ಸೌರ ಘಟಕ; ಬಜೆಟ್‌ ಘೋಷಣೆಯನ್ನೇ ‘ಕೈ’ ಬಿಟ್ಟ ಸರ್ಕಾರ, ಆರ್ಥಿಕ ಹೊರೆಯೋ, ಹಣಕಾಸಿನ ಬಿಕ್ಕಟ್ಟೋ?

ಬೆಂಗಳೂರು; ಎಸ್ಕಾಂಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂಬ ಅರಿವಿದ್ದರೂ ಸಹ ಸರ್ಕಾರವು ಹಿಂದುಳಿದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಮೈಕ್ರೋ ಗ್ರಿಡ್‌ ವ್ಯವಸ್ಥೆ ಮೂಲಕ ಬ್ಯಾಟರಿ ಶೇಖರಣೆಯ ಸೌರ ಘಟಕ ಸ್ಥಾಪಿಸಲು ಆಯವ್ಯಯದಲ್ಲಿ ಘೋಷಿಸಿತ್ತು. ಬಜೆಟ್‌ನಲ್ಲಿ ಘೋಷಣೆ ಮಾಡಿದ ಮೂರೇ ಮೂರು ತಿಂಗಳಲ್ಲಿ ಈ ಯೋಜನೆಯನ್ನು ಸರ್ಕಾರವು ಕೈ ಬಿಟ್ಟಿದೆ.

 

ಎಸ್ಕಾಂಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂಬ  ಕಾರಣವನ್ನು ಕ್ರೆಡಿಲ್‌ ಸಂಸ್ಥೆಯು ನೀಡಿದ್ದ ಕಾರಣವನ್ನು ಸರ್ಕಾರವೂ ಸಹ ಒಪ್ಪಿಕೊಂಡಿದೆ.   ಈ ಯೋಜನೆಯನ್ನು ಸರ್ಕಾರವು ಕೈಬಿಟ್ಟಿರುವುದರಿಂದ  ಎಸ್ಕಾಂ ವ್ಯಾಪ್ತಿಯ ಹಿಂದುಳಿದ ಗ್ರಾಮಗಳು ಸೌರ ಘಟಕ ಹೊಂದಿಲ್ಲ ಮತ್ತು ವಿದ್ಯುತ್‌ ಸ್ವಾವಲಂಬಿಯಾಗಿಲ್ಲ.

 

ಪ್ರತೀ ಎಸ್ಕಾಂ ವ್ಯಾಪ್ತಿಯಲ್ಲಿ ಆಯ್ದ ಒಂದು ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಮೈಕ್ರೋ ಗ್ರಿಡ್‌ ಮೂಲಕ ಸೌರ ಘಟಕ ಸ್ಥಾಪನೆ ಮಾಡಿ ಸ್ವಾವಲಂಬಿ ಗ್ರಾಮವನ್ನಾಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದರು. ಈ ಘೋಷಣೆಗೂ ಮುನ್ನ ಇಂಧನ ಸಚಿವರು ಮತ್ತು ಮುಖ್ಯಮಂತ್ರಿಯೊಂದಿಗೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈ ಹೊಸ ಪ್ರಸ್ತಾವವನ್ನು ಒಪ್ಪಬೇಕೆ ಬೇಡವೇ ಎಂದು  ಆರ್ಥಿಕ ಇಲಾಖೆಯೂ ಸಹ ಸಾಕಷ್ಟು ಚರ್ಚಿಸಿ, ಪರಿಶೀಲಿಸಿದ ನಂತರವಷ್ಟೇ  ಸಹಮತಿಸಿತ್ತು.

 

ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಘೋಷಿಸಿದ ಮೂರೇ ಮೂರು ತಿಂಗಳಲ್ಲಿ  ಇಡೀ ಪ್ರಸ್ತಾವವನ್ನೇ ಸರ್ಕಾರವು ಕೈ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಯೋಜನೆಯನ್ನು ಕೈ ಬಿಟ್ಟಿರುವ ಬಗ್ಗೆ 2025ರ ಜೂನ್‌ 19ರಂದೇ ಆದೇಶ ಹೊರಡಿಸಿದೆ.

 

ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಯೋಜನೆಯನ್ನು ಕ್ರೆಡಿಲ್‌ ಮೂಲಕ ಎಸ್ಕಾಂ ವ್ಯಾಪ್ತಿಯ ಆಯ್ದ ಹಿಂದುಳಿದ ಗ್ರಾಮದಲ್ಲಿ 500 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ ಘಟಕ ಸ್ಥಾಪಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

 

 

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ ವ್ಯಾಪ್ತಿಯ ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಕಾಟೇನಹಳ್ಳಿ, ಚಾಮರಾಜನಗರ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅರ್ಜಿ, ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಲಿಂಗಾಪುರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಜಗಳಪೇಟೆ, ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಚಿಂಚೋಳಿ ತಾಲೂಕಿನ ಅಂತಾವರಂ ಗ್ರಾಮದಲ್ಲಿ ಮೈಕ್ರೋ ಗ್ರಿಡ್‌ ವ್ಯವಸ್ಥೆ ಮೂಲಕ 500 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ ಘಟಕವನ್ನು ಸ್ಥಾಪಿಸಲು ಸರ್ಕಾರವು ಉದ್ದೇಶಿಸಿತ್ತು. ಅಲ್ಲದೇ ಈ ಸಂಬಂಧ ಆದೇಶವನ್ನೂ ಹೊರಡಿಸಿತ್ತು.

 

ಆದರೆ ಈ ಪ್ರಸ್ತಾವನೆಯನ್ನು ಕೈ ಬಿಡಬೇಕು ಎಂದು ಕ್ರೆಡಿಲ್‌ ಸರ್ಕಾರವನ್ನು ಕೋರಿತ್ತು.

 

ಕೈಬಿಡಲು ನೀಡಿದ್ದ ಕಾರಣಗಳೇನು?

 

ಪ್ರತಿ ಎಸ್ಕಾಂ ವ್ಯಾಪ್ತಿಯ ಆಯ್ದ ಒಂದು ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಮೈಕ್ರೋ ಗ್ರಿಡ್‌ ವ್ಯವಸ್ಥೆ ಮೂಲಕ ಬ್ಯಾಟರಿ ಶೇಖರಣೆಯನ್ನು ಹೊಂದಿದ 500 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರವ ಘಟಕದ ಸ್ಥಾಪನೆ ವೆಚ್ಚವು 7.94 ಕೋಟಿ ರು ಆಗಲಿದೆ. 5 ಹಿಂದುಳಿದ ಗ್ರಾಮದಲ್ಲಿ ಯೋಜನೆಯನ್ನು ಸ್ಥಾಪಿಸಲು ಒಟ್ಟಾರೆ 39.7 ಕೋಟಿ ರು ವೆಚ್ಚವಾಲಿದೆ ಎಂದು ಕ್ರೆಡಿಲ್‌ ಸಂಸ್ಥೆಯು ಕಾರಣವನ್ನು ಮುಂದೊಡ್ಡಿತ್ತು.

 

ಈ ಯೋಜನೆಯ ಸಾಮರ್ಥ್ಯವು ಸಣ್ಣ ಗಾತ್ರವಾಗಿದೆ. ಯೋಜನೆಯ ಅನುಷ್ಠಾವು ವೆಚ್ಚವು ಹೆಚ್ಚಾಗಿದೆ. ಇದರಿಂದ ಪ್ರತಿ ಯೂನಿಟ್‌ ವಿದ್ಯುತ್‌ ಖರೀದಿ ದರವು ಹೆಚ್ಚಾಗಿದೆ. ಈ ದರದಲ್ಲಿ ಈ ಘಟಕಗಳಿಂದ ಉತ್ಪಾದಿಸುವ ವಿದ್ಯುತ್‌ನ್ನು 25 ವರ್ಷಗಳ ಕಾಲ ಖರೀದಿಸಬೇಕಾಗಿದೆ. ಇದು ಎಸ್ಕಾಂಗಳಿಗೆ ಹೊರೆಯಾಗಲಿದೆ ಎಂದು ಕ್ರೆಡಿಲ್‌ ಅಭಿಪ್ರಾಯಿಸಿತ್ತು.

 

ಬ್ಯಾಟರಿ ವ್ಯವಸ್ಥೆಯನ್ನು ಅಳವಡಿಸಿದ್ದಾಗಲೂ ಸಹ ಎಸ್ಕಾಂನಿಂದ ವಿದ್ಯುತ್‌ ಸರಬರಾಜು ಇಲ್ಲದೇ ಇದ್ದ ಸಮಯದಲ್ಲಿ ಸುರಕ್ಷತಾ ಮಾರ್ಗಸೂಚಿಗಳ ಅನ್ವಯ ಇನ್‌ವರ್ಟ್‌ರ್‍‌ ಅನ್ನು ಸ್ಥಗಿತಗೊಳಿಸಬೇಕು. ಹೀಗಾಗಿ ಬ್ಯಾಟರಿ ಮೂಲಕವೂ ಕೂಡ ಗ್ರಾಮಗಳಿಗೆ ವಿದ್ಯುತ್‌ ಸರಬರಾಜು ಮಾಡಲು ಅವಕಾಶವಿರುವುದಿಲ್ಲ. ಹೀಗಾಗಿ ಈ 5 ಗ್ರಾಮಗಳನ್ನು ವಿದ್ಯುತ್‌ ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡುವ ಉದ್ದೇಶವು ಈಡೇರಿದಂತಾಗುವುದಿಲ್ಲ ಎಂದು ಕ್ರೆಡಿಲ್‌ ಸರ್ಕಾರಕ್ಕೆ ವಿವರಿಸಿತ್ತು.

 

 

ಕ್ರೆಡಿಲ್‌ ಸಂಸ್ಥೆಯಿಂದ ಈಗಾಗಲೇ ಬ್ಯಾಟರಿ ತಂತ್ರಜ್ಞಾನಗಳನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಪಾವಗಡ ಮತ್ತು ಕಲ್ಬುರ್ಗಿಯಲ್ಲಿನ ಹೊಸ ಯೋಜನೆಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಆರ್ಥಿಕ ಇಲಾಖೆಯ ಗಮನಕ್ಕೆ ತರಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯೂ ಸಹ ಈ ಯೋಜನೆಯನ್ನು ಕೈಬಿಡಲು 2025ರ ಜೂನ್‌ 13ರಂದು ಸಹಮತಿ ವ್ಯಕ್ತಪಡಿಸಿದೆ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಮೈಕ್ರೋಗ್ರಿಡ್‌ ವ್ಯವಸ್ಥೆಯು ಬ್ಯಾಟರಿ ಶೇಖರಣೆಯನ್ನು ಬಳಸಿಕೊಂಡು ಸ್ಥಿರವಾದ ವಿದ್ಯುತ್‌ ಸರಬರಾಜು ಆಗಲಿದೆ. ಈ ವ್ಯವಸ್ಥೆಯು ನವೀಕರಿಸಬಹುದಾದ ಮೂಲಗಳಿಂದ (ಸೌರ, ಗಾಳಿ) ಉತ್ಪತ್ತಿಯಾಗುವ ವಿದ್ಯುತ್‌ನ್ನು ಬ್ಯಾಟರಿಗಳಲ್ಲಿ ಶೇಖರಿಸಿ, ಅಗತ್ಯವಿದ್ದಾಗ ಅಥವಾ ಗ್ರಿಡ್‌ ವಿಫಲವಾದಾಗ ವಿತರಿಸುತ್ತದೆ. ಇದು ನಿರ್ಣಾಯಕ ಬ್ಯಾಕಪ್‌ ಶಕ್ತಿಯನ್ನು ಒದಗಿಸುತ್ತದೆ ಮತ್ತು ಶಕ್ತಿಯ ಗುಣಮಟ್ಟವನ್ನು ನಿರ್ವಹಿಸಲಿದೆ.

 

ಹೇಗೆ ಕಾರ್ಯನಿರ್ವಹಿಸುತ್ತದೆ?

 

ಸೌರ ಫಲಕಗಳು, ಗಾಳಿ ಟರ್ಬೈನ್‌ಗಳು ಅಥವಾ ಇತರ ಮೂಲಗಳಿಂದ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ವಿದ್ಯುತ್‌ ಶೇಖರಣೆ: ಉತ್ಪಾದಿಸಿದ ವಿದ್ಯುತ್‌ನ್ನು ಬ್ಯಾಟರಿಗಳಲ್ಲಿ ಶೇಖರಿಸಲಾಗುತ್ತದೆ ಸೌರ ಮತ್ತು ಬ್ಯಾಟರಿಗಳಿಂದ ಬರುವ ಡಿಸಿ (DC) ವಿದ್ಯುತ್‌ನ್ನು ಇನ್ವರ್ಟರ್‌ಗಳ ಮೂಲಕ ಎಸಿ (AC) ಯಾಗಿ ಪರಿವರ್ತಿಸಲಾಗುತ್ತದೆ. ಇನ್ವರ್ಟರ್‌ಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಬಳಸಿಕೊಂಡು, ಈ ವಿದ್ಯುತ್‌ನ್ನು ಮನೆಯ ಅಥವಾ ಕಟ್ಟಡದ ವಿದ್ಯುತ್‌ ವ್ಯವಸ್ಥೆಗೆ ಒದಗಿಸಲಾಗುತ್ತದೆ.

 

ವಿತರಿಸಿದ ಉತ್ಪಾದನೆಯಿಂದ ಬರುವ ಶಕ್ತಿಯು ಅಗತ್ಯವನ್ನು ಪೂರೈಸಲು ಸಾಕಾಗದಿದ್ದಾಗ, ಬ್ಯಾಟರಿಗಳು ವಿದ್ಯುತ್‌ ಪೂರೈಕೆಯನ್ನು ಮಾಡುತ್ತವೆ. ಗ್ರಿಡ್‌ ಸ್ಥಗಿತಗೊಂಡಾಗಲೂ ನಿರಂತರ ವಿದ್ಯುತ್‌ ಪೂರೈಕೆ ಖಚಿತಪಡಿಸುತ್ತದೆ. ವಿದ್ಯುತ್‌ ಬೆಲೆ ಕಡಿಮೆ ಇರುವಾಗ ಶಕ್ತಿಯನ್ನು ಶೇಖರಿಸಿ, ಬೆಲೆ ಹೆಚ್ಚಾದಾಗ ಬಳಸುವುದರಿಂದ ವೆಚ್ಚವನ್ನು ಕಡಿಮೆ ಮಾಡಬಹುದು.

 

ಹಾರ್ಮೋನಿಕ್ ಅಸ್ಪಷ್ಟತೆಯನ್ನು ಕಡಿಮೆ ಮಾಡುವ ಮೂಲಕ ಸ್ಥಿರವಾದ ವಿದ್ಯುತ್‌ ಪೂರೈಕೆಯನ್ನು ಒದಗಿಸುತ್ತದೆ. ವಿಶೇಷವಾಗಿ ದುರ್ಬಲ ಅಥವಾ ಗ್ರಿಡ್‌ ಇಲ್ಲದ ಪ್ರದೇಶಗಳಲ್ಲಿ ದೊಡ್ಡ ರಾಷ್ಟ್ರೀಯ ಗ್ರಿಡ್‌ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತದೆ,

Your generous support will help us remain independent and work without fear.

Latest News

Related Posts