ಬೆಂಗಳೂರು; ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷದಿಂದ ಏರಿಕೆಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸಿದ್ದ ಸಮೀಕ್ಷೆ ಮತ್ತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನಡೆಸಿದ್ದ ಮೌಲ್ಯಮಾಪನ, ಎನ್‌ಸಿಆರ್‍ಬಿ ದತ್ತಾಂಶದ ಪ್ರಕಾರ 2017ರಿಂದಲೇ ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ಅಪರಾಧದ ಪ್ರಮಾಣವೂ ಹೆಚ್ಚಳವಾಗಿದೆ.
ಕರ್ನಾಟಕ ಪೊಲೀಸ್ ಇಲಾಖೆಯು ಬಿಡುಗಡೆ ಮಾಡುವ ಮಾಸಿಕ ಅಪರಾಧ ಸಮೀಕ್ಷೆ ಪ್ರಕಾರ 2025ರ ಸೆಪ್ಟಂಬರ್ ಅಂತ್ಯಕ್ಕೆ ರಾಜ್ಯದಾದ್ಯಂತ ಒಟ್ಟಾರೆ 700 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಅಲ್ಲದೇ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲೂ ಏರಿಕೆ ಕಾಣುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು 2025ರ ಜುಲೈನಲ್ಲಿ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ.
ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಕುರಿತು ಪ್ರತಿಪಕ್ಷ ಬಿಜೆಪಿಯು, ಸರ್ಕಾರದ ಮೇಲೆ ಮುಗಿಬಿದ್ದಿದೆ. ಈ ಹೊತ್ತಿನಲ್ಲೇ ಎನ್‌ಸಿಆರ್‍ಬಿ, ಕರ್ನಾಟಕ ಪೊಲೀಸ್ ಇಲಾಖೆಯ ಮಾಸಿಕ ಅಪರಾಧ ಸಮೀಕ್ಷೆ ಮತ್ತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವರದಿಯಲ್ಲಿನ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ಈ ಮೂರೂ ವರದಿಗಳ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿವೆ.
ಸಾಂಸ್ಥಿಕ ವ್ಯವಸ್ಥೆಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರ ಪುನರ್ವಸತಿ ಮತ್ತು ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ನಿವಾರಿಸುವಲ್ಲಿ ಅದರ ಪ್ರಭಾವ ಮತ್ತು ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅನುಷ್ಠಾನದ ಮೌಲ್ಯಮಾಪನ ಮಾಡಿರುವ ಪ್ರಾಧಿಕಾರವು ಸರ್ಕಾರಕ್ಕೆ 2025ರ ಜುಲೈನಲ್ಲಿ ವರದಿ ಸಲ್ಲಿಸಿದೆ.

ಮಹಿಳೆಯರಿಗೆ ಕರ್ನಾಟಕ ಅಸುರಕ್ಷಿತವೇ?
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು 2025ರ ಜುಲೈನಲ್ಲಿ ಸಲ್ಲಿಸಿರುವ ವರದಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಡೆಸಿದ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ಸಂಶೋಧನೆಗಳನ್ನು ಉಲ್ಲೇಖಿಸಿದೆ. ಇದರ ಪ್ರಕಾರ ಭಾರತದ ಪ್ರಗತಿಶೀಲ ರಾಜ್ಯಗಳಲ್ಲಿ ಒಂದಾದ ಕರ್ನಾಟಕವು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಸ್ಥಳವಾಗಿದೆ ಎಂದು ಹೇಳಿದೆ.

ಎನ್‌ಸಿಆರ್‍ಬಿ ದತ್ತಾಂಶದ ಪ್ರಕಾರ 2017ರಿಂದ ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧದಲ್ಲಿ ಶೇ. 9.3ರಷ್ಟು ಹೆಚ್ಚಳವಾಗಿದೆ. ಕರ್ನಾಟಕದಲ್ಲಿ 2019-21ರಲ್ಲಿ ನಡೆದ ಸಮೀಕ್ಷೆಯಲ್ಲಿ ಭಾಗವಹಿಸಿದ ವಿವಾಹಿತ ಮಹಿಳೆಯಲ್ಲಿ ಶೇ. 44.4ರಷ್ಟು ಮಂದಿ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದು 2015ರಲ್ಲಿನ ಅಂಕಿ ಅಂಶಗಳಿಗೆ ಹೋಲಿಸಿದರೇ ಶೇ. 24ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿರುವುದು ವರದಿಯಿಂದ ಗೊತ್ತಾಗಿದೆ.

700 ಅತ್ಯಾಚಾರ ಪ್ರಕರಣಗಳ ವರದಿ
ಕರ್ನಾಟಕ ಪೊಲೀಸ್ ಇಲಾಖೆಯು ಬಿಡುಗಡೆ ಮಾಡುವ ಮಾಸಿಕ ಅಪರಾಧ ಸಮೀಕ್ಷೆ ವರದಿ ಪ್ರಕಾರ ರಾಜ್ಯದಲ್ಲಿ ಸೆಪ್ಟಂಬರ್ 2025ರ ಅಂತ್ಯಕ್ಕೆ 700 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

2025ರ ಜನವರಿಯಲ್ಲಿ 65 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ವರದಕ್ಷಿಣೆ ಕಿರುಕುಳಕ್ಕೆ 11 ಮಂದಿ ಸಾವನ್ನಪ್ಪಿದ್ದರು. 2024ರ ಜನವರಿಯಲ್ಲಿ 53 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೇ, 5 ಮಂದಿ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದರು.

2024ರ ಡಿಸೆಂಬರ್‍ನಲ್ಲಿ 58 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ಅಲ್ಲದೇ ಜನವರಿ 2025ರಲ್ಲಿ 304 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದವು. ಜನವರಿ 2024ರಲ್ಲಿ 348, 2024ರ ಡಿಸೆಂಬರ್‍ನಲ್ಲಿ 319 ಪ್ರಕರಣಗಳು ವರದಿಯಾಗಿದ್ದವು.

2025ರ ಫೆಬ್ರುವರಿಯಲ್ಲಿ 77 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಫೆಬ್ರುವರಿ 2024ರಲ್ಲಿ 58 ಪ್ರಕರಣಗಳು ವರದಿಯಾಗಿದ್ದವು.

2025ರ ಮಾರ್ಚ್‌ನಲ್ಲಿ 96 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

2024ರ ಮಾರ್ಚ್‌ನಲ್ಲಿ 63 ಪ್ರಕರಣಗಳು ವರದಿಯಾಗಿದ್ದವು.
ಏಪ್ರಿಲ್ 2025ರಲ್ಲಿ 79 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಏಪ್ರಿಲ್ 2024ರಲ್ಲಿ 57 ಪ್ರಕರಣಗಳು ವರದಿಯಾಗಿದ್ದವು.

ಮೇ 2025ರಲ್ಲಿ 92 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.


2025ರ ಜೂನ್‌ನಲ್ಲಿ 78 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಜೂನ್ 2024ರಲ್ಲಿ 63 ಪ್ರಕರಣಗಳು ವರದಿಯಾಗಿದ್ದವು.

ಜುಲೈ 2025ರಲ್ಲಿ 69 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಜುಲೈ 2024ರಲ್ಲಿ 67 ಪ್ರಕರಣಗಳು ವರದಿಯಾಗಿದ್ದವು.

ಆಗಸ್ಟ್ 2025ರಲ್ಲಿ 82 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.


ಸೆಪ್ಟಂಬರ್ 2025ರಲ್ಲಿ 70 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

2024ರ ಸೆಪ್ಟಂಬರ್‍ನಲ್ಲಿ 58 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ವರದಕ್ಷಿಣೆ ಕಿರುಕುಳಕ್ಕೆ 15 ಮಂದಿ ಸಾವನ್ನಪ್ಪಿದ್ದರು.

ಗ್ಯಾಂಗ್ ರೇಪ್‌ಗೆ 9 ಮಂದಿ ಒಳಗಾಗಿದ್ದರೇ, ಪೋಷಕರಿಂದ ಇಬ್ಬರು, ಆಸ್ಪತ್ರೆ ನೌಕರರಿಂದ ನಾಲ್ವರು, ಪತಿಯಿಂದ ಬೇರ್ಪಟ್ಟವರ ಪೈಕಿ ನಾಲ್ವರು, ನೆರೆಹೊರೆಯವರಿಂದ ಮೂವತ್ತು, ಸಂಬಂಧಿಕರಿಂದ 25, ಗೊತ್ತಿರುವ ವ್ಯಕ್ತಿಗಳಿಂದ 259, ಇನ್ನಿತರೆ ಕಾರಣಗಳಿಗಾಗಿ 343 ಮಂದಿ ಸೇರಿ 700 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ.

ಈ ಪೈಕಿ 122 ಮಂದಿ ದಲಿತ ಮಹಿಳೆಯರಿದ್ದಾರೆ. 2024ರಲ್ಲಿ ಕೇವಲ 58 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದರು.
2024ರ ಸೆಪ್ಟಂಬರ್‍ನಲ್ಲಿ 339 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದರೇ, 2025ರ ಆಗಸ್ಟ್‌ನಲ್ಲಿ 379, 2025ರ ಸೆಪ್ಟಂಬರ್‍ನಲ್ಲಿ 338 ಪೋಕ್ಸೋ ಪ್ರಕರಣಗಳು ವರದಿಯಾಗಿವೆ.
2020ರಲ್ಲಿ 1,137, 2021ರಲ್ಲಿ 1,630, 2022ರಲ್ಲಿ 1,829, 2023ರಲ್ಲಿ 2,131, 2024ರಲ್ಲಿ 2,446, ಹೆಣ್ಣು ಮಕ್ಕಳು ಅಪಹರಣವಾಗಿದ್ದರು. 2025ರಲ್ಲಿ ಈ ಸಂಖ್ಯೆಯು 1,619ರಷ್ಟಿದೆ. ಈ ಪೈಕಿ 2020ರಲ್ಲಿ 1,104, 2021ರಲ್ಲಿ 1,591, 2022ರಲ್ಲಿ 1,785, 2023ರಲ್ಲಿ 2,083, 2024ರಲ್ಲಿ 2,293, 2025ರಲ್ಲಿ 933 ಹೆಣ್ಣು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ.

ಆದರೆ ಕರ್ನಾಟಕ ಪೊಲೀಸ್ ಇಲಾಖೆಯು ನಡೆಸುವ ಅಪರಾಧ ಸಮೀಕ್ಷೆಯ 2025ರ ಸೆಪ್ಟಂಬರ್‍ನಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ 2,028 ಹೆಣ್ಣು ಮಕ್ಕಳು ನಾಪತ್ತೆಯಾಗಿರುವುದು ಗೊತ್ತಾಗಿದೆ.
2023ರಲ್ಲಿ ರಾಜ್ಯದಲ್ಲಿ ಒಟ್ಟು 2,14,234 ಪ್ರಮುಖ ಅಪರಾಧಗಳು ವರದಿಯಾಗಿದ್ದವು. ಅದರಲ್ಲಿ 1,48,648 ಭಾರತೀಯ ದಂಡ ಸಂಹಿತೆ (ಐಪಿಸಿ) ಅಪರಾಧ ಪ್ರಕರಣಗಳು ಹಾಗೂ 65,586 ವಿಶೇಷ ಮತ್ತು ಸ್ಥಳೀಯ ಕಾನೂನುಗಳ (ಎಸ್‌ಎಲ್‌ಎಲ್) ಅಡಿ ದಾಖಲಾದ ಪ್ರಕರಣಗಳು ಸೇರಿದ್ದವು. ಈ ಮೂಲಕ ರಾಜ್ಯದಲ್ಲಿ 2019ರಲ್ಲಿ 1,63,691 ಇದ್ದ ಕೇಸ್ಗಳು 2023ರಲ್ಲಿ 2,14, 234ಕ್ಕೆ ಏರಿಕೆಯಾಗಿದ್ದವು.

ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣದಲ್ಲೂ 2021ಕ್ಕೆ ಹೋಲಿಸಿದರೆ, 2023ರಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು. 5,868 ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿಂದಿನ ಮೂರು ವರ್ಷಗಳಲ್ಲಿ ಶೇ. 40.6 ರಷ್ಟು ಹೆಚ್ಚಳವಾಗಿದ್ದವು. 2022ರಲ್ಲಿ ತೀವ್ರ ಏರಿಕೆಯಾಗಿದ್ದವು. ಬಳಿಕ 2023ರಲ್ಲಿಯೂ ಅದು ಮುಂದುವರೆದಿತ್ತು.

ಎನ್‌ಸಿಆರ್‍ಬಿ ಮಾಹಿತಿ ಪ್ರಕಾರ, 2023ರಲ್ಲಿ ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ತೀವ್ರ ಏರಿಕೆ ದಾಖಲಾಗಿದೆ. ಮಹಿಳೆಯರ ಅಪಹರಣವು ಅತಿ ಹೆಚ್ಚು ಏರಿಕೆ ಕಂಡಿತ್ತು. ಕೇವಲ ಎರಡು ವರ್ಷಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದ್ದವು.

ಪತಿ ಅಥವಾ ಸಂಬಂಧಿಕರಿಂದ ಆತ್ಮಹತ್ಯೆ ಮತ್ತು ಕ್ರೌರ್ಯಕ್ಕೆ ಪ್ರಚೋದನೆಯೂ ತೀವ್ರವಾಗಿ ಏರಿದ್ದವು. ಇದು ಆಳವಾಗಿ ಬೇರೂರಿರುವ ಕೌಟುಂಬಿಕ ಸಮಸ್ಯೆಗಳಿಗೆ ಸಾಕ್ಷಿಯಾಗಿತ್ತು. ಅತ್ಯಾಚಾರ ಪ್ರಕರಣಗಳು ಸ್ಥಿರವಾಗಿ ಹೆಚ್ಚಾಗಿದ್ದವು. ಆದರೆ ವರದಕ್ಷಿಣೆ ಸಾವುಗಳು ಮತ್ತು ಅತ್ಯಾಚಾರ/ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿರುವ ಕೇಸ್ಗಳು ಕಡಿಮೆಯಾಗಿದ್ದವು. ಮಹಿಳೆಯ ನಮ್ರತೆಯನ್ನು ಕೆಣಕುವ ಉದ್ದೇಶದಿಂದ ಹಲ್ಲೆ ಮಾಡಿರುವ ಕೇಸ್ಗಳ ಸಂಖ್ಯೆಯು ತುಲನಾತ್ಮಕವಾಗಿ ಸ್ಥಿರವಾಗಿದ್ದರೂ, ಕಳವಳಕಾರಿಯಾಗಿದ್ದವು.









