ಬೆಂಗಳೂರು; ವಿದ್ಯಾರ್ಥಿಗಳ ಪೋಷಕರು ಅಧಿಕ ಆದಾಯ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಆರ್‍ಟಿಇ ಅಡಿಯಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹ ರಾಜ್ಯದ ಹಲವು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರೊಂದಿಗೆ ತಹಶೀಲ್ದಾರ್‍ಗಳು ಶಾಮೀಲಾಗಿ ಕಡಿಮೆ ಆದಾಯದ ಸುಳ್ಳು ಆದಾಯ ಪ್ರಮಾಣಪತ್ರ ನೀಡುತ್ತಿರುವ ಪ್ರಕರಣಗಳು ಇದೀಗ ಬೆಳಕಿಗೆ ಬಂದಿವೆ.
ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ತಹಶೀಲ್ದಾರ್‍ಗಳ ವಿರುದ್ಧ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯ ಸಚಿವಾಲಯದಲ್ಲಿರುವ ಉನ್ನತ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದು ಸಹ ಇದೀಗ ಬಹಿರಂಗವಾಗಿದೆ.
ಬೆಂಗಳೂರು ದಕ್ಷಿಣ ಮತ್ತು ಉತ್ತರ ತಾಲೂಕಿನ ಹಲವೆಡೆ ಇಂತಹ ಪ್ರಕರಣಗಳು ನಡೆದಿವೆ. ಬೆಂಗಳೂರು ನಗರದ ಬನಶಂಕರಿ, ಗಿರಿನಗರ ಸೇರಿದಂತೆ ವಿವಿಧೆಡೆ ಸಿಬಿಎಸ್‌ಇ ಶಾಲೆಗಳನ್ನು ನಡೆಸುತ್ತಿರುವ Auden Insttitute of Education ಸಂಸ್ಥೆಯೊಂದಿಗೆ ಐವರು ತಹಶೀಲ್ದಾರ್‍ಗಳು ಕೈಜೋಡಿಸಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಕಡಿಮೆ ಆದಾಯದ ಸುಳ್ಳು ಆದಾಯ ಪ್ರಮಾಣಪತ್ರ ಪಡೆದಿದ್ದ 20ರಿಂದ 25 ವಿದ್ಯಾರ್ಥಿಗಳಿಗೆ Auden Insttitute of Education ಸಂಸ್ಥೆಯು ಆರ್‍ಟಿಇ ಅಡಿಯಲ್ಲಿ ಪ್ರವೇಶ ದಾಖಲಾತಿ ಮಾಡಿಕೊಂಡಿತ್ತು. ಈ ಕುರಿತು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯೂ ಸಹ ವಿಲೇವಾರಿಗೊಂಡಿದೆ. ಹೈಕೋರ್ಟ್‌ನ ಪೀಠವು ಆಪಾದಿತ ತಹಶೀಲ್ದಾರ್‍ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು 2025ರ ಮಾರ್ಚ್ 28ರಂದೇ ಆದೇಶ ಹೊರಡಿಸಿದೆ. ಈ ಆದೇಶದಂತೆ ಕ್ರಮಕೈಗೊಳ್ಳಲು ಕಂದಾಯ ಇಲಾಖೆಯು ಕ್ಷಿಪ್ರಗತಿಯ ಕ್ರಮಗಳನ್ನು ಕೈಗೊಂಡಿಲ್ಲ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಸಮಗ್ರ ದಾಖಲೆಗಳು ಲಭ್ಯವಾಗಿವೆ.
ವಿದ್ಯಾರ್ಥಿಗಳ ಪೋಷಕರು ಅಧಿಕ ಆದಾಯ ಹೊಂದಿದ್ದರೂ ಸಹ ರಾಜಸ್ವ ನಿರೀಕ್ಷಕರು ಕಡಿಮೆ ಆದಾಯ ಸುಳ್ಳು ಪ್ರಮಾಣ ಪತ್ರಗಳನ್ನು ಪೋಷಕರಿಗೆ ನೀಡಿದ್ದರು.
ಪೋಷಕರ ಹೆಸರಿನ ಪಟ್ಟಿ
ಜ್ಯೋತಿ ಎಸ್ ( ಪ್ರಮಾಣ ಪತ್ರ ಸಂಖ್ಯೆ; ಆರ್ ಡಿ 5019267258037/23.09.2021), ಡಿ ಎನ್ ಅದ್ವಿಕ್ ಗೌಡ (ಆರ್ ಡಿ 5019267411866/02.03.2023), ಲಾವಣ್ಯ ಎಸ್ ಗೌಡ ( ಆರ್ ಡಿ 0039268555929/16.02.2022), ಧೃವಿಕ ಮಂಜು ( ಆರ್ ಡಿ 39268471363/ 17.04.2021),
ಚಯಾಂಕ್ ಬಿ ಗೌಡ ( ಆರ್ ಡಿ 0038211420904/ 24.12.2021), ಡಿ ದೇವಾಂಶ್ ( ಆರ್ ಡಿ 0039268561334/05.03.2022), ಶರತ್ ಕುಮಾರ್ (ಆರ್ ಡಿ 003968557392/02.03.2022), ಸಾತ್ವಿಕ್ ಪಿ (ಆರ್ ಡಿ 39268462202/16.03.2021), ಸುಮಂತ ಬಿ ಎಸ್ ( ಆರ್ ಡಿ 0039268462206/17.03.2021), ತೋಷಿಣಿ ಜಿ ( ಆರ್ ಡಿ 0039268554116/ 14.07.2021), ಪ್ರತೀಕ್ ಎನ್ , ಆರ್ ಡಿ ಎ ಶರಣ್ಯ (ಆರ್ ಡಿ 0039268471014/16.04.2021), 00392698553411/ 14.02.2022), ಪ್ರಥಮ್ ಎಸ್ ಗೌಡ (ಆರ್ ಡಿ 0039268554851/14.02.2022),
ಸಮರ್ಥ ಯು (ಆರ್ ಡಿ 0039268552070/ 14.02.2022), ಆರ್ ಕಾಶೀಶ್ ( ಆರ್ ಡಿ 0039268549417/28.01.2022), ಮೊನಿಶಾ ಬಿ ವೈ ( ಆರ್ ಡಿ 0039268486420./ 18.06.2020), ಮನ್ವಿತ್ ಎಸ್ ಗೌಡ (ಆರ್ ಡಿ 0039268360702/12.02.2019) ಅವರು ತಪ್ಪು ಮಾಹಿತಿ ನೀಡಿ ಆದಾಯ ಪ್ರಮಾಣ ಪತ್ರ ಪಡೆದುಕೊಂಡಿರುವ ಪಟ್ಟಿಯಲ್ಲಿದ್ದಾರೆ.
ರಾಜಸ್ವ ನಿರೀಕ್ಷಕರು ಈ ಪೋಷಕರಿಗೆ ನೀಡಿದ್ದ ಆದಾಯ ಪ್ರಮಾಣ ಪತ್ರಗಳು ಮತ್ತು ರಾಜಸ್ವ ನಿರೀಕ್ಷಕರು ನಮೂದಿಸಿರುವ ವರದಿಯಲ್ಲಿನ ಅಂಶಗಳು ನೈಜತೆಯಿಂದ ಕೂಡಿವೆಯೇ ಅಥವಾ ಇಲ್ಲವೇ, ನಮೂದಿಸಿರುವ ಅಭ್ಯರ್ಥಿಗಳ ಆದಾಯವು ಕ್ರಮಬದ್ಧವಾಗಿದೆಯೋ ಎಂಬುದನ್ನು ತಹಶೀಲ್ದಾರ್‍ಗಳು (ಗ್ರೇಡ್ 2) ಪರಿಶೀಲಿಸಿಲ್ಲ.
Auden Insttitute of Education ಸಂಸ್ಥೆಯ ಪ್ರಕರಣದಲ್ಲಿ ಗ್ರೇಡ್ 2 ತಹಶೀಲ್ದಾರ್‍ಗಳಾದ ಗುರುರಾಜ್ ಪಿ ಆರ್, ಅನಂತಕುಮಾರಿ, ಕೆ ಎನ್ ಮಲ್ಲಿಕಾರ್ಜುನ್, ಕೆ ರವಿ, ಎಸ್ ಆರ್ ಅರವಿಂದ ಬಾಬು ಅವರು ಅಭ್ಯರ್ಥಿಗಳ ಆದಾಯವನ್ನು ನಿಖರವಾಗಿ ಪರಿಶೀಲಿಸದೆಯೇ ಸುಳ್ಳು ಆದಾಯ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಈ ಮೂಲಕ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ 2021ರ ನಿಯಮ (3) ವನ್ನು ಉಲ್ಲಂಘಿಸಿರುವುದು ರುಜುವಾತಾಗಿದೆ. ಈ ಪೈಕಿ ಕೆ ಎನ್ ಮಲ್ಲಿಕಾರ್ಜುನ್ ಅವರು ನಿಧನರಾಗಿದ್ದಾರೆ.
ಉಳಿದ ಆಪಾದಿತ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಆದರೆ ಆಪಾದಿತ ಅಧಿಕಾರಿಗಳು ಆರಂಭಿಕ ಹಂತದಲ್ಲಿ ಸಮಜಾಯಿಷಿ ನೀಡಿರಲಿಲ್ಲ. ಈ ಪ್ರಕರಣವನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಗಂಭೀರವಾಗಿ ಪರಿಗಣಿಸಿದ್ದರು.
ಕಟಾರಿಯಾ ಟಿಪ್ಪಣಿಯಲ್ಲೇನಿದೆ?
ಮೇಲಿನ ಟಿಪ್ಪಣಿಯನ್ನು ಪರಿಶೀಲಿಸಲಾಗಿದೆ. ಇದು ಗಂಭೀರ ವಿಷಯ. ಸುಳ್ಳು ಆದಾಯ ಪ್ರಮಾಣಪತ್ರದ ಆಧಾರದ ಮೇಲೆ, ಅರ್ಹ ವಿದ್ಯಾರ್ಥಿಗಳು ಆರ್‌ಟಿಇ ಕಾಯ್ದೆಯ ಕೋಟಾದಡಿಯಲ್ಲಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲಿಲ್ಲ. ಈ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾದ ಶ್ರದ್ಧೆಯಿಂದ ನಿರ್ವಹಿಸಲಿಲ್ಲ ಮತ್ತು ಇದು ಸಂಪೂರ್ಣವಾಗಿ ನಿರ್ಲಕ್ಷ್ಯ, ನಿರ್ದಯತೆ ಮತ್ತು ಕರ್ತವ್ಯ ಲೋಪ ಎಸಗಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಈ ಕಾನೂನುಬಾಹಿರ ಕೃತ್ಯವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅವರ ವಿರುದ್ಧ ಶಿಸ್ತು ಕ್ರಮ ಮತ್ತು ದಂಡ ವಿಧಿಸಲು ನಿರ್ದೇಶನ ನೀಡಿದೆ.
ಹೀಗಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಮೇಲಿನ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಸಲ್ಲಿಸಲಾಗಿದೆ. ಇದರ ಜೊತೆಗೆ, ಸಂಬಂಧಪಟ್ಟ ಅಧಿಕಾರಿಗಳು, ಈ ವಿಷಯವನ್ನು ಪ್ರಕ್ರಿಯೆಗೊಳಿಸಲು ವಿಫಲರಾಗಿದ್ದಾರೆ. ಮತ್ತು ಅದನ್ನು ಕಂದಾಯ ಇಲಾಖೆ ಅಧಿಕಾರಿಗಳು ಸಹ ದೀರ್ಘಕಾಲ ಉಳಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರಿ ಸಚಿವಾಲಯದ ಕಚೇರಿ ಕಾರ್ಯವಿಧಾನದ ಪ್ರಕಾರ ಪರಿಶೀಲನೆಗಳನ್ನು ನಡೆಸುವ ಜವಾಬ್ದಾರಿಯಯನ್ನು ನಿಭಾಯಿಸದ ಅಧಿಕಾರಿಗಳ ವಿರುದ್ಧವೂ ಕೆಎಸ್‌ಸಿಆರ್ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಟಿಪ್ಪಣಿಯಲ್ಲಿ ನಿರ್ದೇಶನ ನೀಡಿರುವುದು ಗೊತ್ತಾಗಿದೆ.
ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿತೇ ಕಂದಾಯ ಇಲಾಖೆ?
ಈ ಪ್ರಕರಣದ ಬಗ್ಗೆ 2024ರ ಏಪ್ರಿಲ್ 5ರಂದು ನ್ಯಾಯಾಲಯವು ಆದೇಶ ನೀಡಿತ್ತು.
ಸುಳ್ಳು ಆದಾಯ ಪ್ರಮಾಣ ಪತ್ರಗಳನ್ನು ನೀಡಿರುವ ಪ್ರಾಧಿಕಾರ, ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಕೈಗೊಳ್ಳಬೇಕು.
6 ತಿಂಗಳ ಒಳಗಾಗಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಿತ್ತು.
ಆದರೆ ಈ ನಿರ್ದೇಶನ ನೀಡುವ ಮೊದಲೆ ಅಂದರೇ 2024ರ ಮಾರ್ಚ್ 19ರಂದು ಆಪಾದಿತ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಪ್ರಸ್ತಾವನೆಯ್ನು ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಅಲ್ಲದೇ ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿನ ಸಮಿತಿಯ ಸಭೆ ನಡವಳಿಗಳನ್ನೂ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.
10 ಅಧಿಕಾರಿಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆ
ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲೂಕಿನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಒಟ್ಟು 10 ಮಂದಿ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆಸಲು ಆಪಾದಿತರಿಗೆ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ತಹಶೀಲ್ದಾರ್ ಗ್ರೇಡ್ 2 ಶ್ರೇಣಿಯಲ್ಲಿರುವ ಗುರುರಾಜ್ ಪಿ ಆರ್, ಅನಂತ ಕುಮಾರಿ, ಎಸ್ ಆರ್ ಅರವಿಂದ ಬಾಬು, ರವಿ ಕೆ , ರಾಜಸ್ವ ನಿರೀಕ್ಷರಾದ ಮಂಜುನಾಥ್ ರೆಡ್ಡಿ, ಮಂಜುನಾಥ್ ಕೆ, ಕಿರಣ್ ಉಮಾರ್ ಎಂ, ಕುಮಾರ್ ಕೆ, ವಸಂತ ಕುಮಾರ್, ಗ್ರಾಮ ಆಡಳಿತಾಧಿಕಾರಿ ಶಿವಪ್ರಸಾದ್ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು 2025ರ ಏಪ್ರಿಲ್ 15ರಂದೇ ಅನುಮೋದನೆ ನೀಡಿರುವುದು ಗೊತ್ತಾಗಿದೆ.
ಸಮಜಾಯಿಷಿ ಒಪ್ಪುವುದೇ ಇಲಾಖೆ?
ಆಪಾದಿತ ಅಧಿಕಾರಿಗಳು ಲಿಖಿತ ಸಮಜಾಯಿಷಿಯನ್ನು ನೀಡಿದ್ದಾರೆ. ಬಹುತೇಕ ಅಧಿಕಾರಿಗಳು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ರಾಜಸ್ವ ನಿರೀಕ್ಷಕರು ಪರಿಶೀಲಿಸಿ ವಾಸ್ತವಾಂಶದ ವರದಿ ವಿರುದ್ಧ ತಹಶೀಲ್ದಾರ್‍ರಿಗೆ ಯಾವುದೇ ಆಕ್ಷೇಪಣೆ ಬಂದಿರುವುದಿಲ್ಲ. ಇದನ್ನು ಖಾತರಿಪಡಿಸಿಕೊಂಡು ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ನಾಡ ಕಚೇರಿಗಳಲ್ಲಿ ಪ್ರತಿ ದಿನವೂ 600ರಿಂದ 800 ಜಾತಿ ಪ್ರಮಾಣ ಪತ್ರಗಳು ಸ್ವೀಕೃತಗೊಳ್ಳುತ್ತಿವೆ. ಈ ಎಲ್ಲಾ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಮಾಡಬೇಕಿದೆ. ಹಾಗೂ ಜಾತಿ ದೌರ್ಜನ್ಯ ಪ್ರಕರಣಖ, ಇತರೆ ಕೈಬರಹದ ದೃಢೀಕರಣ ಪತ್ರಗಳನ್ನು ವಿತರಿಸಲು ಕಚೇರಿಯಲ್ಲಿ ಖುದ್ದಾಗಿ ಹಾಜರಿರಬೇಕು. ಹೀಗಾಗಿ ಆದಾಯ ಪ್ರಮಾಣ ಪತ್ರಗಳನ್ನು ವಿತರಿಸುವ ಸಂಬಂಧ ಸ್ಥಳೀಯವಾಗಿ ಭೇಟಿ ನೀಡಿ ಪರಿಶೀಲಿಸಲೂ ಸಾಧ್ಯವಾಗುತ್ತಿಲ್ಲ ಎಂದು ತಹಶೀಲ್ದಾರ್ (ಗ್ರೇಡ್ 2) ಅನಂತಕುಮಾರಿ ಅವರು ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.
ಗ್ರೇಡ್ 2 ತಹಶೀಲ್ದಾರ್‍ಗಳ ಕರ್ತವ್ಯಗಳು ಕಚೇರಿಯ ಆಡಳಿತಕ್ಕೆ ಮಾತ್ರ ಸೀಮಿತವಾಗಿದೆ. ಅರ್ಜಿಗಳನ್ನು ತೆಗೆದುಕೊಂಡು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಗ್ರಾಮ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷಕರು ಸಲ್ಲಿಸಿರುವ ವರದಿಯಲ್ಲಿ ನಂಬಿಕೆಯಿಟ್ಟು ಆದಾಯ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಉಪ ತಹಶೀಲ್ದಾರ್ ಕೆ ರವಿ ಅವರು ಸಮಜಾಯಿಷಿ ನೀಡಿರುವುದು ತಿಳಿದು ಬಂದಿದೆ.
ಅದೇ ರೀತಿ ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಅರ್ಜಿದಾರರ ವಿರುದ್ಧವೇ ಬೊಟ್ಟು ಮಾಡಿ ತೋರಿಸಿದ್ದಾರೆ. ಅರ್ಜಿದಾರರು ತಪ್ಪು ಮಾಹಿತಿ ನೀಡುವ ಮೂಲಕ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.
ಅಲ್ಲದೇ ಗ್ರಾಮ ಆಡಳಿತಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ಆದಾಯ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ವರದಿಗಳನ್ನು ನೀಡುವಾಗ ಪೋಷಕರ ವಿಳಾಸಕ್ಕೆ ಭೇಟಿ ಕೊಟ್ಟಿರಲಿಲ್ಲ. ಕೋವಿಡ್ ಕಾರಣಕ್ಕಾಗಿ ವಿಳಾಸಕ್ಕೆ ಭೇಟಿ ನೀಡಿರಲಿಲ್ಲ ಎಂದು ಅಧಿಕಾರಿಗಳ ವಾದವನ್ನೂ ವಿಚಾರಣಾಧಿಕಾರಿಗಳು ಒಪ್ಪಿಲ್ಲ. ಬದಲಿಗೆ ಯಾವಾಗ ಸರ್ಕಾರದ ಮಾರ್ಗಸೂಚಿಗಳು ಇರುತ್ತವೆಯೋ ಅವುಗಳನ್ನು ಪಾಲಿಸಲೇಬೇಕು. ಇಲ್ಲದೇ ಹೋದಲ್ಲಿ ಕರ್ತವ್ಯಲೋಪವಾಗುತ್ತದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಪ್ರಸ್ತುತ ಪ್ರಕರಣಗಳಲ್ಲಿ ಗ್ರಾಮ ಆಡಳಿತಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರು ಪೋಷಕರ ಮಾತುಗಳನ್ನೇ ನಂಬಿ ತಹಶೀಲ್ದಾರ್‍ಗಳಿಗೆ ವರದಿ ನೀಡಿದ್ದಾರೆ. ಪೋಷಕರಿಂದ ಸಂಬಂಧಪಟ್ಟ ದಾಖಲೆಗಳನ್ನೂ ಪಡೆದುಕೊಂಡಿಲ್ಲ. ಆರ್‍ಟಿಇ ಕಾಯ್ದೆಯಡಿಯಲ್ಲಿ ವಿದ್ಯಾಭ್ಯಾಸಕ್ಕಾಗಿಯೇ ಆದಾಯ ಪ್ರಮಾಣ ಪತ್ರಗಳನ್ನು ಕೇಳುತ್ತಿದ್ದಾರೆ ಎಂಬುದು ಆಪಾದಿತ ಅಧಿಕಾರಿ, ನೌಕರರಿಗೆ ಗೊತ್ತಿತ್ತು.
ಒಂದು ವೇಳೆ ಸ್ಥಳ ಪರಿಶೀಲನೆ ಸಾಧ್ಯವಾಗದೇ ಇದ್ದಲ್ಲಿ ಮೇಲಾಧಿಕಾರಿಗಳಿಂದ ನಿಯಮಬದ್ಧವಾದ ಆದೇಶವನ್ನು ಪಡೆದುಕೊಂಡು ಮುಂದಿನ ಕ್ರಮ ಜರುಗಿಸಬೇಕಾಗಿತ್ತು. ಈ ಯಾವ ಕ್ರಮಗಳನ್ನು ಕೈಗೊಳ್ಳದೇ ಇರುವ ಕಾರಣ ಗ್ರಾಮ ಆಡಳಿತಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರುಗಳ ಮೇಲೆ ಇರುವ ಆರೋಪಗಳು ಸಾಬೀತಾಗಿದೆ ಎಂದು ಶಿಸ್ತು ಪ್ರಾಧಿಕಾರವೂ ವಿವರಿಸಿದೆ.