ಹಣಕಾಸು ಖಾತೆಗಳಲ್ಲಿ ಅಪರಾತಪರಾ; ಒಳಚರಂಡಿ ಮಂಡಳಿಯಲ್ಲಿ 30 ಕೋಟಿ ವ್ಯತ್ಯಾಸ

ಬೆಂಗಳೂರು; ಬೆಂಗಳೂರು ಜಲ ಮಂಡಳಿ ಸೇರಿದಂತೆ ಹಲವು ನಿಗಮ ಮಂಡಳಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಕೋಟ್ಯಂತರ ಸಾಲದ ಮೊತ್ತಕ್ಕೂ ಮಂಡಳಿಗಳ ಹಣಕಾಸಿನ ಲೆಕ್ಕದ ಖಾತೆಯಲ್ಲಿರುವ ಮೊತ್ತದ ಮಧ್ಯೆ ಭಾರೀ ವ್ಯತ್ಯಾಸವಿರುವುದು ಕಂಡು ಬಂದಿದೆ. ಜಿಕಾ ಸಾಲವನ್ನು ಅನುದಾನವನ್ನಾಗಿ ಪರಿವರ್ತಿಸಲಾಗಿರುವ ಬಗ್ಗೆ ಸರ್ಕಾರಿ ಆದೇಶಗಳೂ ಇಲ್ಲದಿರುವುದು ಬಹಿರಂಗವಾಗಿದೆ.

ಸರ್ಕಾರದಿಂದ ಬಿಡುಗಡೆಯಾದ ಸಾಲ, ಮರು ಪಾವತಿ ಮತ್ತು ಬಾಕಿ ಕುರಿತು 2021ರ ಆಗಸ್ಟ್‌ 12ರಂದು ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಂಡಳಿಗಳ ಹಣಕಾಸು ಖಾತೆಗಳಲ್ಲಿನ ಅಪರಾತಪರಾಗಳು ಅನಾವರಣಗೊಂಡಿವೆ. ನಿಗಮ ಮಂಡಳಿಗಳ ಸಾಲದ ಮೊತ್ತದಲ್ಲಿ ಹಲವು ವ್ಯತ್ಯಾಸಗಳು ಇರುವುದು ಕಂಡು ಬಂದಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಒಳಚರಂಡಿ ಮಂಡಳಿಯಲ್ಲಿ 31 ಕೋಟಿ ವ್ಯತ್ಯಾಸ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಬಿಡುಗಡೆಯಾಗಿದ್ದ ಒಟ್ಟು ಸಾಲದ ಮೊತ್ತಕ್ಕೂ ಹಣಕಾಸಿನ ಖಾತೆಗಳಲ್ಲಿ 31 ಕೋಟಿ ರು.ವ್ಯತ್ಯಾಸ ಕಂಡು ಬಂದಿರುವುದು ನಡವಳಿಯಿಂದ ತಿಳಿದು ಬಂದಿದೆ. ಈ ಮಂಡಳಿಗೆ ಸರ್ಕಾರದಿಂದ ಒಟ್ಟು 291 ಕೋಟಿ ಸಾಲ ಬಿಡುಗಡೆಯಾಗಿತ್ತು. ಆದರೆ ಮಂಡಳಿಯ ಹಣಕಾಸು ಖಾತೆಗಳ ಪ್ರಕಾರ 260 ಕೋಟಿ ಎಂದು ಕಂಡು ಬಂದಿದೆ. ಸಾಲಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಆದೇಶಗಳನ್ನು ಲಭ್ಯಪಡಿಸಬೇಕು ಎಂದು ನಿರ್ದೇಶಕರಿಗೆ ಸೂಚಿಸಿರುವುದು ಗೊತ್ತಾಗಿದೆ. ಈ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.

ಬೆಂಗಳೂರು ನೀರು ಸರಬರಾಜು ಮಂಡಳಿಗೆ ಎಎಲ್‌ಎಂ ಪ್ರಕಾರ ಒಟ್ಟು 6,426.52 ಕೋಟಿ ರು. ಬಿಡುಗಡೆ ಆಗಿತ್ತು. ಆದರೆ ಮರು ಪಾವತಿಯಾಗಿಲ್ಲ. ಬದಲಿಗೆ ಸರ್ಕಾರದ ಲೆಕ್ಕ ಶೀರ್ಷಿಕೆ 6004ರಲ್ಲಿ 303.08 ಕೋಟಿ ರು.ಗಳು ಕ್ರೆಡಿಟ್‌ ಆಗಿದೆ. ಸರ್ಕಾರವು ಬಿಡುಗಡೆ ಮಾಡಿರುವ ಜಿಕಾ ಸಾಲವನ್ನು ಗ್ರ್ಯಾಂಟ್‌ ಆಗಿ ಪರಿವರ್ತಿಸಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಒಪ್ಪಿದ್ದರೂ ಪರಿವರ್ತನೆಯಾಗಿರುವ ಬಗ್ಗೆ ಸರ್ಕಾರಿ ಆದೇಶಗಳೇ ಇಲ್ಲ ಎಂಬ ಸಂಗತಿ ಸಭೆಯ ನಡವಳಿಯಿಂದ ಬೆಳಕಿಗೆ ಬಂದಿದೆ.

ಪರಿವರ್ತನೆಯಾಗಿರುವ ಬಗ್ಗೆ ಸರ್ಕಾರಿ ಆದೇಶಗಳು ಹೊರಡಿಸಿದ್ದಲ್ಲಿ ಮಾತ್ರ ಗ್ರ್ಯಾಂಟ್‌ ಆಗಿ ಪರಿವರ್ತನೆಯಾಗಲಿದೆ. ಇಲ್ಲದಿದ್ದಲ್ಲಿ ಅದು ಸಾಲವಾಗಿಯೇ ಉಳಿದಿರುತ್ತದೆ. ಹೀಗಾಗಿ ಲೆಕ್ಕ ಶೀರ್ಷಿಕೆ 6004ರಲ್ಲಿ ಕ್ರೆಡಿಟ್‌ ಆಗಿ ಬಿಡಬ್ಲ್ಯೂಎಸ್‌ಎಸ್‌ಬಿಗೆ ಖಾತೆಗೆ ಕ್ರೆಡಿಟ್‌ ಆಗಿರುವ 303.08 ಕೋಟಿ ರು.ಗಳ ಹೆಚ್ಚಿನ ಮಾಹಿತಿ ಒದಗಿಸಬೇಕು ಎಂದು ಸಭೆಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.

ಹಾಗೆಯೇ ಜಿಕಾ ಸಾಲಗಳನ್ನು ಅನುದಾನವಾಗಿ ಪರಿವರ್ತನೆ ಮಾಡಿರುವ ಬಗ್ಗೆಸರ್ಕಾರದ ಆದೇಶಗಳನ್ನು ಲಭ್ಯಪಡಿಸಬೇಕು. ಇತರೆ ಸಾಲಗಳಿಗೆ ಸಂಬಂಧಿಸಿದಂತೆ ಷರತ್ತು ಮತ್ತು ನಿಬಂಧನೆಗಳನ್ನು ಹೊರಡಿಸದೇ ಇರುವ ಪ್ರಕರಣಗಳಲ್ಲಿ ಆಡಳಿತ ಇಲಾಖೆಯು ಕೂಡಲೇ ಷರತ್ತು ನಿಬಂಧನೆಗಳನ್ನು ಹೊರಡಿಸಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಮಂಡಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಒಟ್ಟು ಸಾಲದ ಮೊತ್ತ, ಸಂಸ್ಥೆಯ ಎಎಲ್‌ಎಂ ಶಾಖೆ ಹಾಗೂ ಹಣಕಾಸಿನ ಖಾತೆಗಳಲ್ಲಿನ ಮೊತ್ತಕ್ಕೂ ವ್ಯತ್ಯಾಸ ಬರುತ್ತಿದೆ. ಈ ಕುರಿತು ಎರಡೂ ಶಾಖೆಗಳು ಮಹಾಲೇಖಪಾಲರೊಂದಿಗೆ ಸಮನ್ವಯ ಮಾಡಿಕೊಳ್ಳಲು ಕ್ರಮ ವಹಿಸಬೇಕು ಎಂದು ಹೇಳಿರುವುದು ನಡವಳಿಯಿಂದ ಗೊತ್ತಾಗಿದೆ.

ಕರ್ನಾಟಕ ರಾಜ್ಯ ತೆಂಗಿನ ನಾರಿಅನ ಅಭಿವೃದ್ಧಿ ನಿಗಮ (ಕೆಎಸ್‌ಸಿಡಿಸಿಎಲ್‌)ಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ ಸಾಲ, ಬಿಡುಗಡೆ ಆಗಿರುವ ಸಾಲಗಳಿಗೆ ಷರತ್ತು ಮತ್ತು ನಿಬಂಧನೆಗಳನ್ನು ಹೊರಡಿಸಿಲ್ಲ. ಈ ನಿಗಮಕ್ಕೆ 2017ರಲ್ಲಿ ಬಿಡುಗಡೆ ಮಾಡಿರುವ ಸಾಲದ ಮೊತ್ತ 5.00 ಕೋಟಿ ರು.ನಲ್ಲಿ 5.00 ಲಕ್ಷ ಮಾತ್ರ ಎಂದು ನಿಗಮದ ಪ್ರತಿನಿಧಿಗಳು ಸಭೆಯಲ್ಲಿ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts