂ ವೆಚ್ಚದ ಮೇಲೆ ಆಗುವ ಪರಿಣಾಮವನ್ನು ವಿಶ್ಲೇಷಿಸಲಾಗಿದೆ.

 

ಸಂಶೋಧನಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ, ಹೀಗೆ ಮಾಡಿದಾಗ, ಈಗಿರುವ ಫಲಾನುಭವಿ ಕುಟುಂಬಗಳಲ್ಲಿ ಶೇಕಡಾ 5ರಷ್ಟು ಯೋಜನೆ ವ್ಯಾಪ್ತಿಯಿಂದ ಹೊರಗುಳಿಯುತ್ತವೆ; ಅದಕ್ಕನುಗುಣವಾಗಿ, ಸರ್ಕಾರವು ನಿಗದಿಗೊಳಿಸಬೇಕಾದ ಅನುದಾನವು ರೂ 8,550 ಕೋಟಿ ಆಗುತ್ತದೆ. ಅಂತಿಮವಾಗಿ, ಇದು ವಿತ್ತೀಯ ಕೊರತೆಯು ಶೇಕಡಾ 12.12ರಷ್ಟು ಹಾಗೂ ರಾಜಸ್ವ ಕೊರತೆಯು ಶೇಕಡಾ 61.29ಕ್ಕೆ ಇಳಿಯುತ್ತದೆ ಎನ್ನಲಾಗಿದೆ.

 

ಒಂದೆಡೆ, ಗೃಹಜ್ಯೋತಿ ಯೋಜನೆಯು ಸರ್ಕಾರದ ವೆಚ್ಚದಲ್ಲಿ ಏರಿಕೆಗೆ ಕಾರಣವಾಗಿದೆ. ಆದರೆ, ಮತ್ತೊಂದೆಡೆ, ಜನರು ತಮ್ಮ ಕೈಯಲ್ಲಿ ಹೆಚ್ಚುವರಿಯಾಗಿ ಉಳಿಯುತ್ತಿರುವ ಹಣವನ್ನು ವಸ್ತುಗಳ ಖರೀದಿ ಹಾಗೂ ಆಹಾರೋತ್ಪನ್ನಗಳು ಇತ್ಯಾದಿಗೆ ಬಳಸುತ್ತಿರುವುದರಿಂದ ಜಿ.ಎಸ್.ಟಿ. ಸಂಗ್ರಹವೂ ಹೆಚ್ಚಾಗಿದೆ.

 

ದೀರ್ಘಾವಧಿಯಲ್ಲಿ, ಇದು ಕುಟುಂಬಗಳ ಉಳಿತಾಯ ಹಾಗೂ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸಿ ಒಟ್ಟಾರೆ ಬದುಕಿನ ಗುಣಮಟ್ಟ ಸುಧಾರಿಸಿ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಬಜೆಟ್ ಮೇಲೆ ಆಗುವ ಹಣಕಾಸು ಹೊರೆಗೆ ಹೋಲಿಸಿದರೆ ಈ ಯೋಜನೆಯ ಸಮಾಜ ಕಲ್ಯಾಣ ಪರಿಣಾಮಗಳು ಅಧಿಕವೆಂಬಂತೆ ಕಂಡುಬರುತ್ತವೆ.

 

ಯೋಜನೆಯ ಲಾಭ ಪಡೆಯುವ ಸಲುವಾಗಿ ಫಲಾನುಭವಿಗಳು ಅರ್ಹ ಮಿತಿಯೊಳಗೆ ವಿದ್ಯುತ್ ಬಳಸಲು ಕಾಳಜಿ ವಹಿಸುವುದರಿಂದ ಪರೋಕ್ಷವಾಗಿ ವಿದ್ಯುತ್ ಬಳಕೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

 

ಅಧ್ಯಯನದಲ್ಲಿ ಕಂಡುಬಂದ ಅಂಶಗಳು

 

2023ರ ಆಗಸ್ಟ್ ನಿಂದ 2024ರ ಮಾರ್ಚ್ ವರೆಗಿನ ಎಂಟು ತಿಂಗಳ ಅವಧಿಯಲ್ಲಿ ಯೋಜನೆಯು ರೂ 325.96 ಕೋಟಿ ಜಿಎಸ್ ಟಿ ಸಂಗ್ರಹಕ್ಕೆ ಕಾರಣವಾಗಿದ್ದು, ಇದು ಎಸ್.ಜಿ.ಎಸ್.ಟಿ.ದ ಶೇಕಡಾ 5.38ರಷ್ಟಾಗಿದೆ. ಈ ಯೋಜನೆಯು ಕುಟುಂಬಗಳ ವಿದ್ಯುತ್ ಮೇಲಿನ ವೆಚ್ಚವನ್ನು ತಗ್ಗಿಸುವ ಗುರಿ ಹೊಂದಿದ್ದು, ಹೆಚ್ಚಿನ ಜನರಿಗೆ ವಿದ್ಯುತ್ ಸೌಲಭ್ಯವನ್ನು ತಲುಪಿಸುವಲ್ಲಿ ನೆರವಾಗಿದೆ. ಇದೇ ವೇಳೆ, ಇದು ಅನುಕೂಲಗಳ ಜೊತೆಗೆ ಸವಾಲುಗಳನ್ನೂ ಒಳಗೊಂಡಿದೆ.

 

ಸರ್ಕಾರದ ವೆಚ್ಚವನ್ನು ಹೆಚ್ಚಿಸಿ ರಾಜ್ಯ ಬಜೆಟ್ ಮೇಲೆ ಹಣಕಾಸು ಒತ್ತಡ ಉಂಟುಮಾಡಿರುವುದರಿಂದ ಅಭಿವೃದ್ಧಿ ಕಾರ್ಯಗಳು ಹಾಗೂ ಸಾರ್ವಜನಿಕ ಸೇವೆಗಳಿಗೆ ಅನುದಾನದ ಕೊರತೆಗೆ ಎಡೆಮಾಡಿಕೊಡುತ್ತದೆ ಎಂದು ವರದಿಯಲ್ಲಿ ಗಮನ ಸೆಳೆಯಲಾಗಿದೆ.

 

ಆದರೆ, ಇದು, ದೀರ್ಘಾವಧಿಯಲ್ಲಿ ಕುಟುಂಬಗಳ ಉಳಿತಾಯವನ್ನು ಹೆಚ್ಚಿಸಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸಿ ಒಟ್ಟಾರೆ ಬದುಕಿನ ಗುಣಮಟ್ಟವನ್ನು ಸುಧಾರಿಸಲು ಒತ್ತಾಸೆಯಾಗುತ್ತದೆ. ಸಾಮಾಜಿಕ ಸಮಾನತೆಗೆ ಪೂರಕವಾಗಿ ಬಡತನ ತಗ್ಗಿಸಲು ಸಹಕಾರಿಯಾಗುತ್ತದೆ. ಆದರೆ, ದೀರ್ಘಾವಧಿಯಲ್ಲಿ ಯೋಜನೆಯ ಸುಸ್ಥಿರತೆಯು ಎಚ್ಚರಿಕೆಯಿಂದ ಕೂಡಿದ ವಿತ್ತೀಯ ನಿರ್ವಹಣೆಯನ್ನು ಅವಲಂಬಿಸಿದೆ ಎಂದು ವಿಶ್ಲೇಷಿಸಿದೆ.

 

ಆರ್ಥಿಕ ಆಯಾಮದ ದೃಷ್ಟಿಯಿಂದ ಪ್ರತ್ಯೇಕವಾಗಿ ಪರಿಗಣಿಸಿದರೆ ಯೋಜನೆಯು ರಾಜ್ಯ ಬಜೆಟ್ ಗೆ ಹೊರೆ ಎನ್ನಿಸುತ್ತದೆ. ಆದರೆ, ಇದರ ಸಮಾಜ ಕಲ್ಯಾಣ ಪ್ರಯೋಜನಗಳು ಹಣಕಾಸು ಒತ್ತಡವನ್ನು ಹಿಮ್ಮೆಟ್ಟಿಸುವಂತಿವೆ. ಏನೇ ಇದ್ದರೂ, ವಿತ್ತೀಯ ಸ್ಥಿರತೆ ಕಾಯ್ದುಕೊಳ್ಳುವ ದಿಸೆಯಲ್ಲಿ ನೀತಿ ನಿರೂಪಕರು ಆದಾಯ ಹೆಚ್ಚಿಸುವ ಕ್ರಮಗಳ ಬಗ್ಗೆ ಸಮಾಲೋಚಿಸಬೇಕು; ಯೋಜನೆಯ ಫಲಶ್ರುತಿಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿರಬೇಕು ಎಂದು ವರದಿ ಉಲ್ಲೇಖಿಸಿದೆ.

 

ಎಸ್ಕಾಂಗಳ ಆರ್ಥಿಕ ಸ್ವಾಸ್ಥ್ಯ

 

ಬೆಸ್ಕಾಂ ಅನ್ನು ಆಯ್ದುಕೊಂಡು ಎಸ್ಕಾಂಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಯೋಜನೆ ಬೀರುವ ಪರಿಣಾಮವನ್ನು ವಿಶ್ಲೇಷಿಸಲಾಗಿದೆ. ಪ್ರಸ್ತುತ, ಸರ್ಕಾರವು ಯೋಜನೆಗೆ ತಗುಲುವ ವೆಚ್ಚವನ್ನು ಸರ್ಕಾರವು ಅನುದಾನದ ರೂಪದಲ್ಲಿ ಮುಂಗಡವಾಗಿಯೇ ಎಸ್ಕಾಂಗಳಿಗೆ ನೀಡುತ್ತಿದೆ. ಹೀಗಾಗಿ, ಯೋಜನೆಯು ಅವುಗಳ ಆರ್ಥಿಕ ಸ್ವಾಸ್ಥ್ಯದ ಮೇಲೆ ಯಾವ ದುಷ್ಪರಿಣಾಮವನ್ನೂ ಬೀರಿಲ್ಲ. ಒಂದೊಮ್ಮೆ, ಮುಂಬರುವ ದಿನಗಳಲ್ಲಿ ಸರ್ಕಾರವು ಮುಂಗಡ ಅನುದಾನ ಬಿಡುಗಡೆ ಮಾಡದೇ ಹೋದ ಪಕ್ಷದಲ್ಲಿ ಎಸ್ಕಾಂಗಳು ಹಣಕಾಸು ಮುಗ್ಗಟ್ಟಿಗೆ ಸಿಲುಕುತ್ತವೆ ಎಂದು ವರದಿ ಎಚ್ಚರಿಸಿದೆ.

 

Your generous support will help us remain independent and work without fear.

Latest News

Related Posts