ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ʻಸ್ಮಾರ್ಟ್ ಸಿಟಿ ಮಿಷನ್ʼನ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರವು ಈ ಸಂಬಂಧ ತನಿಖೆಗೆ ಯಾವುದೇ ಆದೇಶ ಹೊರಡಿಸಿಲ್ಲ.
ʻಸ್ಮಾರ್ಟ್ ಸಿಟಿʼ ಯೋಜನೆಯ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ 415 ಕೋಟಿ ರು. ವೆಚ್ಚದ 26 ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಬೆಳಕಿಗೆ ಬಂದ ಬೆನ್ನಲ್ಲೇ, ಅಕ್ರಮಗಳ ತನಿಖೆಗೆ ಸರ್ಕಾರ ಇದುವರೆಗೂ ಯಾವುದೇ ಆದೇಶ ಹೊರಡಿಸಿಲ್ಲ. ಈ ಬಗ್ಗೆ ಅನೇಕ ದೂರುಗಳು ಬಂದಿದ್ದರೂ ಸಹ ಅವುಗಳ ಬಗ್ಗೆ ಕೇವಲ ಪರಿಶೀಲನೆ ನಡೆಸುತ್ತಿದೆ ಎಂಬುದು ಬಹಿರಂಗಗೊಂಡಿದೆ.
ಕಳೆದ ಜನವರಿಯಲ್ಲಿ ʻಸ್ಮಾರ್ಟ್ ಸಿಟಿʼ ಅನುಷ್ಠಾನದಲ್ಲಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ಅವರು ಈ ಕುರಿತು ತನಿಖೆಗೆ ಆದೇಶ ನೀಡಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ನಂತರ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ʻದೂರುಗಳೇ ಬಂದಿಲ್ಲ, ಹೀಗಾಗಿ ತನಿಖೆ ನಡೆಯುತ್ತಿಲ್ಲʼ ಎಂದು ವಿಧಾನ ಪರಿಷತ್‌ನಲ್ಲಿ ಪ್ರಕಟಿಸಿದ್ದರು.
ನಂತರ ಆಗಸ್ಟ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಕುರಿತಂತೆ ದೂರುಗಳು ಬಂದಿದ್ದು, ಇವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಧಾನಸಭೆಗೆ ತಿಳಿಸಿದ್ದರು.
ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ನಡೆದಿರುವ ವಿವಿಧ ರೀತಿಯ ಅಕ್ರಮ/ ಅವ್ಯವಹಾರ/ದುರುಪಯೋಗ/ ದುರ್ಬಳಕೆ ಕುರಿತಂತೆ ನಗರಾಭಿವೃದ್ಧಿ ಇಲಾಖೆಯು ತನಿಖೆ ನಡೆಸಲು ಹೊರಡಿಸಿದ ಆದೇಶದ ಪ್ರತಿ ಹಾಗೂ ಈ ಆದೇಶಕ್ಕೆ ಸಂಬಂಧಿಸಿದಂತೆ ತೆರೆದಿರುವ ಕಡತನವನ್ನು ಒದಗಿಸುವಂತೆ ʻದಿ ಫೈಲ್ʼ ಕೋರಿತ್ತು.
ಇದಕ್ಕೆ 2025ರ ಸೆ.26ರಂದು ಹಿಂಬರಹ ನೀಡಿದೆ. ರಾಜ್ಯದ 7 ನಗರಗಳಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿವಿಧ ರೀತಿಯ ಅಕ್ರಮ, ಅವ್ಯವಹಾರ, ದುರ್ಬಳಕೆ, ದುರುಪಯೋಗ ಕುರಿತಂತೆ ತನಿಖೆ ನಡೆಸಲು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಮಾಹಿತಿ ಒದಗಿಸಿದೆ.
ನಗರಾಭಿವೃದ್ಧಿ ಇಲಾಖೆಯ ಈ ರೀತಿಯ ನಡೆಯ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಯೋಜನೆಯಡಿ ನಡೆದ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಸಾಕಷ್ಟು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದರೂ ಇಲಾಖೆ ತನಿಖೆಯನ್ನೇಕೆ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿಲ್ಲ.
ಏನಿದು ಪ್ರಕರಣ?
ತಂತ್ರಜ್ಞಾನ ಆಧರಿತ, ಸಕಲ ಸೌಕರ್ಯಗಳನ್ನೊಳಗೊಂಡ, ಅತ್ಯುತ್ತಮ ಜೀವನ ಗುಣಮಟ್ಟ ನೀಡಬಲ್ಲ, ಸ್ವಚ್ಛ ಹಾಗೂ ಸುಸ್ಥಿರ ವಾತಾವರಣವನ್ನೊಳಗೊಂಡ ಮಾದರಿ ನಗರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 2015ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಜಾಗತಿಕ ಮಟ್ಟದ ನಗರಗಳ ನಿರ್ಮಾಣ ಇದರ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಆಗ ಪ್ರಕಟಿಸಿದ್ದರು.
ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ತುಮಕೂರು ಈ ಯೋಜನೆಗೆ ಆಯ್ಕೆಯಾಗಿದ್ದವು. ಈ ಏಳು ನಗರಗಳಲ್ಲಿ ಇದುವರೆಗೆ ಈ ಯೋಜನೆಯಡಿ ಪೂರ್ಣಗೊಂಡ ಬಹುತೇಕ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿಲ್ಲ. ಹಲವೆಡೆ ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದರು. ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ದವು.
ಕಳೆದ ಜನವರಿ 2ರ ಗುರುವಾರದಂದು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಈ ಯೋಜನೆಯ ಅನುಷ್ಠಾನದಲ್ಲಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದರು.
ಅಲ್ಲದೆ, ಈ ಅಕ್ರಮಗಳ ತನಿಖೆಗೆ ಸಮಿತಿ ರಚಿಸಿ ನಗರಾಭಿವೃದ್ಧಿ ಎಂದು ಇಲಾಖೆಯ ಕಾರ್ಯದರ್ಶಿಗೆ ಸಚಿವರು ಸೂಚನೆ ಕೂಡ ನೀಡಿದ್ದರು. ಈ ತನಿಖಾ ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್, ಆಯಾ ಸ್ಮಾರ್ಟ್ ಸಿಟಿ ವ್ಯಾಪ್ತಿಯ ವಿಶ್ವವಿದ್ಯಾಲಯಗಳ ತಾಂತ್ರಿಕ ಪರಿಣತರು ಮತ್ತು ಐಐಎಸ್‌ಸಿಯ ಒಬ್ಬ ತಜ್ಞರು ಇರಲಿದ್ದಾರೆ ಎಂದು ಈ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿತ್ತು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ತನಿಖೆ ನಡೆಸಿತ್ತು. ಈ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ ತನ್ನ ಎರಡನೇ ವರದಿಯಲ್ಲಿ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತೂ ಮಾಹಿತಿ ಒದಗಿಸಿತ್ತು. ಈ ಆಯೋಗದ ವರದಿಯನ್ನು ಸೆಪ್ಟೆಂಬರ್ 4 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಕೊಂಡಿತ್ತು. ಆದರೂ ತನಿಖೆಗೆ ಮಾತ್ರ ಇನ್ನೂ ಆದೇಶ ಹೊರಡಿಸಿಲ್ಲ.
ದೂರುಗಳೇ ಬಂದಿಲ್ಲ ಎಂದರು!
ʻಸ್ಮಾರ್ಟ್ ಸಿಟಿʼ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು ತನಿಖೆ ನಡೆಸುವುದಾಗಿ ಜನವರಿಯಲ್ಲಿ ಪ್ರಕಟಿಸಿದ್ದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್, ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ʻಅವ್ಯವಹಾರಗಳ ಕುರಿತು ನಿರ್ದಿಷ್ಟ ದೂರುಗಳು ದಾಖಲಾಗಿರುವುದಿಲ್ಲ. ಹೀಗಾಗಿ ತನಿಖೆ ನಡೆಸಿಲ್ಲʼ ಎಂದು ಪ್ರಕಟಿಸಿದ್ದರು.
ಈ ಸಂಬಂಧ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಎಂ.ನಾಗರಾಜು (ನಾಗರಾಜ್ ಯಾದವ್) ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, ಅವ್ಯವಹಾರದ ಬಗ್ಗೆ ದೂರೇ ಬಾರದಿರುವುದರಿಂದ ಇದರಲ್ಲಿ ಭಾಗಿಯಾದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದರು.
ಆದರೆ ವಿಧಾನ ಪರಿಷತ್ ಸದಸ್ಯ ಎಂ. ನಾಗರಾಜು ಈ ಉತ್ತರವನ್ನು ಒಪ್ಪಿಕೊಳ್ಳದೇ, ʻʻಪ್ರತಿ ʻಸ್ಮಾರ್ಟ್ ಸಿಟಿʼ ಯಲ್ಲಿಯೂ ಒಂದು ಸಾವಿರ ಕೋಟಿ ರು.ಗೂ ಹೆಚ್ಚಿನ ಹಣ ಖರ್ಚು ಮಾಡಿ ಕಾಮಗಾರಿ ನಡೆಸಲಾಗಿದೆ. ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆ ಆಗಬೇಕು. ಬಿಜೆಪಿ ಅಧಿಕಾರ ಅವಧಿಯಲ್ಲಿ ಈ ಅಕ್ರಮ ನಡೆದಿದೆ, ಈ ಕುರಿತು ಚರ್ಚೆಗೆ ಅರ್ಧಗಂಟೆಯಾದರೂ ಅವಕಾಶ ನೀಡಬೇಕುʼʼ ಎಂದು ಒತ್ತಾಯಿಸಿದ್ದರು.
ದೂರುಗಳ ಪರಿಶೀಲನೆ
ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದೂರುಗಳೇ ದಾಖಲಾಗಿಲ್ಲ ಎಂದು ಮಾರ್ಚ್‌ನಲ್ಲಿ ಹೇಳಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಆಗಸ್ಟ್‌ನಲ್ಲಿ ವಿಧಾನಸಭೆಯಲ್ಲಿಯೇ ಕಾಮಗಾರಿ ದೂರುಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.
ಈ ಸಂಬಂಧ ಯಲಹಂಕ ಶಾಸಕ ವಿಶ್ವನಾಥ್ ಎಸ್.ಆರ್. ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿರುವ ಕಲಾಮಂದಿರ್‌ನಲ್ಲಿನ ʻಮಲ್ಟಿ ಫೆಸಿಲಿಟಿ ಸೆಂಟರ್ʼ ಮತ್ತುʻಹೆರಿಟೇಜ್ ಪಾರ್ಕ್ʼ ಕಾಮಗಾರಿಗಳ ಗುಣಮಟ್ಟ ಕುರಿತಂತೆ ದೂರುಗಳು ಸ್ವೀಕೃತವಾಗಿರುತ್ತವೆ.
ಮಲ್ಟಿ ಫೆಸಿಲಿಟಿ ಸೆಂಟರ್ ಬಗ್ಗೆ ಬಂದಿರುವ ದೂರುಗಳ ಪರಿಶೀಲನೆ ಮಾಡಿ ವರದಿ ನೀಡಲು ಬೆಳಗಾವಿ ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ. ಹೆರಿಟೇಜ್ ಪಾರ್ಕ್ ಕಾಮಗಾರಿ ದೂರುಗಳ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಲು ಕೆಯುಐಡಿಎಫ್‌ಸಿ ವತಿಯಿಂದ ತಂಡವನ್ನು ರಚಿಸಲಾಗಿದೆ. ಇದಲ್ಲದೆ, ನಿರ್ದಿಷ್ಟ ದೂರು ಸ್ವೀಕೃತವಾದ ಸಂದರ್ಭಗಳಲ್ಲಿ ಕಾಮಗಾರಿಗಳ ಗುಣಮಟ್ಟ ಖಚಿತ ಪಡಿಸಿಕೊಳ್ಳಲು ಕಾಮಗಾರಿವಾರು 3ನೇ ವ್ಯಕ್ತಿಯ ತಪಾಸಣೆ ನಡೆಸುವ ಮೂಲಕ ಕ್ರಮವಹಿಸಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.
ಕಾಮಗಾರಿಗಳ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರೂ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂದೇ ಸಚಿವರು ಸಮರ್ಥಿಸಿಕೊಂಡಿದ್ದರು.
ಈ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಪರಿಮಾಣ ಹಾಗೂ ಗುಣಮಟ್ಟವನ್ನು ಪ್ರತಿ ಹಂತದಲ್ಲೂ ಪರೀಕ್ಷಿಸಿ ಖಚಿತಪಡಿಸಿಕೊಂಡು ದೃಢೀಕರಿಸಲು ಯೋಜನಾ ನಿರ್ವಹಣಾ ಸಮಾಲೋಚಕರನ್ನು (ಪಿಎಂಸಿ) ನೇಮಿಸಲಾಗಿದೆ.
ಜೊತೆಗೆ ಸ್ಮಾರ್ಟ್ ಸಿಟಿ ಅಭಿಯಂತರರೂ ಸಹ ಅನುಷ್ಠಾನದ ಪ್ರತಿ ಹಂತದಲ್ಲೂ ಸಹ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ತಾಂತ್ರಿಕವಾಗಿ ದೃಢೀಕರಿಸಿರುತ್ತಾರೆ. ಆಯಾಯಾ ಕಾಮಗಾರಿಗಳಿಗೆ ಅನ್ವಯವಾಗುವಂತಹ ಭಾರತೀಯ ಮಾನದಂಡ (ಐಎಸ್), ನ್ಯಾಷನಲ್ ಬಿಲ್ಡಿಂಗ್ ಕೋಡ್ (ಎನ್‌ಬಿಸಿ), ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಂಜಿನಿಯರಿಂಗ್ ಸಂಸ್ಥೆ (ಸಿಪಿಎಚ್‌ಇಒಒ)ಗಳ ಮಾನದಂಡಗಳ ಅನುಸಾರವೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ʻಸ್ಮಾರ್ಟ್ ಸಿಟಿʼ ಅನುದಾನದಡಿ ಕೈಗೊಂಡ ಒಟ್ಟು 6,662.26 ಕೋಟಿ ರು. ಮೊತ್ತದ 676 ಕಾಮಗಾರಿಗಳಲ್ಲಿ 5.895.04 ಕೋಟಿ ರು. ಮೊತ್ತದ 649 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 750.07 ಕೋಟಿ ರು. ಮೊತ್ತದ 23 ಕಾಮಗಾರಿಗಳು ಪುಗತಿಯಲ್ಲಿದ್ದು, ಈ ಕಾಮಗಾರಿಗಳ ಪೈಕಿ ಇಲ್ಲಿಯವರೆಗೆ 567.71 ಕೋಟಿ ರು. ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಪಿ.ಪಿ.ಪಿ ಮಾದರಿಯಡಿ ಕೈಗೊಂಡ ಒಟ್ಟು 1,103.78 ಕೋಟಿ ರು. ಮೊತ್ತದ 26 ಕಾಮಗಾರಿಗಳಲ್ಲಿ 350.64 ರು. ಮೊತ್ತದ 14 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 613.01 ಕೋಟಿ ರು. ಮೊತ್ತದ 11 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದ್ದರು.
ಈ ಸ್ಮಾರ್ಟ್ ಸಿಟಿ ಯೋಜನೆಗೆ ಇದುವರೆಗೆ ಕೇಂದ್ರ ಸರ್ಕಾರ ಒಟ್ಟು 3,428 ಕೋಟಿ ರು. ನೀಡಿದ್ದರೆ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕಿಂತ ಹೆಚ್ಚು ಎಂದರೆ 3500 ಕೋಟಿ ರು. ಅನುದಾನ ನೀಡಿದೆ ಎಂದು ಸಚಿವ ಸಚಿವ ಬೈರತಿ ಸುರೇಶ್, ಶಾಸಕ ವಿಶ್ವನಾಥ್ ಎಸ್.ಆರ್. ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು.
ಸ್ಮಾರ್ಟ್ ಸಿಟಿಯ ಅವಧಿ ಮುಗಿದರೂ ಪೂರ್ಣವಾಗದ ಕಾಮಗಾರಿ; ಆಮೆಗತಿಯಲ್ಲಿ 26 ಯೋಜನೆಗಳು!
ಕೇಂದ್ರ ಸರ್ಕಾರದ ʻಸ್ಮಾರ್ಟ್‌ಸಿಟಿ ಮಿಷನ್ʼ ಅವಧಿ ಕಳೆದ ಮಾರ್ಚ್ 31 ಕ್ಕೇ ಮುಗಿದು ಹೋಗಿದೆ. ಅವಧಿ ಮುಗಿದರೂ ರಾಜ್ಯದಲ್ಲಿನ 26 ಯೋಜನೆಗಳು ಪೂರ್ಣಗೊಂಡಿರಲಿಲ್ಲ. ಈ ಸಂಬಂಧ ಕೇಂದ್ರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಮುಂದಿನ ಡಿಸೆಂಬರ್ ಅಂತ್ಯದ ಒಳಗೆ ಪೂರ್ಣ ಗೊಳಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.