ಬೆಂಗಳೂರು; ರಾಜ್ಯದ ಹಲವು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ದುರಸ್ತಿ ಮತ್ತು ನಿರ್ವಹಣೆಗೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರುಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಕರ್ನಾಟಕ ನಗರ ನೀರು ಒಳಚರಂಡಿ ಮಂಡಳಿಯಲ್ಲಿ ಅನುದಾನವಾಗಲೀ, ಹಣಕಾಸಿನ ಲಭ್ಯತೆಯಾಗಲಿ ಇಲ್ಲ.
ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಏದುಸಿರು ಬಿಡುತ್ತಿರುವ ಮಂಡಳಿ ಇದೀಗ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸಿನ ಸಂಸ್ಥೆಗಳ ಬಳಿ ಸಾಲಕ್ಕಾಗಿ ಮೊರೆ ಇಟ್ಟಿದೆ. ಆದರೆ ಸರ್ಕಾರವು ಇದುವರೆಗೂ ಆರ್ಥಿಕ ಅನುಮತಿ ನೀಡಿಲ್ಲ.
ಈ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು 2025ರ ಆಗಸ್ಟ್ 28ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪಣಿ ಬರೆದಿದ್ದಾರೆ. ಈ ಟಿಪ್ಪಣಿಯಲ್ಲಿನ ಅಂಶಗಳು, ಒಳಚರಂಡಿ ಮಂಡಳಿಯ ಆರ್ಥಿಕ ಪರಿಸ್ಥಿತಿಯ ಮತ್ತೊಂದು ಮುಖವನ್ನು ತೆರೆದಿಟ್ಟಿದೆ.
ಸಚಿವ ಬೈರತಿ ಸುರೇಶ್ ಅವರು ಬರೆದಿರುವ ಟಿಪ್ಪಣಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಟಿಪ್ಪಣಿಯಲ್ಲೇನಿದೆ?
ರಾಜ್ಯದ ಹಲವು ಶಾಸಕರುಗಳು ತಮ್ಮ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೊಳ್ಳಲು ಮತ್ತು ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೋರಿ ಪ್ರಸ್ತಾವಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಸದರಿ ಕಾಮಗಾರಿಗಳಿಗೆ ಇಲಾಖೆ, ಮಂಡಳಿಯಲ್ಲಿ ಅನುದಾನ, ಹಣಕಾಸಿನ ಲಭ್ಯತೆ ಇರುವುದಿಲ್ಲ. ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನವನ್ನು ಹಣಕಾಸು ಸಂಸ್ಥೆ, ಬ್ಯಾಂಕ್‌ಗಳಿಂದ ಸಾಲ ಪಡೆದು ಕೈಗೊಳ್ಳಬಹುದಾಗಿದೆ.
ಆದ ಕಾರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮತ್ತು ಪೂರ್ಣಗೊಳಿಸುವ ಸಲುವಾಗಿ ಹಣಕಾಸು ಸಂಸ್ಥೆ, ಬ್ಯಾಂಕ್‌ಗಳಿಂದ ಸಾಲ ಪಡೆಯಲು ಆರ್ಥಿಕ ಇಲಾಖೆಯ ಅನುಮತಿ ಕೊಡಿಸಿಕೊಡಬೇಕು ಎಂದು ಸಚಿವ ಬೈರತಿ ಸುರೇಶ್ ಅವರು ಮುಖ್ಯಮಂತ್ರಿಗೆ ಬರೆದಿರುವ ಟಿಪ್ಪಣಿಯಲ್ಲಿ ಕೋರಿರುವುದು ತಿಳಿದು ಬಂದಿದೆ.

ಒಳಚರಂಡಿ ಮಂಡಳಿಯ ಸದ್ಯದ ಸ್ಥಿತಿಯೇನಾಗಿದೆ?
2024ರ ಮಾರ್ಚ್ 2024ರವರೆಗೆ 169 ಸಂಖ್ಯೆಯಲ್ಲಿ ಒಳಚರಂಡಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕಾಗಿ 4,994.09 ಕೋಟಿ ರು ವೆಚ್ಚವಾಗಿತ್ತು.
ಮಂಡಳಿಯು ತನ್ನ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಮತ್ತು ಕೈಗೊಂಡಿರುವ ಒಳಚರಂಡಿ ಯೋಜನೆಗಳಿಗೆ ಆರ್ಥಿಕ ಮಾದರಿಯನ್ನು ಇಟ್ಟುಕೊಂಡಿದೆ. ಇದರ ಪ್ರಕಾರ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ ಯೋಜನೆಗಳಿಗೆ ಸರ್ಕಾರವು ಶೇ. 50ರಷ್ಟು ಅನುದಾನ ನೀಡಲಿದೆ. ಶೇ. 35ರಷ್ಟು ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯಲಿದೆ. ಸ್ಥಳೀಯ ಸಂಸ್ಥೆಗಳ ಪಾಲು ಇದರಲ್ಲಿ ಶೇ. 15ರಷ್ಟಿರುತ್ತದೆ.
ನಗರಸಭೆಗಳಲ್ಲಿ ಶೇ. 70ರಷ್ಟು ಸರ್ಕಾರವು ಅನುದಾನ ನೀಡಲಿದೆ. ಶೇ. 20ರಷ್ಟು ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯಲಿದೆ. ಶೇ. 10ರಷ್ಟು ಸ್ಥಳೀಯ ಸಂಸ್ಥೆಗಳ ಪಾಲಿದೆ. ಪುರಸಭೆಗಳು ಸಹ ಶೇ. 75ರಷ್ಟು ಸರ್ಕಾರದಿಂದ ಅನುದಾನ ಪಡೆಯಲಿದೆ. ಶೇ. 20ರಷ್ಟು ಆರ್ಥಿಕ ಸಂಸ್ಥೆಗಳಿಗೆ ಸಾಲ ಪಡೆಯಲಿದೆ. ಶೇ. 5ರಷ್ಟು ಸ್ಥಳೀಯ ಸಂಸ್ಥೆಗಳ ಪಾಲಿದೆ. ಅದೇ ರೀತಿ ಪಟ್ಟಣ ಪಂಚಾಯ್ತಿಗಳಿಗೆ ಶೇ. 95ರಷ್ಟು ಸರ್ಕಾರವು ಅನುದಾನ ನೀಡಲಿದೆ. ಸ್ಥಳೀಯ ಸಂಸ್ಘೆಗಳ ಪಾಲು ಶೇ. 5ರಷ್ಟಿರುವುದು ಒಳಚರಂಡಿ ಮಂಡಳಿಯ ವಾರ್ಷಿಕ ವರದಿಯಿಂದ ತಿಳಿದು ಬಂದಿದೆ.
ಮಂಡಳಿಯು ಒಳಚರಂಡಿ ಯೋಜನೆಗಳನ್ನು ಒಳಗೊಂಡಂತೆ 2023-24ನೇ ಸಾಲಿನಲ್ಲಿ 286 ಯೋಜನೆಗಳು ಕ್ರಿಯಾ ಯೋಜನೆ ಸಿದ್ಧಪಡಿಸಿತ್ತು. ಇದರಲ್ಲಿ 116 ಕುಡಿಯುವ ನೀರು ಸರಬರಾಜು ಯೋಜನೆಗಳು ಮತ್ತು 170 ಒಳಚರಂಡಿ ಯೋಜನೆಗಳಿದ್ದವು. ಇದಕ್ಕಾಗಿ 1,400 ಕೋಟಿ ರು ಆಯವ್ಯಯವನ್ನು ಸಿದ್ಧಪಡಿಸಿತ್ತು. ಈ ಪೈಕಿ ರಾಜ್ಯ ಸಕಾfರವು 900 ಕೋಟಿ ರು.ಗಳ ಆಯವಯ್ಯದ್ಲಲಿ ಹಂಚಿಕೆ ಮಾಡಲಾಗಿತ್ತು.
ಇದಕ್ಕಾಗಿ ಮಂಡಳಿಯು ಸಂಪನ್ಮೂಲ ಕ್ರೋಢೀಕರಣ ಮಾಡಿಕೊಂಡಿತ್ತು.
2023-24ರಲ್ಲಿ ಸಂಪನ್ಮೂಲ ಕ್ರೋಢೀಕರಣ
ಸರ್ಕಾರದ ಅನುದಾನವು 800 ಕೋಟಿಯಷ್ಟಿತ್ತು. ಇದರಲ್ಲಿ 600 ಕೋಟಿ ರು ಬಿಡುಗುಡೆ ಮಾಡಿತ್ತು. ಐಇಬಿಆರ್ ಹಿಂದಿನ ಆರ್ಥಿಕ ವರ್ಷಗಳಲ್ಲಿ ಖರ್ಚಾಗದೇ ಉಳಿದ ಮತ್ತು 551.45 ಕೋಟಿಯಷ್ಟಿತ್ತು. ಈ ಪೈಕಿ 186.13 ಕೋಟಿಯ ಬಿಡುಗಡೆ ಮಾಡಿತ್ತು. ಇದರಲ್ಲಿ ಸ್ಥಳೀಯ ಸಂಸ್ಥೆಗಳ ವಂತಿಕೆಯು 20 ಕೋಟಿಯಷ್ಟಿತ್ತು. ಇದರಲ್ಲಿ 6.12 ಕಟಿಯನ್ನು ಬಿಡುಗಡೆ ಮಾಡಿತ್ತು.
ಇತರೆ ಫಲಾನುಭವಿಗಳು 8.55 ಕೋಟಿ ಸಂಪನ್ಮೂಲ ಕ್ರೋಢಿಕರಿಸಿದ್ದರೇ ಇದರಲ್ಲಿ 8 ಕೋಟಿಯನ್ನು ಬಿಡುಗಡೆ ಮಾಡಿತ್ತು. ಆರ್‍ಡಿಪಿಆರ್ ವಂತಿಕೆಯು 20 ಕೋಟಿ ಇತ್ತು. ಆದರೆ 52.50 ಕೋಟಿ ಬಿಡುಗಡೆ ಮಾಡಿತ್ತು ಒಟ್ಟಾರೆ 1,400 ಕೋಟಿ ಸಂಪನ್ಮೂಲ ಕ್ರೋಢೀಕರಣದ ಪೈಕಿ 852.75 ಕೋಟಿ ಬಿಡುಗಡೆ ಮಾಡಿತ್ತು. ಎಂದು ವಾರ್ಷಿಕ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹಿಂದಿನ 3 ವರ್ಷಗಳ ಯೋಜನೆ ವಿವರ
ಕಳೆದ ಮೂರು ವರ್ಷಗಳಲ್ಲಿ (2021-22ರಿಂದ 2023-24ರವರೆಗೆ) ಕೈಗೆತ್ತಿಕೊಂಡಿದ್ದ 8 ಒಳಚರಂಡಿ ಯೊಜನೆಗಳ ಪೈಕಿ 2 ನ್ನು ಪೂರ್ಣಗೊಳಿಸಿತ್ತು. 2022-23ರಲ್ಲಿ 16 ಯೋಜನೆಗಳ ಪೈಕಿ 6ರಲ್ಲದೇ ಗುರಿ ಸಾಧಿಸಿತ್ತು. 2023-24ರಲ್ಲಿ 44 ಯೋಜನೆಗಳಲ್ಲಿ 21ನ್ನೇ ಗುರಿ ಸಾಧಿಸಿತ್ತು. ಒಳಚರಂಡಿ ಯೋಜನೆಗಳಿಗಾಗಿ 2021-22ರಲ್ಲಿ 130 ಕೋಟಿ ರು ಆಯವ್ಯಯದಲ್ಲಿ ನಿಗದಿಪಡಿಸಿತ್ತು. ಇದರಲ್ಲಿ 130 ಕೋಟಿಯನ್ನೂ ಬಿಡುಗಡೆ ಮಾಡಿತ್ತು. ಆದರೆ 208.63 ಕೋಟಿಯನ್ನು ವೆಚ್ಚ ಮಾಡಿತ್ತು ಎಂದು ವಾರ್ಷಿಕ ವರದಿಯಲ್ಲಿ ದಾಖಲಿಸಲಾಗಿದೆ.
2022-23ರಲ್ಲಿ ಆಯವ್ಯಯದಲ್ಲಿ ಘೋಷಿಸಿದ್ದ 200 ಕೋಟಿ ರು ಗಳನ್ನೂ ಬಿಡುಗಡೆ ಮಾಡಿತ್ತು. ಅದರೆ 374.92 ಕೋಟಿಯನ್ನು ಖರ್ಚು ಮಾಡಿತ್ತು. 2023-24ರಲ್ಲಿ ಆಯವ್ಯಯದಲ್ಲಿ 350.00 ಕೋಟಿ ನಿಗದಿಪಡಿಸಿದ್ದರೇ, 250 ಕೋಟಿ ಬಿಡುಗಡೆಯಾಗಿತ್ತು. ಆದರೆ 326.18 ಕೋಟಿಯನ್ನು ವೆಚ್ಚ ಮಾಡಿತ್ತು.
2023-24ನೇ ಸಾಲಿನಲ್ಲಿ ಮದ್ದೂರು, ಬೇಲೂರು, ಬನ್ನೂರು, ರಾಮನಗರ, ಪಿರಿಯಾಪಟ್ಟಣ, ಹುಣಸೂರು, ಜೇವರ್ಗಿ, ನಂಜನಗೂಡು ಬಾಗೇಪಲ್ಲಿ, ಭದ್ರಾವತಿ, ಶಿವಮೊಗ್ಗದಲ್ಲಿ ಒಳಚರಂಡಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಂದಾಜು 32,507.60 ಲಕ್ಷ ರು.ಗಳನ್ನು ಅಂದಾಜು ವೆಚ್ಚವಿತ್ತು. ನಂತರ ಅದನ್ನು ಪರಿಷಗಕೃತಗೊಳಿಸಿದ್ದ ಮಂಡಳಿಯು 33,460.54 ಲಕ್ಷ ರು.ಗೇರಿಸಿತ್ತು.
2024-25ನೇ ಸಾಲಿನಲ್ಲಿ ಒಳಚರಂಡಿ ಯೋಜನೆಗಳು 51ರಷ್ಟದ್ದವು. ಇದರಲ್ಲಿ 23 ಯೋಜನೆಗಳು ಮುಂದುವರೆದ ಯೋಜನೆಗಳಲ್ಲಿದ್ದವು. 72 ಹೊಸ ಪ್ರಸ್ತಾವಗಳಿದ್ದವು. ಇದಕ್ಕಾಗಿ 484.52 ಕೋಟಿ ರು ಆಯವ್ಯಯದಲ್ಲಿ ಹಂಚಿಕೆಯಾಗಿತ್ತು.
2024-25ನೇ ಸಾಲಿನಲ್ಲಿ ಒಳಚರಂಡಿ ಯೋಜನೆಗಳು
ಬಿಡದಿ, ಶಿಕಾರಿಪುರ, ನ್ಯಾಮತಿ, ಹೊನ್ನಾಳಿ, ಕನಕಪುರ, ಸಾಗರ, ಸುಬ್ರಹ್ಮಣ್ಯ, ಹಾಸನ, ಶ್ರೀರಂಗಪಟ್ಟಣ, ಸೇಡಂ, ಹಳಿಯಾಳ, ಎಂ ಕೆ ಹುಬ್ಬಳ್ಳಿ, ಕುಡಚಿ, ಸೌದತ್ತಿ, ಖಾನಾಪುರ, ಮುನವಳ್ಳಿ, ಉಗರ ಖರ್ದು, ಎಕ್ಸಂಬಾ, ಐನಾಪುರ, ಚಿಂಚಿಲಿ, ಹುಬ್ಬಳ್ಳಿ, ಸಿಂಧಗಿ, ಬೈಲಹೊಂಗಲಕ್ಕೆ ಒಟ್ಟಾರೆ 80027.50 ಲಕ್ಷಕ್ಕೆ ಅಂದಾಜಿಸಿತ್ತು. ನಂತರ ಇದನ್ನು 8536.09 ಲಕ್ಷಕ್ಕೆ ಪರಿಷ್ಕರಿಸಿತ್ತು.

2024-25ನೇ ಸಾಲಿನಲ್ಲಿ ಒಳಚರಂಡಿ ಯೋಜನೆಗಳಿಗಾಗಿ ಹೊಸದಾಗಿ ಪ್ರಸ್ತಾವಿಸಿತ್ತು ಚಿಂತಾಮಣಿ, ಗೌರಿಬಿದನೂರು, ಹುಣಸೂರು, ಮಂಡ್ಯ, ಮುಧೋಳ, ಶಹಪುರ, ಶೋರಾಂಪುರ ಸಿರಗುಪ್ಪಾ, ಅಳಂದ, ಅಥಣಿ, ಅಣ್ಣಿಗೇರಿ, ಬಾದಾಮಿ, ಗುಳೇದ ಗುಡ್ಡ, ಹಾರೋಗೇರಿ, ಕುಡಚಿ, ಕುಷ್ಟಗಿ, ಲಕ್ಷ್ಮೇಶ್ವರ, ಮಳವಳ್ಳಿ, ಮುನವಳ್ಳಿ, ನಾಗಮಂಗಲ, ನಗರುಂದ, ಪಾಂಡವಪುರ, ಸವದತ್ತಿ, ಶ್ರೀರಂಗಪಟ್ಟಣ, ವಾಡಿ, ಬೆಳ್ಳೂರು,
ಕೆರೂರು, ಖಾನಾಪುರ, ಕೊರಟಗೆರೆ, ಕುಂದಗೋಳ, ಲಕ್ಷ್ಮೇಶ್ವರ, ಮುಳಗುಂದ, ತುರುವೇಕೆರೆ 2ನೇ ಹಂತ, ಎಂಕೆ ಹುಬ್ಬಳ್ಳಿ, ಹೊಸಕೋಟೆ, ಚಿಂಚಿಲಿ, ಎಕ್ಸಾಂಬಾ, ಐನಾಪುರ, ಶಿಡ್ಲಘಟ್ಟ, ಹಿರಿಯೂರು, ಉಡುಪಿ, ಚಳ್ಳಕೆರೆ, ನೆಲಮಂಗಲ, ಚನ್ನಪಟ್ಟಣ 2ನೇ ಹಂತ, ಸಂಕೇಶ್ವರ, ದೇವದುರ್ಗ 2ನೇ ಹಂತ, ಹಿರೇಕೆರೂರು, ಮಾದನಾಯಕನಹಳ್ಳೀ, ಹೊಸಕೋಟೆ, ಹಾರೋಹಳ್ಳಿ, ನೆಲಮಂಗಲ, ನವಲಗುಂದ,
ಹುಬ್ಬಳ್ಳಿ ದಾರವಾಢ, ಲಿಮಗಸಗೂರು, ಬಳ್ಳಾರಿ, ಕಮಲಾಪುರ, ಬೆಳಗಾವಿ, ರಾಯಚೂರು, ಮಯಸೂರು, ಪಾಂವಡಪುರ, ಮುದ್ದೇಬಿಹಾಳ್, ಕಾರ್ಕಳ, ಉಡುಪಿ, ಬಂಟ್ವಾಳ, ಹೊಳೆನರೀಸಪುರ, ಚನ್ನರಾಯಪಟ್ಟಣ, ಕೊರಟಗೆರೆಯಲ್ಲಿ ಅಂದಾಜು 858252.20 ಲಕ್ಷಕ್ಕೆ ಅಂದಾಜಿಸಿತ್ತು.
ಕರ್ನಾಟಕ ನಗರ ನೀರು ಸರಬರಾಜು ಮ್ತು ಒಳಚರಂಡಿ ಮಂಡಳಿಗೆ ಸಾಲದ ಮರುಪಾವತಿಗಾಗಿ 2020-21ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡಿತ್ತು.
ವಿವಿಧ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳಿಗಾಗಿ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಮರು ಪಾವತಿಗಾಗಿ 2020-21ನೇ ಸಾಲಿ ಆಯವ್ಯಯದ ಎಸ್‌ಎಫ್‌ಸಿ ಪ್ರವೇಶ ತೆರಿಗೆ ಅಡಿ 32192.00 ಲಕ್ಷ ರುಗ.ಳನ್ನು ನಿಗದಿಪಡಿಸಿತ್ತು.
ಈ ಅನುದಾನದಿಂದ 8334.66 ಲಕ್ಷ ರುಗ.ಳನ್ನು ಮೊದಲನೇ ತ್ರೈಮಾಸಿಕ ಅವಧಿಗೆ ಬಿಡುಗಡೆ ಮಾಡುವಂತೆ ಮುಖ್ಯ ಲೆಕ್ಕಾಧಿಕಾರಿಗಳ ಕೋರಿಕೆ ಮೇರೆಗೆ 2020ರಲ್ಲಿ 944.69 ಲಕ್ಷ ರು. ಬಿಡುಗಡೆಯಾಗಿತ್ತು.
ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಲ್ಲಿ ಪ್ರತಿ ಕಿಲೋ ಮಿಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ ಹಲವು ದಶಕಗಳ ಹಿಂದೆ ಅಳವಡಿಸಿರುವ ಒಳಚರಂಡಿಯಲ್ಲಿ (ಯುಜಿಡಿ) ಅಳವಡಿಸಿದ ಕೊಳವೆಗಳು ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಹೀಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಒಳರಂಡಿ ವ್ಯವಸ್ಥೆ ದುರಸ್ತಿ ಮತ್ತು ನಿರ್ವಹಣೆ ಮಾಡುವುದು ಮಾಡುವುದು ದಿನಕಳೆದಂತೆ ಸವಾಲಾಗಿ ಪರಿಣಮಿಸಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲ ಕ 40 ಕೋಟಿ ರು ವೆಚ್ಚದಲ್ಲಿ ವಿವಿಧೆಡೆ ಒಳಚರಂಡಿ ಕೆಲಸ ಆರಂಭಿಸಲಾಗಿದೆ. ಧಾರವಾಡದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲ ಎಂಬ ಆರೋಪಗಳಿವೆ.

ಜಿಲ್ಲಾ ಕೇಂದ್ರವಾಗಿದ್ದರೂ ಸಹ ಶೇ. 40ರಷ್ಟು ಪ್ರದೇಶದಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಇನ್ನುಳಿದ ಶೇ. 60ರಷ್ಟು ಪ್ರದೇಶದಲ್ಲಿಒಳಚರಂಡಿ ವ್ಯವಸ್ಥೆ ಮಾಡಬೇಕಿದೆ. ವಿವಿಧ ಯೋಜನೆಗಳಡಿ ಯುಜಿಡಿ ಕಾಮಗಾರಿ ನಿರ್ವಹಿಸಲು ಮಹಾನಗರಪಾಲಿಕೆಯು ಸರ್ಕಾರದಿಂದ ಅನುದಾನ ಪಡೆಯುವುದಕ್ಕಾಗಿ ಪ್ರಸ್ತಾವ ಸಲ್ಲಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಹಣಕಾಸು ಖಾತೆಗಳಲ್ಲಿ ಅಪರಾತಪರಾ; ಒಳಚರಂಡಿ ಮಂಡಳಿಯಲ್ಲಿ 30 ಕೋಟಿ ವ್ಯತ್ಯಾಸ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಳಚರಂಡಿ ಮಂಡಳಿಯು ಪಡೆದಿದ್ದ ಸಾಲಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರಗಳಲ್ಲಿ ಅಪರಾ ತಪರಾ ನಡೆದಿತ್ತು. ಈ ಕುರಿತು ‘ದಿ ಫೈಲ್’, ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
200 ಕೋಟಿ ಮೊತ್ತದ ಕಾಮಗಾರಿ; ಬಾರದ ಅನುದಾನ, ಮಂಡಳಿಯ ಆರ್ಥಿಕ ಪರಿಸ್ಥಿತಿ ಹದಗೆಡಲಿದೆಯೇ?
200 ಕೋಟಿ ರು ಅನುದಾನ ನೀಡದಿದ್ದಲ್ಲಿ ಮಂಡಳಿಯ ಆರ್ಥಿಕ ಪರಿಸ್ಥಿತಿಯು ಹದಗೆಡಲಿದೆ ಎಂದು ಸಚಿವ ಬೈರತಿ ಸುರೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದ ಟಿಪ್ಪಣಿ ಆಧರಿಸಿ ‘ದಿ ಫೈಲ್’, ವರದಿ ಪ್ರಕಟಿಸಿತ್ತು.