ಬೆಂಗಳೂರು; ತೋಟಗಾರಿಕೆ ಇಲಾಖೆಯಲ್ಲಿನ ವಿವಿಧ ವೃಂದಗಳ ಹುದ್ದೆಗಳನ್ನು ಉನ್ನತೀಕರಿಸಿರುವುದು ಇದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಹಿಂದ ವರ್ಗದ ಅಧಿಕಾರಿಗಳಿಗೆ ಅನ್ಯಾಯವಾಗಿದೆ. ಅಲ್ಲದೇ ದಲಿತ ಮತ್ತು ಅಹಿಂದ ವರ್ಗದ ಅಧಿಕಾರಿಗಳಿಗಿದ್ದ ಅಧಿಕಾರವನ್ನು ಕಿತ್ತುಕೊಂಡಂತಾಗಿದೆ ಎಂಬ ಗುರುತರವಾದ ಆರೋಪವು ಇಲಾಖೆಯೊಳಗಿನಿಂದಲೇ ಕೇಳಿ ಬಂದಿದೆ.
ಸಾರ್ವಜನಿಕ ಮತ್ತು ಆಡಳಿತಾತ್ಮಕವಾಗಿ ಯಾವುದೇ ಹಿತದೃಷ್ಟಿಯಿರದಿದ್ದರೂ ಸಹ ವಿವಿಧ ವೃಂದಗಳ ಹುದ್ದೆಗಳನ್ನು ಉನ್ನತೀಕರಿಸಿರುವುದರ ಹಿಂದೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ವಿಶೇಷ ಕರ್ತವ್ಯಾಧಿಕಾರಿಯು ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.
ತೋಟಗಾರಿಕೆ ಇಲಾಖೆಯಲ್ಲಿನ ವಿವಿಧ ವೃಂದಗಳ ಉನ್ನತೀಕರಣ ಪ್ರಸ್ತಾವನೆಯಿಂದ ಅಹಿಂದ ವರ್ಗಕ್ಕೆ ಅನ್ಯಾಯವಾಗಲಿದೆ ಎಂದು ಒಂದು ವರ್ಷದ ಹಿಂದೆಯೇ ಅಹಿಂದ ವರ್ಗದ ಹಲವು ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದವು. ಆದರೂ ಅವೆಲ್ಲವನ್ನೂ ಬದಿಗೊತ್ತಿರುವ ರಾಜ್ಯ ಸರ್ಕಾರವು ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ ಹುದ್ದೆಗಳನ್ನು ಉನ್ನತೀಕರಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸಂಘಟನೆಗಳು ಬರೆದಿದ್ದ ಪತ್ರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಅಲ್ಲದೇ ಈ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಿರುವುದರ ಹಿಂದೆ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ವೇದಮೂರ್ತಿ ಅವರ ಪಾತ್ರವಿದೆ ಎಂಬ ಬಲವಾದ ಆಪಾದನೆಯೂ ಕೇಳಿ ಬಂದಿದೆ. ವೇದಮೂರ್ತಿ ಅವರು ಇಲಾಖೆಯ ಉಪನಿರ್ದೇಶಕರಾಗಿದ್ದಾರೆ. ಹೀಗಾಗಿ ಹುದ್ದೆಯನ್ನು ಜಂಟಿ ನಿರ್ದೇಶಕರ ಹುದ್ದೆಗೆ ಪದನ್ನೋತಿ ನೀಡಲು ಇಲಾಖೆ ನಿರ್ದೇಶಕರು ಕಳಿಸಿರುವ 30 ಮಂದಿ ಅಧಿಕಾರಿಗಳ ಪಟ್ಟಿಯಲ್ಲಿ ವೇದಮೂರ್ತಿ ಅವರೂ ಸಹ ಇದ್ದಾರೆ. ಹೀಗಾಗಿಯೇ ಈ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಯಾದಗಿರಿಯ ರಾಘವೇಂದ್ರ ಎಂಬುವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬರೆದಿರುವ ಪತ್ರದಲ್ಲಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವೇದಮೂರ್ತಿ ಅವರ ಹೆಸರನ್ನೂ ಉಲ್ಲೇಖಿಸಿರುವುದು ಗೊತ್ತಾಗಿದೆ.
ತೋಟಗಾರಿಕೆ ಇಲಾಖೆಯು 2025ರ ಜನವರಿಯಲ್ಲಿಯೇ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿತ್ತು.
ಈ ಪಟ್ಟಿಯಲ್ಲಿ ವೇದಮೂರ್ತಿ ಅವರು 27ನೇ ಕ್ರಮಾಂಕದಲ್ಲಿದ್ದರು.
ಅಹಿಂದ ವರ್ಗದ ಸಂಘಟನೆ ಪತ್ರಗಳಲ್ಲೇನಿದೆ?
ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ವೃಂದದ ಹುದ್ದೆಗಳ ಉನ್ನತೀಕರಣ ಪ್ರಸ್ತಾವನೆಯಿಂದ ಅಹಿಂದ ವರ್ಗದ ಅಧಿಕಾರಿಗಳಿಗೆ ಅನ್ಯಾಯವಾಗಲಿದೆ. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಹುದ್ದೆಯಿಂದ ಜಂಟಿ ನಿರ್ದೇಶಕರು ಮತ್ತು ರಾಜ್ಯ ವಲಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯಿಂದ ಉಪನಿರ್ದೇಶಕರು ಇತರೆ ವೃಂದದ ಒಟ್ಟಾರೆ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ. ಈ ಮೂಲಕ ಕೆಲವು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಅಧಿಕಾರಿಗಳನ್ನು ಕೆಳ ದರ್ಜೆಗೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದವು.
ಈ ಹುದ್ದೆಗಳನ್ನು ಉನ್ನತೀಕರಿಸಲು ಯಾವುದೇ ಸಾರ್ವಜನಿಕ, ಆಡಳಿತಾತ್ಮಕ ಅಥವಾ ಸಾಮಜಿಕ ಹಿತದೃಷ್ಟಿಯಿಲ್ಲ. ಇಲಾಖೆಯ ಕೇವಲ ಕೆಲವೇ ಕೆಲವು ಅಧಿಕಾರಿಗಳ ಪದನ್ನೋತಿ ದೃಷ್ಟಿಯಿಂದ ಪದನ್ನೋತಿ ಮಾಡಲಾಗುತ್ತಿದೆ.
ಈಗಾಗಲೇ ಕಡತವನ್ನು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಸೆಳೆದಿದ್ದವು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವಿವಿಧ ವೃಂದದ ಜೇಷ್ಠತಾ ಪಟ್ಟಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಅಧಿಕಾರಿಗಳು ಕೆಳಗಿನ ಸ್ತರಗಳಲ್ಲಿದ್ದಾರೆ. ಇಲಾಖೆ ನಿರ್ದೇಶಕರು ಪ್ರಸ್ತಾವಿಸಿರುವ ಪದನ್ನೋತಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದಲ್ಲಿ ಸಂವಿಧಾನದಿಂದ ಕೊಟ್ಟಿರುವ ಸವಲತ್ತುಗಳನ್ನು ಹಿಂಪಡೆದಂತಾಗುತ್ತದೆ ಎಂದೂ ಪತ್ರದಲ್ಲಿ ವಿವರಿಸಿದ್ದವು.
ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದ ಮನವಿಯಲ್ಲೇನಿದೆ?
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಹುದ್ದೆಯನ್ನು ತೋಟಗಾರಿಕೆ ಜಂಟಿ ನಿರ್ದೇಶಕರ ಹುದ್ದೆಗೆ ಪರಿವರ್ತನೆ ಮಾಡುವ ಪ್ರಸ್ತಾವ ರದ್ದುಗೊಳಿಸಬೇಕು. 2025ರ ಅಕ್ಟೋಬರ್ 9ರಂದು ತರಾತುರಿಯಲ್ಲಿ ಮುಂಬಡ್ತಿ ಸಭೆ ನಡೆದಿದೆ. ಈ ಬದಲಾವಣೆಯಿಂದ ರೈತರಿಗೆ ಯಾವುದೇ ರೀತಿಯ ನೇರ ಪ್ರಯೋಜನವಾಗದು. ಬದಲಿಗೆ ಇಲಾಖೆಯ ಆಡಳಿತಾತ್ಮಕ ವ್ಯಯಕ್ಕೆ ದಾರಿಮಾಡಿಕೊಡುತ್ತದೆ. ನೆಲಮಟ್ಟದ ಕೆಲಸಗಳಲ್ಲಿ ವಿಳಂಬ ಆಗಲಿದೆ. ಪ್ರಸ್ತುತ ಉಪನಿರ್ದೇಶಕರು ಜಿಲ್ಲಾ ಮಟ್ಟದಲ್ಲಿ ರೈತ ಸ್ನೇಹಿಯಾಗಿದ್ದಾರೆ. ತೋಟಗಾರಿಕೆ ಯೋಜನೆಗಳ ಅನುಷ್ಠಾನದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿದ್ದಾರೆ. ಜಂಟಿ ನಿರ್ದೇಶಕರ ಹುದ್ದೆ ಸೃಜನೆಯಿಂದ ರೈತ ಸ್ನೇಹಿ ಹುದ್ದೆಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರು.
‘ ಸಚಿವರ ಓಎಸ್‌ಡಿ ವೇದಮೂರ್ತಿ ಅವರ ಅನುಕೂಲಕ್ಕಾಗಿ ಈ ಹುದ್ದೆ ಪರಿವರ್ತನೆ ಕಾರ್ಯ ನಡೆದಿದೆ. ಅವರು ತೋಟಗಾರಿಕೆ ಉಪನಿರ್ದೇಶಕರಾಗಿದ್ದಾರೆ. ತಮ್ಮ ಪ್ರಭಾವ ಬಳಸಿ ಹುದ್ದೆ ಪರಿವರ್ತನೆಗೆ ತರಾತುರಿಯಲ್ಲಿ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ,’ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿದ್ದ ಪತ್ರದಲ್ಲಿ ವಿವರಿಸಿದ್ದರು.
ಪದನ್ನೋತಿಯಿಂದ ಎಸ್ ಸಿ ಎಸ್ ಟಿ ಹಿಂದುಳಿದ ಅಧಿಕಾರಿಗಳಿಗೆ ಅನ್ಯಾಯವಾಗಲಿದೆ. ಈ ಸಮುದಾಯದ ಅಧಿಕಾರಿಗಳ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ರೈತರು ಜಂಟಿ ನಿರ್ದೇಶಕರನ್ನು ಸಂಪರ್ಕಿಸಲು ಕಷ್ಟಸಾಧ್ಯವಾಗಲಿದೆ. ಎಸ್ ಸಿ ಎಸ್ ಟಿ ಅಧಿಕಾರಿಗಳ ಅಧಿಕಾರವನ್ನು ಕಿತ್ತುಕೊಂಡಂತಾಗಲಿದೆ. ಇಲಾಖೆಯು ಆರಂಭದಿಂದ ಇರುವ ಉಪ ನಿರ್ದೇಶಕರ ಹುದ್ದೆಯನ್ನು ಜಂಟಿ ನಿರ್ದೇಶಕರ ಹುದ್ದಗೆ ಪರಿವರ್ತನೆ ಮಾಡಿದರೇ ಎಲ್ಲಾ ಹುದ್ದೆಗಳಲ್ಲೂ ಬದಲಾವಣೆ ತರಬೇಕಾಗುತ್ತದೆ ಎಂದು ಯಾದಗಿರಿಯ ರಾಘವೇಂದ್ರ ಅವರು ಪತ್ರದಲ್ಲಿ ವಿವರಿಸಿದ್ದರು.
ಇಲಾಖೆ ನಿರ್ದೇಶಕರ ಸಮರ್ಥನೆ ಏನು?
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ವರ್ಷದಿಂದ ವರ್ಷಕ್ಕೆ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಳವಾಗುತ್ತದೆ. ಇಲಾಖೆ ಅನುದಾನ, ಹೊಸದಾಗಿ ರೂಪುಗೊಂಡಿರುವ ಯೋಜನೆಗಳು ಹಾಗೂ ಹಾಗೂ ಕೆಳಹಂತದ ಅಧಿಕಾರಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಿಗೆಯಾಗಿದೆ.
ಆದರೂ ಸಹ ಇಲಾಖೆಯ ಹಿರಿಯ ಶ್ರೇಣಿಯ ಹುದ್ದೆಗಳಾದ ತೋಟಗಾರಿಕೆ ಜಂಟಿ ನಿರ್ದಶಕರು ಮತ್ತು ತೋಟಗಾರಿಕೆ ಉಪನಿರ್ದೇಶಕರ ಹುದ್ದೆಗಳನ್ನು ಹೆಚ್ಚಿನ ಸಂಖ್ಯೆಯನ್ನು ಉನ್ನತೀಕರಿಸಲು ಮೂರು ದಶಕಗಳಿಂದ ಯಾವುದೇ ಪ್ರಯತ್ನಗಳನ್ನು ನಡೆಸಿಲ್ಲ. ಹೀಗಾಗಿ ಅಧಿಕಾರಿಗಳ ಮನೋಸ್ಥೈರ್ಯವನ್ನು ಹೆಚ್ಚಿಸಿ ರೈತಪರವಾದ ಇಲಾಖೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪದಕ್ಕೆ ತರಲು ಅನುಕೂಲವಾಗಲಿದೆ ಎಂದು ಇಲಾಖೆ ನಿರ್ದೇಶಕರು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.
ಒಟ್ಟು 34 ಹುದ್ದೆಗಳನ್ನು ಉನ್ನತೀಕರಿಸುವುದರಿಂದ ಈಗಾಗಲೇ 10ರಿಂದ 13 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಬಡ್ತಿ ಅವಕಾಶ ದೊರಕಿಸಿಕೊಟ್ಟಂತಾಗುತ್ತದೆ ಎಂದು ಶಿಫಾರಸ್ಸಿನಲ್ಲಿ ವಿವರಿಸಿದ್ದರು. ಈ ಶಿಫಾರಸ್ಸಿನ ಪ್ರಕಾರ ನಿರ್ದೇಶನಾಲಯದ ಹಂತದಲ್ಲಿ 4 ತೋಟಗಾರಿಕೆ ಜಂಟಿ ನಿರ್ದೇಶಕರು, ರಾಜ್ಯದ ತೋಟಗಾರಿಕೆ ಉಪನಿರ್ದೇಶಕರ ವೃಂದದ 31 ಜಿಲ್ಲೆಗಳಲ್ಲಿನ ಹುದ್ದೆಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕರ ಹುದ್ದೆಗಳಿಗೆ ಉನ್ನತೀಕರಿಸಿ ಆದೇಶ ಹೊರಡಿಸಲಾಗಿದೆ.