ಅನಿಲ ನೀತಿ; ಆರ್ಥಿಕ ನಷ್ಟವಿಲ್ಲ, ಭ್ರಷ್ಟಾಚಾರವೂ ಇಲ್ಲ, ಲೋಕಾಕ್ಕೆ ಸಮಜಾಯಿಷಿ ನೀಡಿದ ರಾಕೇಶ್‌ಸಿಂಗ್‌

ಬೆಂಗಳೂರು; ರಾಜ್ಯ ನಗರ ಅನಿಲ ವಿತರಣೆ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಪರಿಣಾಮಗಳನ್ನು ಲೆಕ್ಕಿಸದೆಯೇ ಶುಲ್ಕ ಕಡಿತಗೊಳಿಸಿ ಬೊಕ್ಕಸಕ್ಕೆ ನಷ್ಟವಾಗಿರುವ ಪ್ರಕರಣದ  ವಿಚಾರಣೆ ಆರಂಭವಾಗಿರುವ  ನಡುವೆಯೇ ಈ ನೀತಿಯಿಂದ ಯಾವುದೇ ಆರ್ಥಿಕ ನಷ್ಟವಾಗಿಲ್ಲ ಮತ್ತು ಲೋಪಗಳು ನಡೆದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಅಂದಿನ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ರೇರಾದ ಹಾಲಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರು ಲೋಕಾಯುಕ್ತಕ್ಕೆ ಸಮಜಾಯಿಷಿ ನೀಡಿದ್ದಾರೆ.

 

ಅನಿಲ ನೀತಿ (ಸಿಜಿಡಿ) ಅನುಷ್ಠಾನದಿಂದಾಗಿರುವ ನಷ್ಟ ಮತ್ತು ಕರ್ತವ್ಯಲೋಪದ ಕುರಿತು  ಈಚೆಗಷ್ಟೇ ರಾಕೇಶ್‌ ಸಿಂಗ್‌ ಅವರಿಗೆ ಲೋಕಾಯುಕ್ತ ಸಂಸ್ಥೆಯು  ನೋಟೀಸ್‌ ಜಾರಿಗೊಳಿಸಿತ್ತು. ಈ ನೋಟೀಸ್‌ ಸ್ವೀಕರಿಸಿದ್ದ ರಾಕೇಶ್‌ ಸಿಂಗ್‌ ಅವರು 2025ರ ಅಕ್ಟೋಬರ್‍‌ 4ರಂದೇ ಲಿಖಿತ ಸಮಜಾಯಿಷಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಸಮಜಾಯಿಷಿಯು  ಅಧಿಕಾರಿ ವರ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ರಾಕೇಶ್‌ ಸಿಂಗ್‌ ಸಮಜಾಯಿಷಿಯಲ್ಲೇನಿದೆ?

 

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ವತಿಯಿಂದ City Gas Distribution (CGD) ನೀತಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಕೋರಲಾಗಿದ್ದ ಕಡತವನ್ನು ನಿರ್ವಹಿಸಿರುತ್ತೇನೆ. ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಂದ  18.10.2022 ರಂದು ನಗರ ಅನಿಲ ಸರಬರಾಜು ನೀತಿ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಕೋರಿತ್ತು.  ಕಡತ (ಸಂ: IDD-ITS 67/2020)ವನ್ನು ಇ-ಆಫೀಸ್ ಮುಖಾಂತರ ನನಗೆ ಕಳುಹಿಸಲಾಗಿರುತ್ತದೆ ಎಂದು ಸಮಜಾಯಿಷಿಯಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ರಾಕೇಶ್‌ ಸಿಂಗ್‌ ಅವರು ಸಮಜಾಯಿಷಿ ನೀಡಿರುವುದನ್ನು  ಲೋಕಾಯುಕ್ತ ಸಂಸ್ಥೆಯ ಉನ್ನತ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

 

ಪ್ರಸ್ತಾವಿತ ನೀತಿಗೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ನೀಡಲು ಕಡತದಲ್ಲಿ  ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತಂತೆ ದಿನಾಂಕವಾರು ಕಡತ ನಿರ್ವಹಣೆಯ ವಿವರಗಳನ್ನು ( Annexure-1 ) ಲಗತ್ತಿಸಿದೆ. ಚುನಾವಣೆ ನೀತಿ ಸಂಹಿತೆಯು ಜಾರಿಯಲ್ಲಿದ್ದ ಸಮಯದಲ್ಲಿ ಕಡತದಲ್ಲಿ ನಿರ್ಣಯವನ್ನು ಕೈಗೊಳ್ಳಲು ಬರುವುದಿಲ್ಲ. ಆದ್ದರಿಂದ, ಈ ಸಂದರ್ಭವನ್ನು ಹೊರತುಪಡಿಸಿ ಉಳಿದಂತೆ ನಗರಾಭಿವೃದ್ಧಿ ಸಚಿವಾಲಯದ ಹಂತದಲ್ಲಿ ಕಡತ ನಿರ್ವಹಣೆಯಲ್ಲಿ ಯಾವುದೇ ವಿಳಂಬವಾಗಿರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

ಸಚಿವ ಸಂಪುಟವು ಸರ್ಕಾರದ Apex Body ಆಗಿದೆ.   ಸರ್ಕಾರದಿಂದ ಕೈಗೊಳ್ಳಲಾಗುವ ಯಾವುದೇ ಮುಖ್ಯ ನೀತಿ ನಿರ್ಣಯವು ಸಚಿವ ಸಂಪುಟದ ತೀರ್ಮಾನವಾಗಿರುತ್ತದೆ. ಮುಖ್ಯ ನೀತಿ ನಿರ್ಣಯ ವಿಷಯಗಳಿಗೆ ಅಧಿಕಾರಿಗಳು ಸಂಬಂಧಿತ ಸಚಿವರ ಅನುಮೋದನೆ ಪಡೆಯದೇ ತಮ್ಮ ಮಟ್ಟದಲ್ಲಿ ಅಭಿಪ್ರಾಯವನ್ನು ನೀಡುವುದು ಸೂಕ್ತ ಕ್ರಮವಾಗಿರುವುದಿಲ್ಲ. ಅದರಂತೆ ನಗರ ಅನಿಲ ಸರಬರಾಜು ನೀತಿ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ನೀಡಲು ಅನುಮೋದನೆಗೆ ಸಂಬಂಧಿತ ಸಚಿವರಾದ ಅಂದಿನ  ಮುಖ್ಯಮಂತ್ರಿ  ಹಾಗೂ ತದನಂತರ  ಉಪ ಮುಖ್ಯಮಂತ್ರಿಯವರಿಗೆ ಅನುಮೋದನೆಗಾಗಿ ಕಡತವನ್ನು ಸಲ್ಲಿಸಲಾಗಿತ್ತು.

 

ಸಿಜಿಡಿ  ನೀತಿಯನ್ನು 2023ರ ಅಕ್ಟೋಬರ್‍‌  19  ರಂದು ನಡೆದ ಸಚಿವ ಸಂಪುಟದ (ವಿಷಯ ಸಂಖ್ಯೆ: C494/2023)  ರಲ್ಲಿ ಅನುಮೋದನೆ ಪಡೆಯಲಾಗಿದೆ. 2023ರ ಜುಲೈ  2 ರಂದು ಸರ್ಕಾರದ ಆದೇಶ ಹೊರಡಿಸಲಾಗಿರುತ್ತದೆ. ಆದ್ದರಿಂದ ದೂರಿನಲ್ಲಿ,  ಸಚಿವ ಸಂಪುಟದ ಅನುಮೋದನೆಯ ತರುವಾಯ  ಉಪ ಮುಖ್ಯಮಂತ್ರಿಯವರಿಗೆ ನೀತಿಯ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯದ ಅನುಮೋದನೆಗೆ ಸಲ್ಲಿಸಿರುವುದಾಗಿ ನಮೂದಿಸಿರುವ ಅಂಶವು ಸತ್ಯಾಂಶವಾಗಿರುವುದಿಲ್ಲ ಎಂದು ತಮ್ಮ ವಿರುದ್ಧದ  ಆಪಾದನೆಯನ್ನು ಸಮಜಾಯಿಷಿಯಲ್ಲಿ  ತಳ್ಳಿ ಹಾಕಿದ್ದಾರೆ ಎಂದ ಗೊತ್ತಾಗಿದೆ.

 

ಸಚಿವ ಸಂಪುಟ ಸಭೆಯಲ್ಲಿ ಸಂಬಂಧಿತ ಇಲಾಖೆಯ ಅಭಿಪ್ರಾಯವನ್ನು ಅಗತ್ಯವೆನಿಸಿದಲ್ಲಿ ಇದನ್ನು ಪಡೆದು ತದ ನಂತರ ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಲು ನಿರ್ದೇಶನ ನೀಡಲಾಗುತ್ತದೆ. ಸಚಿವ ಸಂಪುಟದ ಸಭೆಯ ನಿರ್ಣಯದಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ.

 

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ನಗರ ಅನಿಲ ಸರಬರಾಜು ನೀತಿಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸುವ ಪೂರ್ವದಲ್ಲಿಯೇ   ಅಂದಿನ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು  ತಮ್ಮ (ದಿನಾಂಕ 02.03.2022)  ಪತ್ರದಲ್ಲಿ Gas Pipelines ನ್ನು Public Utility Infrastructure ಎಂದು ವರ್ಗೀಕರಿಸಿದ್ದರು.    ನಗರಾಭಿವ್ರುದ್ಧಿ ಇಲಾಖೆಯಿಂದ ಹೊರಡಿಸಲಾಗಿದ್ದ (ದಿನಾಂಕ: 30.06.2020)  ಆದೇಶವನ್ನು ಪರಿಷ್ಕರಿಸಿ ಅನಿಲ ಸರಬರಾಜು ಪೈಪ್ ಲೈನ್ ಅಳವಡಿಕೆಯ ಅನುಮತಿ ಶುಲ್ಕವನ್ನು ಪ್ರತಿ ಮೀಟರ್ ಗೆ ರೂ. 1ಕ್ಕೆ ನಿಗಧಿಪಡಿಸುವಂತೆ ಕೋರಿರುತ್ತಾರೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

ಈ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಕಳುಹಿಸಲಾಗಿತ್ತು.   ಆರ್ಥಿಕ ಇಲಾಖೆಯು ಸಹಮತಿಯನ್ನು ನೀಡಿರುತ್ತದೆ. ಆರ್ಥಿಕ ಇಲಾಖೆಯ ಸಹಮತಿಯ ಪ್ರತಿಯನ್ನು  (Annexure-2)  ರಲ್ಲಿ ಲಗತ್ತಿಸಿದೆ.  ಈ ಹಿನ್ನೆಲೆಯಲ್ಲಿ ಈ ಕುರಿತು ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯದ ಅಗತ್ಯತೆ ಇರುವುದಿಲ್ಲ.
ಕೇಂದ್ರ ಸರ್ಕಾರವು CGD ಯೋಜನೆಗಳನ್ನು Public Utility Infrastructure ಯೋಜನೆಗಳೆಂದು ಪರಿಗಣಿಸಿದೆ ಎಂಬ ವಿವರ ಒದಗಿಸಿರುವುದು ಗೊತ್ತಾಗಿದೆ.

 

ರಾಜ್ಯದಲ್ಲಿ ನೈಸರ್ಗಿಕ ಅನಿಲದ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯಾದಂತ Gas Pipeline Infrastructure ಅಭಿವೃದ್ಧಿಪಡಿಸುವುದು ಮತ್ತು ಅನುಮತಿ ಶುಲ್ಕಗಳ ಅಸಮಾನತೆಯನ್ನು ತೆಗೆದು ಹಾಕಿ ಏಕ ರೂಪದ ಅನುಮತಿ ಶುಲ್ಕಗಳು ಅನ್ವಯವಾಗುವಂತೆ ಪ್ರಸ್ತಾಪಿಸಲಾಗಿರುತ್ತದೆ.  ಅನುಮತಿ ಶುಲ್ಕವೆಂದು ಪ್ರಸ್ತಾಪಿಸಲಾಗಿರುವ Rs. 1/Mtr. ಅನುಮತಿಗಾಗಿ ನಿಗಧಿಪಡಿಸಲಾಗಿರುವ ಶುಲ್ಕವಾಗಿದೆ.   ಇದರಲ್ಲಿ restoration charges ಒಳಗೊಂಡಿರುವುದಿಲ್ಲ. CGD Pipeline ಅಳವಡಿಕೆಗೆ ಸರ್ಕಾರದಿಂದ ಯಾವುದೇ ಮೊತ್ತವನ್ನು ಭರಿಸಲಾಗುವುದಿಲ್ಲ ಎಂದು ಸಮಜಾಯಿಷಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ GAIL (India) Limited ಸಂಸ್ಥೆಯು Pipeline ಅಳವಡಿಸಲು ಅನುಮತಿಯನ್ನು ನೀಡುತ್ತಿದೆ.   restoration charges ನ್ನು ಪ್ರತ್ಯೇಕವಾಗಿ ಭರಿಸಿಕೊಳ್ಳುವುದರಿಂದ ಆರ್ಥಿಕ ನಷ್ಟದ ಪ್ರಶ್ನೆಯೇ  ಉದ್ಭವಿಸುವುದಿಲ್ಲ ಎಂದು ಸಮಜಾಯಿಷಿಯಲ್ಲಿ ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

ಕರ್ನಾಟಕ ವಿಧಾನ ಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 44ಕ್ಕೆ   ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ನೀಡಿರುವ ಉತ್ತರದಲ್ಲಿ, ನೀತಿಯ ಮೂಲಕ ಸರ್ಕಾರವು ಆರ್ಥಿಕ, ಅನುಕೂಲಕರ ಮತ್ತು ಪರಿಸರ ಸ್ನೇಹಿ ಇಂಧನವನ್ನು,  ಅಂದರೆ ರಾಜ್ಯಾದಂತ ಪ್ರತಿಯೊಂದು ಮನೆಗೂ PNG ತರಲು ಹಾಗೂ Gas Pipeline ಮೂಲಸೌಕರ್ಯವನ್ನು ಹೆಚ್ಚಿಸಲು ಪ್ರಯತ್ನಿಸಿದೆ.

 

ಸರ್ಕಾರದ ಉಪ ಕ್ರಮಗಳನ್ನು ಕೇವಲ ಅನಿಲ ಪೈಪ್ ಲೈನ್ ಹಾಕಲು ಅನುಮತಿ ಶುಲ್ಕದ ಆದಾಯದ ದೃಷ್ಟಿಯಿಂದ ಅಳೆಯಲಾಗುವುದಿಲ್ಲ. ಆದರೆ CGD ಮೂಲ ಸೌಕರ್ಯದಿಂದ ಉದ್ಭವಿಸಬಹುದಾದ ಸಾಮಾಜಿಕ ಪ್ರಯೋಜನಗಳು ಮತ್ತು ಪರಿಸರ ಪ್ರಯೋಜನೆಗಳ ಪರಿಭಾಷೆಯಲ್ಲಿ ಅಳೆಯಬೇಕಾಗಿರುತ್ತದೆ. ಹಾಗಾಗಿ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲವಾಗಿ ಉತ್ತರ ನೀಡಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

ಅಂದರೆ CGD Policy ಯಲ್ಲಿ ನಿಗಧಿಪಡಿಸಿರುವ ಅನುಮತಿ ಶುಲ್ಕದ ಬಗ್ಗೆ ಸಚಿವ ಸಂಪುಟಕ್ಕೆ ಮಾಹಿತಿ ಇದೆ.  ಎಲ್ಲಾ ಅಂಶಗಳನ್ನು ಪರಿಗಣಿಸಿ ಕೈಗೊಂಡಿರುವ ನಿರ್ಧಾರವಾಗಿದೆ. ಹೀಗಾಗಿ  ಮಾಹಿತಿಯನ್ನು ಮರೆಮಾಚಿ ಪಡೆದಿರುವ ಅನುಮತಿಯಾಗಿರುವುದಿಲ್ಲ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

ಕೇಂದ್ರ ಪೆಟ್ರೋಲಿಯನ್ ಸಚಿವಾಲಯವು ನೀಡಿರುವ ಅನುಮೋದನೆಯಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ Gail Gas Ltd. ಸಂಸ್ಥೆಯನ್ನು authorised CGD entity 2 . GAIL (India) Limited is a Government-owned company, specifically a Central Public Sector Undertaking (PSU) under the Ministry of Petroleum and Natural Gas, India  ಎಂದು ಹೇಳಲಾಗಿದೆ.

 

ಈ ಹಿನ್ನೆಲೆಯಲ್ಲಿ ಅನುಮತಿಗಾಗಿ ಪಾವತಿಸಲಾಗುವ ಶುಲ್ಕವು ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯು ಮತ್ತೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಪಾವತಿಸುವ ಮೊತ್ತವಾಗಿದೆ. ಇದರಿಂದ  ಸರ್ಕಾರಕ್ಕೆ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ. ಆದ್ದರಿಂದ  ಅನಿಲ ಸರಬರಾಜು ಕಂಪನಿಗಳೊಂದಿಗೆ ಕೈಜೋಡಿಸಿ ಭ್ರಷ್ಟಾಚಾರ ಎಸಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಮಜಾಯಿಷಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಈ  ಅಂಶಗಳ ಹಿನ್ನೆಲೆಯಲ್ಲಿ ಆಪಾದನೆಯ ಅಂಶಗಳಲ್ಲಿ ಯಾವುದೇ ಸತ್ಯಾಂಶಗಳು ಒಳಗೊಳ್ಳದೇ ಇರುವುದರಿಂದ ಕೈಬಿಡಬೇಕು  ಎಂದು ರಾಕೇಶ್‌ ಸಿಂಗ್‌ ಅವರು ಕೋರಿದ್ದಾರೆ ಎಂದು ಗೊತ್ತಾಗಿದೆ.

 

ಈ ಕಡತಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಅಂದಿನ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ ಸಿಂಗ್‌ ಅವರು ಅತೀ ಮುಖ್ಯವಾದ ಮತ್ತು ಅಗಾಧ ಆರ್ಥಿಕ ಪರಿಣಾಮ ಹೊಂದಿದ್ರೂ ಕಡತವನ್ನು ಅವರ ಲಾಗಿನ್‌ನಲ್ಲೇ ಇರಿಸಿಕೊಂಡು ವಿಳಂಬ ಮಾಡಿದ್ದರು ಎಂದು ಕರ್ನಾಟಕ ರಾಷ್ಟ್ರ ಸಮಿತಿಯು ರಾಜ್ಯ ಉಪಾಧ್ಯಕ್ಷ ಮಂಜುನಾಥ್‌ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನಲ್ಲಲಿ ಆಪಾದಿಸಿದ್ದರು.

 

ಈ ದೂರಿನಲ್ಲಿರುವ ವಿಷಯಗಳಿಗೆ  ಸಂಬಂಧಿಸಿದಂತೆ, ದೂರು ಅರ್ಜಿಯಲ್ಲಿರುವ ಅಂಶಗಳಿಗೆ ಆಕ್ಷೇಪಣೆ/ಉತ್ತರವನ್ನು ಸೂಕ್ತ ದಾಖಲಾತಿಗಳೊಂದಿಗೆ 2025ರ ಅಕ್ಟೋಬರ್‍‌ 6ರೊಳಗೆ  ಸಲ್ಲಿಸಬೇಕು ಎಂದು ತಿಳಿಸಿತ್ತು.

 

ಗ್ಯಾಸ್‌ ಕಂಪನಿಗಳೊಂದಿಗೆ ಸಂಚು, ಭ್ರಷ್ಟಾಚಾರ ಆರೋಪ; ಪ್ರತಿಪಕ್ಷ ನಾಯಕರ ಪಿಎಸ್‌ ಸೇರಿ ಹಲವರಿಗೆ ನೋಟೀಸ್‌

 

ರಾಕೇಶ್ ಸಿಂಗ್‌ ಅವರು ನಗರಾಭಿವೃದ್ಧಿ ಇಲಾಖೆಯಲ್ಲಿ 2020ರ ಫೆ.14ರಿಂದ  2024ರ ಮೇ 31ರವರೆಗೆ  ಕಾರ್ಯನಿರ್ವಹಿಸಿದ್ದರು. ಮತ್ತು ಮೇ 31ರಂದೇ  ಸರ್ಕಾರದ ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದಾರೆ.  ಪ್ರಸ್ತುತ RERA ಸಂಸ್ಥೆಯಲ್ಲಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Your generous support will help us remain independent and work without fear.

Latest News

Related Posts