ಭೂ ಗುತ್ತಿಗೆ ಒಪ್ಪಂದಕ್ಕೆ ಇಲಾಖೆಗಳ ಅಸಹಕಾರ; ಇ ವಿ ಚಾರ್ಜಿಂಗ್‌ ಸ್ಥಾಪನೆಯಿಂದ ಹಿಂದೆ ಸರಿದ ಏಜೆನ್ಸಿಗಳು

ಬೆಂಗಳೂರು; ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ವಿದ್ಯುತ್‌ ಚಾಲಿನ ವಾಹನಗಳ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪಿಸುವುದನ್ನು ಕೈಬಿಟ್ಟಿರುವುದರ ಹಿಂದೆ ಇತರೆ ಇಲಾಖೆಗಳು ಭೂ ಗುತ್ತಿಗೆ ಒಪ್ಪಂದವನ್ನು ಕಾರ್ಯಗತಗೊಳಿಸಲು ಏಜೆನ್ಸಿಗಳಿಗೆ ವ್ಯಕ್ತಪಡಿಸಿದ್ದ ಅಸಹಕಾರವೇ ಮೂಲ ಕಾರಣ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ವಿದ್ಯುತ್ ಚಾಲಿತ (ಇ.ವಿ) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ ಎಂದು ರಾಜ್ಯ ಸರ್ಕಾರವು ಭರ್ಜರಿ ಪ್ರಚಾರ ಪಡೆದುಕೊಂಡಿತ್ತು. ಅಲ್ಲದೇ ಈಚೆಗಷ್ಟೇ ಪಿಎಂ ಡ್ರೈವ್‌ ಯೋಜನೆಯಡಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 2,500 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯ ಯೋಜನೆಯನ್ನೇ ಕೈ ಬಿಟ್ಟಿರುವುದು ಮುನ್ನೆಲೆಗೆ ಬಂದಿದೆ.

 

2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 2,500 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೀಗ ಈ ಯೋಜನೆ ಅನುಷ್ಠಾನಗೊಳಿಸಲು ಭೂ ಗುತ್ತಿಗೆ ಒಪ್ಪಂದವನ್ನು ಕಾರ್ಯಗತಗೊಳಿಸಲು ವಿವಿಧ ಇಲಾಖೆಗಳ ಅಸಹಕಾರವೂ ಸೇರಿದಂತೆ ಇನ್ನಿತರೆ ಕಾರಣಗಳನ್ನು ಮುಂದೊಡ್ಡಿ ಈ ಯೋಜನೆಯನ್ನು ಕೈ ಬಿಟ್ಟಿದೆ.

 

ವಿದ್ಯುತ್‌ ಚಾಲಿನ ವಾಹನಗಳ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ ಯೋಜನೆಯನ್ನು ಕೈ ಬಿಟ್ಟಿರುವ ಸರ್ಕಾರವು ಈ ಸಂಬಂಧ 2025ರ ಜೂನ್ 13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ವಿದ್ಯುತ್ ಚಾಲಿನ ವಾಹನಗಳಿಗೆ ಉತ್ತೇಜನ ನೀಡಲು 2,500 ಇ ವಿ ಚಾರ್ಜಿಂಗ್‌ ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಅಲ್ಲದೇ ವಿದ್ಯುತ್‌ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ರು ವೆಚ್ಚದಲ್ಲಿ 100 ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು.

 

ಅದರಂತೆ ಈ ಯೋಜನೆಯ ಅನುಷ್ಠಾನದ ನೋಡಲ್‌ ಏಜೆನ್ಸಿಯಾದ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು ಕ್ರಿಯಾ ಯೋಜನೆ ಸಲ್ಲಿಸಿತ್ತು. ಕ್ರಿಯಾ ಯೋಜನೆಯನ್ನು ಪರಿಶೀಲಿಸಿದ್ದ ಇಂಧನ ಇಲಾಖೆಯು ಈ ಸಂಬಂಧ ವಿದ್ಯುತ್‌ ಸರಬರಾಜು ಕಂಪನಿವಾರು ಟೆಂಡರ್‍‌ ಆಹ್ವಾನಿಲು ಸರ್ಕಾರಿ ಆದೇಶ ಹೊರಡಿಸಿತ್ತು.
ಈ ಮಧ್ಯೆ ಬೆಸ್ಕಾಂ ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಸಮಸ್ಯೆಗಳು ಕಂಡು ಬಂದಿವೆ ಎಂದು 2025ರ ಮಾರ್ಚ್‌ 25ರಂದು ಸರ್ಕಾರಕ್ಕೆ ಪತ್ರ ಬರೆದಿತ್ತು.

 

ಬೆಸ್ಕಾಂ ಕಂಡಿರುವ ಸಮಸ್ಯೆಗಳೇನು?

 

2023-24ನೇ ಸಾಲಿನಲ್ಲಿ ಈಗಾಗಲೇ ರಾಜ್ಯದ 9 ಜಿಲ್ಲೆಗಳಲ್ಲಿ ಒಟ್ಟು 585 ಚಾರ್ಜಿಂಗ್‌ ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಕಾರ್ಯಾದೇಶವನ್ನು ನೀಡಲಾಗಿದೆ. 2023ರ ಅಕ್ಟೋಬರ್‍‌ 11ರಂದೇ ಕಾರ್ಯಾದೇಶ ನೀಡಿದ್ದರೂ ಸಹ ಒಂದೇ ಒಂದು ಇ ವಿ ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆಯಾಗಿಲ್ಲ.

 

2024-25ನೇ ಸಾಲಿನಲ್ಲಿ ಇನ್ನುಳಿದ 22 ಜಿಲ್ಲೆಗಳಲ್ಲಿ 605 ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಟೆಂಡೆರ್‍‌ ಕರೆಯಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಿಗೆ ಮಾತ್ರ ಕೇವಲ ಒಬ್ಬರೇ ಬಿಡ್‌ದಾರರು ಭಾಗವಹಿಸಿದ್ದರು. ಉಳಿದ 18 ಜಿಲ್ಲೆಗಳಲ್ಲಿ ಬಿಡ್‌ ಸ್ವೀಕೃತವಾಗಿರಲಿಲ್ಲ.

 

ಅಲ್ಲದೇ ಕಾರ್ಯಾದೇಶ ಪಡೆದ ಏಜೆನ್ಸಿಗಳಿಗೆ ಇತರೆ ಇಲಾಖೆಗಳೂ ಭೂ ಗುತ್ತಿಗೆ ಒಪ್ಪಂದವನ್ನು ಕಾರ್ಯಗತಗೊಳಿಸಲು ಸಹಕರಿಸುತ್ತಿಲ್ಲ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು ಒದಗಿಸಿರುವ ಸ್ಥಳಗಳಲ್ಲಿ ಏಜೆನ್ಸಿ ನಿಯಮಗಳ ಪ್ರಕಾರ ಕಾರ್ಯಸಾಧ್ಯವಾದ ಸ್ಥಳಗಳನ್ನು ಗುರುತಿಸುವುದು ಸಾಧ್ಯವಾಗಿಲ್ಲ. ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಿನ ಬಳಕೆಯಲ್ಲಿ ಇಲ್ಲ. ಹೀಗಾಗಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಏಜೆನ್ಸಿಗಳೀಗೆ ಆರ್ಥಿಕ ಹೊರೆಯಾಗುತ್ತದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರದಲ್ಲಿ ವಿವರಿಸಿದ್ದರು.

 

ಬಸ್ ಹಾಗೂ ಟ್ರಕ್ ಗಳಂತಹ ಭಾರಿ ವಾಹನಗಳ ವಿದ್ಯುದ್ದೀಕರಣದ ಪ್ರಯತ್ನವನ್ನು ರಾಜ್ಯ ಸರ್ಕಾರವು ಚುರುಕುಗೊಳಿಸಿತ್ತು. ಭಾರಿ ವಾಹನಗಳ ಚಾರ್ಜಿಂಗ್ ಉದ್ದೇಶಕ್ಕಾಗಿಯೇ ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಇ.ವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರದ ಪಿಎಂ ಇ-ಡ್ರೈವ್ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಹೇಳಲಾಗಿತ್ತು.

 

 

60 ಕಿಲೊ ವ್ಯಾಟ್ ನಿಂದ 120 ಕಿ.ವ್ಯಾ. ಸಾಮರ್ಥ್ಯದ ಈ ಇ.ವಿ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ವಾಹನಗಳು ತ್ವರಿತವಾಗಿ ಚಾರ್ಜರ್‍‌ ಆಗಲಿವೆ. ಲಘು ವಾಹನಗಳನ್ನು ಮೀರಿ ವಿದ್ಯುತ್ ಚಾಲಿತ ಬಸ್ ಹಾಗೂ ಟ್ರಕ್ ಗಳನ್ನು ಈ ಸ್ಟೇಷನ್ ಗಳಲ್ಲಿ ಚಾರ್ಜರ್ ಮಾಡಬಹುದು. ದೂರದ ಪ್ರಯಾಣದ ಹಾಗೂ ಸರಕು ಸಾಗಣೆ ವಾಹನಗಳ ಕಾರ್ಯಾಚರಣೆಗೆ ಈ ಚಾರ್ಜಿಂಗ್ ಸ್ಟೇಷನ್ ಗಳು ಬಲ ತುಂಬಲಿವೆ ಎಂದು ಹೇಳಿತ್ತು.

 

ರಾಜ್ಯದಲ್ಲಿ ಸದ್ಯ 6 ಸಾವಿರಕ್ಕೂ ಹೆಚ್ಚು ಇ.ವಿ ಚಾರ್ಜಿಂಗ್ ಸ್ಟೇಷನ್ ಗಳಿವೆ. ಕರ್ನಾಟಕವು ಪ್ರಸ್ತುತ ಇ.ವಿ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಹೊಸ ಯೋಜನೆಯ ಭಾಗವಾಗಿ, ಇಂಧನ ಇಲಾಖೆಯು ಹೆಚ್ಚಿನ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯಗಳನ್ನು ಸ್ಥಾಪಿಸಲು ಬಸ್ ಡಿಪೊಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, ಸರಕು ಸಾಗಣೆ ಕಾರಿಡಾರ್ ಹಾಗೂ ಲಾಜಿಸ್ಟಿಕ್ ಹಬ್ ಗಳಂತಹ ಸ್ಥಳಗಳನ್ನು ಗುರುತಿಸುತ್ತಿದೆ.

 

2024ರ ಅಕ್ಟೋಬರ್ ನಲ್ಲಿಆರಂಭವಾಗಿದ್ದ ಪಿಎಂ ಇ-ಡ್ರೈವ್ ಯೋಜನೆಯಡಿ ಇ.ವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸ್ಟೇಷನ್ ಗಳಿಗೆ ಕೇಂದ್ರದ ಸಹಾಯಧನವು ಶೇ. 80ರಿಂದ 100ರವರೆಗೆ ಇದೆ. ಹೀಗಾಘಿ ರಾಜ್ಯ ಸರಕಾರದ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದು, ಚಾರ್ಜಿಂಗ್ ಜಾಲ ಬಲಪಡಿಸುವುದು ಮತ್ತು ಸ್ಥಳೀಯವಾಗಿ ವಿದ್ಯುತ್ ಚಾಲಿತ ವಾಹನಗಳ ಬಿಡಿ ಭಾಗಗಳ ಉತ್ಪಾದನೆ ಉತ್ತೇಜಿಸುವುದು ಪಿಎಂ ಇ-ಡ್ರೈವ್ ಯೋಜನೆಯ ಗುರಿಗಳಾಗಿವೆ.

 

ಕರ್ನಾಟಕದ ಪ್ರಸ್ತಾವನೆಯು ಈ ಯೋಜನೆಯ ಗುರಿಗಳಿಗೆ ಅನುಗುಣವಾಗಿದೆ. ವಿದ್ಯುತ್ ಚಾಲಿತ ಬಸ್ ಗಳ ಕಾರ್ಯಾಚರಣೆಗೆ ರಾಜ್ಯವು ಈಗಾಗಲೇ ಕೇಂದ್ರದ ಬೆಂಬಲ ಪಡೆದಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದರು.

 

ಬೆಸ್ಕಾಂ ನೋಡಲ್ ಏಜೆನ್ಸಿ

 

ರಾಜ್ಯದಲ್ಲಿಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ಬೆಸ್ಕಾಂ ಅನ್ನು ನೋಡಲ್ ಏಜೆನ್ಸಿಯನ್ನಾಗಿ (ಎಸ್ ಎನ್ ಎ) ನೇಮಿಸಲಾಗಿದೆ. ರಾಜ್ಯದೆಲ್ಲೆಡೆ ವಿದ್ಯುತ್ ಚಾಲಿತ ಭಾರಿ ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳ ಸ್ಥಾಪನೆಗೆ ಶೀಘ್ರವೇ ಕೇಂದ್ರದ ಭಾರಿ ಕೈಗಾರಿಕಾ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಈ ಯೋಜನೆಯಡಿ ಪ್ರಸರಣ ಮಾರ್ಗಗಳು, ಟ್ರಾನ್ಸ್ ಫಾರ್ಮರ್ ಮತ್ತು ಕಂಡಕ್ಟರ್ ಘಟಕಗಳಿಗೆ ಶೇ. 100ರಷ್ಟು ಹಾಗೂ ಇತರೆ ಸಲಕರಣೆಗಳಿಗೆ ಶೇ. 70ರವರೆಗೆ ಸಬ್ಸಿಡಿ ಸಿಗಲಿದೆ,’’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್ .ಶಿವಶಂಕರ ಹೇಳಿದ್ದನ್ನು ಸ್ಮರಿಸಬಹುದು.

 

2025ರ ಆಗಸ್ಟ್ ಅಂತ್ಯಕ್ಕೆ ದೇಶದಲ್ಲಿಸುಮಾರು 29 ಸಾವಿರ ಇ.ವಿ. ಚಾರ್ಜಿಂಗ್ ಸ್ಟೇಷನ್ ಗಳಿದ್ದವು. ಈ ಪೈಕಿ ಕರ್ನಾಟಕ ರಾಜ್ಯವು ಅತಿ ಹೆಚ್ಚು 6,097 ಸ್ಟೇಷನ್ ಗಳನ್ನು ಹೊಂದಿದೆ. ಇ.ವಿ. ಕಾರುಗಳಿಗೆ 60ರಿಂದ 120 ಕಿ.ವ್ಯಾ. ಸಾಮರ್ಥ್ಯದ ಚಾರ್ಜರ್ ಗಳು ಬೇಕಾಗುತ್ತವೆ. ಬಸ್ ಮತ್ತು ಟ್ರಕ್ ನಂತಹ ಭಾರಿ ವಾಹನಗಳಿಗೆ 240 ಕಿ.ವ್ಯಾ. ಚಾರ್ಜರ್ ಗಳು ಬೇಕಾಗುತ್ತವೆ. ರಾಜ್ಯದೆಲ್ಲೆಡೆ ಪೆಟ್ರೋಲ್ ಬಂಕ್ ಗಳಲ್ಲಿಸುಮಾರು 400 ಇ.ವಿ. ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ಬೆಸ್ಕಾಂ ಐಒಸಿಎಲ್ , ಎಚ್ ಪಿಸಿಎಲ್ ಮತ್ತು ಬಿಪಿಸಿಎಲ್ ಸೇರಿದಂತೆ ಪ್ರಮುಖ ತೈಲ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದನ್ನು ಸ್ಮರಿಸಬಹುದು.

 

ರಾಜ್ಯದಲ್ಲಿ ವಿದ್ಯುತ್‌ ವಾಹನ ಮತ್ತು ಶಕ್ತಿ ಶೇಖರಣೆ ನೀತಿ 2017ರ ಪ್ರಕಾರ 2018ರಲ್ಲಿ ರಾಜ್ಯದಲ್ಲಿಯೇ ಮೊದಲು ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮದ ಕಾರ್ಯಾಲಯದಲ್ಲಿ ಡಿ ಸಿ ಮತ್ತು ಎ ಸಿ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲಾಗಿತ್ತು. ಬೆಂಗಳೂರು ನಗರದಲ್ಲಿ ಅಂದಾಜು 195 ಚಾರ್ಜಿಂಗ್‌ ಸ್ಥಾವರ ಮತ್ತು 320 ಚಾರ್ಜರ್‍‌ಗಳನ್ನು ಸ್ಥಾಪಿಸಲಾಗಿದೆ.

 

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2018ರ ಮೇ 14ರ ಆದೇಶದ ಪ್ಕರಾರ ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರಗಳೀಗೆ 4.50 ರು ನಂತೆ ವಿದ್ಯುತ್‌ ಸರಬರಾಜು ದರ ನಿಗದಿಪಡಿಸಿತ್ತು.

 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಳಗಾವಿ, ಹಾವೇರಿ ಮತ್ತು ದಕ್ಷಿಣ ಕನ್ನಡದಲ್ಲಿ 585 ಇ ವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲು ಲೆಟರ್‍‌ ಆಫ್‌ ಅವಾರ್ಡ್ ನೀಡಲಾಗಿತ್ತು. ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ 1,310 ಚಾರ್ಜಿಂಗ್‌ ಕೇಂದ್ರಗಳು, 2,620 ಇ ವಿ ಚಾರ್ಜ್‌ರಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಿತ್ತು.

Your generous support will help us remain independent and work without fear.

Latest News

Related Posts